ಕಾಂಗ್ರೆಸ್ ಸರ್ಕಾರ ಹಿಟ್ ವಿಕೆಟ್ ಆಗಲಿದೆ, ಮಧ್ಯಂತರ ಚುನಾವಣೆ ಬಂದರೂ ಅಚ್ಚರಿಯಿಲ್ಲ: ಬಿ.ವೈ.ವಿಜಯೇಂದ್ರ-Congress government will be a hit wicket, no surprise if mid-term elections come: B.Y. Vijayendra

 SUDDILIVE || HOSANAGARA

ಕಾಂಗ್ರೆಸ್ ಸರ್ಕಾರ ಹಿಟ್ ವಿಕೆಟ್ ಆಗಲಿದೆ, ಮಧ್ಯಂತರ ಚುನಾವಣೆ ಬಂದರೂ ಅಚ್ಚರಿಯಿಲ್ಲ: ಬಿ.ವೈ.ವಿಜಯೇಂದ್ರ-Congress government will be a hit wicket, no surprise if mid-term elections come: B.Y. Vijayendra





ಹೊಸನಗರ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತ ಪಕ್ಷದ ಶಾಸಕರಿಗೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ವಿಶ್ವಾಸ ಕಡಿಮೆಯಾಗಿದೆ. ಸರ್ಕಾರದ ಪರಿಸ್ಥಿತಿ ಗಮನಿಸಿದರೆ ಮಧ್ಯಂತರ ಚುನಾವಣೆ ಬಂದರೂ ಅಚ್ಚರಿಪಡಬೇಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಬಿಜೆಪಿಯ ಸೇವಾ ಸಂಕಲ್ಪ ಅಭಿಯಾನ-2026ರ ಅಂಗವಾಗಿ ಹೊಸನಗರದ ಬಸ್ ನಿಲ್ದಾಣದ ಆವರಣದಲ್ಲಿ ಬಿಜೆಪಿ ಮಂಡಲ ವತಿಯಿಂದ ಆಯೋಜಿಸಿದ್ದ ಮ್ಯಾರಥಾನ್ ಮತ್ತು ವಾಕಥಾನ್ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನ ಉದ್ಘಾಟಿಸಿ ಅವರು ಮಾತನಾಡಿದರು.

ರೈತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ

ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದ್ದರೂ ರೈತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ವಿಜಯೇಂದ್ರ ಆರೋಪಿಸಿದರು. ರೈತ ಕುಟುಂಬಕ್ಕೆ ₹2,500 ಪರಿಹಾರ ನೀಡುವುದಾಗಿ ಘೋಷಿಸಿರುವುದು ಭಿಕ್ಷೆ ನೀಡುವ ರೀತಿಯಲ್ಲಿದೆ ಎಂದು ಟೀಕಿಸಿದರು.

ರೈತರ ಕೃಷಿ ಸಾಲವನ್ನು ₹5 ಲಕ್ಷದವರೆಗೆ ಮನ್ನಾ ಮಾಡಬೇಕು ಹಾಗೂ ಪ್ರತಿ ಹೆಕ್ಟೇರ್‌ಗೆ ₹50,000 ಪರಿಹಾರ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿತ್ತು. ಆದರೆ ಸರ್ಕಾರ ಈ ಬೇಡಿಕೆಗಳನ್ನು ಪರಿಗಣಿಸಿಲ್ಲ. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಯನ್ನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ₹5 ಲಕ್ಷ ಪರಿಹಾರ ನೀಡುವ ಮೂಲಕ ಯಡಿಯೂರಪ್ಪ ನೇತೃತ್ವದ ಸರ್ಕಾರ ನೆರವಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾದರೂ ಬಡವರಿಗೆ ಮನೆ ನೀಡಲು ಹಾಗೂ ವೃದ್ಧಾಪ್ಯ ಮತ್ತು ವಿಕಲಚೇತನರ ಪಿಂಚಣಿ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

ರಾಜ್ಯದ ಖಜಾನೆ ಖಾಲಿಯಾಗಿದೆ ಎಂಬ ಆರೋಪ

ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಡೀಸೆಲ್ ಖರೀದಿಸಲೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಜಯೇಂದ್ರ ದೂರಿದರು.

ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ₹34,000 ಕೋಟಿ ಮೊತ್ತದ ಯೋಜನೆಗಳನ್ನು ಘೋಷಿಸಿದ ಬೆನ್ನಲ್ಲೇ, ಯಾವುದೇ ಉಚಿತ ಘೋಷಣೆಗಳನ್ನು ಮಾಡದಂತೆ ಆರ್ಥಿಕ ಇಲಾಖೆ ಎಚ್ಚರಿಕೆ ನೀಡಿದೆ ಎಂದು ಅವರು ಹೇಳಿದರು. ಬರಗಾಲದ ಸಂದರ್ಭದಲ್ಲಿ ರೈತರಿಗೆ ಪರಿಹಾರ ನೀಡಲೂ ಹಣವಿಲ್ಲದ ಸ್ಥಿತಿಗೆ ರಾಜ್ಯ ಸರ್ಕಾರ ತಲುಪಿದೆ ಎಂದು ಟೀಕಿಸಿದರು.

2.5 ಲಕ್ಷ ಹುದ್ದೆಗಳ ಭರ್ತಿ ಯಾವಾಗ?

ರಾಜ್ಯದಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ ನೀಡಿದ್ದ ಸರ್ಕಾರ, ಉದ್ಯೋಗಕ್ಕಾಗಿ ಹೋರಾಟ ನಡೆಸುತ್ತಿರುವ ಯುವಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ವಿಜಯೇಂದ್ರ ಆರೋಪಿಸಿದರು. ಕಾಂಗ್ರೆಸ್ ಸರ್ಕಾರ ಬಡವರು, ರೈತರು, ಯುವಕರು ಮತ್ತು ಮಹಿಳೆಯರ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಅವರನ್ನು ಬಲಿಪಶು ಮಾಡಲಾಗುತ್ತಿದೆಯೇ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಹೋರಾಟದ ವಿಚಾರ ಪ್ರಸ್ತಾಪಿಸಿದ ವಿಜಯೇಂದ್ರ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ ಸಿದ್ದರಾಮಯ್ಯ ಅವರನ್ನೇ ಬಲಿಪಶು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನಲ್ಲಿ ಸಚಿವರು ಮತ್ತು ಶಾಸಕರ ಮೇಲೆ ನಿಗಾ ಇಡಲು ಸ್ಟಿಂಗ್ ಆಪರೇಷನ್‌ಗಳನ್ನು ನಡೆಸಲಾಗಿದೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದರು. ಅಧಿಕಾರ ಉಳಿಸಿಕೊಳ್ಳುವ ಉದ್ದೇಶದಿಂದ ಇಂತಹ ತಂತ್ರಗಳನ್ನು ಬಳಸಲಾಗುತ್ತಿದೆ ಎಂದು ದೂರಿದ ಅವರು, ಈ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಶಾಸಕರೇ ಬಹಿರಂಗವಾಗಿ ಮಾತನಾಡುವ ಪರಿಸ್ಥಿತಿ ಬರಲಿದೆ ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗಲು ಕರೆ

ಮುಖ್ಯಮಂತ್ರಿಗಳ ಮೇಲೆ ಆಡಳಿತ ಪಕ್ಷದ ಶಾಸಕರಿಗೇ ವಿಶ್ವಾಸ ಇಲ್ಲದಿರುವುದು, ಕ್ಷೇತ್ರಗಳಿಗೆ ಅನುದಾನ ಸಿಗದಿರುವುದು ಹಾಗೂ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿರುವುದು ಸರ್ಕಾರದ ಭವಿಷ್ಯದ ಬಗ್ಗೆ ಪ್ರಶ್ನೆ ಮೂಡಿಸಿದೆ ಎಂದು ವಿಜಯೇಂದ್ರ ಹೇಳಿದರು.

ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಯಾವಾಗ ನಡೆದರೂ ಬಿಜೆಪಿ ಕಾರ್ಯಕರ್ತರು ಸಿದ್ಧರಾಗಿರಬೇಕು. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಹಿರಿಯ ಕಾರ್ಯಕರ್ತರಿಗೆ ಚುನಾವಣೆಯಲ್ಲಿ ಅವಕಾಶ ನೀಡಿ ಗೆಲ್ಲಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಧಾನ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ವಿಜಯೇಂದ್ರ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತೊಗೆಯಲು ಬಿಜೆಪಿ ಕಾರ್ಯಕರ್ತರು ಸಂಘಟಿತರಾಗಿ ಶ್ರಮಿಸಬೇಕು ಎಂದು ಹೇಳಿದರು.

Congress government will be a hit wicket, no surprise if mid-term elections come: B.Y. Vijayendra

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close