SUDDILIVE || SHIVAMOGGA
ಶಿವಮೊಗ್ಗ KSOU ಸಾಮೂಹಿಕ ನಕಲು ಪ್ರಕರಣ: ಪ್ರಾದೇಶಿಕ ನಿರ್ದೇಶಕ ಬಿ.ಎಂ. ಸ್ವಾಮಿ ವಿರುದ್ಧ FIR ದಾಖಲು-Shivamogga KSOU mass copying case: FIR registered against Regional Director B.M. Swamy
ಕುಲಸಚಿವ ಪ್ರೊ. ಎಂ.ಪಿ. ಸದಾಶಿವರಿಂದ ತುಂಗಾನಗರ ಠಾಣೆಗೆ ದೂರು; ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ ಸಿಬ್ಬಂದಿ ವಿರುದ್ಧವೂ ತನಿಖೆಗೆ ಮನವಿ
ಶಿವಮೊಗ್ಗ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಶಿವಮೊಗ್ಗ ಪ್ರಾದೇಶಿಕ ಕೇಂದ್ರದಲ್ಲಿ ನಡೆದಿದ್ದ ಎನ್ನಲಾದ ಸಾಮೂಹಿಕ ನಕಲು ಹಾಗೂ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ನಿರ್ದೇಶಕ ಬಿ.ಎಂ. ಸ್ವಾಮಿ ಸೇರಿದಂತೆ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಂ.ಪಿ. ಸದಾಶಿವ ಅವರು ನೀಡಿದ ದೂರಿನ ಆಧಾರದ ಮೇಲೆ ಅಕ್ಟೋಬರ್ 28ರಂದು ಪ್ರಕರಣ ದಾಖಲಾಗಿದೆ. ಅಪರಾಧ ಸಂಖ್ಯೆ 696/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 318, 318(2), 318(4) ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕಲಂ 24 ಮತ್ತು 121ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಏನಿದು ಪ್ರಕರಣ?
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ದೂರ ಮತ್ತು ಸಂಪರ್ಕ ಮಾಧ್ಯಮಗಳ ಮೂಲಕ ಎಲ್ಲರಿಗೂ ಉನ್ನತ ಶಿಕ್ಷಣ ಒದಗಿಸುವ ಉದ್ದೇಶದಿಂದ ಸ್ಥಾಪನೆಯಾಗಿರುವ ರಾಜ್ಯ ಸರ್ಕಾರದ ವಿಶ್ವವಿದ್ಯಾಲಯವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಅದರಂತೆ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಲ್ಕೋಳ ವೃತ್ತದ ಎಲ್ಐಸಿ ಕಚೇರಿ ಸಮೀಪ, ಸಾಗರ ರಸ್ತೆಯಲ್ಲಿ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.
ವಿಶ್ವವಿದ್ಯಾಲಯವು 2026ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ವಿವಿಧ ಸ್ನಾತಕೋತ್ತರ ಪದವಿ, ಪದವಿ, ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ಗಳ ವಾರ್ಷಿಕ ಮತ್ತು ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಸೆಪ್ಟೆಂಬರ್ 15ರಂದು ವೇಳಾಪಟ್ಟಿ ಪ್ರಕಟಿಸಿತ್ತು. ರಾಜ್ಯಾದ್ಯಂತ ಒಟ್ಟು 81 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಸೆಪ್ಟೆಂಬರ್ 22ರಂದು ಆದೇಶ ಹೊರಡಿಸಲಾಗಿತ್ತು.
ಪರೀಕ್ಷಾ ಮುಖ್ಯ ಅಧೀಕ್ಷಕರಾಗಿ ಬಿ.ಎಂ. ಸ್ವಾಮಿ ನೇಮಕ
ಶಿವಮೊಗ್ಗ ಪರೀಕ್ಷಾ ಕೇಂದ್ರದಲ್ಲಿ ನಡೆಯುವ ಪರೀಕ್ಷೆಗಳ ಮೇಲ್ವಿಚಾರಣೆಗಾಗಿ ಪ್ರಾದೇಶಿಕ ನಿರ್ದೇಶಕರಾಗಿದ್ದ ಬಿ.ಎಂ. ಸ್ವಾಮಿ ಅವರನ್ನು ಪರೀಕ್ಷಾ ಮುಖ್ಯ ಅಧೀಕ್ಷಕರನ್ನಾಗಿ ನೇಮಿಸಿ ಅಕ್ಟೋಬರ್ 6ರಂದು ವಿಶ್ವವಿದ್ಯಾಲಯ ಆದೇಶ ಹೊರಡಿಸಿತ್ತು.
ಪರೀಕ್ಷಾ ಮುಖ್ಯ ಅಧೀಕ್ಷಕರು ನಿರ್ವಹಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳನ್ನೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ನಿಗಾವಹಿಸಲು ಜಾಗೃತ ದಳದ ಅಧಿಕಾರಿಗಳನ್ನು ಸಹ ನಿಯೋಜಿಸಲಾಗಿತ್ತು.
ಅಲ್ಲದೆ, ಶಿವಮೊಗ್ಗ ಪರೀಕ್ಷಾ ಕೇಂದ್ರದಲ್ಲಿ ನಡೆಯುವ ವಿವಿಧ ಪರೀಕ್ಷೆಗಳ ಕಾರ್ಯನಿರ್ವಹಣೆಗೆ ಅಗತ್ಯವಿರುವ ಕೊಠಡಿ ಮೇಲ್ವಿಚಾರಕರನ್ನು ನೇಮಿಸುವ ಜವಾಬ್ದಾರಿಯನ್ನೂ ಬಿ.ಎಂ. ಸ್ವಾಮಿ ಅವರೇ ನಿರ್ವಹಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಾಧ್ಯಮಗಳಲ್ಲಿ ಸಾಮೂಹಿಕ ನಕಲು ವರದಿ ಪ್ರಸಾರ
ಆದರೆ, ಅಕ್ಟೋಬರ್ 23ರಂದು ಶಿವಮೊಗ್ಗ ಪ್ರಾದೇಶಿಕ ಕೇಂದ್ರದ ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ಹಾಗೂ ಪರೀಕ್ಷಾ ಅಕ್ರಮ ನಡೆಯುತ್ತಿರುವ ಕುರಿತು ಪಬ್ಲಿಕ್ ಟಿವಿ, ಟಿವಿ9 ಕನ್ನಡ ಸೇರಿದಂತೆ ವಿವಿಧ ದೃಶ್ಯ ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗಿದ್ದವು.
ಈ ಘಟನೆ ವಿಶ್ವವಿದ್ಯಾಲಯದ ಗಮನಕ್ಕೆ ಬಂದಿದ್ದು, ಇದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಮೋಸ ಹಾಗೂ ವಂಚನೆಯಾಗಿದೆ ಎಂದು ಕುಲಸಚಿವರು ದೂರಿನಲ್ಲಿ ಆರೋಪಿಸಿದ್ದಾರೆ.
ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾದ ತಕ್ಷಣ ಅಕ್ಟೋಬರ್ 23ರಂದೇ ಬಿ.ಎಂ. ಸ್ವಾಮಿ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪರೀಕ್ಷಾ ಸಿಬ್ಬಂದಿ ವಿರುದ್ಧವೂ ತನಿಖೆಗೆ ಮನವಿ
ಶಿವಮೊಗ್ಗ ಪ್ರಾದೇಶಿಕ ಕೇಂದ್ರದ ಪರೀಕ್ಷಾ ಕೇಂದ್ರದಲ್ಲಿ ನಡೆದಿರುವ ಸಾಮೂಹಿಕ ನಕಲು ಹಾಗೂ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ ಬಿ.ಎಂ. ಸ್ವಾಮಿ ಸೇರಿದಂತೆ ಘಟನೆಗೆ ಕಾರಣಕರ್ತರಾಗಿರುವ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಕುಲಸಚಿವ ಪ್ರೊ. ಎಂ.ಪಿ. ಸದಾಶಿವ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ದೂರಿನ ಆಧಾರದ ಮೇಲೆ ತುಂಗಾನಗರ ಪೊಲೀಸರು ಅಕ್ಟೋಬರ್ 28ರಂದು ರಾತ್ರಿ 8.10ಕ್ಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಫ್ಐಆರ್ನಲ್ಲಿ ತನಿಖೆ ಮುಂದುವರಿದಿರುವುದಾಗಿ ಉಲ್ಲೇಖಿಸಲಾಗಿದೆ.
ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಯಾರ್ಯಾರ ಪಾತ್ರವಿದೆ? ಪರೀಕ್ಷಾ ಮೇಲ್ವಿಚಾರಣೆಯಲ್ಲಿ ಲೋಪವಾಗಿದೆಯೇ? ಸಾಮೂಹಿಕ ನಕಲು ನಡೆದಿರುವುದಕ್ಕೆ ಸಂಬಂಧಿಸಿದಂತೆ ಯಾವ ಸಾಕ್ಷ್ಯಗಳು ಲಭ್ಯವಾಗಿವೆ ಎಂಬ ಅಂಶಗಳು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
Shivamogga KSOU mass copying case: FIR registered against Regional Director B.M. Swamy
