SUDDILIVE || SHIVAMOGGA
ಶಿವಮೊಗ್ಗ ಡಿಹೆಚ್ಒ ವರ್ಗಾವಣೆ: ಡಾ. ನಟರಾಜ್ಗೆ ಬೆಂಗಳೂರು, ಡಾ. ಕಾಂತರಾಜ್ಗೆ ಶಿವಮೊಗ್ಗ ಜವಾಬ್ದಾರಿ; ಡಿಎಫ್ಒ ವರ್ಗಾವಣೆಯೂ ಚರ್ಚೆ! Shivamogga DHO transfer: Dr. Nataraj to be responsible for Bengaluru, Dr. Kantaraj for Shivamogga; DFO transfer also under discussion!
![]() |
| ಡಾ.ಕಾಂತರಾಜು.ಕೆಪಿ |
ಶಿವಮೊಗ್ಗ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ (ಡಿಹೆಚ್ಒ) ಆಗಿದ್ದ ಡಾ. ನಟರಾಜ್ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ಹಾಸನದ ಜಿಲ್ಲಾ ಆರೋಗ್ಯಾಧಿಕಾರಿಯಾಗಿದ್ದ ಡಾ. ಕಾಂತರಾಜ್ ಕೆ.ಪಿ. ಅವರನ್ನು ನೇಮಕ ಮಾಡಲಾಗಿದೆ. ಡಾ. ಕಾಂತರಾಜ್ ಅವರು ನಿನ್ನೆ ಶಿವಮೊಗ್ಗದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.
ಡಾ. ನಟರಾಜ್ ಅವರು ಕಳೆದ 2 ವರ್ಷ 8 ತಿಂಗಳಿನಿಂದ ಶಿವಮೊಗ್ಗ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರನ್ನು ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ಡಾ. ನಟರಾಜ್ ಅವರು ಶಿವಮೊಗ್ಗ ಡಿಹೆಚ್ಒ ಆಗಿ ನೇಮಕಗೊಳ್ಳುವುದಕ್ಕೂ ಮೊದಲು ತೀರ್ಥಹಳ್ಳಿ ತಾಲೂಕು ಆರೋಗ್ಯಾಧಿಕಾರಿಯಾಗಿ (ಟಿಹೆಚ್ಒ) ಸೇವೆ ಸಲ್ಲಿಸಿದ್ದರು. ಇದೀಗ ಹಾಸನದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಕಾಂತರಾಜ್ ಕೆ.ಪಿ. ಅವರು ಶಿವಮೊಗ್ಗದ ಆರೋಗ್ಯ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಡಿಎಫ್ಒ ಕೃಷ್ಣ ಪ್ರಸನ್ನ ಕುಮಾರ್ ಪಟಗಾರ್ ವರ್ಗಾವಣೆ ಗುಸುಗುಸು!
ಇನ್ನೊಂದೆಡೆ, ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್ಒ) ಕೃಷ್ಣ ಪ್ರಸನ್ನ ಪಟಗಾರ್ ಅವರ ವರ್ಗಾವಣೆಯ ಬಗ್ಗೆಯೂ ಅರಣ್ಯ ಇಲಾಖೆಯ ವಲಯದಲ್ಲಿ ಚರ್ಚೆ ಶುರುವಾಗಿದೆ.
ಕೃಷ್ಣ ಪ್ರಸನ್ನ ಪಟಗಾರ್ ಅವರು ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಎಫ್ಒ ಆಗಿ ಕಳೆದ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ರಾಘವೇಂದ್ರ ರಾವ್ ಅವರನ್ನು ನಿಯೋಜಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆದರೆ ಈ ವರ್ಗಾವಣೆಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಅಧಿಕೃತ ವರ್ಗಾವಣೆ ಆದೇಶ ಲಭ್ಯವಾಗಿಲ್ಲ. ಹೀಗಾಗಿ ಡಿಎಫ್ಒ ವರ್ಗಾವಣೆಯ ಸುದ್ದಿ ನಿಜವೇ ಅಥವಾ ಇಲಾಖೆಯ ಮಟ್ಟದಲ್ಲಿ ಹರಿದಾಡುತ್ತಿರುವ ಮತ್ತೊಂದು ವದಂತಿಯೇ ಎಂಬ ಪ್ರಶ್ನೆ ಮೂಡಿದೆ.
ಈ ಹಿಂದೆಯೂ ಕೃಷ್ಣ ಪ್ರಸನ್ನ ಕುಮಾರ್ ಪಟಗಾರ್ ಅವರ ವರ್ಗಾವಣೆಯಾಗಲಿದೆ ಎಂಬ ಸುದ್ದಿ ಹಲವು ಬಾರಿ ಹರಿದಾಡಿತ್ತು. ಆದರೆ ಈ ಬಾರಿ ಮತ್ತೆ ಅದೇ ರೀತಿಯ ಸುದ್ದಿ ಕೇಳಿಬರುತ್ತಿರುವುದರಿಂದ ಅರಣ್ಯ ಇಲಾಖೆಯ ಅಧಿಕೃತ ಆದೇಶದತ್ತ ಎಲ್ಲರ ಗಮನ ನೆಟ್ಟಿದೆ.
ಒಟ್ಟಿನಲ್ಲಿ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಪ್ರಮುಖ ಹುದ್ದೆಯಲ್ಲಿ ಬದಲಾವಣೆಯಾಗಿದ್ದು, ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಲ್ಲಿಯೂ ವರ್ಗಾವಣೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಡಿಎಫ್ಒ ವರ್ಗಾವಣೆ ಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
Shivamogga DHO transfer: Dr. Nataraj to be responsible for Bengaluru, Dr. Kantaraj for Shivamogga; DFO transfer also under discussion!
