SUDDILIVE || SHIVAMOGGA
ಶಿವಮೊಗ್ಗದಲ್ಲಿ ಆ.29ರಿಂದ ಶ್ರೀ ಗುರುರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ-355th Aradhana Mahotsav of Sri Guru Raghavendra Swami from August 29th in Shivamogga
ಶಿವಮೊಗ್ಗ: ನಗರದ ದೇವಂಗಿ ರತ್ನಾಕರ ಬಡಾವಣೆ 2ನೇ ಹಂತ, ಬೊಮ್ಮನಕಟ್ಟೆ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವನ್ನು ಆಗಸ್ಟ್ 29ರಿಂದ 31ರವರೆಗೆ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ, ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ (ಮಂತ್ರಾಲಯ ಶಾಖಾ) ಮಠದ ವತಿಯಿಂದ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಆ.29: ಶ್ರೀ ಗುರುರಾಯರ ಪೂರ್ವಾರಾಧನೆ
ಆಗಸ್ಟ್ 29ರಂದು ಶನಿವಾರ ಪ್ರತಿಪದ ಅಂಗವಾಗಿ ಬೆಳಿಗ್ಗೆ 5.30ಕ್ಕೆ ಸುಪ್ರಭಾತ ಹಾಗೂ ನಿರ್ಮಾಲ್ಯ ವಿಸರ್ಜನೆ ನಡೆಯಲಿದೆ. ಬೆಳಿಗ್ಗೆ 7ಕ್ಕೆ ಅಷ್ಟೋತ್ತರದೊಂದಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ ಅಭಿಷೇಕ, ಬೆಳಿಗ್ಗೆ 10ಕ್ಕೆ ಪಾದಪೂಜೆಯೊಂದಿಗೆ ಕನಕಾಭಿಷೇಕ ಅರ್ಚನೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.
ಅಂದು ಸಂಜೆ 5 ಗಂಟೆಗೆ ಕುಮಾರಿ ಪ್ರಜ್ಞಾ ಹಾಗೂ ಶ್ರೀಮತಿ ರಶ್ಮಿ ರಾಘವೇಂದ್ರ ಅವರಿಂದ ಭಾರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
ಆ.30: ಶ್ರೀ ಗುರುರಾಯರ ಮಧ್ಯಾರಾಧನೆ
ಆಗಸ್ಟ್ 30ರಂದು ಭಾನುವಾರ ದ್ವಿತೀಯ ಅಂಗವಾಗಿ ಬೆಳಿಗ್ಗೆ 5.30ಕ್ಕೆ ಸುಪ್ರಭಾತ ಹಾಗೂ ನಿರ್ಮಾಲ್ಯ ವಿಸರ್ಜನೆ, 7ಕ್ಕೆ ಅಷ್ಟೋತ್ತರದೊಂದಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ ಅಭಿಷೇಕ, 10ಕ್ಕೆ ಪಾದಪೂಜೆಯೊಂದಿಗೆ ಕನಕಾಭಿಷೇಕ ಅರ್ಚನೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.
ಸಂಜೆ 5 ಗಂಟೆಗೆ ಶ್ರೀ ಸರಸ್ವತಿ ವಿದ್ಯಾಲಯದ ವತಿಯಿಂದ ವೀಣಾವಾದನ ಕಾರ್ಯಕ್ರಮ ನಡೆಯಲಿದೆ.
ಆ.31: ಉತ್ತರಾರಾಧನೆ, ರಾಜಬೀದಿ ಉತ್ಸವ ಹಾಗೂ ಮಹಾರಥೋತ್ಸವ
ಆಗಸ್ಟ್ 31ರಂದು ಸೋಮವಾರ ತೃತೀಯ ಅಂಗವಾಗಿ ಬೆಳಿಗ್ಗೆ 5.30ಕ್ಕೆ ಸುಪ್ರಭಾತ ಹಾಗೂ ನಿರ್ಮಾಲ್ಯ ವಿಸರ್ಜನೆ, 7ಕ್ಕೆ ಅಷ್ಟೋತ್ತರದೊಂದಿಗೆ ಕ್ಷೀರಾಭಿಷೇಕ ಸಹಿತ ಪಂಚಾಮೃತ ಅಭಿಷೇಕ ನೆರವೇರಲಿದೆ.
ಅಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಗುರುರಾಘವೇಂದ್ರ ರಾಯರ ವಿಶೇಷಾಲಂಕೃತ ರಾಜಬೀದಿ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ. ಬಳಿಕ ಬೆಳಿಗ್ಗೆ 11 ಗಂಟೆಗೆ ಮಠದ ಪ್ರಾಕಾರದಲ್ಲಿ ಮಹಾರಥೋತ್ಸವ ನೆರವೇರಲಿದೆ. ನಂತರ ಡೋಲೋತ್ಸವ, ಸ್ವಸ್ತಿವಾಚನ, ಮಹಾಮಂಗಳಾರತಿ, ನೈವೇದ್ಯ ಹಾಗೂ ತೀರ್ಥ ಪ್ರಸಾದ ಕಾರ್ಯಕ್ರಮಗಳು ನಡೆಯಲಿವೆ.
ಸಂಜೆ 5 ಗಂಟೆಗೆ ಇಂಪು ಮ್ಯೂಸಿಕಲ್ ಕ್ರಿಯೇಟರ್ಸ್ ವತಿಯಿಂದ ‘ದಾಸ ವೈಭವ’ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
ಆರಾಧನಾ ಮಹೋತ್ಸವದ ಮೂರು ದಿನಗಳಲ್ಲೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಹೋತ್ಸವದ ಎಲ್ಲ ಕಾರ್ಯಕ್ರಮಗಳಲ್ಲಿ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಗುರುರಾಯರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು. ತನು-ಮನ-ಧನದೊಂದಿಗೆ ಕಾರ್ಯಕ್ರಮಗಳಿಗೆ ಸಹಕರಿಸುವಂತೆ ಮಠದ ವ್ಯವಸ್ಥಾಪಕ ಶ್ರೀ ದಿರೇಂದ್ರ ಆಚಾರ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಆರಾಧನಾ ಮಹೋತ್ಸವಕ್ಕೆ ಸರ್ವರಿಗೂ ಆದರದ ಸುಸ್ವಾಗತ.
