SUDDILIVE || SHIVAMOGGA
ಮಧ್ವ ನವಮಿ ಆಚರಣೆಗೆ ಸರ್ಕಾರಿ ಆದೇಶ-ಕೆ.ಬಿ. ಪ್ರಸನ್ನ ಕುಮಾರ್ ಸ್ವಾಗತ- Order for government celebrations of Madhva Jayanti, Ramanujacharya Jayanti: K.B. Prasanna Kumar welcomes
ಶಿವಮೊಗ್ಗ: ಮಧ್ವಾಚಾರ್ಯರ ಜಯಂತಿ ಸರ್ಕಾರದ ವತಿಯಿಂದ ಆಚರಿಸಲು ಆದೇಶಿಸಿರುವುದಕ್ಕೆ ಮಾಜಿ ಶಾಸಕ ಹಾಗೂ ಮಾಧ್ವ ಸಮಾಜದ ಪ್ರಮುಖ ಕೆ.ಬಿ. ಪ್ರಸನ್ನ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಮಾಧ್ವ ಮತ್ತು ಬ್ರಾಹ್ಮಣ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಿಂದ 2018ರ ಅವಧಿಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾಗಿದ್ದ ಸಂದರ್ಭದಲ್ಲಿ ಬ್ರಾಹ್ಮಣರ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾಗಿ ತಿಳಿಸಿದರು.
2016 ಮತ್ತು 2017ರ ಬಜೆಟ್ ಸಭೆಗಳಲ್ಲಿ ಬ್ರಾಹ್ಮಣರ ಅಭಿವೃದ್ಧಿ ನಿಗಮ ಸ್ಥಾಪನೆಯ ಅಗತ್ಯವನ್ನು ಒತ್ತಿಹೇಳಿದ್ದೆ. ಬ್ರಾಹ್ಮಣ ಸಮುದಾಯದ ಯುವಕ-ಯುವತಿಯರಿಗೆ ಉನ್ನತ ಶಿಕ್ಷಣ ಪಡೆಯಲು ಹಾಗೂ ಸ್ವಂತ ಉದ್ಯೋಗ ಆರಂಭಿಸಲು ನೆರವಾಗಬೇಕು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ದೊರೆಯುವ ವ್ಯವಸ್ಥೆ ಕಲ್ಪಿಸಬೇಕು. ಅದೇ ರೀತಿ, ಮನೆಯಲ್ಲಿ ಹಪ್ಪಳ, ಸಂಡಿಗೆ, ಚಟ್ನಿ ಪುಡಿ ಸೇರಿದಂತೆ ವಿವಿಧ ಗೃಹೋದ್ಯಮಗಳನ್ನು ನಡೆಸುವ ಮಹಿಳೆಯರಿಗೆ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದ್ದೆ ಎಂದು ವಿವರಿಸಿದರು.
ಮಧ್ವಾಚಾರ್ಯರ ತತ್ವಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶ
ಮಧ್ವಾಚಾರ್ಯರು ಜೀವನವನ್ನು ಹೇಗೆ ನಡೆಸಬೇಕು, ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದ ಮಹಾನ್ ಆಚಾರ್ಯರು. ಅವರ ತತ್ವಾದರ್ಶಗಳು ಮುಂದಿನ ಪೀಳಿಗೆಗೂ ತಲುಪಬೇಕು ಎಂಬ ಉದ್ದೇಶದಿಂದ ಮಧ್ವನೌಮಿ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಆಚರಿಸಬೇಕೆಂದು ಅಂದಿನ ಸಂದರ್ಭದಲ್ಲಿ ಒತ್ತಾಯಿಸಿದ್ದಾಗಿ ಪ್ರಸನ್ನ ಕುಮಾರ್ ಹೇಳಿದರು.
ಬ್ರಾಹ್ಮಣ ಸಮಾಜವು ಶಂಕರಾಚಾರ್ಯರು, ಮಧ್ವಾಚಾರ್ಯರು ಮತ್ತು ರಾಮಾನುಜಾಚಾರ್ಯರು ಬೋಧಿಸಿದ ಆದರ್ಶಗಳನ್ನು ಪಾಲಿಸಿಕೊಂಡು ಬರುತ್ತಿದೆ. ಶಂಕರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಿಕೊಂಡು ಬರುತ್ತಿರುವಂತೆಯೇ ಮಧ್ವಾಚಾರ್ಯರ ಜಯಂತಿ ಮತ್ತು ರಾಮಾನುಜಾಚಾರ್ಯರ ಜಯಂತಿಯನ್ನೂ ಸರ್ಕಾರಿ ಮಟ್ಟದಲ್ಲಿ ಆಚರಿಸಬೇಕು ಎಂಬುದು ತಮ್ಮ ಆಶಯವಾಗಿತ್ತು ಎಂದು ತಿಳಿಸಿದರು.
ಸರ್ಕಾರದ ವತಿಯಿಂದ ಇಂತಹ ಜಯಂತಿಗಳನ್ನು ಆಚರಿಸಿದಾಗ ಅವು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಇಡೀ ಹಿಂದೂ ಸಮಾಜಕ್ಕೆ ಆಚಾರ್ಯರ ತತ್ವಗಳು, ಚಿಂತನೆಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸಲು ಸಹಕಾರಿಯಾಗುತ್ತವೆ. ಈ ಹಿನ್ನೆಲೆಯಲ್ಲಿ ಅಂದಿನಿಂದಲೇ ಈ ಬೇಡಿಕೆಯನ್ನು ಮುಂದಿಟ್ಟಿದ್ದಾಗಿ ಹೇಳಿದರು. ಅದರಂತೆ ರಾಮಾನುಜ ಆಚಾರ್ಯ ಅವರ ಜಯಂತಿಯನ್ನೂ ಸರ್ಕಾರ ಆಚರಣೆಗೆ ಸರ್ಕಾರ ಗಮನಿಸಲಿ ಎಂದು ಆಗ್ರಹಿಸಿದರು.
ಸರ್ಕಾರದ ನಿರ್ಧಾರಕ್ಕೆ ಕೃತಜ್ಞತೆ
ಮಧ್ವಾಚಾರ್ಯರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ಸರ್ಕಾರ ಆದೇಶ ಹೊರಡಿಸಿರುವುದು ಸಂತಸದ ಸಂಗತಿ. ಇದೇ ರೀತಿ ರಾಮಾನುಜಾಚಾರ್ಯರ ಜಯಂತಿಯನ್ನೂ ಸರ್ಕಾರಿ ಮಟ್ಟದಲ್ಲಿ ಆಚರಿಸಲು ಆದೇಶಿಸಬೇಕೆಂದು ಆಗ್ರಹಿಸುತ್ತೇವೆ. ಈ ನಿರ್ಧಾರದಿಂದ ಆಚಾರ್ಯರ ಆದರ್ಶಗಳು ಮತ್ತು ಅವರ ಕೊಡುಗೆಗಳ ಕುರಿತು ಹೆಚ್ಚಿನ ಜನರಿಗೆ ತಿಳಿಯಲು ಅವಕಾಶ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರದ ಈ ಕ್ರಮ ಮಹತ್ವದ್ದಾಗಿದೆ. ಈ ನಿರ್ಧಾರಕ್ಕಾಗಿ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಮಾಧ್ವ ಸಮಾಜ ಮತ್ತು ಬ್ರಾಹ್ಮಣ ಸಮಾಜದ ಪರವಾಗಿ ಅನಂತ ಧನ್ಯವಾದಗಳನ್ನು ಸಲ್ಲಿಸುವುದಾಗಿ ಕೆ.ಬಿ. ಪ್ರಸನ್ನ ಕುಮಾರ್ ತಿಳಿಸಿದರು.
ಪಂಡಿತ ರಾಯಚೂರು ಕೃಷ್ಣಾಚಾರ್ಯ ಮಾತನಾಡಿ ಈ ವರ್ಷ ವಿಜಯದಶಮಿ ದಿನ ಆಚರಿಸಲಾಗುತ್ತಿದೆ. ತಿಥಿಗಳ ಆಧಾರದ ಮೇರೆಗೆ ಬ್ರಾಹ್ಮಣ ಸಮುದಾಯದಲ್ಲಿ ಜಯಂತಿ ಆಚರಿಸಲಾಗುತ್ತಿದೆ. ಈ ವರ್ಷ ವಿಜಯ ದಶಮಿದಿನ ಮಧ್ವ ನವಮಿ ಆಚರಿಸಲಾಗುತ್ತಿದೆ. ಮುಂದಿನ ವರ್ಷದಿಂದ ಯಾವ ತಿಥಿಯ ಲೆಕ್ಕದಲ್ಲಿ ಮಧ್ವ ಜಯಂತಿ ಬರುತ್ತದೆ. ಅದರ ಆಧಾರದ ಮೇರೆಗೆ ಜಯಂತಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಸರ್ಕಾರದ ಜಯಂತಿ ಆಚರಿಸಲಾಗಿವುದು. ಮಾಜಿ ಎಂಎಲ್ ಎ ಪ್ರಸನ್ನ ಕುಮಾರ್ ಶಾಸಕರಾಗಿದ್ದಾಗ ಸರ್ಕಾರಕ್ಕೆ ಕೇಳಿಕೊಳ್ಳಲಾಗಿತ್ತು. ಅದರ ಆಧಾರದ ಮೇರೆಗೆ ಸರ್ಕಾರ ಈಗ ಪರಿಗಣಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಎಲ್. ಉಪಾಧ್ಯಾಯ, ರಾಜೀವ್ ಕೃಷ್ಣಾಚಾರ್ಯ, ವಿಜಯೇಂದ್ರ ಕಟ್ಟಿ, ಮುರಳೀಧರ್, ಗುರುರಾಜ್ ಹಂಡೆ, ಮಾಧ್ವಮೂರ್ತಿ ಸ್ವಾಮಿನಾಥ್, ಸುಮಂತ್ ಹಾಗೂ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಸುರೇಶ್ ಸಾಣಿಕೊಪ್ಪ ಉಪಸ್ಥಿತರಿದ್ದರು.
