ಶಿವಮೊಗ್ಗ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತ್ರಿವಳಿ ISO ಪ್ರಮಾಣೀಕರಣ; ದೇಶದಲ್ಲೇ ಮೊದಲ ಸಾಧನೆ-Shivamogga Sri Raghavendra Swamy Math gets triple ISO certification; first achievement in the country

SUDDILIVE || SHIVAMOGGA

ಶಿವಮೊಗ್ಗ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತ್ರಿವಳಿ ISO ಪ್ರಮಾಣೀಕರಣ; ದೇಶದಲ್ಲೇ ಮೊದಲ ಸಾಧನೆ-Shivamogga Sri Raghavendra Swamy Math gets triple ISO certification; first achievement in the country    

Swamy, mutt

ಶಿವಮೊಗ್ಗ: ನಗರದ ದುರ್ಗಿಗುಡಿ ಪಾರ್ಕ್ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠವು ಗುಣಮಟ್ಟದ ಆಡಳಿತ, ಪರಿಸರ ಸಂರಕ್ಷಣೆ ಹಾಗೂ ಆರೋಗ್ಯ–ಸುರಕ್ಷತಾ ನಿರ್ವಹಣೆಗೆ ಸಂಬಂಧಿಸಿದ ಮೂರು ಪ್ರಮುಖ ISO ಪ್ರಮಾಣಪತ್ರಗಳನ್ನು ಪಡೆದು ಹೊಸ ಮೈಲಿಗಲ್ಲು ಸಾಧಿಸಿದೆ. ಈ ಮೂರು ಪ್ರಮಾಣೀಕರಣಗಳನ್ನು ಒಂದೇ ವೇಳೆ ಪಡೆದ ದೇಶದ ಮೊದಲ ಹಾಗೂ ಏಕೈಕ ಮಠ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಠಕ್ಕೆ ISO 9001:2015 (ಗುಣಮಟ್ಟ ನಿರ್ವಹಣಾ ವ್ಯವಸ್ಥೆ), ISO 14001:2015 (ಪರಿಸರ ನಿರ್ವಹಣಾ ವ್ಯವಸ್ಥೆ) ಹಾಗೂ ISO 45001:2018 (ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತಾ ನಿರ್ವಹಣಾ ವ್ಯವಸ್ಥೆ) ಪ್ರಮಾಣಪತ್ರಗಳು ಲಭಿಸಿವೆ.

ಮಠದ ಆಡಳಿತ ವ್ಯವಸ್ಥೆ, ಭಕ್ತರ ಸೇವೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ವೈದ್ಯಕೀಯ ಶಿಬಿರಗಳು, ಶಾಲೆ ದತ್ತು ಯೋಜನೆ ಸೇರಿದಂತೆ ಸಮಾಜಮುಖಿ ಸೇವೆಗಳನ್ನು ಪರಿಶೀಲಿಸಿ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಐಎಸ್‌ಒ ಸಂಸ್ಥೆ ಈ ಮಾನ್ಯತೆ ನೀಡಿದೆ.

ಸೇವಾ ಗುಣಮಟ್ಟಕ್ಕೆ ಜಾಗತಿಕ ಮಾನ್ಯತೆ

ಈ ಪ್ರಮಾಣೀಕರಣದಿಂದ ಮಠದ ಆಡಳಿತದಲ್ಲಿ ಪಾರದರ್ಶಕತೆ, ಸೇವಾ ಗುಣಮಟ್ಟ, ಪರಿಸರ ಕಾಳಜಿ ಹಾಗೂ ಸುರಕ್ಷತಾ ಮಾನದಂಡಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ ದೊರೆತಿದೆ. ಇದರಿಂದ ಭಕ್ತರು ಹಾಗೂ ದಾನಿಗಳ ವಿಶ್ವಾಸ ಮತ್ತಷ್ಟು ಹೆಚ್ಚಲಿದ್ದು, ಸೇವಾ ಚಟುವಟಿಕೆಗಳು ನಿಗದಿತ ಗುಣಮಟ್ಟದಲ್ಲಿ ಮುಂದುವರಿಯಲಿವೆ.

ಮುಂದಿನ ಗುರಿ ಸಮಾಜಸೇವೆ ವಿಸ್ತರಣೆ

ಮುಂದಿನ ದಿನಗಳಲ್ಲಿ ಹೆಚ್ಚಿನ ಆರೋಗ್ಯ ಶಿಬಿರಗಳು, ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ, ಪರಿಸರ ಸಂರಕ್ಷಣಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳ ವಿಸ್ತರಣೆ ಮತ್ತು ಸಮಾಜಸೇವಾ ಯೋಜನೆಗಳನ್ನು ಹೆಚ್ಚಿಸುವ ಗುರಿಯನ್ನು ಮಠದ ಆಡಳಿತ ಮಂಡಳಿ ಹೊಂದಿದೆ.

ಆಡಳಿತ ಮಂಡಳಿಯ ಹರ್ಷ

ರಾಘವೇಂದ್ರ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಎಚ್.ವಿ. ಸುರೇಶ್ ಮಾತನಾಡಿ, ಐಎಸ್‌ಒ ಸಂಸ್ಥೆಯು ಸುಮಾರು ಆರು ತಿಂಗಳ ಕಾಲ ಮಠದ ಕಾರ್ಯವೈಖರಿಯನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಪ್ರಮಾಣಪತ್ರ ನೀಡಿದೆ. ಈ ಗೌರವಕ್ಕೆ ಭಕ್ತರ ಸೇವಾಭಾವವೇ ಪ್ರಮುಖ ಕಾರಣ ಎಂದು ಹೇಳಿದರು.

ಖಜಾಂಚಿ ಗುರುಪ್ರಸಾದ್ ಮಾತನಾಡಿ, ಮಠದ ಗುಣಮಟ್ಟದ ಸೇವೆ, ಹಣಕಾಸಿನ ಪಾರದರ್ಶಕತೆ ಹಾಗೂ ಸಾಂಸ್ಕೃತಿಕ-ಧಾರ್ಮಿಕ ಚಟುವಟಿಕೆಗಳನ್ನು ಪರಿಗಣಿಸಿ ಮೂರು ವಿಭಾಗಗಳಲ್ಲಿ ಈ ಮಾನ್ಯತೆ ಲಭಿಸಿರುವುದು ಸಂತಸದ ಸಂಗತಿ ಎಂದರು.

ಭಕ್ತ ಸುಧೀಂದ್ರ ಕಟ್ಟೆ ಪ್ರತಿಕ್ರಿಯಿಸಿ, ಮಠಕ್ಕೆ ಲಭಿಸಿರುವ ಈ ತ್ರಿವಳಿ ISO ಪ್ರಮಾಣೀಕರಣ ರಾಯರ ಆಶೀರ್ವಾದದ ಫಲವಾಗಿದ್ದು, ಶ್ರೀ ರಾಘವೇಂದ್ರ ಸ್ವಾಮಿ ಮಠದ ಸೇವಾ ಕಾರ್ಯಗಳಿಗೆ ಜಾಗತಿಕ ಮಟ್ಟದಲ್ಲಿ ದೊರೆತ ಮಾನ್ಯತೆಯಾಗಿದೆ ಎಂದು ಅಭಿಪ್ರಾಯಪಟ್ಟರು.

Shivamogga Sri Raghavendra Swamy Math gets triple ISO certification; first achievement in the country  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close