ಸುದ್ದಿಲೈವ್/ಶಿವಮೊಗ್ಗ
ಕಳುವಾಗಿದ್ದ ದ್ವಿಚಕ್ರವಾಹನದ ಪತ್ತೆಗೆ ಬೆನ್ನುಹತ್ತಿದ ಪೊಲೀಸರಿಗೆ 10 ದ್ವಿಚಕ್ರವಾಹನ ಪತ್ತೆಯಾಗಿದೆ. ದ್ವಿಚಕ್ರವಾಹನ ಕದ್ದ ಮತ್ತು ಕದ್ದವಾಹನವನ್ನ ಮಾರಾಟ ಮಾಡಲು ಸಿದ್ದವಾಗಿದ್ದ ಗುಜರಿ ವ್ಯಾಪಾರಿಯನ್ನ ಪೊಲೀಸರು ಬಂಧಿಸಿದ್ದಾರೆ.
ಜೂ.04 ರಂದು ಬೆಳಿಗ್ಗೆ ಅಂತರಗಂಗೆ ವಾಸಿ ಷಣ್ಮುಖಪ್ಪ ಎಸ್(60)ರವರು ತಮ್ಮ BAJAJ CT-100 ಬೈಕ್ ನ್ನು ಭದ್ರಾವತಿ ಟೌನ್ ಬಿಳಕಿ ಕ್ರಾಸ್ ಹತ್ತಿರ ರೇಣುಕಾಂಬ ರೆಸ್ಟೋರೆಂಟ್ ಮುಂದೆ ನಿಲ್ಲಿಸಿ, ಹಮಾಲಿ ಕೆಲಸ ಮುಗುಸಿಕೊಂಡು ಬಂದಾಗ ಅವರ ವಾಹನವನ್ನ ಕಳ್ಳತನವಾಗಿದೆ. ಪ್ರಕರಣ ನ್ಯೂಟೌನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ ಕೆ, ಅಡಿಷನಲ್ ಎಸ್ಪಿಗಳಾದ ಅನೀಲ್ ಕುಮಾರ್ ಭೂಮರೆಡ್ಡಿ ಮತ್ತು ಕಾರಿಯಪ್ಪ ಎ.ಜಿ. ರವರ ಮಾರ್ಗದರ್ಶನದಲ್ಲಿ, ಭದ್ರಾವತಿ ಡಿವೈಎಸ್ಪಿ ನಾಗರಾಜ್ ರವರ ಮೇಲ್ವಿಚಾರಣೆಯಲ್ಲಿ , ನಗರ ವೃತ್ತ ಡಿವೈಎಸ್ಪಿ ಶ್ರೀಶೈಲ ಕುಮಾರ್ ನೇತೃತ್ವದಲ್ಲಿ ಪಿಎಸ್ಐ ಟಿ ರಮೇಶ ಮತ್ತು ಎಎಸ್ಐ ಟಿ.ಪಿ ಮಂಜಪ್ಪ ಹಾಗೂ ಸಿಬ್ಬಂದಿಗಳಾದ ಸಿಹೆಚ್ ಸಿ ನವೀನ, ಸಿಪಿಸಿ ಪ್ರಸನ್ನ ಮತ್ತು ರಘು ಬಿ ಎಂ ರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ. ತನಿಖಾ ತಂಡವು ದಿನಾಂಕಃ-28-11-2024 ರಂದು ಪ್ರಕರಣದ ಆರೋಪಿ 1) ನವೀನ ಕುಮಾರ್ ಎಂ ಬಿ, (32), ಎಲೆಕ್ಟ್ರಿಷಿಯನ್ ಕೆಲಸ, ಸುಗ್ಗಿಹಳ್ಳಿ ಹತ್ತಿರ, ಕೋಟೆ ಅಗ್ರಹಾರ ಸರ್ಕಲ್, ಚಿಕ್ಕಮಗಳೂರು ಟೌನ್ ಮತ್ತು 2) ಉಮ್ಮರ್ ಬೇಗ್, (26) ವರ್ಷ, ಗುಜುರಿ ವ್ಯಾಪಾರ, ಬಸ್ ಸ್ಟ್ಯಾಂಡ್ ಎದುರು ವೀರಾಪುರ ಗ್ರಾಮ ಭದ್ರಾವತಿ ಇವರುಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ.
ಆರೋಪಿತರನ್ನು ವಿಚಾರಣೆಗೊಳಪಡಿಸಿದಾಗ ಆರೋಪಿ ನವೀನ ಈತನು ಭದ್ರಾವತಿ ಟೌನ್ ವ್ಯಾಪ್ತಿಯಲ್ಲಿ ಒಟ್ಟು 10 ಬೈಕ್ ಗಳನ್ನು ಕಳ್ಳತನ ಮಾಡಿದ್ದು, ಅದರಲ್ಲಿ 07 ಬೈಕ್ ಗಳನ್ನು, ಪ್ರಕರಣದ ಇನ್ನೊಬ್ಬ ಆರೋಪಿ ಗುಜುರಿ ವ್ಯಾಪಾರಿಯಾದ ಉಮ್ಮರ್ ಬೇಗ್ ನಿಗೆ ಮಾರಾಟ ಮಾಡಿರುವುದು ತಿಳಿದು ಬಂದಿರುತ್ತದೆ.
ನಂತರ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯ 06, ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯ 03 ಮತ್ತು ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯ 01 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ ಸೇರಿ ಒಟ್ಟು 10 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿ, ಆರೋಪಿತರಿಂದ ಅಂದಾಜು ಮೌಲ್ಯ 55,000/- ರೂಗಳ ಒಟ್ಟು 3 ದ್ವಿ ಚಕ್ರ ವಾಹನಗಳನ್ನು ಮತ್ತು 7 ದ್ವಿ ಚಕ್ರ ವಾಹನಗಳ ಬಿಡಿ ಭಾಗಗಳನ್ನು ಮಾರಾಟ ಮಾಡಿಗಳಿಸಿದ್ದ ರೂ 2,10,000/- ನಗದು ಹಣವನ್ನು ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 60,000/- ರೂಗಳ ಪಲ್ಸರ್ ಬೈಕ್ ಸೇರಿ ಒಟ್ಟು 3,25,000/- ರೂಗಳ ಮಾಲನ್ನು ವಶಕ್ಕೆ ಪಡಿಸಿಕೊಳ್ಳಲಾಗಿರುತ್ತದೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ.