SUDDILIVE || SAGARA
ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ-MLA Belur Gopalakrishna visits rain-affected areas
ಸಾಗರ ನಗರದ ವಿವಿಧ ಪ್ರದೇಶಗಳಲ್ಲಿ ಸ್ಥಳ ಪರಿಶೀಲನೆ; ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಚೆಕ್ ವಿತರಣೆ
ಸಾಗರ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಸಾಗರ ನಗರದ ವಿವಿಧ ಪ್ರದೇಶಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಮನೆ ಕುಸಿತ ಸೇರಿದಂತೆ ಮಳೆಯಿಂದ ಸಂಕಷ್ಟಕ್ಕೀಡಾದ ಕುಟುಂಬಗಳ ಸಮಸ್ಯೆಗಳನ್ನು ಆಲಿಸಿ, ಸಂತ್ರಸ್ತರಿಗೆ ಧೈರ್ಯ ತುಂಬಿದರು.
ಮಳೆಯಿಂದ ಮನೆ ಕಳೆದುಕೊಂಡ ಬಡ ಕುಟುಂಬಗಳಿಗೆ ಸರ್ಕಾರದಿಂದ ಮಂಜೂರಾದ ಪರಿಹಾರದ ಚೆಕ್‌ಗಳನ್ನು ಶಾಸಕರು ವಿತರಿಸಿದರು. ಸಂಪೂರ್ಣವಾಗಿ ಮನೆ ಹಾನಿಗೊಳಗಾದ ಕುಟುಂಬಗಳಿಗೆ ₹1 ಲಕ್ಷ ಹಾಗೂ ಭಾಗಶಃ ಮನೆ ಹಾನಿಯಾಗಿರುವ ಪ್ರಕರಣಗಳಲ್ಲಿ ಹಾನಿಯ ಅಂದಾಜು ಮೊತ್ತಕ್ಕೆ ಅನುಗುಣವಾಗಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆಹಾನಿಯ ಪ್ರಮಾಣ ಕಡಿಮೆಯಾಗಿದೆ. ಆದರೂ ಕೆಲವು ಕುಟುಂಬಗಳು ಮನೆ ಕಳೆದುಕೊಂಡು ಸಂಕಷ್ಟದಲ್ಲಿದ್ದು, ಅಂತಹ ಕುಟುಂಬಗಳಿಗೆ ತಾಲೂಕು ಆಡಳಿತದ ಮೂಲಕ ತಕ್ಷಣದ ಸ್ಪಂದನೆ ಹಾಗೂ ಅಗತ್ಯ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮನೆ ಕುಸಿದು ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳೊಂದಿಗೆ ಮಾತನಾಡಿದ ಶಾಸಕರು, ಅವರ ಸಮಸ್ಯೆಗಳನ್ನು ಆಲಿಸಿ ಸಾಂತ್ವನ ಹೇಳಿದರು. ಸರ್ಕಾರದ ಪರಿಹಾರದ ಜೊತೆಗೆ ತಮ್ಮ ವೈಯಕ್ತಿಕವಾಗಿಯೂ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಿದರು.
ಹಬ್ಬದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ತಡವಾಗದಂತೆ ತ್ವರಿತವಾಗಿ ತಲುಪಿಸಲು ತಾಲೂಕು ಆಡಳಿತದೊಂದಿಗೆ ಸಮನ್ವಯ ಸಾಧಿಸಲಾಗುವುದು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಭರವಸೆ ನೀಡಿದರು.
ಮಳೆಹಾನಿಗೊಳಗಾದ ಪ್ರದೇಶಗಳಲ್ಲಿ ಅಗತ್ಯ ಕಾಮಗಾರಿಗಳು ಹಾಗೂ ಪರಿಹಾರ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ತಾಲೂಕು ಆಡಳಿತದ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
