Advertisement

ಸಚಿವರ ಏಟಿಗೆ ಸಂಸದರ ತಿರುಗೇಟು- MPs hit back at minister's attack

SUDDILIVE || SHIVAMOGGA

ಸಚಿವರ ಏಟಿಗೆ ಸಂಸದರ ತಿರುಗೇಟು- MPs hit back at minister's attack   

Mp, hitsback

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪ ಮಾಡುವ ಬದಲು ದಾಖಲೆಗಳೊಂದಿಗೆ ಬಹಿರಂಗ ಚರ್ಚೆಗೆ ಬರಲಿ. ನೀರಾವರಿ, ಆರೋಗ್ಯ, ಶಿಕ್ಷಣ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಯಾರು ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ದಾಖಲೆ ಸಮೇತ ಜನರ ಮುಂದಿಡಲು ಸಿದ್ಧ ಎಂದು ಸಂಸದ ಬಿ.ವೈ. ರಾಘವೇಂದ್ರ ಸವಾಲು ಹಾಕಿದರು.

ಡಿಸಿ ಕಚೇರಿಯಲ್ಲಿ ಸಭೆ ಮುಗಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಗೆ ಹಿಂದಿನ ಸರ್ಕಾರಗಳು ಹಾಗೂ ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆಯಾಗಲಿ. ನೀರಾವರಿ ಯೋಜನೆಗಳ ಬಗ್ಗೆ ಮಾತನಾಡುವುದಾದರೆ ನಮ್ಮ ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲರೂ ದಾಖಲೆಗಳೊಂದಿಗೆ ಚರ್ಚೆಗೆ ಬರುತ್ತೇವೆ. ಯಾವ ಯೋಜನೆಗೆ ಎಷ್ಟು ಅನುದಾನ ಬಂದಿದೆ, ಯಾವ ಕೆಲಸಗಳು ನಡೆದಿವೆ ಎಂಬ ಸಂಪೂರ್ಣ ವಿವರ ನೀಡುತ್ತೇವೆ. ಕೇವಲ ಆರೋಪ ಮಾಡುವುದರಿಂದ ಪ್ರಯೋಜನವಿಲ್ಲ ಎಂದು ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹಾಗೂ ಅವರ ಕೊಡುಗೆಗಳನ್ನು ಪ್ರಸ್ತಾಪಿಸಿದ ರಾಘವೇಂದ್ರ, ಹಿಂದಿನವರು ಜಿಲ್ಲೆಗೆ ಏನು ಮಾಡಿದ್ದಾರೆ ಎಂಬುದರ ಜೊತೆಗೆ ಈಗಿನ ನಾಯಕರು ಮತ್ತು ಅವರ ಸರ್ಕಾರದ ಕೊಡುಗೆಗಳ ಬಗ್ಗೆಯೂ ಚರ್ಚೆಯಾಗಬೇಕು ಎಂದರು.

ರೈತರ ಶ್ರಮವನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ

ರೈತರಿಗೆ ಉಚಿತ ವಿದ್ಯುತ್ ಸೌಲಭ್ಯ ದೊರೆತ ಬಳಿಕ ಅವರು ಅಡಿಕೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ರೈತರನ್ನು ರಾಜಕೀಯ ಭಾಷಣಗಳಲ್ಲಿ ಹಗುರವಾಗಿ ಮಾತನಾಡಬಾರದು. ರೈತರು ಬೆವರು ಸುರಿಸಿ ತಮ್ಮ ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ. ಅವರ ತೋಟಗಳ ಅಭಿವೃದ್ಧಿಗೆ ತಮ್ಮದೇ ಕೊಡುಗೆ ಇದೆ ಎಂಬ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸೊರಬ ಕ್ಷೇತ್ರದಲ್ಲಿ ರೈತರೊಬ್ಬರ ತೋಟ ನಾಶವಾಗಿರುವ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಅಧಿಕಾರಿಗಳ ಕಿರುಕುಳವೋ ಅಥವಾ ಇತರ ಕಾರಣಗಳಿಂದಲೋ ರೈತರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಬಾರದು. ತೋಟ ನಾಶವಾಗಿ ಬೀದಿಗೆ ಬಂದಿರುವ ರೈತ ಕುಟುಂಬಕ್ಕೆ ಧೈರ್ಯ ತುಂಬುವ ಮತ್ತು ನೆರವು ನೀಡುವ ಪ್ರಯತ್ನವನ್ನು ಮಾಜಿ ಸಚಿವ ಹರತಾಳು ಹಾಲಪ್ಪ ಅವರೊಂದಿಗೆ ನಾನು ಮಾಡಿದ್ದೇನೆ ಅಷ್ಟೆ ಎಂದು ತಿಳಿಸಿದರು.

ಮೆಗ್ಗಾನ್ ಆಸ್ಪತ್ರೆ, ವೈದ್ಯಕೀಯ ಕಾಲೇಜು ಅಭಿವೃದ್ಧಿ

ಶಿವಮೊಗ್ಗದ ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಕುರಿತು ಮಾತನಾಡಿದ ಸಂಸದರು,  ಬಂಗಾರಪ್ಪ ಅವರ ಅವಧಿಯಲ್ಲಿ 400 ಹಾಸಿಗೆ ಸಾಮರ್ಥ್ಯದ ಮೆಗ್ಗಾನ್ ಆಸ್ಪತ್ರೆ ನಿರ್ಮಾಣವಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿಯಾಗಿ 800 ಹಾಸಿಗೆಗಳನ್ನು ಸೇರ್ಪಡೆಗೊಳಿಸಿ ಒಟ್ಟು 1,200 ಹಾಸಿಗೆಗಳ ಸಾಮರ್ಥ್ಯಕ್ಕೆ ವಿಸ್ತರಿಸಲಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನ ಅಭಿವೃದ್ಧಿಗೂ ನಮ್ಮ ಸರ್ಕಾರದ ಅವಧಿಯಲ್ಲಿ ಕೊಡುಗೆ ನೀಡಲಾಗಿದೆ ಎಂದರು.

ಬಂಗಾರಪ್ಪ ಅವರ ಅವಧಿಯಲ್ಲಿ ಕೃಷಿ ಕಾಲೇಜು ಸ್ಥಾಪನೆಯಾಗಿದ್ದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಅದನ್ನು ಕೃಷಿ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಲಾಗಿದೆ. ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸುಮಾರು 20 ಸಾವಿರ ಕೋಟಿ ರೂ. ಅನುದಾನ ತರಲಾಗಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ದಾಖಲೆ ಸಮೇತ ನೀಡುತ್ತೇನೆ ಎಂದು ಹೇಳಿದರು.

ಶಿವಮೊಗ್ಗ ದಸರಾ ವಿಚಾರದಲ್ಲೂ ಸಚಿವರ ವಿರುದ್ಧ ಅಸಮಾಧಾನ

ಶಾಸಕ ಚನ್ನಬಸಪ್ಪ ಅವರ ನೇತೃತ್ವದಲ್ಲಿ ಈ ಬಾರಿ ಶಿವಮೊಗ್ಗ ದಸರಾ ಉತ್ಸವ ಅದ್ದೂರಿಯಾಗಿ ನಡೆದಿದೆ. ಮೈಸೂರು ಹೊರತುಪಡಿಸಿದರೆ ಶಿವಮೊಗ್ಗದ ದಸರಾ ಉತ್ಸವ ಗಮನ ಸೆಳೆಯುವ ರೀತಿಯಲ್ಲಿ ನಡೆದಿದೆ. ಜಂಬೂ ಸವಾರಿ ಕೊನೆಯ ದಿನ ಅಂಬಾರಿ ಹೊತ್ತಿದ್ದ ಆನೆ ಓಡಿದ ಘಟನೆ ದುರದೃಷ್ಟಕರವಾಗಿದ್ದು, ಈ ಬಗ್ಗೆ ತನಿಖೆ ಮತ್ತು ಚರ್ಚೆ ನಡೆಯಬೇಕು.

ಆದರೆ ಜಿಲ್ಲೆಯ ಉಸ್ತುವಾರಿ ಸಚಿವರು ನಾಡಹಬ್ಬದ ರೀತಿಯಲ್ಲಿ ಆಚರಿಸಲಾದ ದಸರಾ ಉತ್ಸವದಲ್ಲಿ ಭಾಗವಹಿಸದಿರುವುದು ಬೇಸರದ ಸಂಗತಿ. ಜಿಲ್ಲೆಯ ಜನರ ಭಾವನೆಗಳಿಗೆ ಜನಪ್ರತಿನಿಧಿಗಳು ಸ್ಪಂದಿಸಬೇಕು ಎಂದು ರಾಘವೇಂದ್ರ ಹೇಳಿದರು.

ವಿಮಾನ ನಿಲ್ದಾಣಕ್ಕೆ ವಿಮಾನಯಾನ ಸೇವೆ ಮುಂದುವರಿಸಲು ಒಗ್ಗಟ್ಟಿನ ಪ್ರಯತ್ನ ಅಗತ್ಯ

ಶಿವಮೊಗ್ಗ ವಿಮಾನ ನಿಲ್ದಾಣದ ವಿಮಾನಯಾನ ಸೇವೆ ಸ್ಥಗಿತಗೊಳ್ಳುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದರು, ಈ ಸಂದರ್ಭದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳ ಅಗತ್ಯವಿಲ್ಲ. ಯಡಿಯೂರಪ್ಪನವರ ಸರ್ಕಾರದ ಅವಧಿಯಲ್ಲಿ ಶಿವಮೊಗ್ಗಕ್ಕೆ ವಿಮಾನಯಾನ ಸೇವೆ ಆರಂಭಿಸಲು ಪ್ರಯತ್ನಿಸಲಾಗಿತ್ತು. ಈಗಾಗಲೇ ನಿರ್ಮಾಣವಾಗಿರುವ ವಿಮಾನ ನಿಲ್ದಾಣಕ್ಕೆ ನಿರಂತರ ವಿಮಾನಯಾನ ಸೇವೆ ದೊರೆಯುವಂತೆ ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.

ಸಂಸದನಾಗಿ ಜಿಲ್ಲೆಯ ಎಲ್ಲ ಶಾಸಕರ ಸಹಕಾರದೊಂದಿಗೆ ವಿಮಾನಯಾನ ಸೇವೆ ಮುಂದುವರಿಸಲು ಅಗತ್ಯ ಪ್ರಯತ್ನ ಮಾಡುತ್ತೇನೆ. ರಾಜ್ಯ ಸರ್ಕಾರವೂ ತನ್ನ ಜವಾಬ್ದಾರಿ ನಿರ್ವಹಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಪ್ರಯತ್ನಿಸಿ ಜನರಿಗೆ ವಿಮಾನಯಾನ ಸೇವೆ ಒದಗಿಸಬೇಕು ಎಂದು ಮನವಿ ಮಾಡಿದರು.

ವಿಮಾನ ನಿಲ್ದಾಣದ ಮೂಲಕ ಈಗಾಗಲೇ ಸುಮಾರು ನಾಲ್ಕು ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇತ್ತೀಚೆಗೆ ಗಾಂಧಿ ಬಜಾರ್‌ನಲ್ಲಿ ಮಗುವಿಗೆ ಮೆದುಳಿನಲ್ಲಿ ರಕ್ತಸ್ರಾವವಾದ ಸಂದರ್ಭದಲ್ಲಿ ಏರ್ ಆಂಬುಲೆನ್ಸ್ ಮೂಲಕ ಮುಂಬೈಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಸಾಧ್ಯವಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಹೈದರಾಬಾದ್‌ನಿಂದ ಎಂಟು ಮಂದಿ ವೈದ್ಯರು ವಿಶೇಷ ಚಿಕಿತ್ಸೆ ನೀಡಲು ಶಿವಮೊಗ್ಗಕ್ಕೆ ಬರುತ್ತಿದ್ದಾರೆ ಎಂದು ವಿವರಿಸಿದರು.

ಸಾಮಾನ್ಯ ರೈತನೊಬ್ಬ ಹಾಲು ಮಾರಾಟದಿಂದ ಬಂದ ಹಣದಲ್ಲಿ ವಿಮಾನದಲ್ಲಿ ಬೆಂಗಳೂರಿಗೆ ಹೋಗಿ ಅದೇ ದಿನ ವಾಪಸ್ ಬಂದು ಹಾಲು ಕರೆಯುವ ಮೂಲಕ ತನ್ನ ಬಹುದಿನಗಳ ಆಸೆ ಈಡೇರಿಸಿಕೊಂಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾನೆ. ಯುವಕರು ಕೂಡ ವಿಮಾನದ ಮೂಲಕ ದೆಹಲಿ ಸೇರಿದಂತೆ ವಿವಿಧ ನಗರಗಳಿಗೆ ಪ್ರಯಾಣಿಸುತ್ತಿದ್ದಾರೆ. ವಿಮಾನ ನಿಲ್ದಾಣವು ಜಿಲ್ಲೆಯ ಜನರಿಗೆ ನೀಡಿರುವ ಪ್ರಯೋಜನಗಳನ್ನು ಗಮನಿಸಬೇಕು ಎಂದರು.

ವೈಯಕ್ತಿಕ ಟೀಕೆ ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಿ

ಯಡಿಯೂರಪ್ಪನವರ ವಯಸ್ಸು ಮತ್ತು ಆಸ್ತಿ ವಿಚಾರವನ್ನು ಮುಂದಿಟ್ಟುಕೊಂಡು ಟೀಕೆ ಮಾಡುವ ಬದಲು ಜಿಲ್ಲೆಯ ಅಭಿವೃದ್ಧಿ ಕುರಿತು ಚರ್ಚಿಸಬೇಕು. ಸಮಾಜದ ಆಸ್ತಿಯಾಗಿರುವ ಶಿವಮೊಗ್ಗದ ಡೆಂಟಲ್ ಕಾಲೇಜಿನ ಜಾಗದ ಬಳಕೆ ಬಗ್ಗೆಯೂ ಪ್ರಶ್ನೆಗಳಿವೆ. ಕಾಲೇಜಿನ ಜಾಗದಲ್ಲಿ ಲೇಔಟ್ ಮಾಡಿ ಜನರಿಗೆ ಮಾರಾಟ ಮಾಡಿರುವ ವಿಚಾರದ ಬಗ್ಗೆಯೂ ಚರ್ಚೆಯಾಗಬೇಕು ಎಂದು ಹೇಳಿದರು.

ರಾಜಕೀಯ ನಾಯಕರು ವೈಯಕ್ತಿಕ ಆರೋಪಗಳಿಗೆ ಆದ್ಯತೆ ನೀಡದೆ ತಮ್ಮ ಕ್ಷೇತ್ರಕ್ಕೆ ಮತ್ತು ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಜನರ ಮುಂದಿಡಬೇಕು. ಸಚಿವರಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವವರು ಅದನ್ನು ಜಿಲ್ಲೆಯ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಜನರು ಕೂಡ ತಮ್ಮ ಜನಪ್ರತಿನಿಧಿಗಳಿಂದ ಅಭಿವೃದ್ಧಿಯನ್ನೇ ನಿರೀಕ್ಷಿಸುತ್ತಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಶಿವಮೊಗ್ಗ ಜಿಲ್ಲೆಯ ನೀರಾವರಿ, ಆರೋಗ್ಯ, ಶಿಕ್ಷಣ, ರಾಷ್ಟ್ರೀಯ ಹೆದ್ದಾರಿ, ರೈತರ ಸಮಸ್ಯೆಗಳು ಹಾಗೂ ವಿಮಾನಯಾನ ಸೇವೆ ಸೇರಿದಂತೆ ಎಲ್ಲ ವಿಚಾರಗಳ ಕುರಿತು ದಾಖಲೆಗಳೊಂದಿಗೆ ಚರ್ಚಿಸಲು ಸಿದ್ಧವಿದ್ದೇವೆ. ರಾಜಕೀಯ ವಾಗ್ದಾಳಿಗಿಂತ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಸುದ್ದಿಯ ಹಿನ್ನೆಲೆ: ನವೆಂಬರ್ 17ರಂದು ಸಚಿವ ಮಧು ಬಂಗಾರಪ್ಪ ಅವರು ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿ, ಶಿವಮೊಗ್ಗಕ್ಕೆ ತಮ್ಮ ತಂದೆ ಬಂಗಾರಪ್ಪ ನೀಡಿದ ಕೊಡುಗೆಗಳನ್ನು ಪ್ರಸ್ತಾಪಿಸಿದ್ದರು. ಅದಕ್ಕೆ ಪ್ರತಿಯಾಗಿ ರಾಘವೇಂದ್ರ ಅವರ ಈ ಹೇಳಿಕೆ ಬಂದಿದೆ.

MPs hit back at minister's attack   

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು