SUDDILIVE || SHIVAMOGGA
ಆಯನೂರು ಮಂಜುನಾಥ್ ಅಧ್ಯಕ್ಷತೆಯಲ್ಲಿ ‘ಬಿ.ಎಸ್. ಯಡಿಯೂರಪ್ಪ ವಿದ್ಯಾರ್ಥಿನಿಲಯ’ ಉದ್ಘಾಟನೆ: 204 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ-'B.S. Yediyurappa Hostel' inaugurated under the chairmanship of Ayanur Manjunath: Accommodation for 204 students
ಶಿವಮೊಗ್ಗ: ನಗರ ಡಿವಿಷನ್ ವೀರಶೈವ ಲಿಂಗಾಯತ ಹಾಸ್ಟೆಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ ನೂತನ ವಿದ್ಯಾರ್ಥಿನಿಲಯ ಕಟ್ಟಡದ ಉದ್ಘಾಟನಾ ಸಮಾರಂಭ ಆಗಸ್ಟ್ 16ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಈಕುರಿತು ಸುದ್ದಿಗೋಷ್ಠಿ ನಡೆಸಿದ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಸುಸಜ್ಜಿತವಾಗಿ ನಿರ್ಮಿಸಲಾಗಿರುವ ಈ ಭವ್ಯ ಕಟ್ಟಡಕ್ಕೆ ಸರ್ವರ ಒಮ್ಮತದೊಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿದ್ಯಾರ್ಥಿನಿಲಯ ಎಂದು ನಾಮಕರಣ ಮಾಡಲಾಗಿದೆ. ಸಮಾಜ ಹಾಗೂ ಕರ್ನಾಟಕದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಯಡಿಯೂರಪ್ಪ ಅವರ ಹೆಸರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಹೆಸರಿಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಯಿತು.
ವಿದ್ಯಾರ್ಥಿನಿಲಯವು ವಿಶಾಲವಾದ ಕಟ್ಟಡವಾಗಿದ್ದು, ಮೂರು ಅಂತಸ್ತುಗಳಲ್ಲಿ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳ ವಸತಿ, ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಅಗತ್ಯವಾದ ವಿವಿಧ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ. ಕಚೇರಿ ಕೊಠಡಿ, ಡಿಜಿಟಲ್ ಲೈಬ್ರರಿ, ವಾರ್ಡನ್ ಕೊಠಡಿ, ಸಿಬ್ಬಂದಿ ಕೊಠಡಿ, ಅಡುಗೆಮನೆ, ಊಟದ ಹಾಲ್, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಒಂದೇ ಬಾರಿಗೆ 112 ವಿದ್ಯಾರ್ಥಿಗಳು ಊಟ ಮಾಡಲು ಸಾಧ್ಯವಾಗುವ ವ್ಯವಸ್ಥೆ ಇದೆ ಎಂದರು.
ಒಟ್ಟು 62 ಕೊಠಡಿಗಳಲ್ಲಿ 204 ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿನಿಲಯ ಹೊಂದಿದೆ. ಈ ಹಿಂದೆ ಸುಮಾರು 100 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ನೂತನ ಕಟ್ಟಡದಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಹಾಗೂ ಆಧುನಿಕ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶವನ್ನು ಟ್ರಸ್ಟ್ ಹೊಂದಿದೆ ಎಂದು ತಿಳಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಆಯನೂರು ಮಂಜುನಾಥ್ ಮಾತನಾಡಿ, ಸೆಪ್ಟೆಂಬರ್ ನಂತರ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುವುದು. ಉದ್ಘಾಟನೆಯ ಬಳಿಕ ವಿದ್ಯಾರ್ಥಿಗಳ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿನಿಯರಿಗೆ ಇಲ್ಲಿ ವಸತಿ ಅವಕಾಶವಿಲ್ಲ. ಅವರಿಗಾಗಿ ಸಿರಿಗೆರೆ ಮಠದ ವತಿಯಿಂದ ಪ್ರತ್ಯೇಕ ವ್ಯವಸ್ಥೆ ಇದೆ ಎಂದು ಆಯನೂರು ಮಂಜುನಾಥ್ ಸ್ಪಷ್ಟಪಡಿಸಿದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಯನೂರು ಮಂಜುನಾಥ್ ವಹಿಸಲಿದ್ದು, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಎಸ್.ಎಸ್. ಜ್ಯೋತಿಪ್ರಕಾಶ್, ಬಿ.ವೈ. ವಿಜಯೇಂದ್ರ, ಜಿ.ಎಸ್. ರಾಜೇಶ್, ಎಸ್. ರುದ್ರೇಗೌಡ, ಎಂ.ಟಿ. ಕುಮಾರಸ್ವಾಮಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಟ್ರಸ್ಟ್‌ನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷ ಆಯನೂರು ಮಂಜುನಾಥ್, ಕಟ್ಟಡ ಸಮಿತಿ ಅಧ್ಯಕ್ಷ ಎಸ್. ರುದ್ರೇಗೌಡ, ಗೌರವ ಕಾರ್ಯದರ್ಶಿ ಪಿ. ರುದ್ರೇಶ್ ಹಾಗೂ ಖಜಾಂಚಿ ಎಸ್.ಎಂ. ಓಂಕಾರಮೂರ್ತಿ ಇದ್ದಾರೆ. ಬಿ.ವೈ. ರಾಘವೇಂದ್ರ, ಎಂ. ಹಾಲಪ್ಪ, ಡಿ.ಎಸ್. ಚಂದ್ರಶೇಖರ್, ಕೆ.ವಿ. ನಾಲಿಂಗಪ್ಪ, ಎಸ್.ಎಸ್. ಜ್ಯೋತಿಪ್ರಕಾಶ್, ಕೆ. ಬಸವರಾಜ್ ಗೌಡ, ಮಂಜುನಾಥ್ ಶೆಟ್ಟಿ, ಕೆ.ಆರ್. ಪ್ರಕಾಶ್, ಹೆಚ್.ಎಂ. ಮಹೇಶ್ವರಪ್ಪ ಹಾಗೂ ಜೆ. ವೀರಪಾಕ್ಷಪ್ಪ ಸೇರಿದಂತೆ ಹಲವು ಮಂದಿ ಟ್ರಸ್ಟಿಗಳಾಗಿದ್ದಾರೆ.
ಟ್ರಸ್ಟ್‌ನ ಸುಮಾರು 85 ಸದಸ್ಯರ ಸೇವೆ, ಸಹಕಾರ ಮತ್ತು ಪರಿಶ್ರಮದ ಫಲವಾಗಿ ನೂತನ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಗೊಂಡಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಇದು ಉತ್ತಮ ವೇದಿಕೆಯಾಗಲಿದೆ ಎಂದು ತಿಳಿಸಲಾಯಿತು.
ಉದ್ಘಾಟನೆ: 16-08-2026, ಭಾನುವಾರ
ಸಮಯ: ಬೆಳಿಗ್ಗೆ 11 ಗಂಟೆ
ಸ್ಥಳ: ಬಿ.ಎಸ್. ಯಡಿಯೂರಪ್ಪ ವಿದ್ಯಾರ್ಥಿನಿಲಯ,(NDV ಹಾಸ್ಟೆಲ್) ಶಿವಮೊಗ್ಗ

