SUDDILIVE || BANGLORE
ಮಾಲವಿ ಸೊಪ್ಪಿನಬೆಟ್ಟ ಮರ ಅಕ್ರಮ ಕಡಿತಲೆ: ಆರ್.ಎಫ್.ಓ. ಅಮಾನತಿಗೆ ಖಂಡ್ರೆ ಆದೇಶ- Illegal felling of Malawi alfalfa trees: R.F.O. Khandre order for suspension
![]() |
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಮಾಲವಿ ಗ್ರಾಮದ ಪರಿಹಾರಾತ್ಮಕ ಅರಣ್ಯ ಪ್ರದೇಶ, ಸೊಪ್ಪಿನಬೆಟ್ಟದಲ್ಲಿ ನೂರಾರು ಅಕೇಶಿಯಾ ಮರ ಕಡಿತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿತ ವಲಯ ಅರಣ್ಯಾಧಿಕಾರಿ, ಉಪ ವಲಯ ಅರಣ್ಯಾಧಿಕಾರಿ ಮತ್ತು ಗಸ್ತು ಸಿಬ್ಬಂದಿಯ ಅಮಾನತಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಆದೇಶ ನೀಡಿದ್ದಾರೆ.
ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಲಿಖಿತ ಸೂಚನೆ ನೀಡಿರುವ ಅವರು,
ಕರ್ನಾಟಕ ಸರ್ಕಾರದ ಸುತ್ತೋಲೆ ಸಂಖ್ಯೆ ಆರ್.ಡಿ.101 ಎಲ್.ಜಿ.ಎ. 2005 ದಿನಾಂಕ 11.02.2010ರಲ್ಲಿ ‘ಕರ್ನಾಟಕ ಭೂಕಂದಾಯ ಕಾಯಿದೆ 1964ರ ರೀತ್ಯ ಹಾಗೂ ಪದ್ಮ ಶೇದಾಥಿ ಮತ್ತು ಮೈಸೂರು ಕಂದಾಯ ಮೇಲ್ಮನವಿ ಪ್ರಾಧಿಕಾರ ಪ್ರಕರಣದಲ್ಲಿ ಹೈಕೋರ್ಟ್ ಕಾನ್, ಬೆನಾ, ಬೆಟ್ಟ, ಸೊಪ್ಪಿನಬೆಟ್ಟ, ಜಮ್ಮಾ ಬಾಣೆ, ಜಮ್ಮಾ ಮಲೈ ಅರಣ್ಯ ಜಮೀನು ಎಂದು ಅಭಿಪ್ರಾಯ ಪಟ್ಟಿರುವುದನ್ನು ಕಾನೂನು ಇಲಾಖೆ ಅಭಿಪ್ರಾಯದೊಂದಿಗೆ ತಿಳಿಸಲಾಗಿದೆ. ಇಲ್ಲಿ ಸ್ವಂತ ಉಪಯೋಗಕ್ಕೆ ಸೊಪ್ಪು ಸಂಗ್ರಹಿಸಬಹುದೇ ಹೊರತು, ಮರ ಕಡಿಯಲು ಅವಕಾಶ ಇರುವುದಿಲ್ಲ. ಈ ನಿಟ್ಟಿನಲ್ಲಿ ಸೊಪ್ಪಿನಬೆಟ್ಟದಲ್ಲಿ ಮತ್ತು ಪರಿಹಾರಾತ್ಮಕ ಅರಣ್ಯದಲ್ಲಿ ಅಕ್ರಮವಾಗಿ ನೂರಾರು ಮರ ಕಡಿದಿದ್ದರೂ ತಡೆಯದೆ ಕರ್ತವ್ಯಲೋಪ ಎಸಗಿರುವ ಅರಣ್ಯ ಅಧಿಕಾರಿ, ಸಿಬ್ಬಂದಿ ಅಮಾನತಿಗೆ ಆದೇಶ ನೀಡಿದ್ದಾರೆ.
ಇತ್ತೀಚೆಗೆ ಕರ್ನಾಟಕ ಉಚ್ಚ ನ್ಯಾಯಾಲಯ ಅರಣ್ಯ ಸಂರಕ್ಷಣಾ ಕಾಯಿದೆ ಅಡಿ ಪರಿಹಾರಾತ್ಮಕ ಅರಣ್ಯಕ್ಕೆ ಗುರುತಿಸಲಾದ ಮತ್ತು ಬಳಸಲಾದ ಜಮೀನು ಅರಣ್ಯ ಭೂಮಿಯ ಕಾನೂನಾತ್ಮಕ ಸ್ವರೂಪ ಪಡೆಯುತ್ತದೆ ಎಂದು ಹೇಳಿದೆ. ಆದರೆ ಅಕ್ರಮ ಮರ ಕಡಿತಲೆ ಆಗಿರುವ ಭೂಮಿ ಸರ್ಕಾರಿ ಭೂಮಿ ಮತ್ತು ಅರಣ್ಯವಾಗಿದ್ದರೂ ಎಫ್.ಐ.ಆರ್. ನಲ್ಲಿ ಅರಣ್ಯದ ಹೊರಗೆ ಎಂದು ನಮೂದಿಸುವ ಮೂಲಕ ಆರೋಪಿಗಳಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ನಡೆದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ.
ಇದರ ಜೊತೆಗೆ ಇದೇ ವಲಯದ ಅವಿನಹಳ್ಳಿ ಗ್ರಾಮದ ಬಳಿ ಕೂಡ ಕಳೆದ ಮಾರ್ಚ್ ನಲ್ಲಿ ವಾಹನದಲ್ಲಿ ಅಕ್ರಮವಾಗಿ ಯಾವುದೇ ಪಾಸ್ ಇಲ್ಲದೆ ಸಾಗಿಸುತ್ತಿದ್ದ ಬೃಹತ್ ಮರಗಳ ಲೋಡ್ ಅನ್ನು ಗ್ರಾಮಸ್ಥರೇ ತಡಿದಿದ್ದರು. ಒಂದೇ ವಲಯದಲ್ಲಿ ಪದೇ ಪದೇ ಇಂತಹ ಅಕ್ರಮ ಮರ ಕಡಿತಲೆ, ಅಕ್ರಮ ಮರಗಳ, ನಾಟಾಗಳ ಸಾಗಾಟ ನಡೆಯುತ್ತಿರುವುದು ಅಧಿಕಾರಿಗಳು ನೇರವಾಗಿ ಇಂತಹ ಅಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದು ಹೇಳಿರುವ ಈಶ್ವರ ಬಿ ಖಂಡ್ರೆ ಅವರು, ಸೂಕ್ತ ಕ್ರಮ ವಹಿಸದ, ಗಸ್ತು ಹೆಚ್ಚಿಸುವಲ್ಲಿ ವಿಫಲವಾಗಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ, ಎ.ಪಿಸಿಸಿಎಫ್ ನೇತೃತ್ವದ ತಂಡದಿಂದ ಈ ವಲಯದಲ್ಲಿ 3 ವರ್ಷಗಳಲ್ಲಿ ಆಗಿರುವ ಎಲ್ಲ ಅಕ್ರಮ ಮರ ಕಡಿತಲೆ, ಒತ್ತುವರಿ ಮತ್ತು ಅಕ್ರಮ ಮರ ಸಾಗಾಟ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಮತ್ತು ಆರ್.ಎಫ್.ಓ, ಡಿ.ಆರ್.ಎಫ್.ಓ. ಮತ್ತು ಗಸ್ತು ಸಿಬ್ಬಂದಿಯ ಅಮಾನತಿಗೆ ಸೂಚನೆ ನೀಡಿದ್ದಾರೆ.
Illegal felling of Malawi alfalfa trees: R.F.O. Khandre order for suspension

