ಭದ್ರಾವತಿ ಗ್ಯಾಂಗ್‌ವಾರ್ ಹತ್ಯೆ ಪ್ರಕರಣ: ಗುಪ್ತಚರ ಇಲಾಖೆಯ ವೈಫಲ್ಯ ಪ್ರಶ್ನಿಸಿದ ಸಾರ್ವಜನಿಕರು- Bhadravati gangwar murder case: Public questions intelligence department's failure

 SUDDILIVE || SHIVAMOGGA

ಭದ್ರಾವತಿ ಗ್ಯಾಂಗ್‌ವಾರ್ ಹತ್ಯೆ ಪ್ರಕರಣ: ಗುಪ್ತಚರ ಇಲಾಖೆಯ ವೈಫಲ್ಯ ಪ್ರಶ್ನಿಸಿದ ಸಾರ್ವಜನಿಕರು-  Bhadravati gangwar murder case: Public questions intelligence department's failure   

Gangwar, Bhadravathi

ಶಿವಮೊಗ್ಗ: ಭದ್ರಾವತಿಯಲ್ಲಿ ನರಸಿಂಹ ಯಾನೆ ದಾಸನ ಕಗ್ಗೊಲೆ ನಡೆದು ವಾರ ಕಳೆದಿದ್ದರೂ, ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಗುಪ್ತಚರ ಇಲಾಖೆ ಹಾಗೂ ಸ್ಥಳೀಯ ಪೊಲೀಸ್ ವ್ಯವಸ್ಥೆಯ ಕಾರ್ಯವೈಖರಿ ಕುರಿತು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಕೇಳಿಬರುತ್ತಿವೆ.

ನರಸಿಂಹ ಹತ್ಯೆಗೆ ಕೆಲ ದಿನಗಳ ಮುನ್ನ ಭದ್ರಾವತಿಯಲ್ಲಿ ವಿಶ್ವ ಯಾನೆ ಮುದ್ದೆ ಮೇಲೆ ದಾಳಿ ನಡೆದಿತ್ತು. ಈ ದಾಳಿ ಮುಂದಿನ ಗ್ಯಾಂಗ್‌ವಾರ್ ಅಥವಾ ಪ್ರತೀಕಾರಾತ್ಮಕ ಕೃತ್ಯದ ಮುನ್ಸೂಚನೆಯಾಗಿತ್ತೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಆ ಸಂದರ್ಭದಲ್ಲಿ ಗುಪ್ತಚರ ಇಲಾಖೆ ಸೂಕ್ತ ಮಾಹಿತಿ ಸಂಗ್ರಹಿಸಿ ಎಚ್ಚರಿಕೆ ಕ್ರಮ ಕೈಗೊಂಡಿದ್ದರೆ ನಂತರ ನಡೆದ ಹತ್ಯೆ ತಡೆಯಬಹುದಿತ್ತೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ರೌಡಿಶೀಟರ್‌ಗಳ ಚಟುವಟಿಕೆಗಳು, ಗುಂಪುಗಳ ನಡುವಿನ ವೈಷಮ್ಯ ಹಾಗೂ ಅಪರಾಧ ಜಗತ್ತಿನ ಬೆಳವಣಿಗೆಗಳ ಬಗ್ಗೆ ನಿರಂತರ ನಿಗಾ ಇರಬೇಕಾದ ಇಲಾಖೆ, ಇಂತಹ ಗಂಭೀರ ಬೆಳವಣಿಗೆಗಳನ್ನು ಗಮನಿಸುವಲ್ಲಿ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಜನಸಾಮಾನ್ಯರ ಅಭಿಪ್ರಾಯದಂತೆ, ಗುಪ್ತಚರ ಇಲಾಖೆಯ ಕಾರ್ಯಕ್ಷೇತ್ರವು ಕೇವಲ ಪ್ರತಿಭಟನೆಗಳಲ್ಲಿ ಭಾಗವಹಿಸುವವರ ಸಂಖ್ಯೆ ಲೆಕ್ಕಿಸುವುದು ಅಥವಾ ಫ್ಲೆಕ್ಸ್, ಬ್ಯಾನರ್‌ಗಳ ವಿಚಾರಗಳಲ್ಲೇ ಸೀಮಿತವಾಗದೆ, ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಅಂಶಗಳ ಮೇಲೆ ಹೆಚ್ಚು ಗಮನಹರಿಸಬೇಕಾಗಿದೆ.

ಈ ಕುರಿತು ಗುಪ್ತಚರ ಇಲಾಖೆ ತಮ್ಮ ನಿರ್ಲಕ್ಷ್ಯವನ್ನು ತಳ್ಳಿಹಾಕುವ ಸಾಧ್ಯತೆ ಇದ್ದರೂ, ಯಾವುದೇ ಮುನ್ನೆಚ್ಚರಿಕೆ ಮಾಹಿತಿಯನ್ನ ಸ್ಥಳೀಯ ಪೊಲೀಸರಿಗೆ ರವಾನಿಸಲಾಗಿತ್ತೇ ಅಥವಾ ಇಲ್ಲವೇ ಎಂಬ ಪ್ರಶ್ನೆಯೂ ಮಹತ್ವ ಪಡೆದುಕೊಂಡಿದೆ. ಮಾಹಿತಿ ನೀಡಿದ್ದರೆ ಸ್ಥಳೀಯ ಪೊಲೀಸ್ ಇಲಾಖೆಯ ಜವಾಬ್ದಾರಿಯೂ ಪರಿಶೀಲನೆಗೆ ಒಳಪಡಬೇಕಾಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಭದ್ರಾವತಿಯ ಇತ್ತೀಚಿನ ಹಿಂಸಾತ್ಮಕ ಘಟನೆಗಳು ಗುಪ್ತಚರ ವ್ಯವಸ್ಥೆ, ಮಾಹಿತಿ ಸಂಗ್ರಹಣೆ ಹಾಗೂ ಪೊಲೀಸ್ ಇಲಾಖೆಗಳ ನಡುವಿನ ಸಮನ್ವಯದ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

Bhadravati gangwar murder case: Public questions intelligence department's failure

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close