ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು: ಸ್ಥಳೀಯರಿಂದ ತಾಯಿ-ಮಗುವಿನ ರಕ್ಷಣೆ- Car loses control and falls into ditch: Mother and child rescued by locals

 SUDDILIVE || SHIVAMOGGA

ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು: ಸ್ಥಳೀಯರಿಂದ ತಾಯಿ-ಮಗುವಿನ ರಕ್ಷಣೆ- Car loses control and falls into ditch: Mother and child rescued by locals
Car, accident

   


ತೀರ್ಥಹಳ್ಳಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಹಳ್ಳಕ್ಕೆ ಬಿದ್ದ ಘಟನೆ ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೇರಿ ಸಮೀಪ ಬುಧವಾರ ಬೆಳ್ಳಂಬೆಳಗ್ಗೆ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ತಾಯಿ ಹಾಗೂ ಆರು ವರ್ಷದ ಮಗುವನ್ನು ಸ್ಥಳೀಯರು ಕೂಡಲೇ ರಕ್ಷಿಸಿದ್ದಾರೆ.

ದಾವಣಗೆರೆಯಿಂದ ಮಣಿಪಾಲದತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಣಿಪಾಲದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯೊಬ್ಬರು ಕಾರು ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ. ಕಾರಿನಲ್ಲಿ ಅವರ ಆರು ವರ್ಷದ ಮಗು ಕೂಡ ಪ್ರಯಾಣಿಸುತ್ತಿತ್ತು.

ಪ್ರಯಾಣದ ವೇಳೆ ಮಗು ಕರೆದ ಹಿನ್ನೆಲೆಯಲ್ಲಿ ಮಗುವಿನತ್ತ ಗಮನ ಹರಿಸಿದ ಸಂದರ್ಭದಲ್ಲಿ ಕಾರಿನ ಮೇಲಿನ ನಿಯಂತ್ರಣ ತಪ್ಪಿದ್ದು, ರಸ್ತೆ ಬದಿಯ ಹಳ್ಳದ ಸಮೀಪ ಕಾರು ಬಿದ್ದಿದೆ ಎಂದು ತಿಳಿದುಬಂದಿದೆ.

ಕಾರು ಹಳ್ಳಕ್ಕೆ ಬಿದ್ದ ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಕಾರಿನಲ್ಲಿದ್ದ ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ತಡೆಗೋಡೆ ನಿರ್ಮಿಸದಿರುವುದಕ್ಕೆ ಆಕ್ರೋಶ

ಅಪಘಾತ ನಡೆದ ಸ್ಥಳದಲ್ಲಿ ರಸ್ತೆ ಬದಿಗೆ ಸೂಕ್ತ ತಡೆಗೋಡೆ ನಿರ್ಮಿಸದೇ ಇರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಕಾಮಗಾರಿಯನ್ನು ಅರ್ಧಂಬರ್ಧವಾಗಿ ನಡೆಸಿ, ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಸ್ಥಳೀಯರು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಡೆಗೋಡೆ ಇದ್ದಿದ್ದರೆ ಕಾರು ಹಳ್ಳಕ್ಕೆ ಬೀಳುವುದನ್ನು ತಡೆಯಬಹುದಾಗಿತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದು, ಇದೇ ರೀತಿಯ ಅಪಘಾತಗಳು ಮರುಕಳಿಸದಂತೆ ರಸ್ತೆ ಬದಿಯಲ್ಲಿ ತಕ್ಷಣ ಸುರಕ್ಷತಾ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

Car loses control and falls into ditch: Mother and child rescued by locals

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close