ನಿಗದಿತ ಬಸ್‌ ನಿಲ್ದಾಣಗಳಲ್ಲೇ ಬಸ್ ನಿಲ್ಲಿಸಿ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೂಚನೆ-Stop buses only at designated bus stops: District Collector Prabhulinga Kavalikatti instructs

SUDDILIVE || SHIVAMOGGA

ನಿಗದಿತ ಬಸ್‌ ನಿಲ್ದಾಣಗಳಲ್ಲೇ ಬಸ್ ನಿಲ್ಲಿಸಿ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೂಚನೆ-Stop buses only at designated bus stops: District Collector Prabhulinga Kavalikatti instructs


Bus, stop

ಶಿವಮೊಗ್ಗ, ಜು.15: ನಗರದ ಸಂಚಾರ ದಟ್ಟಣೆ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ನಗರ ಸಾರಿಗೆ ಬಸ್‌ಗಳ ಚಾಲಕರು ನಿಗದಿಪಡಿಸಿದ ಬಸ್‌ ನಿಲ್ದಾಣಗಳಲ್ಲಿಯೇ ಬಸ್‌ಗಳನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರ ಆಟೋರಿಕ್ಷಾ ಸಂಚಾರ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಹಾಗೂ ಪರಿಹಾರ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದ ಹಲವೆಡೆ ಬಸ್ ನಿಲ್ದಾಣಗಳನ್ನು ಗುರುತಿಸಲಾಗಿದ್ದರೂ ಕೆಲ ಚಾಲಕರು ಎಲ್ಲೆಂದರಲ್ಲಿ ಬಸ್ ನಿಲ್ಲಿಸಿ ಜನಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.

ಬಸ್ ಚಾಲಕರಿಗೆ ಸೂಚನೆ, ದರ ಪರಿಷ್ಕರಣೆ ಕುರಿತು ಪರಿಶೀಲನೆ

ನಗರ ಸಾರಿಗೆ ಬಸ್ ಚಾಲಕರಿಗೆ ಕೂಡಲೇ ನಿರ್ದೇಶನ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ನೆರೆಯ ಜಿಲ್ಲೆಗಳ ಆಟೋ ದರ ಪರಿಷ್ಕರಣೆ ಮಾದರಿಯನ್ನು ಪರಿಶೀಲಿಸಿ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ರ್ಯಾಪಿಡೋ ಸೇವೆಗೆ ಸರ್ಕಾರದ ಮಾರ್ಗಸೂಚಿಯಂತೆ ನಿರ್ಧಾರ
Bus, stop

ರ್ಯಾಪಿಡೋ ಅಥವಾ ಇತರ ಯಾವುದೇ ಖಾಸಗಿ ಸಾರಿಗೆ ಸೇವೆಗಳು ಸರ್ಕಾರದ ಮಾರ್ಗಸೂಚಿಯಂತೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದು. ಅಗತ್ಯ ಅನುಮತಿ ಹಾಗೂ ದಾಖಲೆಗಳಿಲ್ಲದೆ ವಾಹನ ಸಂಚಾರ ನಡೆಸಿದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಆಟೋ ಚಾಲಕರಿಗೆ ಎಸ್‌ಪಿ ಬಿ. ನಿಖಿಲ್ ಸಲಹೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಮಾತನಾಡಿ, ಆಟೋ ಚಾಲಕರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿಶೇಷವಾಗಿ ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ಕರೆತರುವ-ಕೊಂಡೊಯ್ಯುವ ಸಂದರ್ಭದಲ್ಲಿ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.

ನಗರದಲ್ಲಿ ನೋಂದಾಯಿತ 5,665 ಆಟೋರಿಕ್ಷಾಗಳಿದ್ದು, ಪ್ರತಿಯೊಂದು ಆಟೋದಲ್ಲಿ ಚಾಲಕ-ಮಾಲೀಕರ ವಿವರ ಹಾಗೂ ಪೊಲೀಸ್ ಇಲಾಖೆಯಲ್ಲಿ ನೋಂದಾಯಿತ ಮಾಹಿತಿ ಫಲಕ ಅಳವಡಿಸಬೇಕು. ವಾಹನ ವಿಮೆಯನ್ನು ಕಾಲಕಾಲಕ್ಕೆ ನವೀಕರಿಸಿಕೊಳ್ಳಬೇಕು. ಮಾದಕ ವಸ್ತುಗಳ ಸಾಗಣೆ ಕುರಿತು ಮಾಹಿತಿ ದೊರೆತರೆ ತಕ್ಷಣವೇ ಪೊಲೀಸರಿಗೆ ತಿಳಿಸಿ ಸಮಾಜದ ಸುರಕ್ಷತೆಗೆ ಸಹಕರಿಸುವಂತೆ ಮನವಿ ಮಾಡಿದರು.

ರ್ಯಾಪಿಡೋ ಸೇವೆ ಸ್ಥಗಿತಕ್ಕೆ ಆಟೋ ಚಾಲಕರ ಒತ್ತಾಯ

ಸಭೆಯಲ್ಲಿ ಆಟೋ ಚಾಲಕರ ಸಂಘದ ಪ್ರತಿನಿಧಿಗಳು, ಸರ್ಕಾರದ ಸ್ಪಷ್ಟ ಮಾರ್ಗಸೂಚಿ ಹೊರಬರುವವರೆಗೆ ಶಿವಮೊಗ್ಗದಲ್ಲಿ ರ್ಯಾಪಿಡೋ ದ್ವಿಚಕ್ರ ವಾಹನ ಸೇವೆ ಆರಂಭಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.

ರ್ಯಾಪಿಡೋ ಚಾಲಕರಲ್ಲಿ ಹಲವರು ಅಗತ್ಯ ಪರವಾನಗಿ ಹೊಂದಿಲ್ಲ ಎಂಬ ಆರೋಪ ಮಾಡಿ, ಇದರಿಂದ ಅಪಘಾತಗಳ ಸಂಭವ ಹೆಚ್ಚುವ ಸಾಧ್ಯತೆ ಇದೆ. ಜೊತೆಗೆ ಸಾವಿರಾರು ಆಟೋ ಚಾಲಕರ ಜೀವನೋಪಾಯಕ್ಕೂ ಧಕ್ಕೆ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಆಟೋ ದರ ಏರಿಕೆ ಸೇರಿದಂತೆ ಹಲವು ಬೇಡಿಕೆಗಳು

ಆಟೋ ಚಾಲಕರು ಕನಿಷ್ಠ ಪ್ರಯಾಣ ದರವನ್ನು ₹40ರಿಂದ ₹50ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಜೊತೆಗೆ,

  • ಆಟೋ ಸಂಚಾರ ಪರವಾನಗಿಯ ವ್ಯಾಪ್ತಿಯನ್ನು 10 ಕಿ.ಮೀ.ಯಿಂದ 20 ಕಿ.ಮೀ.ಗೆ ವಿಸ್ತರಿಸುವುದು,
  • ಬಸ್ ನಿಲ್ದಾಣಗಳ ಬಳಿ ಪ್ರಯಾಣಿಕರನ್ನು ಇಳಿಸುವ ವೇಳೆ ದಂಡದಿಂದ ವಿನಾಯಿತಿ,
  • ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭಗಳಲ್ಲಿ ಮಾನವೀಯ ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಡಿಲಿಕೆ,
  • ರೈಲು ವಿಳಂಬವಾದಾಗ ರೈಲ್ವೆ ನಿಲ್ದಾಣದಲ್ಲಿ ಆಟೋ ನಿಲುಗಡೆಗೆ ಹೆಚ್ಚಿನ ಸಮಯಾವಕಾಶ ನೀಡುವುದು

ಸೇರಿದಂತೆ ಹಲವು ಬೇಡಿಕೆಗಳನ್ನು ಜಿಲ್ಲಾಡಳಿತದ ಮುಂದಿಟ್ಟರು.

ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಆಟೋಗಳಿಗೆ ಹೊಡೆತ

ಆಟೋ ಚಾಲಕರ ಸಂಘದ ಕಾರ್ಯದರ್ಶಿ ಅಕ್ರಮ್ ಪಾಶಾ ಮಾತನಾಡಿ, ನಗರ ಸಾರಿಗೆ ಬಸ್‌ಗಳು ನಿಗದಿತ ಸ್ಥಳ ಬಿಟ್ಟು ಎಲ್ಲೆಂದರಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದರಿಂದ ಆಟೋ ಚಾಲಕರಿಗೆ ನಷ್ಟವಾಗುತ್ತಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಉಪಸ್ಥಿತಿ

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಶಿರೋಳಕರ್, ರಾಜ್ಯ ರಸ್ತೆ ಸಾರಿಗೆ ನಿಗಮದ ನಿಯಂತ್ರಣಾಧಿಕಾರಿ ದಿನೇಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಅಲ್ಲಾಭಕ್ಷ, ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Stop buses only at designated bus stops: District Collector Prabhulinga Kavalikatti instructs

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close