ಸುದ್ದಿಲೈವ್/ಶಿವಮೊಗ್ಗ
ಫೇಸ್ ಬುಕ್ ನಲ್ಲಿ ಹೀಗೆ ಕಣ್ಣಾಡಿಸುವಾಗ ಪ್ರವೀಣ್ ಯಕ್ಷಿಮಠರವರ ಚಿತ್ರ ವಿಮರ್ಶೆ ಗಮನ ಸೆಳೆದಿದೆ. ಅವರ ಪ್ರೆಸೆಂಟೇಷನ್ ಇಷ್ಟವಾಗಿದೆ. ಫೇಸ್ ಬುಕ್ ನಲ್ಲಿ ಕಿಲೋಮೀಟರ್ ಗಟ್ಟಲೆ ಬರೆಯುವವರ ಮಧ್ಯೆ ಯಕ್ಷಿಮಠರ ಚುಟುಕು ವಿಮರ್ಶೆ ಇಷ್ಟವಾಗಿದ್ದರಿಂದ ಅವರ ಅನುಮತಿ ಇಲ್ಲದೆ ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಿದ್ದೇವೆ. ಸಹಕರಿಸುವ ನಿರೀಕ್ಷಯೊಂದಿಗೆ ಅವರ ಅರ್ಟಿಕಲ್ ನ್ನ ಯಥಾವತ್ತು ಪ್ರಕಟಿಸಲಾಗುತ್ತಿದೆ.
1992 ನೇ ಇಸವಿಯಲ್ಲಿ ಉಪೇಂದ್ರ ಹೇಗೆ ಭಿನ್ನ ಭಿನ್ನವಾಗಿ ಕಥೆ ಹೇಳುತ್ತಿದ್ದರೋ ಮೂರು ದಶಕಗಳ ನಂತರದ ಈ ಹೊತ್ತಿಗೂ ಮತ್ತದೇ ಉಪ್ಪಿ ಕಥೆ ಹೇಳುವ ಡಿಫರೆಂಟ್ ಸ್ಟೈಲ್ ಮುಂದುವರೆದಿದೆ.ಥಿಯೇಟರಿನೊಳಗೆ ಕುಳಿತ ಪ್ರೇಕ್ಷಕ ಮಹಾಪ್ರಭು ತಲೆಯನ್ನು ಮತ್ತೆ ಮತ್ತೆ ಪರಪರ ಕೆರೆದುಕೊಳ್ಳುತ್ತಾನೆ. ಸೀಟಿನ ಮೇಲೆ ಕುಳಿತ ಆತನ ಭಂಗಿಗಳು ನಿಮಿಷ ನಿಮಿಷಕ್ಕೆ ಬದಲಾಗುತ್ತದೆ.ಆದರೂ ಪ್ರೇಕ್ಷಕನಿಗೆ ಕಥೆ ಅರ್ಥವಾಗದು. ಹಾಗಾದರೆ ಯುಐ ಚಿತ್ರದಲ್ಲಿ ಉಪೇಂದ್ರ ಹೇಳಲು ಹೊರಟಿರುವ ಕಥೆ ಯಾವುದು..?
ಯುಐ ಎಂದರೆ 'ಯುನಿವರ್ಸಲ್ ಇಂಟಲಿಜೆನ್ಸ್' ಎನ್ನುವ ನಿರ್ದೇಶಕ ಉಪ್ಪಿ ಎರಡುವರೆ ಗಂಟೆಯ ಚಿತ್ರದೊಳಗೆ ತೋರಿಸಿದ್ದು 'ಯುನಿರ್ವಸಲ್ ಇಂಟಲಿಜೆನ್ಸೋ' ಅಥವಾ 'ಉಪ್ಪಿ ಇಂಟಿಲಿಜೆನ್ಸೋ' ?? ಹೇಳುವ ಎಂದರೆ ಚಿತ್ರ ಪೂರ್ತಿ ನನಗೂ ಅರ್ಥವಾಗಿಲ್ಲ.
ಯುಐ ಹೆಸರಿನ ತಲೆಗೆ ಹುಳ ಬಿಟ್ಟಿರುವ ಈ ಚಿತ್ರದೊಳಗೆ ಮೊದಲಿಗೆ ತಿರುಪತಿ ನಾಮ ಸಿಂಬಲ್ಲಿನೊಂದಿಗೆ ಆಗತಾನೆ ರಿಲೀಸ್ ಆಗಿರುವ ಒಂದು ಪಿಕ್ಚರ್ ಇದೆ, ಯುಐ ಪಿಕ್ಚರ್ ಒಳಗೆ ಕಾಣಸಿಗುವ ಆ ಪಿಕ್ಚರ್‌ನ ನಿರ್ದೇಶಕ ಕೂಡ ಉಪ್ಪಿಯೇ..ಅದರ ಕಥೆ ಇದರದ್ದಾ? ಇದರ ಕಥೆ ಅದರದ್ದಾ? ಎಂದು ಗೊಜಲು ಗೊಜಲಾಗುವ ಹೊತ್ತಿಗೆ ನಿಮಗೆ ಮತ್ತೊಂದು ಪ್ರಪಂಚ ಕಾಣಿಸುತ್ತದೆ. ಅದು ಯುಐ ಪ್ರಪಂಚ..!! ಅಲ್ಲಿ ನಿಮಗೆ ಕಾಣಿಸುವುದು ಜಾತಿ ಧರ್ಮ,ರಾಜಕಾರಣ,ಯುದ್ದ,ಪ್ರಕೃತಿ, ಬಣ್ಣ, ಸತ್ಯ, ಯುಗ,ಕಲ್ಕಿ,ಆ್ಯಡಮ್,ಈವ್,ಹಸಿವು,ಭ್ರಷ್ಟಾಚಾರ, ಕಾಮ, ಒಂದೇ ಎರಡೇ..?
ಅದಾಗಲೇ ಹುಳ ಬಿಟ್ಟುಕೊಂಡ ನಿಮ್ಮ ತಲೆಯೊಳಗೆ ಮತ್ತೊಂದು ಹುಳ ಬಂದು ಸೇರಿಕೊಳ್ಳುತ್ತದೆ.ಈ ರಿಯಲ್ ಸ್ಟಾರ್ ಉಪೇಂದ್ರ ಕಥೆ ಹೇಳುವ ಶೈಲಿ ಅದು ಯಾವತ್ತಿಗೂ ಹೊಸತು.ತರ್ಲೆನನ್ಮಗ,ಶ್ , ಆಪರೇಷನ್ ಅಂತ,
ಓಂ ಚಿತ್ರಗಳು ಬಂದ ಜಮಾನದಲ್ಲೂ ಆ ಶೈಲಿ ಚಿತ್ರರಂಗದ ಪಾಲಿಗೆ ಹೊಸತೇ ಆಗಿತ್ತು, ಸ್ವಸ್ತಿಕ್, ಎ,ಉಪೇಂದ್ರ, ಹಾಲಿವುಡ್, ಸೂಪರ್,ಉಪ್ಪಿ 2 ಚಿತ್ರಗಳು ಬರುವ ಹೊತ್ತಿಗೂ ಭಾರತೀಯ ಚಿತ್ರರಂಗ ಅವುಗಳನ್ನು ಕಂಡ ರೀತಿಯೂ ಹೊಸತೇ !!.
ಈಗ ಮತ್ತೊಮ್ಮೆ ಇತಿಹಾಸ ಮರುಕಳಿಸಿದೆ. ಎ' ಚಿತ್ರದ ಆರಂಭದಲ್ಲಿ 'ಇದು ಬುದ್ದಿವಂತರಿಗೆ ಮಾತ್ರ' ಎಂದಿದ್ದ ಉಪ್ಪಿ ಇಲ್ಲಿ 'ನೀವು ಅತೀ ಬುದ್ದಿವಂತರಾಗಿದ್ದರೆ ಈಗಲೇ ಥಿಯಟರಿನಿಂದ ಎದ್ದು ಹೊರ ಹೋಗಿ' ಎಂದು ಮುಲಾಜಿಲ್ಲದೇ ಹೇಳುತ್ತಾರೆ. ಹಾಗೆ ಮುಂದುವರೆದು 'ನೀವು ದಡ್ಡರಾಗಿದ್ದರೆ ಮಾತ್ರ ಚಿತ್ರನೋಡಿ' ಎನ್ನುವುದು ನಿರ್ದೇಶಕನ ಗಿಮಿಕ್ಕಾ? ಅಥವಾ ಉಡಾಫೆಯಾ?
ಹೂಂ ಹೂಂ..ನಿಮಗೆ ಅದ್ಯಾವುದಕ್ಕೂ ಉತ್ತರ ಸಿಗದು. ಏಕೆಂದರೆ ಇದು ಟಿಪಿಕಲ್ ಉಪ್ಪಿ ಸ್ಟೈಲಿನ ಚಿತ್ರ. ಕಥೆ,ಚಿತ್ರಕಥೆ ಡೈಲಾಗು ಮತ್ತದರ ಗೂಡಾರ್ಥಗಳೆಲ್ಲಾ ನಿಮಗೆ ಅರ್ಥವಾಗಬೇಕಂದರೆ ಇನ್ನೂ ಇಪ್ಪತ್ತು ವರುಷಗಳಾದರೂ ಬೇಕು. ಅಲ್ಲಿ ತನಕ ಪರಪರ ಕೆರ್ಕೊಳ್ಳಿ.
-- ಯಕ್ಷಿಮಠ