ಶನಿವಾರ, ಸೆಪ್ಟೆಂಬರ್ 14, 2024

ಬಜಾರ್‌ನ ಮಹಾದ್ವಾರದಲ್ಲಿ ಸೆಟ್ಟೇರುತ್ತಿದೆ ಹಿಂದೂ ಕೇಸರಿ ಅಲಂಕಾರ ಸಮಿತಿಯ ಕಲಾಕೃತಿ-ಏನಿರಬಹುದು ಎಂಬುದೇ ಚರ್ಚೆ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ಮೂರು ದಿನ ಬಾಕಿ ಇದೆ. ಹಿಂದೂ ಅಲಂಕಾರ ಸಮಿತಿಯು ಕಳೆದ ಐದು ವರ್ಷದಿಂದ ಬಜಾರ್‌ನ ಮಹಾದ್ವಾರದಲ್ಲಿ ಅಲಂಕಾರವನ್ನ ಮಾಡಿಕೊಂಡು ಬರುತ್ತಿದ್ದು ಈ ವರ್ಷವೂ ಕಲಾಕೃತಿಯನ್ನ ನಿರ್ಮಿಸಿ ಜನರ ಆಕರ್ಷಣೆಗೆ ಮುಂದಾಗಿದೆ. 


ಬಜಾರ್‌ನ್ನ ಈಗಾಗಲೇ ಕೇಸರಿ ಬಂಟಿಂಗ್ಸ್‌ನಲ್ಲಿ ಅಲಂಕಾರ ಮಾಡಲಾಗಿದೆ. ಮಹಾದ್ವಾದಲ್ಲಿ ಕಲಾಕೃತಿಗಳು ಸೆಟ್ಟೇರುತ್ತಿದೆ. ದೇವಸ್ಥಾನದ ಕಲಾಕೃತಿ ಎಂಬುದು ತಿಳಿಯುತ್ತಿದೆ. ದೇವಸ್ಥಾನದ ಕೆಳಭಾಗ ಮಾತ್ರ ಸೆಟ್ಟೇರಿದೆ ಎರಡು ಗೋಪುರಗಳು ಮತ್ತು ಶಿವನ ಕಲಾಕೃತಿ ಇನ್ನೂ ಸೆಟ್ಟೇರಬೇಕಿದೆ. 



ಈ ಕಲಾಕೃತಿಯೇ ಏನು ಎಂಬುದರ ಕುತೂಹಲ ಹೆಚ್ಚಾಗಿದೆ. ದೇವಸ್ಥಾನದ ಬೇಸ್‌ಮೆಂಟ್ ಇರುವುದರಿಂದ ಇದೊಂದು ಅಯೋದ್ಯ ರಾಮಮಂದಿರನ ಎಂಬ ಯೋಚನೆ ಹೊರಹೊಮ್ಮಿದರೂ ಶಿವನ ವಿಗ್ರಹ ಇರುವುದರಿಂದ ಇದು ಅಯೋಧ್ಯ ಆಗಿರಲು ಸಾಧ್ಯವಿಲ್ಲ. ಹೆಚ್ಚಾಗಿ 2018 ರಲ್ಲಿ ಮೊದಲ ಬಾರಿಯ ಕಲಾಕೃತಿಯಾಗಿ ಸ್ಥಾಪನೆಗೊಂಡಿದ್ದೇ ಅಯೋಧ್ಯ ರಾಮ ಮಂದಿರ. ಹೀಗಾಗಿ ರಾಮಮಂದಿರ ಹೊರತು ಪಡಿಸಿ ಶಿವನ ಮಂದಿರದ ಕಲಾಕೃತಿ ಮೂಡಿ ಬರುತ್ತಿದೆ‌ 



ಕಲಾವಿದ ಜೀವನ್ ಅವರಿಂದ ಮೂಡಿ ಬರುತ್ತಿರುವ ಈ ಕಲಾಕೃತಿಗಳಿಗೆ ಐದು ವರ್ಷ ಸಂಭ್ರಮ. 2018 ರಲ್ಲಿ ಅಯೋಧ್ಯ ರಾಮಮಂದಿರ, 2019 ರಲ್ಲಿ ಶಿವಾಜಿ, 2020-21 ಕೊರೋನದ ಹಿನ್ನಲೆಯಲ್ಲಿ ಕಲಾಕೃತಿಗೆ ವಿರಾಮ. 2022 ರಲ್ಲಿ ಗೀತೋಪದೇಶ, 2023 ರಲ್ಲಿ ಉಗ್ರ ನರಸಿಂಹ, 2024 ಈ ಬಾರಿ ಸ್ಥಳೀಯರ ಪ್ರಕಾರ ಕಾಶಿ ವಿಶ್ವನಾಥನ ದೇಗುಲ ಇರಬಹುದು ಎಂದು ಅನುಮಾನ ವ್ಯಕ್ತಪಡಿಸ್ತಾ ಇದ್ದಾರೆ. 


ಈ ಬಗ್ಗೆ ಕಲಾಕೃತಿ ನಿರ್ಮಿಸಿರುವ ಜೀವನ್‌ ಅವರೆ ಸ್ಪಷ್ಟನೆ ನೀಡಬೇಕಿದೆ. ಜನರು ಬಜಾರ್ ಮಹಾದ್ವಾರಕ್ಕೆ ಬಂದು ಮೊಬೈಲ್ ನಲ್ಲಿ ಫೋಟೊ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ, ಸ್ಟೇಟಸ್ ಗೆ ಅಪ್ಲೋಡ್ ಮಾಡಿಕೊಳ್ಳಯವ ದೃಶ್ವ ಲಭ್ಯವಾಗಿದೆ. 

ಇಂದು ಭದ್ರಾವತಿಯಲ್ಲಿ ಕೆಲವೆಡೆ ವಿದ್ಯುತ್ ವ್ಯತ್ಯಯ



ಸುದ್ದಿಲೈವ್/ಭದ್ರಾವತಿ


ನಗರದ ಸೀಗೆಬಾಗಿ 60/11 ಕೆವಿ ವಿದ್ಯುತ್ ವಿತರಣಾಕೇಂದ್ರದಲ್ಲಿ ಅಭಿವೃದ್ಧಿ ಕಾಮಗಾರಿ ಹಮ್ಮಿ ಕೊಂಡಿದ್ದು ಸೆ: 14 ರ ನಾಳೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಘಟಕ -2 ಮತ್ತು ಘಟಕ-4 ರ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯೆಯ ವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.


ಹಳೇನಗರ ತಾಲ್ಲೂಕು ಕಛೇರಿ ರಸ್ತೆ, ರಂಗಪ್ಪ ವೃತ್ತ, ಬಸವೇಶ್ವರ ವೃತ್ತ, ಕೋಟೆ, ಕಂಚಿ ಬಾಗಿಲು, ಹಳ್ಳದಮ್ಮ ಬೀದಿ, ಖಾಜಿಮೊಹಲ್ಲಾ, ಭೂತನಗುಡಿ, ಹೊಸಮನೆ, ಎಸ್.ಎಂ.ಸಿ. ರಸ್ತೆ, ಭೋವಿ ಕಾಲೋನಿ, ಸಂತೆ ಮೈದಾನ, ಕೇಶವಪುರ, ಸಾಯಿನಗರ, ಶಿವಾಜಿ ವೃತ್ತ, ಹನುಮಂತ ನಗರ, ತಮ್ಮಣ್ಣ ಕಾಲೋನಿ, ಸುಭಾಷ್ ನಗರ, ವಿಜಯ ನಗರ, ಕುವೆಂಪುನಗರ, ನೃಪತುಂಗ ನಗರ ಸೀಗೇಬಾಗಿ, ಹಳೇ ಸೀಗೆಬಾಗಿ, ಅಶ್ವತ್ಥನಗರ, ಭದ್ರಾಕಾಲೋನಿ, ಕಣಕಟ್ಟೆ, ಚೆನ್ನಗಿರಿರಸ್ತೆ, ಗೌರಾಪುರ, ಕೃ.ಉ.ಮಾ.ಸ(ಎ.ಪಿ.ಎಮ್.ಸಿ),



ಗಾಂಧಿ ವೃತ್ತ, ಕೋಡಿಹಳ್ಳಿ, ಹೊಸ ಸೇತುವೆ ರಸ್ತೆ, ಸಿದ್ದಾರೂಢನಗರ, ಶಂಕರಮಠ, ಕನಕನಗರ ಸ್ಮಶಾನ ಪ್ರದೇಶ, ಹೊಳೆ ಹೊನ್ನೂರು ರಸ್ತೆ, ಖಲಂದರ್ ನಗರ, ಜಟ್ ಪಟ್ ನಗರ, ಅನ್ವರ್ ಕಾಲೋನಿ, ಮೊಮಿನ್ ಮೊಹಲ್ಲಾ, ಅಮೀರ್ ಜಾನ್ ಕಾಲೋನಿ, ಮಜ್ಜಿಗೇನಹಳ್ಳಿ, ಗೌಡರಹಳ್ಳಿ, ಬಾಬಳ್ಳಿ, ವೀರಾಮಠ, ಶ್ರೀರಾಮನಗರ, ಲಕ್ಷ್ಮೀಪುರ ಮುಂತಾದೆಡೆ ವಿದ್ಯುತ್ ವ್ಯತ್ಯೆಯ ವಾಗಲಿದ್ದು, ಗ್ರಾಹಕರು ಸಹಕರಿಸಲು ಕೋರಿದೆ.

ಶುಕ್ರವಾರ, ಸೆಪ್ಟೆಂಬರ್ 13, 2024

ಬೈಕ್ ಮೇಲೆ ಬಂದವರು ಉದ್ಯಮಿಗೆ ಚಾಕು ಇರಿದು ಪರಾರಿ


ಸುದ್ದಿಲೈವ್/ಶಿವಮೊಗ್ಗ


ನಗರದ ಊರಗಡೂರು ಸರ್ಕಲ್ ಬಳಿ ಉದ್ಯಮಿಯೊಬ್ಬರಿಗೆ ಬೈಕ್ ನಲ್ಲಿ ಬಂದ ಇಬ್ಬರು ಚಾಕು ಇರಿದು ಪರಾರಿಯಾಗಿದ್ದಾರೆ. ಸಧ್ಯಕ್ಕೆ ಪ್ರಾಣಾಪಾಯದಿಂದ ಉದ್ಯಮಿ ಪಾರಾಗಿದ್ದಾರೆ. 


ನಗರದ ಬೈಪಾಸ್ ಬಳಿ ಕಬ್ಬಿಣದ ವ್ಯಾಪಾರ ಮಾಡಿಕೊಂಡಿದ್ದ ನಾಸೀರ್ ಖಾನ್ ಮೇಲೆ ಅಪರಿಚಿತರಿಬ್ಬರು ಬೈಕ್ ನಲ್ಲಿ ಬಂದು ಚಾಕು ಇರಿದು ಹೋಗಿದ್ದಾರೆ. ನಾಸೀರ್ ಖಾನ್ ಮದಾರಿಪಾಳ್ಯಕ್ಕೆ ಹೋಗುವಾಗ ಚಾಕು ಇರಿತವಾಗಿದೆ ಎನ್ನಲಾಗಿದೆ.  ಸಧ್ಯಕ್ಕೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 


ಚಾಕು ಇರಿತಕ್ಕೊಳಗಾದ ಉದ್ಯಮಿ ನಾಸೀರ್ ಖಾನ್  ಚಿಕಿತ್ಸೆ ಪಡೆದುಕೊಂಡು ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸ್ ಇನ್‌ಸ್ಪೆಕ್ಟರ್ ಗುರುರಾಜ್ ಕೆ.ಟಿ ತನಿಖೆ ಕೈಗೊಂಡ ನಂತರ ಚಾಕು ಇರಿತದ ಬಗ್ಗೆ ಮಾಹಿತಿ ತಿಳಿದು ಬರಲಿದೆ. 


ಈ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸಹ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು ನಮಾಜ್ ಮುಗಿಸಿಕೊಂಡು ಹೋಗುವಾಗ ಹಿಂದಿನಿಂದ ಬಂದು ಚಾಕು ಇರಿದ್ದಾರೆ. ಈ ಬಗ್ಗೆ ಸಿಸಿ ಟಿವಿ ಫೂಟೇಜ್ ಸಹ ಪರಿಶೀಲಿಸಲಾಗುತ್ತಿದೆ. ಎಲ್ಲಾ ರೀತಿಯಲ್ಲೂ ಈ ಪ್ರಕರಣವನ್ನ ಪರಿಶೀಲಿಸುವುದಾಗಿ ಹೇಳಿದ್ದಾರೆ. ಜಮೀನು ಖರೀದಿ ವಿಚಾರದಲ್ಲೂ ಸಹ ತಕರಾರು ಆಗಿದೆಯಾ ಎಂಬುದನ್ನೂ ಪರಿಶೀಲಿಸುವುದಾಗಿ ಹೇಳಿದ್ದಾರೆ. 


ಹಿಂದೆ ನಡೆದ ಘಟನೆ


ಈ ಹಿಂದೆ ಬಚ್ಚ ಶಿವಮೊಗ್ಗ ಕಾರಾಗೃಹದಲ್ಲಿದ್ದಾಗ ರೌಡಿಶೀಟರ್ ಬಚ್ಚಾ ಅನಾರೋಗ್ಯದ ಹಿನ್ನಲೆ ವೇಳೆ ಮೆಗ್ಗಾನ್‌ಗೆ ಕರೆತರಲಾಗಿತ್ತು. ಮೆಗ್ಗಾನ್‌ನಲ್ಲಿ ಚಿಕಿತ್ಸೆ ಪಡೆದು ವಾಪಾಸ್ ಹೋಗುವಾಗ ಬೈಪಾಸ್ ರಸ್ತೆಯಲ್ಲಿರುವ ನಾಸೀರ್ ಖಾನ್ ಅವರ ಅಂಗಡಿಗೆ ಬಂದು ಹಣದ ಬೇಡಿಕೆ ಇಟ್ಟಿದ್ದ ಪ್ರಕರಣ ತುಂಗನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.  


ಈ ಪ್ರಕರಣ ಎರಡು ವರ್ಷದ ಹಿಂದೆ ನಡೆದಿತ್ತು. ಇಲ್ಲಿ ಆರೋಪಿಯ ಕೈವಾಡವಿದೆ ಎಂದು ಹೇಳಲು ಸಾಧ್ಯವಿಲ್ಲ. ಪೊಲೀಸರ ತನಿಖೆಯಲ್ಲೇ ತಿಳಿದು ಬರಬೇಕಿದೆ. ಘಟನೆ ನಡೆದಿದ್ದರ ಬಗ್ಗೆ ಇಲ್ಲಿ ಪ್ರಸ್ತಾಪಿಸಲಾಗಿದೆ. 

ಗುಂಡುಹಾರಿಸಿ ಕೊಲೆಯತ್ನ-ಆರೋಪಿಗೆ ಶಿಕ್ಷೆ ಪ್ರಕಟ



ಸುದ್ದಿಲೈವ್/ತೀರ್ಥಹಳ್ಳಿ


ಜಮೀನು ವಿಚಾರದಲ್ಲಿ ಗುಂಡು ಹಾರಿಸಿದ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗಿದೆ. 5 ವರ್ಷ ಕಠಿಣ ಕಾರಾಗೃಹ ವಾಸ 50 ದಂಡ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.  


ಕೃಷ್ಣಮೂರ್ತಿ, 64 ವರ್ಷ, ಜಟ್ಟಿನಮಕ್ಕಿ ಗ್ರಾಮ ತೀರ್ಥಹಳ್ಳಿ ತಾಲ್ಲೂಕು ರವರು ಅದೇ ಗ್ರಾಮದ ಅಶೋಕನ ಮನೆಯ ಪಕ್ಕದಲ್ಲಿರುವ ಜಾಗದಿಂದ ತಮ್ಮ ಜಮೀನಿಗೆ ಹೋಗುತ್ತಿದ್ದು,  ಸದರಿ ಜಾಗದ ವಿಚಾರದಲ್ಲಿ ಇಬ್ಬರಿಗೂ ಈ ಹಿಂದಿನಿಂದಲೂ ಗಲಾಟೆ ಮತ್ತು ತಂಟೆ ತಕರಾರಿರುತ್ತದೆ. 


ಈ ವಿಚಾರವಾಗಿ ದಿನಾಂಕಃ 23-04-2018 ರಂದು ಬೆಳಿಗ್ಗೆ ಕೃಷ್ಣಮೂರ್ತಿ ರವರು ಎಂದಿನಂತೆ ತಮ್ಮ ಜಮೀನಿನ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ, ಅಶೋಕನು ಅಲ್ಲಿಗೆ ಕೋವಿ (ಬಂದೂಕು) ಹಿಡಿದು ಕೊಂಡು ಬಂದು, ಕೊಲೆ ಮಾಡುವ ಉದ್ದೇಶದಿಂದ ಕೃಷ್ಣಮೂರ್ತಿ ರವರ ಮೇಲೆ ಗುಂಡು ಹಾರಿಸಿದ್ದು, ಕೃಷ್ಣಮೂರ್ತಿ ರವರ ಕುತ್ತಿಗೆಗೆ ಗುಂಡುತಾಗಿ ತೀವ್ರ ಸ್ವರೂಪದ ರಕ್ತ ಗಾಯವಾಗಿತ್ತು. ಪ್ರಕರಣ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.


ಪ್ರಕಣದಲ್ಲಿ ಆಗಿನ ತನಿಖಾಧಿಕಾರಿಗಳಾದ  ಸುರೇಶ್, ಸಿ.ಪಿ.ಐ, ತೀರ್ಥಹಳ್ಳಿ ವೃತ್ತ ರವರು ಪ್ರಕರಣದ ತನಿಖೆ ಪೂರೈಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.‌ ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸುರೇಶ್ ಕುಮಾರ್ ಎ. ಎಂ. ಸರ್ಕಾರಿ ಅಭಿಯೋಜಕರವರು, ಪ್ರಕರಣದ ವಾದ ಮಂಡಿಸಿದ್ದು, ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು, 


ಆರೋಪಿತನ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಮಂಜುನಾಥ್ ನಾಯಕ್ ರವರು ದಿನಾಂಕಃ 13-09-2024 ರಂದು  ಆರೋಪಿತನಾದ ಅಶೋಕ, 62 ವರ್ಷ, ಜಟ್ಟಿನಮಕ್ಕಿ ಗ್ರಾಮ ತೀರ್ಥಹಳ್ಳಿ ತಾಲ್ಲೂಕು ಈತನಿಗೆ 05 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ 50,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 05 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದೆ. 


ಪರಿಹಾರ ರೂಪವಾಗಿ  ದಂಡದ ಮೊತ್ತದಲ್ಲಿ  25,000 ರೂಗಳನ್ನು  ಗಾಯಾಳು ಕೃಷ್ಣಮೂರ್ತಿರವರಿಗೆ ನೀಡಲು ಆದೇಶಿಸಿರುತ್ತಾರೆ.

ಪೋಕ್ಸೋ ಮತ್ತು ಅತ್ಯಾಚಾರ ಪ್ರಕರಣ-ತೀರ್ಪು ಪ್ರಕಟ



ಸುದ್ದಿಲೈವ್/ಶಿವಮೊಗ್ಗ


ಎರಡು ಪ್ರತ್ಯೇಕ ಬಲತ್ಕಾರದ ಪ್ರಕರಣಗಳಲ್ಲಿ ನ್ಯಾಯಾಲಯ ತೀರ್ಫು ನೀಡಿದೆ. ಒಂದು ಪೋಕ್ಸೋ ಪ್ರಕರಣಲ್ಲಿನ ಆರೋಪಿಗೆ  20  ವರ್ಷ ಕಠಿಣ ಕಾರಾವಾಸ ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಲಾಗಿದೆ. ಮತ್ತೊಂದು ಅತ್ಯಾಚರದ ಆರೋಪಿಗೆ 14 ವರ್ಷ ಕಠಿಣ ಶಿಕ್ಷೆ ಮತ್ತು 2,26,000 ರೂ ದಂಡವಿಧಿಸಿ ತೀರ್ಪು ನೀಡಿದೆ. 


ಪೋಕ್ಸೋ ಪ್ರಕರಣ


2023ನೇ ಸಾಲಿನಲ್ಲಿ ಭದ್ರಾವತಿ ತಾಲ್ಲೂಕಿನ  70  ವರ್ಷದ ವ್ಯಕ್ತಿಯು 09 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ  ಮೇಲೆ ಲೈಂಗಿಕ ದೌರ್ಜನ್ಯ ವೆಸಗಿರುವ ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 


ಪ್ರಕರಣದ ತನಿಖಾಧಿಕಾರಿಗಳಾದ ಹೊಳೆಹೊನ್ನೂರು ಪಿಐ ಲಕ್ಷ್ಮಿಪತಿ ಆರ್. ಎಲ್ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾಗಿ ಶ್ರೀಧರ್ ಹೆಚ್. ಆರ್, ವಾದ ಮಂಡಿಸಿದ್ದರು.  


ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-1 ಶಿವಮೊಗ್ಗದಲ್ಲಿ  ಪ್ರಕರಣದ ವಿಚಾರಣೆ ನಡೆದು, ಆರೋಪಿಯ ವಿರುದ್ಧ ಆರೋಪ ದೃಡ ಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧೀಶರಾದ ಮೋಹನ್ ಜೆ. ಎಸ್ ಆರೋಪಿ 70 ವರ್ಷದ ವ್ಯಕ್ತಿಗೆ 20  ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ 2,10,000/-  ದಂಡ, ದಂಡ ಕಟ್ಟಲು ವಿಫಲನಾದಲ್ಲಿ 01 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿದ್ದಾರೆ. 


ಪರಿಹಾರ ರೂಪವಾಗಿ  ದಂಡದ ಮೊತ್ತದಲ್ಲಿ  2 ಲಕ್ಷ ಮತ್ತು ಸರ್ಕಾರದಿಂದ 2 ಲಕ್ಷರೂಗಳನ್ನು  ನೊಂದ ಬಾಲಕಿಗೆ ನೀಡಲು ಆದೇಶಿಸಿರುತ್ತಾರೆ. 


31 ವರ್ಷದ ವ್ಯಕ್ತಿಯಿಂದ ಮಹಿಳೆಯ ಮೇಲೆ ಅತ್ಯಾಚಾರ

   

2022ನೇ ಸಾಲಿನಲ್ಲಿ  ಶಿವಮೊಗ್ಗ  ತಾಲ್ಲೂಕಿನ  31 ವರ್ಷದ ವ್ಯಕ್ತಿಯು,  32 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿರುತ್ತಾನೆಂದು ನೊಂದ ಮಹಿಳೆಯು ಹೊಳೆಹೊನ್ನೂರಿನಲ್ಲಿ ಪ್ರಕರಣ ದಾಖಲಿಸಲಾಗಿತ್ತು. 


ಪ್ರಕರಣದ ತನಿಖಾಧಿಕಾರಿಗಳಾದ ಹೊಳೆಹೊನ್ನೂರು ಪಿಐ ಲಕ್ಷ್ಮಿಪತಿ ಆರ್. ಎಲ್ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. 


 ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಧರ್ ಹೆಚ್. ಆರ್, ಅಭಿಯೋಜಕರಾಗಿ ವಾದ ಮಂಡಿಸಿದ್ದರು,  ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-1 ಶಿವಮೊಗ್ಗದಲ್ಲಿ  ಪ್ರಕರಣದ ವಿಚಾರಣೆ ನಡೆದು, ಆರೋಪಿಯ ವಿರುದ್ಧ ಆರೋಪ ದೃಡ ಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧೀಶರಾದ  ಮೋಹನ್ ಜೆ. ಎಸ್ ರವರು ದಿನಾಂಕಃ 13-09-2024  ರಂದು ತೀರ್ಪು ನೀಡಿ ಆದೇಶಿಸಿದ್ದಾರೆ.  


ಪ್ರಕರಣದ ಆರೋಪಿ  ಶಿವಮೊಗ್ಗ  ತಾಲ್ಲೂಕಿನ  31  ವರ್ಷದ ವ್ಯಕ್ತಿಗೆ  14 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ 2,26,000/-  ದಂಡ, ದಂಡ ಕಟ್ಟಲು ವಿಫಲನಾದಲ್ಲಿ 01 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿದ್ದು, ಪರಿಹಾರ ರೂಪವಾಗಿ  ದಂಡದ ಮೊತ್ತದಲ್ಲಿ  2 ಲಕ್ಷ ರೂಗಳನ್ನು  ನೊಂದ ಮಹಿಳೆಗೆ ನೀಡಲು ಆದೇಶಿಸಿರುತ್ತಾರೆ.

ಭದ್ರಾವತಿಯ ಮಸ್ಜಿದ್-ಎ-ಚೌಕ್ ಗೆ ಚುನಾವಣೆ ವೇಳಾಪಟ್ಟಿ ಪ್ರಕಟ

 


ಸುದ್ದಿಲೈವ್/ಭದ್ರಾವತಿ


ಇಲ್ಲಿನ ಟಿ.ಕೆ ರಸ್ತೆಯಲ್ಲಿರುವ ಮಸ್ಜಿದ್-ಎ-ಚೌಕ್‌ಗೆ 11 ಜನ  ವ್ಯವಸ್ಥಾಪನ ಸಮಿತಿಯ ಸದಸ್ಯರನ್ನ ಚುನಾಯಿಸಲು ವೇಳಾಪಟ್ಟಿ ಬಿಡುಗಡೆಯಾಗಿದೆ. ವಕ್ಫ್ ಸಮಿತಿಯ ಅಧಿಕಾರಿಯಾಗಿರುವ ಸೈಯ್ಯದ್ ಮೆಹತಾಬ್ ಸರ್ವರ್ ಅವರನ್ನ ಚುನಾವಣೆ ಅಧಿಕಾಗಿ ನೇಮಿಸಲಾಗಿದೆ. 


ಚುನಾವಣೆ ಅಧಿಸೂಚನೆ ಪ್ರಕಟಣೆ ಇಂದಿನಿಂದ ಹೊರಡಿಸಲಾಗಿದೆ‌.  ನಾಮಪತ್ರ ಪಡೆಯಲು ಮತ್ತು ಸಲ್ಲಿಸಲು ಸೆ.19 ರಿಂದ ಸೆ.26 ರ ವರೆಗೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ( ಸರ್ಕಾರಿ ರಜೆ ಹೊರತುಪಡಿಸಿ) ನಡೆಯಲಿದ್ದು ಭರ್ತಿ ಮಾಡಿದ ನಾಮಪತ್ರವನ್ನ ಸೆ.26 ರಂದು ಮಧ್ಯಾಹ್ನ 2 ಗಂಟೆಯ ಒಳಗೆ ಸಲ್ಲಿಸಬಹುದಾಗಿದೆ.  ಸೆ.30 ರಂದುವನಾಮಪತ್ರ ಪರಿಷ್ಕರಣೆ ನಡೆಯಲಿದೆ. 


ಚುನಾವಣೆ ಸ್ಪರ್ಧಿಸುವ ಅರ್ಹ ಅಭ್ಯರ್ಥಿಗಳ ಪಟ್ಟಿಪ್ರಕಟಣೆ ಮತ್ತು ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯಲು ಅ.01 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಅ.03 ರಂದು ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಅ.04 ರಂದು ಮದ್ಯಾಹ್ನದ 2 ಗಂಟೆಯ ಒಳಗೆ ಅಭ್ಯರ್ಥಿಗಳ ಚಿಹ್ನೆ ಹಂಚಲಾಗುತ್ತದೆ. 


ಅ.13 ರಂದು ಭಾನುವಾರ ಭದ್ರಾವತಿಯ ಬೈಪಾಸ್ ರಸ್ತೆಯಲ್ಲಿರುವ ಅಲ್ ಮೆಹಮೂದ್ ತಾಜ್ ಶಿಕ್ಷಣ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ರವರೆಗೆ ಮತದಾನ ನಡೆಯಲಿದೆ. ಅಂದು ಸಂಜೆ 4 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ನಂತರ ಫಲಿತಾಂಶ ಪ್ರಕಟಿಸಲಾಗುವುದು


ನಾಮತ್ರ ಪಡೆಯಲು, ನಾಮಪತ್ರ ಸಲ್ಲಿಸುವುದು ಪರಿಷ್ಕರಣೆ, ಅಭ್ಯರ್ಥಿಗಳಿಗೆ ಚಿಹ್ನೆ ಪ್ರಕಟಿಸುವ ಸ್ಥಳ ಶಿವಮೊಗ್ಗದ ಸರ್ ಎಂ ವಿ ರಸ್ತೆಯಲ್ಲಿರುವ ಮುಸ್ಲೀಂ ಹಾಸ್ಟೆಲ್‌ನ ಕಟ್ಟಡದಲ್ಲಿರುವ ಚುನಾವಣೆ ಅಧಿಕಾರಿಗಳನ್ನ ಸಂಪರ್ಕಿಸುವಂತೆ ಚುನಾವಣೆ ಅಧಿಕಾರಿಗಳಾದ ಸೈಯ್ಯದ್ ಮೆಹತಾಬ್ ಸರ್ವರ್ ಪ್ರಕಟಣೆಯಲ್ಲಿ ಸೂಚಿಸಿದ್ದಾರೆ. 

ಬಹುಮುಖಿ ಕಾರ್ಯಕ್ರಮದಲ್ಲಿ ಚಿಂತಕ ರವಿಕುಮಾರ್ ಹೇಳಿದ್ದೇನು?


ಸುದ್ದಿಲೈವ್/ಶಿವಮೊಗ್ಗ


ವೈವಿಧ್ಯಮಯ ಭಾರತದೊಳಗೊಂದು ಅಸ್ಪೃಶ್ಯಭಾರತವಿದೆ. ಇದು ನಮಗೆ ಕಾಣಬೇಕಾದರೆ ನಾವು ಅಂಬೇಡ್ಕರ್ ಕಣ್ಣುಗಳಿಂದ  ನೋಡಿದಾಗ ಮಾತ್ರ ಕಾಣುತ್ತದೆ ಎಂದು ಪತ್ರಕರ್ತ, ಚಿಂತಕ ಎನ್. ರವಿಕುಮಾರ್ ಹೇಳಿದರು.


ಬಹಮುಖಿ ಆಯೋಜಿಸಿದ್ದ ’ದಲಿತ-ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ಉಪನ್ಯಾಸ ನೀಡುತ್ತಿದ್ದ ಅವರು ದಲಿತರು,  ದಲಿತತ್ವ ಎಂಬುದರ ಕುರಿತು ಮಾತನಾಡುವುದು ಎಂದರೆ ಅಂತಿಮವಾಗಿ ಭಾರತದ ಮೂಲನಿವಾಸಿಗಳ ಅಸ್ತಿತ್ವ , ಅಸ್ಮಿತೆ  ಮತ್ತು ಅವರು  ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಸವಾಲುಗಳ ಕುರಿತು ಮಾತನಾಡುವುದೇ  ಆಗಿದೆ. ದಿನ ನಿತ್ಯ ಭಾರತದಲ್ಲಿ ಜಾತಿ ಆಧಾರಿತ ಕ್ರೌರ್ಯ ನಡೆಯುತ್ತಿದ್ದು ಸ್ವಾತಂತ್ರ್ಯ ಬಂದ ನಂತರದಲ್ಲೂ ಮುಂದುವರೆದಿರುವುದು ವಿಪರ್ಯಾಸ ಎಂದರು.


ನಾವು ಇವತ್ತಿನ ವಿಶ್ವಗುರು ಭಾರತವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಈ ದೇಶದ ಸಾಮಾಜಿಕ ಸಂರಚನೆಯನ್ನು ಆರ್ಥಮಾಡಿಕೊಳ್ಳಬೇಕು. ಅಸಲಿಗೆ ಭಾರದಲ್ಲಿರುವುದು ಧರ್ಮವಲ್ಲ, ಜಾತಿ ಮಾತ್ರವೇ ಆಗಿದೆ ಎನ್ನುವುದಕ್ಕೆ ಜಾತಿ ಹೆಸರಿನಲ್ಲಿ ದಿನನಿತ್ಯ ನಡೆಯುತ್ತಿರುವ ವಿದ್ಯಮಾನಗಳೇ ಸಾಕ್ಷಿ. ಇಂದು ಜಾತೀಯತೆ ರೂಪಾಂತರವಾಗಿದೆಯೇ ವಿನಃ ಅದು ನಾಶವಾಗಿಲ್ಲ.  ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಬರೆಯದೆ ಹೋಗಿದ್ದರೆ ಭಾರತದ ದಲಿತರ ಪಾಡು ಇನ್ನಷ್ಟು ಭೀಕರವಾಗಿರುತ್ತಿತ್ತು.  ಮನುಷ್ಯರನ್ನು ದೂರ ನಿಲ್ಲಿಸಿ ಮಾತನಾಡುವುದು ನಿವಾರಣೆಯಾಗಿದೆ ,ಆದರೆ ಅವರನ್ನು ಮನಸ್ಸಿನೊಳಗೆ ಬಿಟ್ಟುಕೊಳ್ಳದೆ ದೂರವಿಟ್ಟು ಯಾವುದೋ ಕಾಲವಾಗಿದೆ.  ಜೊತೆಯಲ್ಲಿ ಉಣ್ಣುವುದು, ಓಡಾಡುವುದು ಇದ್ದರೂ ಅಂತಿಮವಾಗಿ ಜಾತಿಗೆ ಬಂದು ನಿಲ್ಲುತ್ತಾರೆ ಎಂದು ರವಿಕುಮಾರ್ ವಿಶ್ಲೇಷಿಸಿದರು.


ಜಾತಿಯತೆ ಜೀವಂತವಾಗಿರುವಾಗಲೂ ಸಂವಿಧಾನದ ಸೌಲತ್ತುಗಳನ್ನು ಪಡೆದುಕೊಂಡ ದಲಿತರು ತಮ್ಮ ಅಸ್ಮಿತೆಯನ್ನು ಮರೆಮಾಚಿಕೊಳ್ಳಲು ಸವರ್ಣ ಸಂಸ್ಕೃತಿಯ ಧರಿಸಲು ತವಕಿಸುತ್ತಿದ್ದಾರೆ. ಇದು ದಲಿತತ್ವದಲ್ಲಿ ಅಡಗಿರುವ ವೈಚಾರಿಕತೆಗೆ ಬಗೆವ ದ್ರೋಹವೇ ಆಗಿದೆ. ಇಂದು ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುವ ಅತ್ಯಾಚಾರ, ಹತ್ಯೆ ಪ್ರಕರಣಗಳಲ್ಲೂ ಸಮಾಜ ಜಾತಿಯನ್ನು ನೋಡುತ್ತಿದೆ. ದಲಿತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಹತ್ಯೆಗಳಿಗೆ ಸಮಾಜ ಒಕ್ಕೊರಲಿನಿಂದ ಪ್ರತಿಕ್ರಿಯಿಸುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.


ಇಂದು ಜಾತಿ-ಜಾತಿಗಳ ನಡುವೆ ಸಮಾನತೆ ತರುವ ಮೂಲಕ ಜಾತ್ಯಾತೀತ ಭಾರತವನ್ನು ಉಳಿಸಿಕೊಳ್ಳಬೇಕಿದೆ. ಇದಕ್ಕಾಗಿ ಶೋಷಕ ಜಾತಿಗಳು ಶೋಷಿತ ಜಾತಿಗಳ ಬಗೆಗೆ ಅಂತಃಕರಣ, ಸಮಭಾವದಿಂದ ನೋಡಬೇಕು. ಇದೇ ಬುದ್ದಭಾರತದ ಮರುಹುಟ್ಟು ಎಂದು ಎನ್. ರವಿಕುಮಾರ್ ಕರೆ ನೀಡಿದರು.


ಕಾರ್ಯಕ್ರಮವನ್ನು ಕೆ.ಜಿ ವೆಂಕಟೇಶ್ ನಿರೂಪಿಸಿದರು. ಬಹುಮುಖಿಯ ಪ್ರೋ.ಹೆಚ್. ಎಸ್ ನಾಗಭೂಷಣ್ ಉಪಸ್ಥಿತರಿದ್ದರು.