SUDDILIVE || SHIVAMOGGA
ವರದಕ್ಷಿಣೆ ಕಿರುಕುಳ ಪ್ರಕರಣ: ಪತಿಗೆ 3 ವರ್ಷ ಜೈಲು, ₹15 ಸಾವಿರ ದಂಡ-Dowry harassment case: Husband sentenced to 3 years in jail, fined ₹15,000
ಶಿವಮೊಗ್ಗ: ವರದಕ್ಷಿಣೆ, ಸೈಟ್ ಹಾಗೂ ಬಂಗಾರ ತರುವಂತೆ ಪತ್ನಿಗೆ ನಿರಂತರ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಗೆ ಶಿವಮೊಗ್ಗದ ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ಮೂರು ವರ್ಷಗಳ ಸಾದಾ ಶಿಕ್ಷೆ ಹಾಗೂ ಒಟ್ಟು ₹15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಬಳ್ಳಾರಿ ಜಿಲ್ಲೆಯ ಕೊಟ್ಟೂರು ನಿವಾಸಿ ಮಂಜುನಾಥ್ ಶಿಕ್ಷೆಗೆ ಗುರಿಯಾದ ಆರೋಪಿ. ಪತ್ನಿ ಸುಮಾ ಅವರಿಗೆ ಹೆಚ್ಚಿನ ವರದಕ್ಷಿಣೆ, ಸೈಟ್ ಹಾಗೂ ಬಂಗಾರ ತರುವಂತೆ ಒತ್ತಡ ಹೇರಿ ಕಿರುಕುಳ ನೀಡಿದ್ದಲ್ಲದೆ, ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ 2017ರಲ್ಲಿ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಅಂದಿನ ಮಹಿಳಾ ಪೊಲೀಸ್ ಠಾಣೆಯ ತನಿಖಾಧಿಕಾರಿ ಪ್ರಭಾವತಿ ಸಿ. ನಡೆಸಿ, 2018ರಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಬಳಿಕ ಪ್ರಕರಣದ ಸಾಕ್ಷ್ಯಾಧಾರಗಳು ಹಾಗೂ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶ ಸಿದ್ಧರಾಜು ಎನ್.ಕೆ. ಅವರು ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿದರು.
ನ್ಯಾಯಾಲಯವು ಆರೋಪಿ ಮಂಜುನಾಥ್‌ಗೆ ಐಪಿಸಿ ಕಲಂ 498(ಎ) ಅಡಿ ಮೂರು ವರ್ಷಗಳ ಸಾದಾ ಶಿಕ್ಷೆ ಮತ್ತು ₹10,000 ದಂಡ, ಹಾಗೆಯೇ ಐಪಿಸಿ ಕಲಂ 506 ಅಡಿ ಎರಡು ವರ್ಷಗಳ ಸಾದಾ ಶಿಕ್ಷೆ ಹಾಗೂ ₹5,000 ದಂಡ ವಿಧಿಸಿದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಜಿ.ಕೆ. ಕಿರಣ್‌ಕುಮಾರ್ ವಾದ ಮಂಡಿಸಿದ್ದರು.
