ಈದ್ ಮೆರವಣಿಗೆಯಲ್ಲಿ ಡಿಜೆ ಬಳಕೆ ಬಿತ್ತು ಕೇಸ್! Case registered over use of DJ at Eid procession!

 SUDDILIVE || SHIVAMOGGA

ಈದ್ ಮೆರವಣಿಗೆಯಲ್ಲಿ ಡಿಜೆ ಬಳಕೆ ಬಿತ್ತು ಕೇಸ್!  Case registered over use of DJ at Eid procession!   

Eid, DJ
ಸಾಂದರ್ಭಿಕ ಚಿತ್ರ


ಶಿವಮೊಗ್ಗ:
ಈದ್ ಮಿಲಾದ್ ಹಬ್ಬದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶ ಹಾಗೂ ನಿಗದಿತ ಶಬ್ದಮಿತಿಯನ್ನು ಉಲ್ಲಂಘಿಸಿ ಡಿಜೆ ಸೌಂಡ್ ಬಾಕ್ಸ್ ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ನಗರದಲ್ಲಿ ಎರಡು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಒಂದು ಪ್ರಕರಣವನ್ನು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಹಾಗೂ ಮತ್ತೊಂದು ಪ್ರಕರಣವನ್ನು ಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಎರಡೂ ಪ್ರಕರಣಗಳಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 109, 36 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 292ರ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದು ಎಫ್‌ಐಆರ್‌ಗಳಿಂದ ತಿಳಿದುಬಂದಿದೆ.

ತುಂಗಾನಗರ ಠಾಣೆ: ಸೌಂಡ್ ಬಾಕ್ಸ್ ಬಳಸಿ ಶಬ್ದ ಮಾಲಿನ್ಯ ಆರೋಪ

ತುಂಗಾನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 564/2026ರಂತೆ ಪ್ರಕರಣ ದಾಖಲಾಗಿದೆ. 2026ರ ಆಗಸ್ಟ್ 28ರಂದು ಎಫ್‌ಐಆರ್ ದಾಖಲಿಸಲಾಗಿದ್ದು, ಘಟನೆ ಆಗಸ್ಟ್ 26ರಂದು ಮಧ್ಯಾಹ್ನ ಸುಮಾರು 2.30ರಿಂದ 3 ಗಂಟೆಯ ಅವಧಿಯಲ್ಲಿ ಸೂಳೆಬೈಲು ರಸ್ತೆಯಲ್ಲಿ ನಡೆದಿದೆ ಎಂದು ದಾಖಲಾಗಿದೆ.

ಎಫ್‌ಐಆರ್ ಪ್ರಕಾರ, ಈದ್ ಮಿಲಾದ್ ಹಬ್ಬದ ಮೆರವಣಿಗೆಗೆ ಸೂಳೆಬೈಲು ಪ್ರದೇಶದಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮೆರವಣಿಗೆಯ ಅಧ್ಯಕ್ಷತೆ ವಹಿಸಿದ್ದ ಸಾದಿಕ್ ಪಾಷಾ @ ಜೋಹಾರ್, ಡಿಜೆ ಮಾಲೀಕ ಆಂಜಿನೇಯ ಹಾಗೂ KA-17 TD-7420 ನೋಂದಣಿ ಸಂಖ್ಯೆಯ ಟ್ರ್ಯಾಕ್ಟರ್ ಚಾಲಕ ದಾದಾಪೀರ್ @ ಹಬೀಬ್ ಸೇರಿದಂತೆ ಇತರರು ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಡಿಜೆ ಬಾಕ್ಸ್‌ಗಳು ಮತ್ತು ಲೇಸರ್ ಲೈಟ್‌ಗಳನ್ನು ಅಳವಡಿಸಿಕೊಂಡು ಮೆರವಣಿಗೆಯಲ್ಲಿ ಸಾಗಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪೊಲೀಸರ ಪ್ರಕಾರ, ಜಿಲ್ಲಾಧಿಕಾರಿಗಳು ಡಿಜೆ ಬಳಕೆಗೆ ನಿಷೇಧಾಜ್ಞೆ ಹೊರಡಿಸಿದ್ದರೂ, ಡಿಜೆ ನಿಲ್ಲಿಸುವಂತೆ ಹಲವು ಬಾರಿ ಸೂಚನೆ ನೀಡಿದರೂ ಆರೋಪಿಗಳು ಸೂಚನೆಯನ್ನು ಪಾಲಿಸದೆ ಹೆಚ್ಚಿನ ಪ್ರಮಾಣದಲ್ಲಿ ಶಬ್ದ ಉಂಟುಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಮೆರವಣಿಗೆಯ ಸಂದರ್ಭದಲ್ಲಿ ಡಿಜೆ ಸೌಂಡ್ ಬಾಕ್ಸ್ ಬಳಕೆ ಮಾಡುತ್ತಿರುವ ದೃಶ್ಯಗಳನ್ನು ಪೊಲೀಸ್ ಸಿಬ್ಬಂದಿಯೊಬ್ಬರು ಮೊಬೈಲ್‌ನಲ್ಲಿ ವಿಡಿಯೋ ದಾಖಲಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದರ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗಿದೆ ಹಾಗೂ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕೋಟೆ ಠಾಣೆ: ನಿಗದಿತ ಶಬ್ದಮಿತಿಗಿಂತ ಹೆಚ್ಚಿನ ಧ್ವನಿ, ದ್ವೇಷಪೂರಿತ ಹಾಡು ಆರೋಪ

ಇದೇ ವೇಳೆ, ಕೋಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 173/2026ರಂತೆ ಮತ್ತೊಂದು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಈ ಪ್ರಕರಣವು ಆಗಸ್ಟ್ 27ರಂದು ದಾಖಲಾಗಿದ್ದು, ಘಟನೆ ಸಹ್ಯಾದ್ರಿ ಕಾಲೇಜಿನ ಹಿಂಭಾಗದ ದರ್ಗಾ, ಮತ್ತೂರು ಕ್ರಾಸ್ ರಸ್ತೆ ಪ್ರದೇಶದಲ್ಲಿ ನಡೆದಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಕರಣದಲ್ಲಿ ಬಸೀದ್, ಜಮೀರ್, ಇಜಾಜ್ ಹಾಗೂ ಡಿಜೆ ಸೌಂಡ್ ಬಾಕ್ಸ್ ಮಾಲೀಕ ರಮೇಶ್ ಅವರನ್ನು ಆರೋಪಿಗಳೆಂದು ನಮೂದಿಸಲಾಗಿದೆ.

ಎಫ್‌ಐಆರ್‌ನಲ್ಲಿರುವ ವಿವರಗಳ ಪ್ರಕಾರ, ಈದ್ ಮಿಲಾದ್ ಹಬ್ಬದ ಮೆರವಣಿಗೆ ಮಧ್ಯಾಹ್ನ ಸುಮಾರು 3 ಗಂಟೆಯಿಂದ ರಾತ್ರಿ 9.30ರವರೆಗೆ ನಡೆದಿದ್ದು, ಮೆರವಣಿಗೆಯ ಆಯೋಜಕರು ಹಾಗೂ ಸೌಂಡ್ ಬಾಕ್ಸ್ ಮಾಲೀಕ ರಮೇಶ್ ಅವರು ಯಾವುದೇ ಅನುಮತಿ ಪಡೆಯದೆ ವಾಹನಗಳಲ್ಲಿ ಡಿಜೆ ಸೌಂಡ್ ಬಾಕ್ಸ್ ಹಾಗೂ ಜನರೇಟರ್ ಅಳವಡಿಸಿಕೊಂಡು ಮೆರವಣಿಗೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ನಿಗದಿಪಡಿಸಿದ ಶಬ್ದಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೌಂಡ್ ಬಾಕ್ಸ್‌ಗಳನ್ನು ಬಳಸಲಾಗಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಲಾಗಿದೆ ಎಂದು ಪೊಲೀಸರು ದಾಖಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ. ಇದರ ಜೊತೆಗೆ, ದೇಶದ ಬಾಂಧವ್ಯಕ್ಕೆ ಧಕ್ಕೆ ಉಂಟಾಗುವ ರೀತಿಯಲ್ಲಿ ದ್ವೇಷಪೂರಿತ ಹಾಡುಗಳನ್ನು ಪ್ರಸಾರ ಮಾಡಲಾಗಿದೆ ಎಂಬ ಆರೋಪವೂ ಎಫ್‌ಐಆರ್‌ನಲ್ಲಿ ಇದೆ. ಇದರ ಜೊತೆ ಮತ್ತೂರು ಕ್ರಾಸ್ ಬಳಿಯೂ ಡಿಜೆ ಬಳಸಲಾಗಿದೆ ಎಂದು ಆರೋಪಿಸಿ ದೂರು ದಾಖಲಾಗಿದೆ. ಡಿಜೆ ಬಳಕೆಗೆ ಇದುವರೆಗೂ ಮೂರು ಎಫ್ ಐಆರ್ ಲಭ್ಯವಾಗಿದ್ದು ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ. 

ಈ ಆರೋಪಗಳ ಹಿನ್ನೆಲೆಯಲ್ಲಿ ಮೆರವಣಿಗೆಯ ಆಯೋಜಕರು ಹಾಗೂ ಡಿಜೆ ಸೌಂಡ್ ಬಾಕ್ಸ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಲಾದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.

ಎರಡು ಪ್ರಕರಣಗಳಲ್ಲೂ ತನಿಖೆ

ಹೀಗೆ, ಒಂದೇ ದಿನ ನಡೆದ ಈದ್ ಮಿಲಾದ್ ಮೆರವಣಿಗೆಗಳಿಗೆ ಸಂಬಂಧಿಸಿದಂತೆ ತುಂಗಾನಗರ ಮತ್ತು ಕೋಟೆ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಮೂರು ಪ್ರಕರಣಗಳಲ್ಲಿಯೂ ಡಿಜೆ ಸೌಂಡ್ ಬಾಕ್ಸ್ ಬಳಕೆ, ಹೆಚ್ಚಿನ ಶಬ್ದದಿಂದ ಸಾರ್ವಜನಿಕರಿಗೆ ತೊಂದರೆ ಹಾಗೂ ಪೊಲೀಸ್/ಆಡಳಿತಾತ್ಮಕ ಆದೇಶಗಳ ಉಲ್ಲಂಘನೆ ಆರೋಪಗಳು ಪ್ರಮುಖವಾಗಿವೆ.

ತುಂಗಾನಗರ ಪ್ರಕರಣದಲ್ಲಿ ಮೂವರು ಆರೋಪಿಗಳ ವಿವರಗಳನ್ನು ದಾಖಲಿಸಲಾಗಿದ್ದರೆ, ಕೋಟೆ ಠಾಣೆಯ ಪ್ರಕರಣದಲ್ಲಿ ನಾಲ್ವರನ್ನು ಆರೋಪಿಗಳೆಂದು ನಮೂದಿಸಲಾಗಿದೆ. ಎರಡೂ ಪ್ರಕರಣಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Case registered over use of DJ at Eid procession! 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close