SUDDILIVE || SHIVAMOGGA
ಕುವೆಂಪು ವಿವಿ ವಿರುದ್ಧ ಬಿಜೆಪಿ ಯುವ ಮೋರ್ಚಾ ಸಮರ; ನ.30ರಂದು ಪ್ರತಿಭಟನೆಗೆ ನಿರ್ಧಾರ-BJP Yuva Morcha launches battle against Kuvempu University; decides to stage a protest on November 30
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿನ ಅಂಕಪಟ್ಟಿ ಗೊಂದಲ, ಪರೀಕ್ಷಾ ವಿಳಂಬ, ಮೌಲ್ಯಮಾಪನ ಲೋಪ ಸೇರಿದಂತೆ ವಿದ್ಯಾರ್ಥಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಖಂಡಿಸಿ ನವೆಂಬರ್ 30ರಂದು ಪ್ರತಿಭಟನೆ ನಡೆಸಲು ಬಿಜೆಪಿ ಯುವ ಮೋರ್ಚಾ ನಿರ್ಧರಿಸಿದೆ.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ ಅವರು ಶಿವಮೊಗ್ಗದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕುವೆಂಪು ವಿಶ್ವವಿದ್ಯಾನಿಲಯದ ಗೇಟ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ವಿಶ್ವವಿದ್ಯಾಲಯದ ಆಡಳಿತಾತ್ಮಕ ಲೋಪಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ಪರೀಕ್ಷಾ ವ್ಯವಸ್ಥೆ, ಅಂಕಪಟ್ಟಿ ವಿತರಣೆ, ಮೌಲ್ಯಮಾಪನ ಹಾಗೂ ಆಂತರಿಕ ಅಂಕಗಳ ದಾಖಲಾತಿಯಲ್ಲಿ ಗಂಭೀರ ಗೊಂದಲಗಳಿವೆ. ಇವುಗಳ ವಿರುದ್ಧ ನವೆಂಬರ್ 30ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರಶಾಂತ್ ಕುಕ್ಕೆ ತಿಳಿಸಿದರು.
ಕುವೆಂಪು ಅವರು ಈ ರಾಷ್ಟ್ರ ಕಂಡ ಮಹಾನ್ ಚೇತನ. ಅವರ ಹೆಸರಿನಲ್ಲಿರುವ ವಿಶ್ವವಿದ್ಯಾಲಯದ ಘನತೆ ಕಾಪಾಡುವ ಜವಾಬ್ದಾರಿ ಆಡಳಿತ ಮಂಡಳಿಯ ಮೇಲಿದೆ. ಆದರೆ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸದೆ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ವಿದ್ಯಾರ್ಥಿಗಳ ಪರವಾಗಿ ಹೋರಾಟಕ್ಕೆ ಮುಂದಾಗಿದೆ ಎಂದು ಹೇಳಿದರು.
ಪ್ರಾವಿಷನಲ್ ಅಂಕಪಟ್ಟಿಯಲ್ಲಿ ಪಾಸ್, ಮೂಲ ಅಂಕಪಟ್ಟಿಯಲ್ಲಿ ಫೇಲ್!
ಎನ್ಇಪಿ ಜಾರಿಯಾದ ನಂತರದ ವಿದ್ಯಾರ್ಥಿಗಳು ಅಂಕಪಟ್ಟಿ ವಿಚಾರದಲ್ಲಿ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. 2023-24ನೇ ಸಾಲಿನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮೂರನೇ ಮತ್ತು ನಾಲ್ಕನೇ ಸೆಮಿಸ್ಟರ್ನ ಅಂಕಪಟ್ಟಿಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಪ್ರಶಾಂತ್ ಕುಕ್ಕೆ ಆರೋಪಿಸಿದರು.
ಪರೀಕ್ಷೆ ಮುಗಿದ ತಕ್ಷಣ ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ಪ್ರಾವಿಷನಲ್ ಅಂಕಪಟ್ಟಿ ಪಡೆದುಕೊಳ್ಳುತ್ತಾರೆ. ಅದರಲ್ಲಿ ಉತ್ತೀರ್ಣರಾಗಿರುವುದಾಗಿ ಫಲಿತಾಂಶ ಪ್ರಕಟವಾಗಿರುತ್ತದೆ. ಆದರೆ, ವಿಶ್ವವಿದ್ಯಾಲಯದಿಂದ ಭೌತಿಕವಾಗಿ ನೀಡುವ ಮೂಲ ಅಂಕಪಟ್ಟಿ ಪಡೆಯಲು ಹೋದಾಗ ಅದೇ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದಾಗಿ ನಮೂದಾಗಿರುವ ಘಟನೆಗಳು ನಡೆದಿವೆ.
ಪ್ರಾವಿಷನಲ್ ಅಂಕಪಟ್ಟಿಯ ಆಧಾರದ ಮೇಲೆ ಉದ್ಯೋಗಕ್ಕೆ ಸೇರಿದ ವಿದ್ಯಾರ್ಥಿಗಳು ಮೂಲ ಅಂಕಪಟ್ಟಿ ಪಡೆಯಲು ಹೋದಾಗ ಫೇಲ್ ಎಂದು ನಮೂದಾಗಿರುವುದರಿಂದ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಇಂತಹ ಲೋಪಗಳಿಂದ ಬಡ ಕುಟುಂಬಗಳ ವಿದ್ಯಾರ್ಥಿಗಳ ಬದುಕು ಸಂಕಷ್ಟಕ್ಕೆ ಸಿಲುಕುತ್ತಿದೆ. ಈ ಸಮಸ್ಯೆ ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ವಿಶ್ವವಿದ್ಯಾಲಯ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಎಂಬಿಎ ವಿದ್ಯಾರ್ಥಿನಿಯ ಆಂತರಿಕ ಅಂಕಗಳೇ ಮಾಯ!
2021-22ನೇ ಸಾಲಿನ ಎನ್ಇಪಿ ವಿದ್ಯಾರ್ಥಿನಿಯೊಬ್ಬರು ಪ್ರಸ್ತುತ ಎಂಬಿಎ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಅವರ ಐದನೇ ಮತ್ತು ಆರನೇ ಸೆಮಿಸ್ಟರ್ನ ಅಂಕಪಟ್ಟಿಯಲ್ಲಿ ಕಾಲೇಜು ದಾಖಲಿಸಬೇಕಾದ ಆಂತರಿಕ ಅಂಕಗಳು ನಮೂದಾಗಿಲ್ಲ ಎಂಬ ಸಮಸ್ಯೆ ಎದುರಾಗಿದೆ ಎಂದು ವಿವರಿಸಿದರು.
ಈ ಕುರಿತು ಕಾಲೇಜಿನಲ್ಲಿ ವಿಚಾರಿಸಿದಾಗ ಆಂತರಿಕ ಅಂಕಗಳು ವಿಶ್ವವಿದ್ಯಾಲಯದಲ್ಲಿ ದಾಖಲಾಗಿಲ್ಲ ಎಂದು ತಿಳಿಸಲಾಗಿದೆ. ವಿಶ್ವವಿದ್ಯಾಲಯವನ್ನು ಸಂಪರ್ಕಿಸಿದಾಗ ಅಂಕಗಳು ದಾಖಲಾಗಿವೆ ಎಂಬ ಉತ್ತರ ನೀಡಲಾಗುತ್ತಿದೆ. ಹೀಗೆ ಕಾಲೇಜು ಮತ್ತು ವಿಶ್ವವಿದ್ಯಾಲಯದ ನಡುವಿನ ಗೊಂದಲದಿಂದ ವಿದ್ಯಾರ್ಥಿನಿಯ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ಇಂತಹ ಅನೇಕ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ ಎಂದರು.
ಘಟಿಕೋತ್ಸವ ಪ್ರಮಾಣಪತ್ರಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು
ಎನ್ಇಪಿ ಜಾರಿಯಾದ ನಂತರದ ಸಾಲಿನ ವಿದ್ಯಾರ್ಥಿಗಳಿಗೆ ಇನ್ನೂ ಘಟಿಕೋತ್ಸವ ನಡೆಸಿ ಪದವಿ ಪ್ರಮಾಣಪತ್ರ ನೀಡಿಲ್ಲ. ವಿದ್ಯಾರ್ಥಿಗಳು ಘಟಿಕೋತ್ಸವಕ್ಕಾಗಿ ಹಣ ಪಾವತಿಸಿದ್ದರೂ ಪ್ರಮಾಣಪತ್ರ ವಿತರಣೆ ಮಾಡಿಲ್ಲ ಎಂದು ಆರೋಪಿಸಿದರು.
2021-22ನೇ ಸಾಲಿನಲ್ಲಿ ಎನ್ಇಪಿ ಜಾರಿಯಾಗಿದ್ದು, ಇದೀಗ 2026ರ ಅಂತ್ಯ ಸಮೀಪಿಸುತ್ತಿದ್ದರೂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಸಣ್ಣಪುಟ್ಟ ಸಮಸ್ಯೆಗಳನ್ನೂ ಪರಿಹರಿಸಲು ಸಾಧ್ಯವಾಗಿಲ್ಲ. ಕಾಲೇಜು ಶಿಕ್ಷಣ ಮುಗಿಸಿ ಹೊರಬಂದಿರುವ ವಿದ್ಯಾರ್ಥಿಗಳು ಪ್ರಮಾಣಪತ್ರಕ್ಕಾಗಿ ಕಾಯುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಎಡ್ ಪರೀಕ್ಷೆ ವಿಳಂಬ
ಕುವೆಂಪು ವಿಶ್ವವಿದ್ಯಾಲಯವು ಬಿಎಡ್ ಪರೀಕ್ಷೆಗಳನ್ನು ವಿಳಂಬ ಮಾಡುತ್ತಿದ್ದು, ಡಿಸೆಂಬರ್ನಲ್ಲಿ ಪರೀಕ್ಷೆ ನಡೆಸಲು ಮುಂದಾಗಿದೆ. ಇದರಿಂದ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಹಾಗೂ ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪ್ರಶಾಂತ್ ಕುಕ್ಕೆ ಹೇಳಿದರು.
ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಲ್ಲೂ ಲೋಪದ ಆರೋಪ
ವಿಶ್ವವಿದ್ಯಾಲಯದ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿಜಿಟಲ್ ಮೌಲ್ಯಮಾಪನದ ಮೂಲಕ ಉಪನ್ಯಾಸಕರು ಅಂಕಗಳನ್ನು ಆನ್ಲೈನ್ನಲ್ಲಿ ದಾಖಲಿಸಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸುತ್ತಾರೆ. ಆದರೆ, ಅವು ಯುಯುಸಿಎಂಎಸ್ (UUCMS) ವ್ಯವಸ್ಥೆಯಲ್ಲಿ ಸ್ವಯಂಚಾಲಿತವಾಗಿ ದಾಖಲಾಗುತ್ತಿಲ್ಲ. ಹೀಗಾಗಿ ಕೆಲವು ಅಂಕಗಳನ್ನು ಹಸ್ತಚಾಲಿತವಾಗಿ ದಾಖಲಿಸುವ ಪರಿಸ್ಥಿತಿ ಇದೆ ಎಂಬ ಆರೋಪಗಳಿವೆ. ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಸಾಧ್ಯತೆಗಳಿದ್ದು, ಈ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದು ಎಂಬುದು ನಮ್ಮ ಹೋರಾಟದ ಪ್ರಮುಖ ಉದ್ದೇಶ. ಈ ವಿಚಾರದಲ್ಲಿ ಈ ಹಿಂದೆಯೂ ವಿದ್ಯಾರ್ಥಿಗಳ ಪರವಾಗಿ ಹೋರಾಟಗಳು ನಡೆದಿವೆ. ಅವುಗಳನ್ನೂ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಹಿಂದಿನ ಅವ್ಯವಹಾರಗಳ ಬಗ್ಗೆಯೂ ತನಿಖೆಯಾಗಲಿ
ಪತ್ರಿಕಾಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಹಿಂದಿನ ಆಡಳಿತದ ಅವಧಿಯಲ್ಲಿ ನಡೆದಿದ್ದ ಸಿಸಿ ಕ್ಯಾಮೆರಾ ಖರೀದಿ ಸೇರಿದಂತೆ ವಿವಿಧ ಅವ್ಯವಹಾರಗಳ ಆರೋಪಗಳ ಕುರಿತು ಪತ್ರಕರ್ತರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಶಾಂತ್ ಕುಕ್ಕೆ, ವಿಶ್ವವಿದ್ಯಾಲಯದಲ್ಲಿ ಸಮಸ್ಯೆಗಳು ಇಂದಿನ ಆಡಳಿತದಿಂದ ಮಾತ್ರ ಆರಂಭವಾಗಿಲ್ಲ. ಹಿಂದಿನ ಅವಧಿಯಲ್ಲಿಯೂ ಹಲವು ಆರೋಪಗಳು ಕೇಳಿಬಂದಿದ್ದು, ತನಿಖೆಗಳೂ ನಡೆದಿವೆ. ಆದರೆ, ತಪ್ಪು ಯಾರೇ ಮಾಡಿದ್ದರೂ ತಪ್ಪೇ. ಹಿಂದಿನ ಮತ್ತು ಪ್ರಸ್ತುತ ಆಡಳಿತದ ಅವಧಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ರಾಜ್ಯಪಾಲರ ಗಮನ ಸೆಳೆಯುವವರೆಗೂ ಹೋರಾಟ
ಕೇವಲ ವಿಶ್ವವಿದ್ಯಾಲಯದ ಮಟ್ಟಕ್ಕೆ ಹೋರಾಟವನ್ನು ಸೀಮಿತಗೊಳಿಸುವುದಿಲ್ಲ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಪಾಲರ ಗಮನ ಸೆಳೆಯುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಪ್ರಶಾಂತ್ ಕುಕ್ಕೆ ತಿಳಿಸಿದರು.
ರಾಜ್ಯದ ಇತರೆ ವಿಶ್ವವಿದ್ಯಾಲಯಗಳಲ್ಲಿಯೂ ಯುಯುಸಿಎಂಎಸ್ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳಿವೆ ಎಂಬ ಪತ್ರಕರ್ತರ ಸಲಹೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವನ್ನು ರಾಜ್ಯಮಟ್ಟದಲ್ಲಿ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವುದು. ರಾಜ್ಯದ ನಾಯಕರುಗಳ ಗಮನಕ್ಕೂ ಸಮಸ್ಯೆಗಳನ್ನು ತರಲಾಗುವುದು ಎಂದರು.
ವಿದ್ಯಾರ್ಥಿಗಳ ಸಮಸ್ಯೆ ಸಂಗ್ರಹಿಸಲು ಗೂಗಲ್ ಫಾರ್ಮ್, ಕ್ಯೂಆರ್ ಕೋಡ್
ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಮಗ್ರವಾಗಿ ಸಂಗ್ರಹಿಸಲು ಬಿಜೆಪಿ ಯುವ ಮೋರ್ಚಾ ವತಿಯಿಂದ ಗೂಗಲ್ ಫಾರ್ಮ್ ಸಿದ್ಧಪಡಿಸಲಾಗಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಹೆಸರು ಮತ್ತು ಸಮಸ್ಯೆಗಳನ್ನು ಆನ್ಲೈನ್ನಲ್ಲಿ ದಾಖಲಿಸಬಹುದು.
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಾದ್ಯಂತ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ತಮ್ಮ ಸಮಸ್ಯೆಗಳನ್ನು ದಾಖಲಿಸಬೇಕು. ಇದರಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.
ನವೆಂಬರ್ 30ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮಾಧ್ಯಮಗಳು ಕೂಡ ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ಪ್ರಶಾಂತ್ ಕುಕ್ಕೆ ಮನವಿ ಮಾಡಿದರು.
ಇಂದು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಗ್ವೆ, ದರ್ಶನ್, ಬಿಜೆಪಿ ಜಿಲ್ಲಾ ಮಾಧ್ಯಮದ ಪ್ರಮುಖರುಗಳಾದ ಚಂದ್ರಶೇಖರ್ ಎಸ್, ಮಂಜುನಾಥ್ ಎನ್, ಸಂಜಯ್, ಯಶಸ್ವಿ ಕಡ್ತುರ್, ಪ್ರವೀಣ್,ಯುವರಾಜ್, ವಿವೇಕ್, ಅಜಯ್ ಉಪಸ್ಥಿತರಿದ್ದರು..



0 ಕಾಮೆಂಟ್ಗಳು