SUDDILIVE || SHIVAMOGGA
ಶಿವಮೊಗ್ಗದಲ್ಲಿ ಮುಂದುವರಿದ ಮುಸಿಯನ ಉಪಟಳ: ಹರಕೆರೆ ಬಳಿ ಮತ್ತೊಬ್ಬನ ಮೇಲೆ ದಾಳಿ, ಕೊನೆಗೂ ಸೆರೆ!Monkey menace continues in Shivamogga: Another person attacked near Harakere; finally captured!
ಶಿವಮೊಗ್ಗ: ನಗರದ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಆತಂಕ ಸೃಷ್ಟಿಸಿದ್ದ ಮುಸಿಯ (ಲಂಗೂರ್) ಕೊನೆಗೂ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿದೆ. ಕಾಶಿಪುರದಲ್ಲಿ ಯುವಕನ ಮೇಲೆ ದಾಳಿ ನಡೆಸಿದ ಬಳಿಕ ಇದೀಗ ಹರಕೆರೆ ಸಮೀಪ ಮತ್ತೊಬ್ಬ ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಹರಕೆರೆ ಸಮೀಪ 47 ವರ್ಷದ ಗಣೇಶ್ ಎಂಬುವವರ ಮೇಲೆ ಮುಸಿಯ ಏಕಾಏಕಿ ದಾಳಿ ನಡೆಸಿದೆ. ದಾಳಿಯಲ್ಲಿ ಗಣೇಶ್ ಗಾಯಗೊಂಡಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದರು. ಮುಸಿಯನ ಉಪಟಳದಿಂದಾಗಿ ಹರಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಶಿವಮೊಗ್ಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾದರು. ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಜೆ, ಉಪ ವಲಯ ಅರಣ್ಯಾಧಿಕಾರಿ ಪ್ರಮೋದ ಕೆ ನೇತೃತ್ವದಲ್ಲಿ ಗಸ್ತು ಅರಣ್ಯ ಪಾಲಕರಾದ ಮಾಲ್ತೇಶ್ ಸೂರ್ಯವಂಶಿ, ಚರಣ್ ರಾಜ್, ಸಂತೋಷ್ ಮೂಲಿಮನಿ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
ಪಶುವೈದ್ಯಾಧಿಕಾರಿ ಮುರಳಿ ಹಾಗೂ ಅವರ ತಂಡದ ಸಹಕಾರದೊಂದಿಗೆ ಮುಸಿಯನನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಕಾರ್ಯಾಚರಣೆ ನಡೆಸಲಾಯಿತು. ಪ್ರಾಣಿ ಪ್ರಿಯ ಸ್ನೇಕ್ ವಿಕ್ಕಿ ಹಾಗೂ ಅವರ ಸ್ನೇಹಿತರು ಮತ್ತು ಸ್ಥಳೀಯ ಸಾರ್ವಜನಿಕರೂ ಕಾರ್ಯಾಚರಣೆಗೆ ಸಹಕರಿಸಿದರು.
ಜಂಟಿ ಕಾರ್ಯಾಚರಣೆಯಲ್ಲಿ ಸಾರ್ವಜನಿಕರಿಗೆ ಸಿಂಹಸ್ವಪ್ನವಾಗಿದ್ದ ಮುಸಿಯ ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿಯ ಬಲೆಗೆ ಬಿದ್ದಿದೆ. ಮುಸಿಯ ಸೆರೆ ಸಿಕ್ಕಿರುವ ಸುದ್ದಿ ಹರಡುತ್ತಿದ್ದಂತೆ ಕಾಶಿಪುರ, ಹರಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಸೆರೆಹಿಡಿದ ಮುಸಿಯನನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಿ ಬಿಡಲು ಅರಣ್ಯ ಇಲಾಖೆ ಮುಂದಾಗಿದೆ. ಕಳೆದ ಕೆಲ ದಿನಗಳಿಂದ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಲಂಗೂರ್ ಇದೀಗ ಸೆರೆ ಸಿಕ್ಕಿರುವುದರಿಂದ ಸ್ಥಳೀಯರ ಆತಂಕ ದೂರವಾಗಿದೆ.
Monkey menace continues in Shivamogga: Another person attacked near Harakere; finally captured!
