ಸಚಿವ ಎಂ ನಾಗೇಂದ್ರರ ರಾಜೀನಾಮೆಗೆ ಜಿಲ್ಲಾ ಬಿಜೆಪಿ ಎಸ್ಟಿ ಘಟಕ ಆಗ್ರಹ-District BJP ST unit demands resignation of Minister M Nagendra

 


SUDDILIVE || SHIVAMOGGA

ಸಚಿವ ಎಂ ನಾಗೇಂದ್ರರ ರಾಜೀನಾಮೆಗೆ ಜಿಲ್ಲಾ ಬಿಜೆಪಿ ಎಸ್ಟಿ ಘಟಕ ಆಗ್ರಹ-District BJP ST unit demands resignation of Minister M Nagendra     

Bjp, st


ಶಿವಮೊಗ್ಗ, ಆ.4: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ.ಗಳ ಅಕ್ರಮ ಪ್ರಕರಣದ ತನಿಖೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (DISHA) ಸದಸ್ಯ ಗಿರೀಶ್ ಭದ್ರಾಪುರ ಆಗ್ರಹಿಸಿದರು.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024–25ನೇ ಸಾಲಿನಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ.ಗಳ ಹಗರಣ ಕುರಿತು ಭಾರತದ ಸಂವಿಧಾನದ ಆರ್ಟಿಕಲ್ 338A ಅಡಿಯಲ್ಲಿ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗಕ್ಕೆ ನವದೆಹಲಿಯಲ್ಲಿ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು. ಈ ಸಂಬಂಧ ಜುಲೈ 23, 2026ರಂದು ಎಲ್ಲಾ ದಾಖಲೆಗಳೊಂದಿಗೆ ಅಧಿಕಾರಿಗಳು ಹಾಜರಾಗುವಂತೆ ಆಯೋಗ ಸೂಚಿಸಿದ್ದು, ಸೆಪ್ಟೆಂಬರ್ 20, 2026ರಂದು ನವದೆಹಲಿಯಲ್ಲಿ ವಿಚಾರಣೆ ನಡೆಯಲಿದ್ದು, ಆರೋಪಗಳು ಸಾಬೀತಾಗುವ ಹಂತದಲ್ಲಿವೆ ಎಂದು ಹೇಳಿದರು.

ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ಸುಮಾರು 187 ಕೋಟಿ ರೂ. ಹಣವನ್ನು ನಕಲಿ ಚೆಕ್‌ಗಳು ಹಾಗೂ ಆರ್‌ಟಿಜಿಎಸ್‌ (RTGS) ಮೂಲಕ ದುರುಪಯೋಗಪಡಿಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದರು.

ಸುಮಾರು 600ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿ, ಅದನ್ನು ನಗದು, ಚಿನ್ನ ಹಾಗೂ ಐಷಾರಾಮಿ ವಾಹನಗಳ ಖರೀದಿಗೆ ಬಳಸಲಾಗಿದೆ ಎಂದು ತನಿಖಾ ಸಂಸ್ಥೆಗಳು ಹೇಳಿವೆ. ಅಲ್ಲದೆ ಅಕ್ರಮ ಟೆಂಡರ್ ಪ್ರಕ್ರಿಯೆಗಳ ಮೂಲಕ ಸುಮಾರು 1.20 ಕೋಟಿ ರೂ.ಗಳ ಅಕ್ರಮ ಲಾಭ ಪಡೆದಿರುವುದಾಗಿ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.

ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾದ ಸಾರ್ವಜನಿಕ ಹಣ ದುರುಪಯೋಗವಾಗಿರುವುದು ಅತ್ಯಂತ ಗಂಭೀರ ವಿಷಯವಾಗಿದೆ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವನ್ನು ಶೀಘ್ರ ಪೂರ್ಣಗೊಳಿಸಿ, ದುರುಪಯೋಗಗೊಂಡ ಸಂಪೂರ್ಣ ಹಣವನ್ನು ಮರುಪಡೆಯಬೇಕು. ಜೊತೆಗೆ 187 ಕೋಟಿ ರೂ.ಗಳಿಗೆ ಬ್ಯಾಂಕ್‌ನ ಶೇಕಡಾ 18ರ ವಾಣಿಜ್ಯ ಬಡ್ಡಿದರವನ್ನು ವಿಧಿಸಿ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.

ಬಿ. ನಾಗೇಂದ್ರ ರಾಜೀನಾಮೆಗೆ ಒತ್ತಾಯ

ಈ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಬಿ. ನಾಗೇಂದ್ರ ಅವರು ತಕ್ಷಣ ಸಚಿವ ಸ್ಥಾನ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಭವಿಷ್ಯದಲ್ಲಿ ಅವರಿಗೆ ಯಾವುದೇ ಸಾಂವಿಧಾನಿಕ ಹುದ್ದೆ ನೀಡಬಾರದು ಎಂದು ಗಿರೀಶ್ ಭದ್ರಾಪುರ ಆಗ್ರಹಿಸಿದರು.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಶಿಷ್ಟ ಪಂಗಡಗಳ ಶಿಕ್ಷಣ, ಸ್ವಯಂ ಉದ್ಯೋಗ, ಆರ್ಥಿಕ ಸಬಲೀಕರಣ ಹಾಗೂ ಕಲ್ಯಾಣಕ್ಕಾಗಿ ಸ್ಥಾಪಿಸಿವೆ. ಇಂತಹ ಪವಿತ್ರ ಸಾರ್ವಜನಿಕ ನಿಧಿಯ ದುರುಪಯೋಗ ಅತ್ಯಂತ ಖಂಡನೀಯ ಎಂದು ಅವರು ಹೇಳಿದರು.

ರಾಜ್ಯಾದ್ಯಂತ ಜನಜಾಗೃತಿ ಸಮಾವೇಶ

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಕುರಿತು ರಾಜ್ಯದಾದ್ಯಂತ ಜನಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ಜಿಲ್ಲೆಗಳಲ್ಲಿ ಸಮಾವೇಶಗಳನ್ನು ಆಯೋಜಿಸಲಾಗಿದೆ. ದಾವಣಗೆರೆ, ಚಿತ್ರದುರ್ಗ, ಮೈಸೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಮುಂದಿನ ದಿನಗಳಲ್ಲಿ ಉಳಿದ ಜಿಲ್ಲೆಗಳಲ್ಲಿಯೂ ಜನಜಾಗೃತಿ ಸಮಾವೇಶಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ಉಗ್ರಪ್ಪ ವಿರುದ್ಧ ಟೀಕೆ

ಮಾಜಿ ಸಂಸದ ಉಗ್ರಪ್ಪ ಅವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮೀಸಲಾತಿಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಹೇಳುವ ಮೂಲಕ ಸಮಾಜಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಗಿರೀಶ್ ಭದ್ರಾಪುರ ಆರೋಪಿಸಿದರು. 9ನೇ ಪರಿಚ್ಛೇದವು ಭೂ ಸುಧಾರಣೆ ಹಾಗೂ ಭೂ ಸಂಬಂಧಿತ ಕಾನೂನುಗಳಿಗೆ ಸಂಬಂಧಿಸಿದ್ದು, ಎಸ್‌ಟಿ ಮೀಸಲಾತಿಗೆ ಸಂಬಂಧಿಸಿದ ವಿಷಯವಲ್ಲ ಎಂದು ಅವರು ಹೇಳಿದರು.

7% ಮೀಸಲಾತಿ ವಿಚಾರದಲ್ಲಿ ಸರ್ಕಾರ ಸ್ಪಷ್ಟನೆ ನೀಡಲಿ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಸಂಸದ ಉಗ್ರಪ್ಪ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ 7% ಎಸ್‌ಟಿ ಮೀಸಲಾತಿಗೆ ತಾತ್ಕಾಲಿಕ ತಡೆ ವಿಧಿಸಿರುವ ಪರಿಣಾಮ ಅದು 3%ಕ್ಕೆ ಸೀಮಿತವಾಗಿದ್ದು, 72,186 ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 2,888 ಹುದ್ದೆಗಳ ನಷ್ಟವಾಗುವ ಸಾಧ್ಯತೆ ಇದೆ. ಈ ಕುರಿತು ಸರ್ಕಾರ ಮತ್ತು ಸಂಬಂಧಪಟ್ಟ ನಾಯಕರು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಸಮಗ್ರ ತನಿಖೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಹಾಗೂ ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಾದ ಸಾರ್ವಜನಿಕ ಹಣವನ್ನು ಸಂಪೂರ್ಣವಾಗಿ ಮರುಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.

District BJP ST unit demands resignation of Minister M Nagendra

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close