SUDDILIVE || SHIVAMOGGA
ಸಾಗರದಲ್ಲಿ ಬೀದಿ ನಾಯಿಗಳ ದಾಳಿ: 6 ಕುರಿಗಳು ಸಾವು, ಸಾರ್ವಜನಿಕರಲ್ಲಿ ಆತಂಕ-Stray dog attack in Sagara: 6 sheep killed; public alarmed
ಸಾಗರ: ನಗರದ ನೆಹರೂ ನಗರದಲ್ಲಿ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿ, ಜೀವನೋಪಾಯಕ್ಕಾಗಿ ಸಾಕಿದ್ದ ಆರು ಕುರಿಗಳನ್ನು ಕೊಂದು ಹಾಕಿರುವ ದಾರುಣ ಘಟನೆ ನಡೆದಿದೆ.
ನೆಹರೂ ನಗರದ ನಿವಾಸಿ ಮನ್ಸೂರ್ ಅಲಿ ಖಾನ್ ಅವರಿಗೆ ಸೇರಿದ ಕುರಿಗಳ ಮೇಲೆ ತಡರಾತ್ರಿ ಬೀದಿ ನಾಯಿಗಳು ದಾಳಿ ನಡೆಸಿವೆ ಎನ್ನಲಾಗಿದೆ. ಬೆಳಗ್ಗೆ ಕುರಿಗಳಿಗೆ ಮೇವು ಹಾಕಲು ತೆರಳಿದಾಗ ಆರು ಕುರಿಗಳು ರಕ್ತದ ಮಡುವಿನಲ್ಲಿ ಮೃತಪಟ್ಟಿರುವುದು ಕಂಡುಬಂದಿದ್ದು, ಮಾಲೀಕರು ಕಣ್ಣೀರಿಟ್ಟಿದ್ದಾರೆ.
ನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ದ್ವಿಚಕ್ರ ವಾಹನ ಸವಾರರ ಮೇಲೆ ಬೀದಿ ನಾಯಿಗಳು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಮೂಕ ಪ್ರಾಣಿಗಳ ಮೇಲೆಯೇ ಈ ರೀತಿಯ ದಾಳಿ ನಡೆದಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ (ABC) ಸೇರಿದಂತೆ ಅಗತ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಲ್ಲಿ ನಗರಸಭೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನಾಯಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ನಗರಸಭೆ ಎದುರು ಉಗ್ರ ಹೋರಾಟ ನಡೆಸುವುದಾಗಿ ಮುಖಂಡ ದನೀಶ್ ಪಟನ್ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ಹಾಗೂ ಸಾಕುಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ನಗರಸಭೆ ಕೂಡಲೇ ಬೀದಿ ನಾಯಿಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.
