SUDDILIVE || SHIVAMOGGA
12 ವರ್ಷದ ಬಾಲಕಿ ಸಾವು: ಕೊನೆಯ ಕ್ಷದಲ್ಲಿ ಮೆಗ್ಗಾನ್ ವೈದ್ಯರು ಬಚಾವ್ ಆದ್ರಾ?-12-year-old girl dies: Will doctors save Megan in the last moments?
ಶಿವಮೊಗ್ಗ: ಸರ್ಕಾರಿ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 12 ವರ್ಷದ ಬಾಲಕಿ ಮೃತಪಟ್ಟಿದ್ದು, ವೈದ್ಯಕೀಯ ನಿರ್ಲಕ್ಷ್ಯ ಹಾಗೂ ಅಗತ್ಯ ವೈದ್ಯಕೀಯ ಸಾಮಗ್ರಿಗಳ ಕೊರತೆಯೇ ತಮ್ಮ ಮಗಳ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜ್ವರದ ಹಿನ್ನೆಲೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ (ಯುಡಿಆರ್) ದಾಖಲಾಗಿರುವುದು ಚರ್ಚೆಗೆ ಕಾರಣವಾಗಿದೆ.
ನಗರದ ರಾಗಿಗುಡ್ಡ ವಸತಿ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಶ್ವೇತಾ (12) ಮೃತಪಟ್ಟ ಬಾಲಕಿ. ಕಳೆದ ಶನಿವಾರ ತೀವ್ರ ಜ್ವರದಿಂದ ಬಳಲುತ್ತಿದ್ದ ಶ್ವೇತಾಳನ್ನು ಕುಟುಂಬಸ್ಥರು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು.
ಕುಟುಂಬಸ್ಥರ ಆರೋಪದ ಪ್ರಕಾರ, ಬಾಲಕಿಯ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದರೂ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರು ಸೂಕ್ತ ಸಮಯದಲ್ಲಿ ಅಗತ್ಯ ಚಿಕಿತ್ಸೆ ನೀಡಲಿಲ್ಲ. ಚಿಕಿತ್ಸೆ ವೇಳೆ ಬಾಲಕಿ ಕೋಮಾ ಸ್ಥಿತಿಗೆ ತಲುಪಿದ್ದಾಳೆ. ಆಸ್ಪತ್ರೆಯಲ್ಲಿ ಉಚಿತವಾಗಿ ದೊರೆಯಬೇಕಿದ್ದ ಕೆಲವು ಔಷಧಗಳು ಹಾಗೂ ಮಾತ್ರೆಗಳನ್ನು ಹೊರಗಿನ ಖಾಸಗಿ ಮೆಡಿಕಲ್ ಶಾಪ್‌ಗಳಿಂದ ಖರೀದಿಸಿ ತರಬೇಕಾಯಿತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಡಯಾಲಿಸಿಸ್‌ಗೆ ಟ್ಯೂಬಿಂಗ್ ಸೆಟ್ ಇರಲಿಲ್ಲವೇ?
ಬಾಲಕಿಗೆ ಡಯಾಲಿಸಿಸ್ ಮಾಡುವ ಅಗತ್ಯವಿದ್ದರೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಗತ್ಯವಿದ್ದ ಟ್ಯೂಬಿಂಗ್ ಸೆಟ್ ಲಭ್ಯವಿರಲಿಲ್ಲ. ಹೀಗಾಗಿ ಸಮಯಕ್ಕೆ ಸರಿಯಾಗಿ ಡಯಾಲಿಸಿಸ್ ಮಾಡಲಾಗಲಿಲ್ಲ. ಇದರಿಂದ ಬಾಲಕಿಯ ಆರೋಗ್ಯ ಮತ್ತಷ್ಟು ಹದಗೆಟ್ಟಿತು ಎಂದು ಕುಟುಂಬಸ್ಥರು ದೂರಿದ್ದಾರೆ.
ನಂತರ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯ ಮೇರೆಗೆ ಖಾಸಗಿ ಅಂಬುಲೆನ್ಸ್ ಮೂಲಕ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬಸ್ಥರು ಮುಂದಾಗಿದ್ದರು.
ಆದರೆ ಮಣಿಪಾಲ ಆಸ್ಪತ್ರೆಗೆ ತಲುಪುವ ಮುನ್ನವೇ ಮಾರ್ಗಮಧ್ಯದಲ್ಲಿ ಬಾಲಕಿ ಕೊನೆಯುಸಿರೆಳೆದಿದ್ದಾಳೆ.
ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಕುಟುಂಬದ ಆರೋಪ
ತಮ್ಮ ಮಗಳ ಸಾವಿಗೆ ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯ ಮತ್ತು ಅಗತ್ಯ ವೈದ್ಯಕೀಯ ಉಪಕರಣಗಳ ಕೊರತೆಯೇ ಕಾರಣ ಎಂದು ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕಿಗೆ ಸಮಯಕ್ಕೆ ಸರಿಯಾಗಿ ಅಗತ್ಯ ಚಿಕಿತ್ಸೆ ಹಾಗೂ ಡಯಾಲಿಸಿಸ್ ದೊರೆತಿದ್ದರೆ ಪರಿಸ್ಥಿತಿ ಬೇರೆಯಾಗಬಹುದಿತ್ತು ಎಂಬುದು ಕುಟುಂಬದವರ ವಾದವಾಗಿದೆ.
ಆದರೆ, ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ ಬಾಲಕಿಯ ಸಾವು ಜ್ವರದ ಹಿನ್ನೆಲೆಯಲ್ಲಿ ಸಂಭವಿಸಿದೆ ಎಂದು ಪ್ರಕರಣ ದಾಖಲಾಗಿದೆ. ವೈದ್ಯಕೀಯ ನಿರ್ಲಕ್ಷ್ಯದ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸಬೇಕಾದ ಅಗತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮತ್ತೆ ಚರ್ಚೆಗೆ ಬಂದ ಮೆಗ್ಗಾನ್ ಆಸ್ಪತ್ರೆ
ಈ ಘಟನೆ ಹಿನ್ನೆಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆಗಳ ಗುಣಮಟ್ಟ, ಅಗತ್ಯ ಔಷಧ ಮತ್ತು ವೈದ್ಯಕೀಯ ಸಾಮಗ್ರಿಗಳ ಲಭ್ಯತೆ ಹಾಗೂ ವೈದ್ಯಕೀಯ ನಿರ್ಲಕ್ಷ್ಯದ ಆರೋಪಗಳ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ.
ಇತ್ತೀಚೆಗೆ ಮೆಗ್ಗಾನ್ ಆಸ್ಪತ್ರೆಗೆ ಭದ್ರಾವತಿಯಿಂದ ಚಿಕಿತ್ಸೆಗಾಗಿ ಬಂದಿದ್ದ ವೃದ್ಧೆಯೊಬ್ಬರ ಪ್ರಕರಣವೂ ಸಾರ್ವಜನಿಕ ಗಮನ ಸೆಳೆದಿತ್ತು. ಆ ಪ್ರಕರಣದಲ್ಲಿ ವೈದ್ಯರಲ್ಲದ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬರು (ಮೆಡಿಕಲ್ ಪಿಜಿ ವಿದ್ಯಾರ್ಥಿ) ವೃದ್ಧೆಯ ಮಗನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇಂತಹ ಘಟನೆಗಳ ಬಗ್ಗೆ ದೂರುಗಳು ಕೇಳಿಬಂದರೂ ಅವು ಸೂಕ್ತ ರೀತಿಯಲ್ಲಿ ದಾಖಲಾಗುತ್ತಿಲ್ಲ ಎಂಬ ಆರೋಪಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ವೈದ್ಯಕೀಯ ನಿರ್ಲಕ್ಷ್ಯದಿಂದ ಬಡ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಆರೋಪಗಳ ನಡುವೆ ಶ್ವೇತಾ ಪ್ರಕರಣ ಮತ್ತೊಮ್ಮೆ ಮೆಗ್ಗಾನ್ ಆಸ್ಪತ್ರೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಯುಡಿಆರ್‌ನಲ್ಲೇ ಸೀಮಿತವಾಗುತ್ತದೆಯೇ ತನಿಖೆ?
ಕುಟುಂಬಸ್ಥರು ವೈದ್ಯಕೀಯ ನಿರ್ಲಕ್ಷ್ಯ ಹಾಗೂ ಅಗತ್ಯ ಉಪಕರಣಗಳ ಕೊರತೆಯ ಆರೋಪ ಮಾಡಿರುವ ಹಿನ್ನೆಲೆಯಲ್ಲಿ, ಬಾಲಕಿಯ ಸಾವಿನ ನಿಜವಾದ ಕಾರಣವನ್ನು ವೈದ್ಯಕೀಯವಾಗಿ ಪರಿಶೀಲಿಸುವ ಅಗತ್ಯವಿದೆ. ಯುಡಿಆರ್ ಪ್ರಕರಣದ ತನಿಖೆಯ ವೇಳೆ ಚಿಕಿತ್ಸೆ ನೀಡಿದ ವೈದ್ಯರು, ಆಸ್ಪತ್ರೆಯ ಸಿಬ್ಬಂದಿ, ಲಭ್ಯವಿದ್ದ ವೈದ್ಯಕೀಯ ದಾಖಲೆಗಳು, ಔಷಧಗಳ ವಿವರ, ಡಯಾಲಿಸಿಸ್ ಅಗತ್ಯವಿತ್ತೇ ಎಂಬುದು, ಟ್ಯೂಬಿಂಗ್ ಸೆಟ್ ಲಭ್ಯವಿತ್ತೇ ಇಲ್ಲವೇ ಹಾಗೂ ಬಾಲಕಿಯ ಆರೋಗ್ಯ ಸ್ಥಿತಿ ಯಾವ ಹಂತದಲ್ಲಿ ಗಂಭೀರಗೊಂಡಿತು ಎಂಬ ಅಂಶಗಳು ಪರಿಶೀಲನೆಗೆ ಒಳಪಡಬೇಕಾಗಿದೆ.
ಕುಟುಂಬಸ್ಥರ ಆರೋಪಗಳು ತನಿಖೆಯಲ್ಲಿ ಸಾಬೀತಾಗಬೇಕಿದ್ದು, ಈ ಕುರಿತು ಆಸ್ಪತ್ರೆ ಆಡಳಿತ ಮತ್ತು ಸಂಬಂಧಪಟ್ಟ ವೈದ್ಯಕೀಯ ಅಧಿಕಾರಿಗಳ ಸ್ಪಷ್ಟನೆ ಹೊರಬರಬೇಕಿದೆ.
ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸರ್ಕಾರಿ ಆಸ್ಪತ್ರೆಗಳೇ ಪ್ರಮುಖ ಆಶ್ರಯವಾಗಿರುವ ಸಂದರ್ಭದಲ್ಲಿ, ಅಗತ್ಯ ಔಷಧಿ ಹಾಗೂ ವೈದ್ಯಕೀಯ ಸಾಮಗ್ರಿಗಳು ಸಮಯಕ್ಕೆ ಲಭ್ಯವಾಗಬೇಕು. ವೈದ್ಯಕೀಯ ಸೇವೆಯಲ್ಲಿ ಯಾವುದೇ ನಿರ್ಲಕ್ಷ್ಯ ನಡೆದಿದ್ದರೆ ಅದಕ್ಕೆ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂಬುದು ಮೃತ ಬಾಲಕಿಯ ಕುಟುಂಬಸ್ಥರ ಒತ್ತಾಯವಾಗಿದೆ.
12-year-old girl dies: Will doctors save Megan in the last moments?

