ಶಿವಮೊಗ್ಗದಲ್ಲಿ ಅಕ್ರಮ ಗಾಂಜಾ ಮಾರಾಟದ ಮೇಲೆ ಪೊಲೀಸರ ದಾಳಿ – 1.312 ಕೆ.ಜಿ. ಹಸಿ ಗಾಂಜಾ ವಶ, ಆರೋಪಿ ಬಂಧನ-Police raid illegal cannabis sale in Shivamogga – 1.312 kg of raw cannabis seized, accused arrested

 SUDDILIVE || SHIVAMOGGA

ಶಿವಮೊಗ್ಗದಲ್ಲಿ ಅಕ್ರಮ ಗಾಂಜಾ ಮಾರಾಟದ ಮೇಲೆ ಪೊಲೀಸ್ ದಾಳಿ – 1.312 ಕೆ.ಜಿ. ಹಸಿ ಗಾಂಜಾ ವಶ, ಆರೋಪಿ ಬಂಧನ-Police raid illegal cannabis sale in Shivamogga – 1.312 kg of raw cannabis seized, accused arrested  





ಶಿವಮೊಗ್ಗ: ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ 1 ಕೆ.ಜಿ. 312 ಗ್ರಾಂ ತೂಕದ ಹಸಿ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.

ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ, ಶಿವಮೊಗ್ಗ ತಾಲೂಕಿನ ಗೊಂದಿ ಚಟ್ನಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ರಸ್ತೆಯಲ್ಲಿರುವ ಮನೆಯಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಕಾನೂನುಬದ್ಧವಾಗಿ ಶೋಧನಾ ವಾರಂಟ್ ಪಡೆದು ಪಿಐ ರಾಘವೇಂದ್ರ ಕಾಂಡಿಕೆ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. 

ದಾಳಿ ವೇಳೆ ಮನೆಯಲ್ಲಿದ್ದ ಜಿ.ಸಿ. ಪರಮೇಶ್ (34) ಎಂಬಾತ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದರೂ ಸಿಬ್ಬಂದಿ ಬೆನ್ನಟ್ಟಿ ಹಿಡಿದಿದ್ದಾರೆ. ಬಳಿಕ ನ್ಯಾಯಾಲಯದ ವಾರಂಟ್ ತೋರಿಸಿ ಮನೆಯ ಶೋಧ ನಡೆಸಲಾಯಿತು.

ಶೋಧದ ವೇಳೆ ಮನೆಯ ಹಾಲ್‌ನ ಒಂದು ಮೂಲೆಯಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಹಸಿ ಗಾಂಜಾ ಪತ್ತೆಯಾಯಿತು. ವಿಚಾರಣೆ ವೇಳೆ, ಮನೆಯ ಹಿತ್ತಲಿನಲ್ಲಿ ಗಾಂಜಾ ಗಿಡ ಬೆಳೆಸಿ, ಅದನ್ನು ಕಿತ್ತು ಒಣಗಿಸಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿದ್ದಾಗಿ ಆರೋಪಿ ಪೊಲೀಸರ ಮುಂದೆ ಒಪ್ಪಿಕೊಂಡಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ನಂತರ ಎಸ್‌ಒಸಿಒ ಅಧಿಕಾರಿಗಳ ಸಮ್ಮುಖದಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ತೂಕ ಮಾಡಲಾಗಿದ್ದು, ಪ್ಯಾಕಿಂಗ್ ಸೇರಿ ಒಟ್ಟು 1 ಕೆ.ಜಿ. 312 ಗ್ರಾಂ ತೂಕ ಕಂಡುಬಂದಿದೆ. ವಶಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ ₹62,000 ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬ ಆರೋಪದ ಮೇರೆಗೆ ಗಾಂಜಾವನ್ನು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಬಳಿಕ ಎನ್‌ಡಿಪಿಎಸ್ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Police raid illegal cannabis sale in Shivamogga – 1.312 kg of raw cannabis seized, accused arrested  


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close