SUDDILIVE || SHIVAMOGGA
ಚುನಾವಣಾ ರಾಜಕೀಯದ ಪ್ರಶ್ನೆಗೆ ಹಾಲಪ್ಪನವರ ‘ಕಾನಿಗೆ ಬಂದಾಗ ಮೀನಿನ ಸುದ್ದಿ ಬೇಡ’ ಎಂದಿದ್ದೇಕೆ?Why did Halappa respond to a question about electoral politics by saying, "Let's not talk about fish when we are at the forest's edge"?
ಶಿವಮೊಗ್ಗ: ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದರ ವಿರುದ್ಧ ಮಾಡಿರುವ ಟೀಕೆಗಳು, ಅಡ್ಜೆಸ್ಟ್‌ಮೆಂಟ್ ರಾಜಕಾರಣದ ಆರೋಪ ಸೇರಿದಂತೆ ಜಿಲ್ಲೆಯ ರಾಜಕೀಯ ಬೆಳವಣಿಗೆಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಹರತಾಳು ಹಾಲಪ್ಪ ಅವರು ನೇರವಾಗಿ ಪ್ರತಿಕ್ರಿಯಿಸಲು ಹಿಂದೇಟು ಹಾಕಿದರು.
ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಸೊರಬದಲ್ಲಿ ಕುಮಾರ್ ಬಂಗಾರಪ್ಪ ಅವರು ಇತ್ತೀಚೆಗೆ ಬಿಜೆಪಿ ಹಾಗೂ ಪಕ್ಷದ ಪ್ರಮುಖ ನಾಯಕರ ವಿರುದ್ಧ ಮಾಡಿರುವ ಹೇಳಿಕೆಗಳ ಕುರಿತು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹಾಲಪ್ಪ, “ಅದನ್ನ ಮತ್ತೆ ಮಾತಾಡೋಣ. ಇವತ್ತು ನಮ್ಮ ಪಾರ್ಟಿ ಮೀಟಿಂಗ್ ನಡೆಯುತ್ತಿದೆ. ರಾಜ್ಯ ಕಾರ್ಯಕಾರಿಣಿ ಇದೆ” ಎಂದು ಹೇಳಿ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
ಪತ್ರಕರ್ತರು ಈ ವಿಚಾರ ತಮ್ಮ ಗಮನಕ್ಕೆ ಬಂದಿದೆಯೇ ಎಂದು ಮತ್ತೆ ಪ್ರಶ್ನಿಸಿದಾಗಲೂ, “ಸೋಮವಾರ, ಮಂಗಳವಾರ ಮಾತಾಡೋಣ” ಎಂದು ಉತ್ತರಿಸಿದರು.
ಈ ವೇಳೆ ಪ್ರಶ್ನೆಯನ್ನು ಹಾಸ್ಯಮಯವಾಗಿ ತಿರುಗಿಸಿದ ಹಾಲಪ್ಪ, “ನಾವು ಕಾನಿಗೆ ಬಂದರೆ ಮೀನಿನ ಸುದ್ದಿ ಬೇಡ. ನಾವು ಬಂದಿದ್ದೀವಿ, ಕಾನಿಗೆ ಹೋದ್ರೆ ಮೀನು ಸಿಗುತ್ತಾ? ಅಲ್ಲಿಗೆ ಜೇನು ಹುಡುಕಬೇಕು” ಎಂದು ಮಾರ್ಮಿಕವಾಗಿ ಹೇಳಿದರು.
ಇದಾದ ಬಳಿಕ ಪತ್ರಕರ್ತರು ಹಾಲಪ್ಪನವರ ಮುಂದಿನ ರಾಜಕೀಯ ನಡೆ ಕುರಿತು ನೇರ ಪ್ರಶ್ನೆಗಳನ್ನು ಮುಂದಿಟ್ಟರು. “ನೀವು ಕಾಂಗ್ರೆಸ್‌ಗೆ ಹೋಗ್ತೀರೋ, ಬೇಳೂರು ಬಿಜೆಪಿಗೆ ಬರ್ತಾರೋ ಅಥವಾ ನೀವಿಬ್ಬರೂ ಬೇರೆ ಪಕ್ಷಕ್ಕೆ ಹೋಗ್ತೀರೋ?” ಎಂದು ಪ್ರಶ್ನಿಸಲಾಯಿತು.
ಇದಕ್ಕೆ ಹಾಲಪ್ಪ, “ಅದಕ್ಕೆ ಉತ್ತರ ಅದೇ... ನಾವ್ಯಾಕೆ ಹೋಗ್ತೀವಿ ಎಲ್ಲಿಗೆ?” ಎಂದು ಪ್ರತಿಕ್ರಿಯಿಸಿದರು.
ಇದರಿಂದ ತೃಪ್ತರಾಗದ ಪತ್ರಕರ್ತರು ಕ್ಷೇತ್ರ ಬದಲಾವಣೆ ಮಾಡುವ ಸಾಧ್ಯತೆ ಇದೆಯೇ ಎಂದು ಪ್ರಶ್ನಿಸಿದಾಗಲೂ ಹಾಲಪ್ಪ ನೇರ ಉತ್ತರ ನೀಡಲಿಲ್ಲ. “ಮುಂದೆ ಇರ್ತೀವಿ ಈಗ. ನಾನು ಹೇಳಿದ್ನಲ್ಲ, ಬಂದ ಉದ್ದೇಶ ಒಂದು, ರೈತರ ಹಿತ ಕಾಯಬೇಕು ಅಂತ. ಇನ್ನೊಂದು ದಿನ ಬರ್ತೀನಲ್ಲ, ಅವತ್ತು ಮಾತಾಡೋಣ” ಎಂದು ಹೇಳಿದರು.
ಹೀಗಾಗಿ, ಪಕ್ಷ ಬದಲಾವಣೆ, ಕ್ಷೇತ್ರ ಬದಲಾವಣೆ ಹಾಗೂ ಮುಂದಿನ ಚುನಾವಣಾ ರಾಜಕೀಯದ ಕುರಿತು ಕೇಳಲಾದ ಪ್ರಶ್ನೆಗಳಿಗೆ ಹಾಲಪ್ಪ ಅವರು ಯಾವುದೇ ಸ್ಪಷ್ಟ ರಾಜಕೀಯ ಘೋಷಣೆ ಮಾಡದೆ, ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುವುದಾಗಿ ಹೇಳಿ ಪ್ರಶ್ನೆಗಳನ್ನು ತಪ್ಪಿಸಿಕೊಂಡರು. ಅವರ “ಕಾನಿಗೆ ಬಂದಾಗ ಮೀನಿನ ಸುದ್ದಿ ಬೇಡ” ಎಂಬ ಮಾರ್ಮಿಕ ಹೇಳಿಕೆ ಸುದ್ದಿಗೋಷ್ಠಿಯಲ್ಲಿ ಗಮನ ಸೆಳೆಯಿತು.
