ನಾಯಿ ಕಚ್ಚಿದ ಪರಿಣಾಮ ಎರಡು ವರ್ಷದ ಮಗು ಸಾವು: ಚಿಕಿತ್ಸೆ ಫಲಕಾರಿಯಾಗದೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರು- Two-year-old child dies after being bitten by a dog: Treatment failed, he died at Meggan Hospital

SUDDILIVE || SHIVAMOGGA

ನಾಯಿ ಕಚ್ಚಿದ ಪರಿಣಾಮ ಎರಡು ವರ್ಷದ ಮಗು ಸಾವು: ಚಿಕಿತ್ಸೆ ಫಲಕಾರಿಯಾಗದೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರು- Two-year-old child dies after being bitten by a dog: Treatment failed, he died at Meggan Hospital  
Dog, bite

ಶಿವಮೊಗ್ಗ/ಸೊರಬ: ನಾಯಿ ಕಚ್ಚಿದ ಪರಿಣಾಮ ಉಂಟಾದ ಗಂಭೀರ ಆರೋಗ್ಯ ಸಮಸ್ಯೆಯಿಂದ ಎರಡು ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ದುರ್ಘಟನೆ ಬೆಳಕಿಗೆ ಬಂದಿದೆ. ಘಟನೆಯು ಸೊರಬ ತಾಲೂಕಿನ ಆಂಡಿಗಿರಿ ಗ್ರಾಮದಲ್ಲಿ ನಡೆದಿದ್ದು, ಮಗುವಿನ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮಡುಗಟ್ಟಿದೆ.

ಮೃತ ಮಗುವನ್ನು ಕಲಂದರ್ (2) ಎಂದು ಗುರುತಿಸಲಾಗಿದೆ. ಈತ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಹೋಬಳಿಯ ಉಡುಗಣಿ ಗ್ರಾಮದ ನಿವಾಸಿ ಸಾಧಿಕ್ ಅವರ ಪುತ್ರನಾಗಿದ್ದ ಖಲಂದರ್  ತಾಯಿ ಮನೆಯಾದ ಸೊರಬ ತಾಲೂಕಿನ ಅಂಡಿಗೆ ಗ್ರಾಮಕ್ಕೆ ತೆರಳಿದ್ದರು.

ಮಾಹಿತಿಯ ಪ್ರಕಾರ, ಜೂನ್ 18, 2026ರಂದು ಅಂಡಿಗೆ ಗ್ರಾಮದಲ್ಲಿ ರಸ್ತೆ ಸಮೀಪ ಆಟವಾಡುತ್ತಿದ್ದ ಮಗುವಿನ ಮೇಲೆ ನಾಯಿ ದಾಳಿ ನಡೆಸಿ ಮುಖ ಭಾಗಕ್ಕೆ ಕಚ್ಚಿತ್ತು. ನಾಯಿ ಬೀದಿ ನಾಯಿಯೋ ಅಥವಾ ಸಾಕು ನಾಯಿಯೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಅದು ಹುಚ್ಚುನಾಯಿ (ರೇಬೀಸ್ ಸೋಂಕಿತ) ಆಗಿರುವ ಸಾಧ್ಯತೆಯನ್ನು ನಿರಾಕರಿಸಲಾಗುತ್ತಿಲ್ಲ ಎಂದು ತಿಳಿದುಬಂದಿದೆ.

ಘಟನೆಯ ಬಳಿಕ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಅಗತ್ಯ ಚಿಕಿತ್ಸೆ ನೀಡಿ ಆರೋಗ್ಯದಲ್ಲಿ ಸುಧಾರಣೆ ಕಂಡ ಹಿನ್ನೆಲೆಯಲ್ಲಿ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿತ್ತು.

ಆದರೆ ಸುಮಾರು ಒಂದೂವರೆ ತಿಂಗಳ ಬಳಿಕ ಮಗುವಿನ ಆರೋಗ್ಯದಲ್ಲಿ ಮತ್ತೆ ತೀವ್ರ ಏರುಪೇರಾಗಿದ್ದು, ರೇಬೀಸ್‌ಗೆ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪುನಃ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಆರು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಜುಲೈ 31ರಂದು ಮಧ್ಯಾಹ್ನ ಸುಮಾರು 1.40 ಗಂಟೆಗೆ ಮಗು ಮೃತಪಟ್ಟಿದೆ.

ಮೃತದೇಹವನ್ನು ಕುಟುಂಬದವರು ರಾತ್ರಿ ಸ್ವೀಕರಿಸಿದ್ದು, ನಂತರ ವೈದ್ಯಕೀಯ ಕಾನೂನು ಪ್ರಕ್ರಿಯೆಯಂತೆ ಶವಪರೀಕ್ಷೆ ನಡೆಸಲಾಗಿದೆ. ರೇಬೀಸ್ ಸೋಂಕಿನ ದೃಢೀಕರಣಕ್ಕಾಗಿ ಅಗತ್ಯ ಮಾದರಿಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಲ್ ಹಾಗೂ ನಿಮ್ಹಾನ್ಸ್‌ಗೆ ಕಳುಹಿಸುವ ಪ್ರಕ್ರಿಯೆಯೂ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಈ ಘಟನೆ ಗ್ರಾಮೀಣ ಪ್ರದೇಶಗಳಲ್ಲಿ ನಾಯಿ ಕಚ್ಚಿದ ತಕ್ಷಣ ಸಂಪೂರ್ಣ ರೇಬೀಸ್ ತಡೆ ಚಿಕಿತ್ಸೆಯನ್ನು ಪಡೆಯುವ ಅಗತ್ಯತೆಯನ್ನು ಮತ್ತೊಮ್ಮೆ ನೆನಪಿಸಿದೆ. ನಾಯಿ ಕಚ್ಚಿದ ಪ್ರತಿಯೊಂದು ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಸಲಹೆ ನೀಡಿದೆ.

ಈ ದುರಂತದಿಂದ ಮಗುವಿನ ಕುಟುಂಬ ದುಃಖದ ಸಾಗರದಲ್ಲಿ ಮುಳುಗಿದ್ದು, ಗ್ರಾಮದಲ್ಲೂ ಶೋಕದ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯರು ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Two-year-old child dies after being bitten by a dog: Treatment failed, he died at Meggan Hospital

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close