SUDDILIVE || SHIVAMOGGA
ಭದ್ರಾವತಿಯ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ₹25 ಲಕ್ಷ ವೆಚ್ಚದ ಓಪನ್ ಜಿಮ್ ನಾಳೆ ಲೋಕಾರ್ಪಣೆ-Open gym at Mahatma Gandhi Park in Bhadravati to be inaugurated tomorrow
ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (VISL) ನ್ಯೂಟೌನ್‌ನ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ವತಿಯಿಂದ ಸುಮಾರು ₹25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಆಧುನಿಕ ಓಪನ್ ಜಿಮ್ ಅನ್ನು ಆಗಸ್ಟ್ 2ರಂದು (ಭಾನುವಾರ) ಸಂಜೆ 4 ಗಂಟೆಗೆ ಶಾಸಕ ಬಿ.ಕೆ. ಸಂಗಮೇಶ್ವರ್ ಉದ್ಘಾಟಿಸಲಿದ್ದಾರೆ.
ನಗರದ ಸಾರ್ವಜನಿಕರು, ಹಿರಿಯ ನಾಗರಿಕರು, ಯುವಜನರು ಹಾಗೂ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರಿಗೆ ಅನುಕೂಲವಾಗುವಂತೆ ಉದ್ಯಾನವನದಲ್ಲಿ ವಿವಿಧ ರೀತಿಯ ಹೊರಾಂಗಣ ವ್ಯಾಯಾಮ ಉಪಕರಣಗಳನ್ನು ಅಳವಡಿಸಲಾಗಿದ್ದು, ಪ್ರತಿದಿನ ಉಚಿತವಾಗಿ ವ್ಯಾಯಾಮ ಮಾಡುವ ಅವಕಾಶ ಕಲ್ಪಿಸಲಾಗಿದೆ. ಈ ಓಪನ್ ಜಿಮ್‌ನಿಂದ ನ್ಯೂಟೌನ್ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ಉತ್ತಮ ಆರೋಗ್ಯಕರ ವಾತಾವರಣ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಈ ಯೋಜನೆಗೆ ಹಿಂದಿನ ಅವಧಿಯಲ್ಲಿ ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಸದಸ್ಯರಾಗಿದ್ದ ಕಾಂಗ್ರೆಸ್ ಮುಖಂಡ ಎಚ್. ರವಿಕುಮಾರ್ ಅವರು ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ಪರಿಗಣಿಸಿ ಸೂಡಾ ವತಿಯಿಂದ ಸುಮಾರು ₹25 ಲಕ್ಷ ಅನುದಾನ ಮಂಜೂರು ಮಾಡಲಾಗಿತ್ತು. ಕಾಮಗಾರಿ ಕೆಲವು ತಿಂಗಳ ಹಿಂದೆಯೇ ಪೂರ್ಣಗೊಂಡಿದ್ದು, ಇದೀಗ ಸಾರ್ವಜನಿಕ ಬಳಕೆಗೆ ಅಧಿಕೃತವಾಗಿ ಲೋಕಾರ್ಪಣೆಗೊಳ್ಳುತ್ತಿದೆ.
ಉದ್ಘಾಟನಾ ಸಮಾರಂಭದಲ್ಲಿ ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್. ಸುಂದರೇಶ್, ನಗರಸಭೆಯ ಹಿರಿಯ ಸದಸ್ಯ ಬಿ.ಕೆ. ಮೋಹನ್, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಬಿ.ಎಸ್. ಗಣೇಶ್, ಯುವ ಮುಖಂಡ ಬಿ.ಎಸ್. ಬಸವೇಶ್, ಸೂಡಾ ಮಾಜಿ ಸದಸ್ಯ ಎಚ್. ರವಿಕುಮಾರ್ ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಓಪನ್ ಜಿಮ್ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

