ಸುದ್ದಿಲೈವ್/ಶಿವಮೊಗ್ಗ
ವಿನೋಬನಗರದ ಶಿವಾಲಯ ದೇವಸ್ಥಾನದ ಪಕ್ಕದಲ್ಲಿ ಬೀದಿ ವ್ಯಾಪಾರಸ್ಥರಿಗಾಗಿ ನಿರ್ಮಿಸಿರುವ ೭೫ ಮಳಿಗೆಗಳು ಇದುವರೆಗೂ ಬಳಕೆಯಾಗಿಲ್ಲ, ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಮಹಾನಗರ ಪಾಲಿಕೆ ಆಯುಕ್ತರಿಗೆ ಇಂದು ಮನವಿ ಸಲ್ಲಿಸಿತು.
ಶಿವಾಲಯ ದೇವಸ್ಥಾನದ ಪಕ್ಕದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗಾಗಿಯೇ ೭೫ ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ ಇದುವರೆಗೂ ಇದು ಬಳಕೆಯಾಗುತ್ತಿಲ್ಲ, ಈ ವಾಣಿಜ್ಯ ಸಂಕೀರ್ಣದಲ್ಲಿ ಮೂಲಭೂತ ಸಮಸ್ಯೆಗಳು ಇವೆ. ವ್ಯಾಪಾರಸ್ಥರು ಒಳಗಡೆ ವ್ಯಾಪಾರ ಮಾಡಲು ಹೋಗುತ್ತಿಲ್ಲ, ಖರೀದಿದಾರರು ಕೂಡ ಒಳಗಡೆ ಬರುತ್ತಿಲ್ಲ, ಆಗಾಗಿ ಇವು ಬಳಕೆಯಾಗುತ್ತಿಲ್ಲ ಎಂದು ಮನವಿದಾರರು ತಿಳಿಸಿದರು.
ವಿನೋಬನಗರ ರಸ್ತೆಯಿಂದ ವಾಣಿಜ್ಯ ಸಂಕೀರ್ಣಕ್ಕೆ ಪ್ರವೇಶ ದ್ವಾರವನ್ನು ಮೂರು ಭಾಗಗಳಿಂದ ಮಾಡಬೇಕು. ಇದರಿಂದ ವ್ಯಾಪಾರಸ್ಥರಿಗೆ ಅನುಕೂಲವಾಗುತ್ತದೆ. ಈ ಸಂಕೀರ್ಣಕ್ಕಾಗಿ ಸುಮಾರು ೪ ಕೋಟಿ ವೆಚ್ಚವಾಗಿದೆ. ಆದರೆ ಇಚ್ಛಾಶಕ್ತಿ ಇಲ್ಲದೆ ಬಳಕೆಯಾಗುತ್ತಿಲ್ಲ. ಆಯುಕ್ತರು ಈ ಬಗ್ಗೆ ಗಮನಹರಿಸಿ ಕೂಡಲೇ ಬೀದಿ ವ್ಯಾಪಾರಿ ಸಂಘಟನೆಗಳೊಂದಿಗೆ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಆರ್.ಮಣಿ, ಪ್ರಮುಖರಾದ ಎಸ್.ಬಿ. ಅಶೋಕ್‌ಕುಮಾರ್, ದಿನೇಶ್, ಧರ್ಮರಾಯ, ಉಮೇಶ್ ಮುಂತಾದವರು ಇದ್ದರು.