ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಶಾಸಕರನ್ನು ಹೊತ್ತು ಕುಣಿದ ಪೊಲೀಸ್ ಸಿಬ್ಬಂದಿ; ಇಬ್ಬರ ವರ್ಗಾವಣೆ-Police personnel who carried MLAs during Ganpati immersion procession; two transferred

 SUDDILIVE || SHIVAMOGGA

ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಶಾಸಕರನ್ನು ಹೊತ್ತು ಕುಣಿದ ಪೊಲೀಸ್ ಸಿಬ್ಬಂದಿ; ಇಬ್ಬರ ವರ್ಗಾವಣೆ-Police personnel who carried MLAs during Ganpati immersion procession; two transferred    
Police, punishment




ಶಿವಮೊಗ್ಗ: ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಅವರನ್ನು ಪೊಲೀಸ್ ಸಿಬ್ಬಂದಿ ಹೊತ್ತುಕೊಂಡು ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಘಟನೆ ಇದೀಗ ಚರ್ಚೆಗೆ ಕಾರಣವಾಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ನಗರದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಗಣೇಶೋತ್ಸವದ ಹಿನ್ನೆಲೆಯಲ್ಲಿ ಠಾಣೆ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಬಳಿಕ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಪೂರ್ವ ಸಂಚಾರಿ ಪೊಲೀಸ್ ಠಾಣೆಯಿಂದ ಆರಂಭವಾದ ವಿಸರ್ಜನಾ ಮೆರವಣಿಗೆ ತುಂಗಾ ನದಿಯ ಭೀಮನ ಮಡು ಕಡೆಗೆ ಸಾಗುತ್ತಿತ್ತು. ಮೆರವಣಿಗೆ ವೇಳೆ ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ನೃತ್ಯ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕೋಟೆ ಭೀಮೇಶ್ವರ ದೇವಸ್ಥಾನದ ಬಳಿ ಶಾಸಕ ಎಸ್.ಎನ್.ಚನ್ನಬಸಪ್ಪ ಕೂಡ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.


ಈ ವೇಳೆ ನೃತ್ಯ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಶಾಸಕರನ್ನು ಹೊತ್ತುಕೊಂಡು ಕುಣಿದಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಪೊಲೀಸ್ ಸಮವಸ್ತ್ರದಲ್ಲಿದ್ದ ಸಿಬ್ಬಂದಿ ಶಾಸಕರನ್ನು ಹೊತ್ತುಕೊಂಡು ನೃತ್ಯ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಘಟನೆ ಕುರಿತು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದ್ದು, ಕರ್ತವ್ಯದ ವೇಳೆ ಪೊಲೀಸ್ ಸಿಬ್ಬಂದಿಯ ವರ್ತನೆ ಕುರಿತು ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ಇಬ್ಬರು ಪೊಲೀಸ್ ಸಿಬ್ಬಂದಿ ವರ್ಗಾವಣೆ

ಶಾಸಕರನ್ನು ಹೊತ್ತುಕೊಂಡು ನೃತ್ಯ ಮಾಡಿದ್ದ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿ ವಿರುದ್ಧ ವರ್ಗಾವಣೆ ಕ್ರಮ ಕೈಗೊಳ್ಳಲಾಗಿದೆ. ಠಾಣೆಯ ಗಣೇಶ್ ಹಾಗೂ ಪ್ರಕಾಶ್.ಎ.ಕೆ ಅವರನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಬೇರೆ ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಮಾಡಿ ಎಸ್‌ಪಿ ಬಿ.ನಿಖಿಲ್ ಆದೇಶಿಸಿದ್ದಾರೆ.

ಗಣೇಶ್ ಅವರನ್ನು ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸ್ ಠಾಣೆಗೆ ಹಾಗೂ ಪ್ರಕಾಶ್.ಎ.ಕೆ ಅವರನ್ನು ಸೊರಬ ತಾಲೂಕಿನ ಆನವಟ್ಟಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಕರ್ತವ್ಯದ ವೇಳೆ ನಡೆದಿರುವ ಘಟನೆ ಹಿನ್ನೆಲೆಯಲ್ಲಿ ಶಿಸ್ತು ಕ್ರಮದ ಭಾಗವಾಗಿ ಈ ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಇದೀಗ ಗಣಪತಿ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಶಾಸಕರನ್ನು ಹೊತ್ತುಕೊಂಡು ನೃತ್ಯ ಮಾಡಿರುವ ವಿಡಿಯೋ ಹಾಗೂ ಅದರ ಬೆನ್ನಲ್ಲೇ ಇಬ್ಬರು ಸಿಬ್ಬಂದಿ ವರ್ಗಾವಣೆಯಾಗಿರುವುದು ಶಿವಮೊಗ್ಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Police personnel who carried MLAs during Ganpati immersion procession; two transferred  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close