ಕಸಾಪದಲ್ಲಿ ಜೋಷಿ ಆರ್ಥಿಕ ಅಪರಾಧ ತನಿಖೆ ಹಾದಿ ತಪ್ಪಿಸುವ ಹುನ್ನಾರ-Joshi's plan to derail economic crime investigation in Kasapa

SUDDILIVE || SHIVAMOGGA

ಕಸಾಪದಲ್ಲಿ ಜೋಷಿ ಆರ್ಥಿಕ ಅಪರಾಧ ತನಿಖೆ ಹಾದಿ ತಪ್ಪಿಸುವ ಹುನ್ನಾರ-Joshi's plan to derail economic crime investigation in Kasapa    

Joshi, Derail

ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಗೌರವಗಳಿಗೆ ಕೊಳ್ಳಿಯಿಟ್ಟು ಆರ್ಥಿಕ ಅಪರಾಧ, ಸೃಜನ ಪಕ್ಷಪಾತ, ಕಾರ್ಯಕಾರಿ ಸಮಿತಿಯ ಹಕ್ಕನ್ನು ಕಿತ್ತುಕೊಂಡು ಸರ್ವಾಧಿಕಾರಿಯಂತೆ ಮೆರೆದ ನಾಡೋಜ ಮಹೇಶ್ ಜೋಷಿ, ಕಳೆದ ಮೂರು ತಿಂಗಳಿಂದ ಸರ್ಕಾರ ನೇಮಿಸಿದ ತನಿಖಾಧಿಕಾರಿಗಳ ತಂಡವು ನ್ಯಾಯಾಲಯದ ನಿರ್ದೇಶನದಲ್ಲಿ ನಡೆಸುತ್ತಿರುವ ತನಿಖೆಯನ್ನು ಹಾದಿತಪ್ಪಿಸುವ ಕುತಂತ್ರದಿಂದ ರಾಜ್ಯಪಾಲರ ಮೊರೆ ಹೋಗಿರುವುದು ಹಾಸ್ಯಾಸ್ಪದವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಸುದ್ದಿ ಗೋಷ್ಠಿಯಲ್ಲಿ ಟೀಕಿಸಿದ್ದಾರೆ.   

ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಾಡುತ್ತಲೆ ಸರ್ವಾಧಿಕಾರಿಯಂತೆ ವರ್ತಿಸಲು ಕಸಾಪ ನಿಬಂಧನೆಗಳನ್ನು ಬೇಕಾಬಿಟ್ಟಿಯಾಗಿ ಬದಲಿಸಿದರು. ಕಾರ್ಯಕಾರಿ ಸಮಿತಿಯೇ ಪ್ರಧಾನವಾಗಿದ್ದ ನಿಬಂಧನೆಯನ್ನು, ಅಮೂಲಾಗ್ರ ಬದಲಾವಣೆ ಹೆಸರಲ್ಲಿ ಅಧ್ಯಕ್ಷರೇ ಕೇಂದ್ರಿತವಾಗಿ ಮಾಡಿಕೊಂಡ ಹುನ್ನಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ.

ಪ್ರಶ್ನಿಸಿದ್ದಕ್ಕೆ ಅವಮಾನಿಸಿದರು..ಬೆದರಿಸಿದರು.

ಮಹೇಶ್ ಜೋಷಿ ಅವರ ಅವ್ಯವಹಾರ, ಸರ್ವಾಧಿಕಾರಿ ನಡೆಯನ್ನು ಪ್ರಶ್ನಿಸಿದ್ದಕ್ಕಾಗಿ ಕಾರ್ಯಕಾರಿ ಸಮಿತಿಯಲ್ಲಿ ಅವಮಾನಿಸುವ ಜೊತೆಗೆ, ಹಾಗೇ ಮಾಡುತ್ತೇನೆ.., ಹೀಗೆ ಮಾಡುತ್ತೇನೆ.. ಎಂದು ಹೌಹಾರುತ್ತ ಬೆದರಿಕೆ ಒಡ್ಡಿದ್ದರು. ಇದರ ಮುಂದುವರೆದು, ಆಜೀವ ಸದಸ್ಯತ್ವದಿಂದಲೇ ಅಮಾನತು ಮಾಡುವ ನೋಟಿಸ್ ನೀಡಿ ಬೆದರಿಕೆ ಹಾಕಿದ್ದರು. ಮಾಧ್ಯಮಗಳಿಗೆ ಬಿಡುಗಡೆ ಮಾಡಿ, ಅನಾವಶ್ಯಕ ಒತ್ತಡ ಹೇರಲು ಪ್ರಯತ್ನಿಸಿದರು. ವಿವಿಪುರಂ ಪೋಲೀಸರ ಭದ್ರತೆಯಲ್ಲಿ‌ ಕಾರ್ಯಕಾರಿ ಸಮಿತಿಯಲ್ಲಿ ಭಾಗವಹಿಸಬೇಕಾಯಿತು.‌ ‌

ನಿಬಂಧನೆ ತಿದ್ದುಪಡಿ ಸಮಿತಿಯನ್ನು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರನ್ನ ಮುಂದಿಟ್ಟುಕೊಂಡು ಎಲ್ಲರನ್ನೂ ಹಾದಿ ತಪ್ಪಿಸಿದ್ದು ಗೊತ್ತಿದೆ. ಸಮಿತಿಯಲ್ಲಿದ್ದ ನ್ಯಾಯಾಧೀಶರು ತಾವು ಕೊಟ್ಟ ಸಲಹೆಗಳನ್ನು ಸ್ವೀಕರಿಸಿಲ್ಲ ಎಂದು ಅನೇಕ‌ ಸಂದರ್ಭದಲ್ಲಿ ಹೇಳಿದ್ದಾರೆ. ತಮಗೆ ಬೇಕಾದ ಹಾಗೆ ನಿಬಂಧನೆಗಳನ್ನು ಕುಲಗೆಡಿಸಿದ್ದಾರೆ ಎನ್ನುವ ಸತ್ಯ ಅವರಿಂದಲೇ ಬಹಿರಂಗ ಪಡಿಸಲು ಒತ್ತಾಯಿಸುತ್ತೇವೆ.

ಸೇವೆ ಮಾಡಲು ಪರಿಷತ್ತಿನ ಅಧ್ಯಕ್ಷರಾದವರು ತಿಂಗಳಿಗೆ ಎರಡು ಲಕ್ಷ ವೇತನ ಪಡೆಯುತ್ತಿರುವುದು ಯಾರ ಅನುಮತಿಯ ಮೇರೆಗೆ. ?. ಅಧ್ಯಕ್ಷರ ವೇತನ 4.2 ಲಕ್ಷ ರೂ, ದಿನಭತ್ಯೆ ಬಾಬ್ತು 7.6 ಲಕ್ಷ, ಪ್ರಯಾಣ ವೆಚ್ಚ 6.7 ಲಕ್ಷ ರೂ, ವಾಹನ ನಿರ್ವಹಣಾ ವೆಚ್ಚ 93 ಸಾವಿರ, ದಿನಪತ್ರಿಕೆ ವೆಚ್ಚ 33 ಸಾವಿರ ರೂ. ಜಂಗಮವಾಣಿ ವೆಚ್ಚ 43 ಸಾವಿರ ರೂ., ಇಂಧನ ವೆಚ್ಚ 18 ಸಾವಿರ ಸೇರಿ ವರ್ಷಕ್ಕೆ 22.6 ಲಕ್ಷ ಖರ್ಚು ಮಾಡಿದ್ದಾರೆ. 2023-24 ನೇ ಸಾಲಿನ ಲೆಕ್ಕ ಪರಿಶೋಧಕರ, ಲೆಕ್ಕ ಪರಿಶೋಧನಾ ವರದಿಯಲ್ಲಿ ಆಕ್ಷೇಪಣೆ ವ್ಯಕ್ತಪಡಿಸಿದ್ದರಿಂದ, ಇವರ ಅವ್ಯವಹಾರಗಳು ಬೆಳಕಿಗೆ ಬಂದಿರುವುದು. ಒಂದು ವರ್ಷಕ್ಕೆ ಅಧ್ಯಕ್ಷರ ವೇತನಕ್ಕೆ 22.6 ಲಕ್ಷ ರೂಪಾಯಿ ಪಡೆದರೆ, ವಿವಿಧ ಘಟಕಗಳಿಗೆ ಮುಖ್ಯಸ್ಥರನ್ನು ನೇಮಿಸಿ ವರ್ಷಕ್ಕೆ 19 ಲಕ್ಷ ವೆಚ್ಚ ಮಾಡಿರುವುದು, ಲೆಕ್ಕ ಪರಿಶೋಧಕರು ವರದಿಯಲ್ಲಿ ಆಕ್ಷೇಪಣೆಗೊಂಡಿದೆ.   

ಕಸಾಪ ಒಳಗೆ ನಡೆಸಿದ ಕೋಟಿ, ಕೋಟಿ ಅವ್ಯವಹಾರ ಹೊರಬಂದಿದ್ದು ಲೆಕ್ಕ ಪರಿಶೋಧಕರ ವರದಿಯಲ್ಲಿ. ಪ್ರತಿಯೊಂದು ಕಾಮಗಾರಿ, ಖರೀದಿಗಳಲ್ಲಿ ವಂಚಿಸಿರುವುದು ತನಿಖೆಯಿಂದ ಬಹಿರಂಗವಾಗಬೇಕು. ನಾವು ಸೇರಿದಂತೆ ನಾಡಿನ ಕಸಾಪ ಸದಸ್ಯರು ಬೀದಿಗಿಳಿದು ಹೋರಾಟ ಮಾಡಿದ್ದರ ಫಲವಾಗಿ, ಸರ್ಕಾರ ತನಿಖೆಗೆ ವ್ಯವಸ್ಥೆ ಮಾಡಿ ಆಡಳಿತಾಧಿಕಾರಿಗಳನ್ನು ನೇಮಿಸಿತು. ತನಿಖೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದವರು ಇದೇ ಮಹೇಶ್ ಜೋಷಿ. ನ್ಯಾಯಾಲಯದ ನಿರ್ದೇಶನದಂತೆ ತನಿಖೆ ಸಾಗಿದೆ. ಜನವರಿ 13 ಕ್ಕೆ ಮತ್ತೆ ನ್ಯಾಯಾಲಯದ ಮುಂದೆ ಬರಲಿದೆ.      

ಈ ಹಂತದಲ್ಲಿ ಮಹೇಶ್ ಜೋಷಿ ರವರು ರಾಜ್ಯಪಾಲರ ಮೊರೆ ಹೋಗಿ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತಿರುವ ಹುನ್ನಾರವೇನು. ಜೋಷಿ ಅವ್ಯವಹಾರ, ದುರಂಹಕಾರ, ಸ್ವಜನಪಕ್ಷಪಾತದ ಪರಿಣಾಮ ನಿಬಂಧನೆಗಳನ್ನು ಪದೇ ಪದೇ ಬದಲಿಸುವುದು. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪರಿಷತ್ತು ಕಾರ್ಯಚಟುವಟಿಕೆಗಳ ಚರ್ಚೆಗೆ ಅವಕಾಶವಿಲ್ಲದೆ ದೌರ್ಜನ್ಯ, ಅಟ್ಟಹಾಸ ಮೆರೆಯುವುದು. ಕೆಲಸಕ್ಕೆ ಬಾರದ ವಿಚಾರಗಳಲ್ಲೆ ಸಮಯ ವ್ಯರ್ಥ ಮಾಡುವುದು ಬಿಟ್ಟರೆ ಒಂದೇ ಒಂದು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಿಂದಿನ ಸಭಾ ನಡಾವಳಿ ಕುರಿತು ಚರ್ಚೆಗೆ ಬರಲಿಲ್ಲ ಎನ್ನುವುದು ದುರಂತ.     

ಮೊದಲು ನಿಬಂಧನೆಗಳನ್ನು ಹಾವೇರಿ ಜಿಲ್ಲೆ ಕಾಗಿನೆಲೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಅಕ್ರಮವಾಗಿ ಅಂಗೀಕಾರದ ನಾಟಕವಾಡಿದರು. ಆಗ ನ್ಯಾಯಾಲಯಕ್ಕೆ ದೂರುನೀಡಿ ಪ್ರಕರಣ ನಡೆಯುತ್ತಿದೆ. ಎರಡನೇ ಬಾರಿ ತಿದ್ದುಪಡಿ ಮಾಡುವಾಗ ನಿಬಂಧಕರ ನ್ಯಾಯಾಲಯಕ್ಕೆ ನಾನು ದೂರು ನೀಡಿದ್ದೆ ಎಂದರು.     

ಕಸಾಪದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ನೌಕರರಿಗೆ ಕಿರುಕುಳ ನೀಡಿ ಕೆಲಸ ಬಿಟ್ಟು ಹೋಗುವಂತೆ ಮಾಡಿದ ಈ ಜೋಷಿ  ತನ್ನ ಚುನಾವಣೆಯಲ್ಲಿ  ತಮ್ಮ ಚುನಾವಣಾ ಕಚೇರಿಯಲ್ಲಿ ಕೆಲಸಮಾಡುತ್ತಿದ್ದ  ಜನರನ್ನು ಅಕ್ರಮವಾಗಿ ನೇಮಿಸಿಕೊಂಡು ಪರಿಷತ್ತಿಗೆ ಹೊರೆಯಾಗುವಂತೆ ಮಾಡಿದ್ದಲ್ಲದೆ ಸಂಪೂರ್ಣ ಸ್ವಜನಪಕ್ಷಪಾತ ಮಾಡಿದ್ದು ತನಿಖೆ ಆಗಬೇಕಲ್ಲವೇ ಎಂದು ಡಿ. ಮಂಜುನಾಥ ಪ್ರಶ್ನೆ ಮಾಡಿದರು.

ಈಗ ಕಸಾಪ ನೌಕರರಿಗೆ ಸಂಬಳ ಕೊಟ್ಟಿಲ್ಲ ಎನ್ನುವ ಮೊಸಳೆ ಕಣ್ಣೀರಿಗೆ ಸರ್ಕಾರ ಹಾದಿ ತಪ್ಪಬಾರದು. ಜೋಷಿ ಅಕ್ರಮವಾಗಿ ನೇಮಕ ಮಾಡಿಕೊಂಡವರೂ, ಸಕ್ರಮವಾಗುವುದನ್ನು ಆಡಳಿತಾಧಿಕಾರಿಗಳು ತಡೆಯಬೇಕು ಎಂದು ಒತ್ತಾಯಿಸುತ್ತೇವೆ.      

ಪರಿಷತ್ತು ಸಲ್ಲಿಸುವ ವಾರ್ಷಿಕ ಕ್ರಿಯಾಯೋಜನೆ ಆಧರಿಸಿ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ. ಪ್ರತಿ ವರ್ಷ ಲೆಕ್ಕಪರಿಶೋಧಕರ ತಪಾಸಣೆ ನಂತರ ಕಾರ್ಯಕಾರಿ ಸಮಿತಿ,  ಸರ್ವಸದಸ್ಯರ ಸಭೆ ಅಂಗೀಕಾರ ಪಡೆದು ಹಣಬಳಕೆ ಪ್ರಮಾಣ ಪತ್ರ ನೀಡಬೇಕು. ಈ ಜೋಷಿ ತನ್ನ ಅವಧಿಯಲ್ಲಿ ಎಷ್ಷುಬಾರಿ ಈ ನಿಯಮ ಪಾಲಿಸಿದ್ದಾರೆ ಎಂಬುದು ತನಿಖೆಯಿಂದ ಹೊರಬೇಕು.

ಕ್ರಿಯಾ ಯೋಜನೆಯಲ್ಲಿ 224 ತಾಲ್ಲೂಕು ಮತ್ತು ಬೆಂಗಳೂರು ನಗರದ ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರತಿವರ್ಷ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲು ತಲಾ ಒಂದು ಲಕ್ಷ ಹಣವನ್ನು ಸರ್ಕಾರ ನೀಡುತ್ತದೆ. ಈ ಹಣ ಕಳೆದ ನಾಲ್ಕು ವರ್ಷಗಳಲ್ಲಿ ಯಾರಿಗೂ ನೀಡದೆ ವಂಚಿಸಿದ ಹಣ ಎಷ್ಟು. ಅದು ಆರ್ಥಿಕ ಅಪರಾಧವಲ್ಲವೇ. ಜಿಲ್ಲಾ ಮತ್ತು ಗಡಿನಾಡು ಸಮ್ಮೇಳನ ಎಷ್ಟು ನಡೆದಿವೆ. ನಿಮ್ಮ ಹುನ್ನಾರಕ್ಕೆ ಹೆದರಿ ಸಮ್ಮೇಳನ ಮಾಡದೇಯಿದ್ದವರು ಎಷ್ಷು. ಆ ಹಣ ಏನಾಯಿತು ತಿಳಿಯಬೇಕಲ್ಲವೇ.

ಸರ್ಕಾರ ಎಲ್ಲಾ ಭಾಗ್ಯಗಳನ್ನು ಮುನ್ನೆಡೆಸಿಯೂ ಕನ್ನಡದ ಕೆಲಸಕ್ಕೆ ಪ್ರತಿ ವರ್ಷ ನಿಗದಿಯಾದ ಐದು ಕೋಟಿ ರೂ. ಹಣ ನೀಡುತ್ತಲೇ ಬಂದಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೋಟಿ ಕೋಟಿ ಹಣ ನೀಡಿದ್ದರು ಅದರಲ್ಲಿ ಅವ್ಯವಹಾರ ಮಾಡಿದ್ದನ್ನು ವಸೂಲಿ ಮಾಡದೆ ಬಿಟ್ಟರೆ ಬರುವವರು ಎಲ್ಲರೂ ಇದೇ ಹಾದಿಯಲ್ಲಿ ಯೋಚನೆ ಮಾಡಿದರೆ ಗತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ.

ವಾರ್ಷಿಕ ವರದಿಯಲ್ಲಿ ಕೋಟಿ ಕೋಟಿ ರೂ. ಆಕ್ಷೇಪಣೆ ದಾಖಲಾದಮೇಲೆ 2023-24 ನೆಯ ಸಾಲಿನ 108 ನೆಯ ವಾರ್ಷಿಕಾಧಿವೇಶನ  ಕಸಾಪ ಸದಸ್ಯರು ಬರಲು ಅನಾನುಕೂಲ ಸ್ಥಳದಲ್ಲಿ ನಿಯಮ ಬಾಹಿರವಾಗಿ ಸಭೆ ನಡೆಸಲು ಏನೆಲ್ಲಾ ಹುನ್ನಾರ ಮಾಡಿದರು ಎಂಬುದನ್ನು ಕಸಾಪ ಸದಸ್ಯರು ನೆನಪು ಮಾಡಿಕೊಳ್ಳಬೇಕು. ಪರಿಷತ್ತು ಇಂತಹ ದುರುಳರ ಕೈಗೆ ಸಿಗದಂತೆ ಹೋರಾಟ ಮಾಡುವ ಅನಿವಾರ್ಯತೆಯಿದೆ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಾಹಿತಿ ಬಿ. ಚಂದ್ರೇಗೌಡ, ಡಾ.ಎಚ್.ಟಿ. ಕೃಷ್ಣಮೂರ್ತಿ, ಮಂಜುನಾಥ ಕಾಮತ್, ಕೆ.ಎಸ್. ಮಂಜಪ್ಪ, ಎಂ. ನವೀನ್ ಕುಮಾರ್, ಡಿ. ಗಣೇಶ್,  ಶಿವಪ್ಪಗೌಡರು, ಟಿ. ಕೃಷ್ಣಪ್ಪ, ಬಾಲರಾಜ್ ಉಪಸ್ಥಿತರಿದ್ದರು.

Joshi's plan to derail economic crime investigation in Kasapa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close