ಗುರುವಾರ, ಆಗಸ್ಟ್ 22, 2024

ಕೂಡಲಿ ಶೃಂಗೇರಿ ಶ್ರೀಗಳಿಂದ ಮುಂದಿನ ಹುಣ್ಣಿಮೆವರೆಗೆ ಋಗ್ವೇದ ಘನ ಪಾರಾಯಣ



ಸುದ್ದಿಲೈವ್/ಶಿವಮೊಗ್ಗ


ಕೂಡಲಿ ಶೃಂಗೇರಿ ಮಹಾಸಂಸ್ಥಾನದ 72ನೇ ಜಗದ್ಗುರುಗಳಾದ ಶ್ರೀಅಭಿನವ ಶಂಕರಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಆ.23ರಿಂದ ಕಾರ್ತಿಕ ಹುಣ್ಣಿಮೆಯವರೆಗೆ ಕಂಠಸ್ಥ ಹಾಗೂ ಏಕಾಕೀ ದಶಗ್ರಂಥ ಸಹಿತ ಸಂಪೂರ್ಣ ಋಗ್ವೇದ ಘನ ಪಾರಾಯಣವನ್ನು ಆಯೋಜಿಸಲಾಗಿದೆ ಎಂದು ಕೂಡಲಿ ಕ್ಷೇತ್ರದ ವೇದ ಬ್ರಹ್ಮ ಅಚ್ಯುತ ಅವಧಾನಿ ಹೇಳಿದರು.


ಅವರು ಇಂದು ಕೂಡಲಿಯ ಶೃಂಗೇರಿ ಮಹಾಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾರಾಯಣವು ತುಂಬ ವಿಶಿಷ್ಟವಾದದ್ದು, ಅದರಲ್ಲೂ 10 ಗ್ರಂಥಗಳ ಪಾರಾಯಣ ಹಾಗೂ ಋಗ್ವೇದ ಸಹಿತದಲ್ಲಿರುವ ಎಲ್ಲಾ 10552 ಋಕ್ಕುಗಳಿಗೆ ಘನಪಾಠದ ಪಾರಾಯಣವನ್ನು ಮಾಡುವ ಕ್ರಮವು ಅತ್ಯಂತ ಪುಣ್ಯಪ್ರದವಾಗಿರುತ್ತದೆ. ಲೋಕಕಲ್ಯಾಣಕ್ಕಾಗಿ ಈ ಪಾರಾಯಣವನ್ನು ಆಯೋಜಿಸಲಾಗಿದ್ದು, ಇದರಿಂದ ಪ್ರಕರ ಬುದ್ಧಮತ್ತೆ ಸ್ಮರಣಶಕ್ತಿ ಹಾಗೂ ವಿದ್ವತ್ತಿನ ಪರೀಕ್ಷೆ ಕೂಡ ಆಗಿದೆ ಎಂದರು.


ಈ ಸಂಪೂರ್ಣ ಪಾರಾಯಣವನ್ನು ಪುಸ್ತಕವನ್ನು ನೋಡದೆಯೇ ಒಬ್ಬರೇ ಕುಳಿತು ಪಠಿಸುತ್ತಾರೆ. ಹಾಗೆಯೇ ಈ ಪಠಣವನ್ನು ಪಠಿಸಲು ಇಬ್ಬರು ವಿದ್ವಾಂಸರುಗಳು ಶ್ರೋತೃಗಳಿಗಾಗಿ ಕುಳಿತುಕೊಳ್ಳುತ್ತಾರೆ. ಪ್ರತಿದಿನ ಬೆಳಿಗ್ಗೆ ಹೊತ್ತು 4ಗಂಟೆ ಸಂಜೆ 3 ಗಂಟೆಗಳಂತೆ ದಿನದ 7 ಗಂಟೆ ಈ ಪಾರಾಯಣ ನಡೆಯುತ್ತದೆ. ಸುಮಾರು 638 ಗಂಟೆಗಳ ಕಾಲ ಪುಸ್ತಕರಹಿತವಾಗಿರುತ್ತದೆ. ಈ ಪಾರಾಯಣ ಮಾಡುವವರು 15 ವರ್ಷಗಳಿಂದ ಹಗಲುರಾತ್ರಿ ಎನ್ನದೇ ಗುರುಕುಲದಲ್ಲಿ ಅಧ್ಯಯನ ಮಾಡಿರುತ್ತಾರೆ. ಒಂದು ದೃಷ್ಠಿಯಲ್ಲಿ ಈ ಸಾಧನೆ ಮ್ಯಾಥ್ ಒಲಿಂಪಿಯಾಡ್, ಸ್ಪೆಲ್ ಬಿ, ಸಾಧನೆಗಿಂತಲೂ ದೊಡ್ಡದಾಗಿರುತ್ತದೆ. ಆದರೂ ಕೂಡ ಇದಕ್ಕೆ ಅಷ್ಟೊಂದು ಮನ್ನಣೆ ಸಿಗದಿರುವುದು ವಿಪರ್ಯಾಸ ಎಂದರು.


ಈ ಪಾರಾಯಣದ ಮೂಲಕ ಸಾಮಾಜದಲ್ಲಿ ವಿದ್ವತ್ ಪರಂಪರೆಯನ್ನು ತಿಳಿಸುವ ಮತ್ತು ಅದಕ್ಕೊಂದು ವಿಸ್ತಾರ ರೂಪ ಕಲ್ಪಿಸುವ ಹಿನ್ನಲೆಯಲ್ಲಿ ಶ್ರೀಗಳು ಇದನ್ನು ಆಯೋಜಿಸಿದ್ದಾರೆ. ಮತ್ತು ಇದಕ್ಕಾಗಿಯೇ ಪಾರಾಯಣ ಮಾಡುವ ವಿದ್ವಂಸರುಗಳಿಗೆ 10 ಲಕ್ಷ ರೂ.ಗಳ ಪ್ರೋತ್ಸಾಹ ಕೂಡ ನೀಡಲಿದ್ದಾರೆ ಎಂದರು.


ಶೃಂಗೇರಿ ಮಹಾಸಂಸ್ಥಾನದ ಭಕ್ತರಾದ ಕುಮಾರಶಾಸ್ತಿç ಮಾತನಾಡಿ, ಕೂಡಲಿ ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದೊಂದು ಅದ್ವೆöÊತ ಸಿದ್ದಾಂತವನ್ನು ಪಸರಿಸುವ ಕೇಂದ್ರವಾಗಿದೆ. ತುಂಗಾ ಭದ್ರಾನದಿಗಳ ಸಂಗಮ ಕ್ಷೇತ್ರವಾಗಿದೆ. ಈ ಹಿನ್ನಲೆಯಲ್ಲಿ ಪುರಾಣ ಪ್ರಸಿದ್ಧವಾದ ಈ ಕ್ಷೇತ್ರದಲ್ಲಿ ಪಾರಾಯಣ ನಡೆಯುತ್ತಿದೆ. ಇದುವರೆಗೂ ಇಂತಹ ಪಾರಾಯಣವು ಕಾಶಿ ಮತ್ತು ಪೂಣೆ ಬಿಟ್ಟರೆ ಎಲ್ಲಿಯೂ ನಡೆದ ಬಗ್ಗೆ ಉಲ್ಲೇಖವಿಲ್ಲ, ಚಾರ್ತುಮಾಸದ ಸಂದರ್ಭದಲ್ಲಿ ಭಕ್ತರು ಈ ಪಾರಾಯಣವನ್ನು ಕೇಳಲು ಮತ್ತು ವಿದ್ವತ್ ಪರಂಪರೆಯ ಪಸರಿಸಲು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ