ಅಂಗನವಾಡಿ, ತೋಟಗಾರಿಕೆ ಹಾಗೂ ಕುಡಿಯುವ ನೀರಿನ ಸ್ಥಿತಿಗತಿ ಪರಿಶೀಲನೆ


 SUDDILIVE || SORABA

ಅಂಗನವಾಡಿ, ತೋಟಗಾರಿಕೆ ಹಾಗೂ ಕುಡಿಯುವ ನೀರಿನ ಸ್ಥಿತಿಗತಿ ಪರಿಶೀಲನೆ-anganwadi children admission arecanut crop drinking water dc review
Anganawadi, admission

ಶಿವಮೊಗ್ಗ: ತಾಲೂಕಿನಲ್ಲಿ ಅಂಗನವಾಡಿ ಕೇಂದ್ರಗಳ ಸ್ಥಿತಿ, ಮಕ್ಕಳ ದಾಖಲಾತಿ, ತೋಟಗಾರಿಕಾ ಬೆಳೆಗಳು, ಮೇವಿನ ಲಭ್ಯತೆ ಹಾಗೂ ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.

ಅಂಗನವಾಡಿ ಕೇಂದ್ರಗಳ ಕುರಿತು ಮಾಹಿತಿ ನೀಡಿದ ಸಿಡಿಪಿಒ, ತಾಲೂಕಿನಲ್ಲಿ ಒಟ್ಟು 384 ಅಂಗನವಾಡಿ ಕೇಂದ್ರಗಳಿದ್ದು, ನಗರ ಪ್ರದೇಶದಲ್ಲಿ 48 ಹಾಗೂ ಗ್ರಾಮೀಣ ಪ್ರದೇಶದಲ್ಲಿ 336 ಕೇಂದ್ರಗಳಿವೆ ಎಂದು ತಿಳಿಸಿದರು. ಈ ಪೈಕಿ 318 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿದ್ದು, ನಗರದಲ್ಲಿ 33 ಹಾಗೂ ಗ್ರಾಮೀಣದಲ್ಲಿ 285 ಕೇಂದ್ರಗಳು ಸ್ವಂತ ಕಟ್ಟಡ ಹೊಂದಿವೆ. ಇನ್ನೂ 15 ಅಂಗನವಾಡಿ ಕೇಂದ್ರಗಳು ನಿರ್ಮಾಣ ಹಂತದಲ್ಲಿವೆ. 25 ಕೇಂದ್ರಗಳಿಗೆ ನಿವೇಶನವಿದ್ದರೂ, 26 ಅಂಗನವಾಡಿಗಳಿಗೆ ಇನ್ನೂ ನಿವೇಶನ ಲಭ್ಯವಿಲ್ಲ. ಇಂತಹ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅಂಗನವಾಡಿಗಳಿಗೆ ಮಕ್ಕಳ ದಾಖಲಾತಿ ಕುರಿತು ಮಾಹಿತಿ ಕೇಳಿದ ಜಿಲ್ಲಾಧಿಕಾರಿ, ಕಳೆದ ವರ್ಷ ಹಾಗೂ ಪ್ರಸಕ್ತ ಸಾಲಿನ ಮಕ್ಕಳ ಸಂಖ್ಯೆಯನ್ನು ಹೋಲಿಕೆ ಮಾಡಿ ಸಮಗ್ರ ಮಾಹಿತಿಯನ್ನು ಸಿದ್ಧಪಡಿಸುವಂತೆ ಸೂಚಿಸಿದರು. 6 ತಿಂಗಳಿಂದ 3 ವರ್ಷ, 3ರಿಂದ 4 ವರ್ಷ ಹಾಗೂ 5 ವರ್ಷ ವಯೋಮಾನದ ಮಕ್ಕಳ ಸಂಖ್ಯೆಯನ್ನು ಪ್ರತ್ಯೇಕವಾಗಿ ದಾಖಲಿಸಿ, ಕಳೆದ ನಾಲ್ಕು ವರ್ಷಗಳ ದಾಖಲಾತಿ ಮತ್ತು ಜನಸಂಖ್ಯೆಯ ಆಧಾರದ ಮೇಲೆ ಸಂಪೂರ್ಣ ಚಾರ್ಟ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಂಗನವಾಡಿ ಕಟ್ಟಡಗಳ ದುರಸ್ತಿ ಹಾಗೂ ಮಳೆಗಾಲದಲ್ಲಿ ಹಾನಿಗೊಳಗಾಗುತ್ತಿರುವ ಕಟ್ಟಡಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಮಕ್ಕಳಿಗೆ ತೊಂದರೆಯಾಗುವಂತಹ ಕಟ್ಟಡಗಳ ದುರಸ್ತಿ ಕಾರ್ಯವನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು. ಯಾವುದೇ ಅಂಗನವಾಡಿ ಕೇಂದ್ರದ ಪರಿಸ್ಥಿತಿ ಸರಿಯಿಲ್ಲದಿದ್ದರೆ ಮಕ್ಕಳ ಹಾಜರಾತಿ ಕುಂಠಿತವಾಗುವ ಸಾಧ್ಯತೆಯಿದ್ದು, ಅಂತಹ ಕೇಂದ್ರಗಳ ಕುರಿತು ವರದಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಅಡಿಕೆ ವಿಸ್ತರಣೆ ಬಗ್ಗೆ ಕಳವಳ

ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನೀಡಿದ ಮಾಹಿತಿಯಂತೆ ತಾಲೂಕಿನಲ್ಲಿ ಒಟ್ಟು 31,687 ಹೆಕ್ಟೇರ್ ತೋಟಗಾರಿಕೆ ಬೆಳೆ ಪ್ರದೇಶವಿದ್ದು, ಅದರಲ್ಲಿ 26,088 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 1,76,301 ಹೆಕ್ಟೇರ್ ತೋಟಗಾರಿಕೆ ಬೆಳೆ ಪ್ರದೇಶವಿದ್ದು, 1,46,932 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ ಎಂದು ತಿಳಿಸಲಾಯಿತು.

ತಾಲೂಕಿನಲ್ಲಿ ಮಾವು ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳಿದ್ದು, ಕೆಲವು ಭಾಗಗಳಲ್ಲಿ ಬಾಳೆ ಸೇರಿದಂತೆ ಇತರ ಬೆಳೆಗಳ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅಡಿಕೆಯಿಂದ ಲಾಭ ಮತ್ತು ಅಪಾಯ ಕಡಿಮೆ ಎಂಬ ಕಾರಣಕ್ಕೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯತ್ತ ಸಾಗುತ್ತಿರುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಪ್ರಸ್ತುತ ಮಳೆ ಪ್ರಮಾಣದಲ್ಲಿ ವ್ಯತ್ಯಾಸವಿದ್ದರೂ ತೋಟಗಾರಿಕಾ ಬೆಳೆಗಳಿಗೆ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಮಳೆ ಕೊರತೆಯಾದರೆ ಇಳುವರಿಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದರು.

ಅಡಿಕೆ ತೋಟಗಳಲ್ಲಿ ರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣ ಸಿಂಪಡಣೆಗೆ ಸಹಾಯಧನ ನೀಡಲು ತಾಲೂಕಿಗೆ ಸುಮಾರು ₹12 ಲಕ್ಷ ಅನುದಾನ ಬಿಡುಗಡೆಯಾಗಿದೆ. ರೈತರಿಂದ ಅರ್ಜಿ ಪಡೆದು ಶೀಘ್ರದಲ್ಲಿ ಸಹಾಯಧನ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಇಲಾಖೆ ತಿಳಿಸಿತು.

ಮಳೆಯಿಂದ ಸುಮಾರು 19.33 ಹೆಕ್ಟೇರ್ ತೋಟಗಾರಿಕಾ ಬೆಳೆ, ವಿಶೇಷವಾಗಿ ಬಾಳೆ ಬೆಳೆ ಹಾನಿಯಾಗಿರುವ ಬಗ್ಗೆ ಸಮೀಕ್ಷೆ ನಡೆಸಲಾಗಿದ್ದು, ಪರಿಹಾರಕ್ಕಾಗಿ ದಾಖಲೆಗಳನ್ನು ನಮೂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಅಡಿಕೆ ಎಲೆಚುಕ್ಕೆ ರೋಗ ಹಾಗೂ ಹಳದಿ ಎಲೆ ಸೇರಿದಂತೆ ವಿವಿಧ ರೋಗಗಳ ನಿರ್ವಹಣೆ ಕುರಿತು ರೈತರಿಗೆ ನಿರಂತರವಾಗಿ ತರಬೇತಿ ಮತ್ತು ಮಾಹಿತಿ ನೀಡಲಾಗುತ್ತಿದೆ. ರೋಗದಿಂದ ಮರಗಳು ನಾಶವಾದರೆ ಹೊಸ ಮರ ಬೆಳೆಯಲು ಹಲವು ವರ್ಷಗಳು ಬೇಕಾಗುವುದರಿಂದ ರೈತರಿಗೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪದೇಪದೇ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಸದ್ಯಕ್ಕೆ ಮೇವಿನ ಕೊರತೆ ಇಲ್ಲ

ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ತಾಲೂಕಿನಲ್ಲಿ ಸದ್ಯಕ್ಕೆ ಮೇವಿನ ಕೊರತೆ ಇಲ್ಲ ಎಂದು ಸಭೆಗೆ ಮಾಹಿತಿ ನೀಡಿದರು. ಕಳೆದ ಮುಂಗಾರು ಹಾಗೂ ಬೇಸಿಗೆಯಲ್ಲಿ ಮೆಕ್ಕೆಜೋಳ, ಭತ್ತ, ರಾಗಿ ಮತ್ತು ಜೋಳ ಸೇರಿದಂತೆ ವಿವಿಧ ಬೆಳೆಗಳಿಂದ ದೊರೆತ ಬೆಳೆ ತ್ಯಾಜ್ಯದಿಂದ ಸುಮಾರು 82,200 ಟನ್ ಮೇವು ಲಭ್ಯವಿದೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಸುಮಾರು 62 ಸಾವಿರ ಜಾನುವಾರುಗಳು ಹಾಗೂ 17 ಸಾವಿರ ಕುರಿ-ಮೇಕೆಗಳಿದ್ದು, ಲಭ್ಯವಿರುವ ಮೇವು ಸುಮಾರು 35ರಿಂದ 40 ವಾರಗಳವರೆಗೆ ಸಾಕಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದರು. ಆದರೆ ಮುಂದಿನ ದಿನಗಳಲ್ಲಿ ಮಳೆ ಕೊರತೆಯಾದರೆ ಮೇವಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಎರಡು ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ನಿಂದ ನೀರು

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು, ಎರಡು ಗ್ರಾಮಗಳನ್ನು ಹೊರತುಪಡಿಸಿ ತಾಲೂಕಿನಲ್ಲಿ ಸದ್ಯಕ್ಕೆ ಯಾವುದೇ ದೊಡ್ಡ ಪ್ರಮಾಣದ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ತಿಳಿಸಿದರು.

ಅರೆಕೊಪ್ಪ ಗೇಟ್ ಮತ್ತು ಮಂಚಿ ತಾಂಡಾ ಗ್ರಾಮಗಳಲ್ಲಿ ಸರ್ಕಾರಿ ಬೋರ್‌ವೆಲ್‌ಗಳು ಯಶಸ್ವಿಯಾಗದ ಹಿನ್ನೆಲೆಯಲ್ಲಿ ಖಾಸಗಿ ಬೋರ್‌ವೆಲ್‌ಗಳಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಸದ್ಯಕ್ಕೆ ಯಾವುದೇ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಜನವರಿಯಿಂದ ಈವರೆಗೆ ತಾಲೂಕಿನಲ್ಲಿ 26 ಬೋರ್‌ವೆಲ್‌ಗಳನ್ನು ಕೊರೆದಿದ್ದು, 16 ಯಶಸ್ವಿಯಾಗಿವೆ ಹಾಗೂ 10 ವಿಫಲವಾಗಿವೆ ಎಂದು ಮಾಹಿತಿ ನೀಡಲಾಯಿತು.

ಬೋರ್‌ವೆಲ್‌ಗಳ ವೈಫಲ್ಯ ಹಾಗೂ ಅದಕ್ಕೆ ಸಂಬಂಧಿಸಿದ ವೆಚ್ಚದ ಕುರಿತು ಜಿಲ್ಲಾಧಿಕಾರಿ ಅಧಿಕಾರಿಗಳಿಂದ ಮಾಹಿತಿ ಪಡೆದು, ಅನಗತ್ಯ ವೆಚ್ಚವಾಗದಂತೆ ಎಚ್ಚರಿಕೆಯಿಂದ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಒಟ್ಟಾರೆ ಸಭೆಯಲ್ಲಿ ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯ, ಮಕ್ಕಳ ದಾಖಲಾತಿ, ತೋಟಗಾರಿಕಾ ಬೆಳೆಗಳ ರಕ್ಷಣೆ, ರೈತರಿಗೆ ರೋಗ ನಿಯಂತ್ರಣ ಮಾಹಿತಿ, ಮೇವಿನ ಲಭ್ಯತೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಆದ್ಯತೆ ನೀಡಿ ತಕ್ಷಣದ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

anganwadi children admission arecanut crop drinking water dc review

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close