ನಾಲ್ಕಕ್ಕೆ ನಾಲ್ಕು ಗೆಲುವು ಬಿಜೆಪಿಯ ಶಕ್ತಿ ಪ್ರದರ್ಶನಕ್ಕೆ ಮೊದಲ ಪರೀಕ್ಷೆ: ಡಿ.ಎಸ್. ಅರುಣ್ -Four-for-four win is the first test of BJP's show of strength: D.S. Arun

SUDDILIVE ||SHIVAMOGGA

ನಾಲ್ಕಕ್ಕೆ ನಾಲ್ಕು ಗೆಲುವು ಬಿಜೆಪಿಯ ಶಕ್ತಿ ಪ್ರದರ್ಶನಕ್ಕೆ ಮೊದಲ ಪರೀಕ್ಷೆ: ಡಿ.ಎಸ್. ಅರುಣ್ -Four-for-four win is the first test of BJP's show of strength: D.S. Arun     

Bjp, seats



ಶಿವಮೊಗ್ಗ: ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ನಾಲ್ಕಕ್ಕೆ ನಾಲ್ಕು ಸ್ಥಾನಗಳನ್ನು ಗೆದ್ದಿರುವುದು ಬಿಜೆಪಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದು ನಮ್ಮ ಶಕ್ತಿ ಪ್ರದರ್ಶನಕ್ಕೆ ಮೊದಲ ಪರೀಕ್ಷೆಯಾಗಿದ್ದು, ಮುಂದಿನ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿಯೂ ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.

ಅಗ್ನೇಯ, ಪಶ್ಚಿಮ ಮತ್ತು ಬೆಂಗಳೂರು ಈಶಾನ್ಯ ಸೇರಿದಂತೆ ಶಿಕ್ಷಕರ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಅಭ್ಯರ್ಥಿಗಳು ಜಯಗಳಿಸಿದ ಹಿನ್ನೆಲೆಯಲ್ಲಿ ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸಂಭ್ರಮಾಚರಣೆ ನಡೆಯಿತು. ಪಟಾಕಿ ಸಿಡಿಸಿ ಸಿಹಿಹಂಚಲಾಯಿತು. ಬಳಿಕ ಮಾತನಾಡಿದ ಡಿ.ಎಸ್. ಅರುಣ್, ಚುನಾವಣಾ ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಪಡಿಸಿ, ಪಕ್ಷದ ಕಾರ್ಯಕರ್ತರ ಪರಿಶ್ರಮವನ್ನು ಶ್ಲಾಘಿಸಿದರು.

ನಾಲ್ಕಕ್ಕೆ ನಾಲ್ಕು ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸದಿಂದಲೇ ನಾವು ಕೆಲಸ ಮಾಡುತ್ತಿದ್ದೆವು. ಚುನಾವಣೆಯ ಸಂದರ್ಭದಲ್ಲಿ ಸುಮಾರು ಐದು ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಿದ್ದೆ. ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬ ಮನಸ್ಥಿತಿ ಜನರಲ್ಲಿದ್ದರೂ, ಅದನ್ನು ಹೇಗೆ ವ್ಯಕ್ತಪಡಿಸಬೇಕು ಎಂಬ ಗೊಂದಲವಿತ್ತು. ಇದೀಗ ಚುನಾವಣಾ ಫಲಿತಾಂಶದ ಮೂಲಕ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರಂತರ ಹೋರಾಟ

ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿ ರಾಜ್ಯದಾದ್ಯಂತ ಸಣ್ಣಪುಟ್ಟ ಸಮಸ್ಯೆಗಳಿಂದ ಹಿಡಿದು ದೊಡ್ಡ ಹಗರಣಗಳವರೆಗೆ ನಿರಂತರ ಹೋರಾಟ ನಡೆಸುತ್ತಿದೆ. ವಾಲ್ಮೀಕಿ ನಿಗಮದ ಹಗರಣ ಸೇರಿದಂತೆ ಹಲವು ವಿಚಾರಗಳಲ್ಲಿ ಪಕ್ಷದ ಕಾರ್ಯಕರ್ತರು ಹಗಲಿರುಳು ಹೋರಾಟ ಮಾಡಿದ್ದಾರೆ. ಆದರೂ ವಿರೋಧ ಪಕ್ಷವಾಗಿ ಬಿಜೆಪಿ ಯಾವುದೇ ಹೋರಾಟ ನಡೆಸುತ್ತಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿದ್ದವು.

ನಮಗೆ ನಮ್ಮ ಶಕ್ತಿಯನ್ನು ತೋರಿಸಲು ಒಂದು ಪರೀಕ್ಷೆ ಬೇಕಿತ್ತು. ಇದೀಗ ನಡೆದ ಚುನಾವಣೆಯಲ್ಲಿ ನಾಲ್ಕಕ್ಕೆ ನಾಲ್ಕು ಸ್ಥಾನಗಳನ್ನು ಗೆಲ್ಲುವ ಮೂಲಕ ಮೊದಲ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದೇವೆ. ಮುಂದಿನ ಚುನಾವಣೆಗಳಲ್ಲಿಯೂ ನಮ್ಮ ಶಕ್ತಿಯನ್ನು ತೋರಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊಸ ಮುಖಕ್ಕೂ 23 ಸಾವಿರ ಮತಗಳ ಅಂತರದ ಗೆಲುವು

ಈ ಹಿಂದೆ ಬಿಜೆಪಿಯಲ್ಲಿದ್ದ ಮೂರು ಸ್ಥಾನಗಳನ್ನು ಉಳಿಸಿಕೊಳ್ಳುವುದೇ ಸವಾಲಾಗಿತ್ತು. ಕೆಲವು ಅಭ್ಯರ್ಥಿಗಳು ಹಲವು ಬಾರಿ ಗೆದ್ದ ಅನುಭವ ಹೊಂದಿದ್ದರೆ, ಮತ್ತೊಂದು ಕ್ಷೇತ್ರದಲ್ಲಿ ಹಳೆಯ ಅಭ್ಯರ್ಥಿಯನ್ನು ಬದಲಿಸಿ ಹೊಸ ಮುಖಕ್ಕೆ ಅವಕಾಶ ನೀಡಲಾಗಿತ್ತು. ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗ ಗೆಲುವು ಕಷ್ಟವಾಗಬಹುದು ಎಂಬ ಅಭಿಪ್ರಾಯಗಳಿದ್ದವು. ಆದರೆ ಹೊಸ ಅಭ್ಯರ್ಥಿ ಸುಮಾರು 23 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ಪಕ್ಷದ ಸಂಘಟನಾ ಶಕ್ತಿಯನ್ನು ತೋರಿಸುತ್ತದೆ ಎಂದು ಹೇಳಿದರು.

ಶಂಕರನೂರು ಅವರು ಮೊದಲ ಸುತ್ತಿನಲ್ಲೇ ಗೆಲುವು ಸಾಧಿಸಿರುವುದು ಹಾಗೂ ನಮೋಶಿ ಅವರು ನಿರಾಯಾಸವಾಗಿ ಜಯಗಳಿಸಿರುವುದು ಸಂತಸ ತಂದಿದೆ ಎಂದರು.

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿಯೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ರಂಗನಾಥ್ ಗೆಲುವು ಸಾಧಿಸಿರುವುದು ಮಹತ್ವದ ಬೆಳವಣಿಗೆ. ಬೆಂಗಳೂರಿನಲ್ಲಿ ಎನ್‌ಡಿಎ ಅಭ್ಯರ್ಥಿಗೆ ಠೇವಣಿಯೂ ಉಳಿಯುವುದಿಲ್ಲ ಎಂಬ ರೀತಿಯಲ್ಲಿ ಮಾತನಾಡಲಾಗುತ್ತಿತ್ತು. ಆದರೆ ಅಲ್ಲಿನ ಶಿಕ್ಷಕ ಮತದಾರರು ತೀರ್ಪು ನೀಡಿದ್ದು, ರಂಗನಾಥ್ ಅವರನ್ನು ಗೆಲ್ಲಿಸಿದ್ದಾರೆ. ಎಲ್ಲ ವಿಜೇತ ಅಭ್ಯರ್ಥಿಗಳಿಗೂ ಶಿವಮೊಗ್ಗ ಜಿಲ್ಲಾ ಬಿಜೆಪಿಯ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ವಿಧಾನ ಪರಿಷತ್ತಿನಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಸಂಖ್ಯಾಬಲ ಮತ್ತಷ್ಟು ಹೆಚ್ಚಾಗಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಮುಂದೂಡಬೇಡಿ

ಮುಂದಿನ ಹಂತದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಎದುರಾಗಲಿವೆ. ವಿಧಾನ ಪರಿಷತ್ ಚುನಾವಣೆ ಮೊದಲ ಪರೀಕ್ಷೆಯಾಗಿದ್ದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಎರಡನೇ ಪರೀಕ್ಷೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯಾವುದೇ ಕಾರಣಗಳನ್ನು ಮುಂದಿಟ್ಟು ಈ ಚುನಾವಣೆಗಳನ್ನು ಮುಂದೂಡಬಾರದು ಎಂದು ಡಿ.ಎಸ್. ಅರುಣ್ ಆಗ್ರಹಿಸಿದರು.

ಚುನಾವಣೆಗಳನ್ನು ನಡೆಸದಿದ್ದರೆ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರನ್ನು ಬೆಳೆಸಲು ಮತ್ತು ಹೊಸ ನಾಯಕತ್ವವನ್ನು ರೂಪಿಸಲು ಅವಕಾಶ ಸಿಗುವುದಿಲ್ಲ. ಅಧಿಕಾರ ವಿಕೇಂದ್ರೀಕರಣದ ಆಶಯ ಈಡೇರಬೇಕಾದರೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆಗಳು ನಡೆಯಬೇಕು ಎಂದರು.

ಈಗಾಗಲೇ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಅನುದಾನಗಳು ಸಮರ್ಪಕವಾಗಿ ಬರುತ್ತಿಲ್ಲ ಎಂಬ ಆರೋಪವಿದೆ. ಚುನಾವಣೆಗಳು ನಡೆಯದ ಕಾರಣ ಕೇಂದ್ರದಿಂದ ಬರಬೇಕಾದ ಸುಮಾರು 10ರಿಂದ 15 ಸಾವಿರ ಕೋಟಿ ರೂಪಾಯಿಗಳ ಅನುದಾನ ಬಾಕಿಯಿದೆ ಎಂದು ಅವರು ಆರೋಪಿಸಿದರು.

ಚುನಾವಣೆಗಳಲ್ಲಿ ಸೋಲುವ ಭೀತಿಯಿಂದ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಮುಂದೂಡುತ್ತಿದೆ ಎಂಬುದು ನಮ್ಮ ಅಭಿಪ್ರಾಯ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚುನಾವಣೆಗಳನ್ನು ಎದುರಿಸಲು ಮುಂದಾಗಬೇಕು. ಬಿಜೆಪಿ ಕಾರ್ಯಕರ್ತರು ಮುಂಬರುವ ಎಲ್ಲ ಚುನಾವಣೆಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.

ಕರ್ನಾಟಕದಿಂದ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂಬ ತೀರ್ಮಾನಕ್ಕೆ ಜನರು ಬರುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಮುಂದಿನ ಚುನಾವಣೆಗೆ ಸನ್ನದ್ಧರಾಗಿದ್ದಾರೆ ಎಂದು ಡಿ.ಎಸ್. ಅರುಣ್ ವಿಶ್ವಾಸ ವ್ಯಕ್ತಪಡಿಸಿದರು.

ಭಾರತ್ ಮಾತಾ ಕಿ ಜೈ ಘೋಷಣೆಗಳೊಂದಿಗೆ ಬಿಜೆಪಿ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆ ಮುಕ್ತಾಯಗೊಂಡಿತು.

Four-for-four win is the first test of BJP's show of strength: D.S. Arun     


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close