SUDDILIVE || SHIVAMOGGA
ಮಾರುತಿ 800 ಕಾರು ಮತ್ತು ಕ್ಯಾಂಟರ್ ನಡುವೆ ಡಿಕ್ಕಿ – 22 ವರ್ಷದ ಯುವಕ ಸಾ*ವು-Maruti 800 car and Canter collide – 22-year-old di*es
ಶಿವಮೊಗ್ಗ: ಶಿರಾಳಕೊಪ್ಪ-ಆನವಟ್ಟಿ ರಸ್ತೆಯಲ್ಲಿ ಕ್ಯಾಂಟರ್ ಹಾಗೂ ಮಾರುತಿ 800 ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟಿದ್ದು, ಕ್ಯಾಂಟರ್ ಚಾಲಕ ಗಾಯಗೊಂಡಿದ್ದಾರೆ.
ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ ಮತ್ತು ಜಾವಗಟ್ಟಿ ಗ್ರಾಮದ ಮಧ್ಯದ ಸೀತೆ ಮೋರಿ ಬಳಿ ಗುರುವಾರ (ಅ.29) ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಸೊರಬಕ್ಕೆ ಕುರಿ ಗೊಬ್ಬರ ಸಾಗಿಸುತ್ತಿದ್ದ ಕೆಎ-55-5540 ನೋಂದಣಿ ಸಂಖ್ಯೆಯ ಕ್ಯಾಂಟರ್ ವಾಹನವು ಜಾವಗಟ್ಟಿ ಗ್ರಾಮದಿಂದ ಶಿರಾಳಕೊಪ್ಪ ಮಾರ್ಗವಾಗಿ ತೆರಳುತ್ತಿತ್ತು. ಈ ವೇಳೆ ಎದುರಿನಿಂದ ಶಿರಾಳಕೊಪ್ಪ ಕಡೆಯಿಂದ ಬಂದ ಕೆಎ-02-ಎನ್-5027 ನೋಂದಣಿ ಸಂಖ್ಯೆಯ ಮಾರುತಿ ಸುಜುಕಿ 800 ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಿಳಿ ಪಟ್ಟಿಯನ್ನು ದಾಟಿ ಕ್ಯಾಂಟರ್ಗೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕ್ಯಾಂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರು ಚಾಲಕನಿಗೆ ತಲೆ, ಬಲಗಣ್ಣು, ಮುಖ, ಎಡಗೈ ಹಾಗೂ ಬಲಗಾಲಿಗೆ ಗಂಭೀರ ಗಾಯಗಳಾಗಿದ್ದು, ರಕ್ತಸ್ರಾವವಾಗಿತ್ತು. ಅಪಘಾತದ ಬಳಿಕ ಸ್ಥಳದಲ್ಲಿದ್ದವರು ಕಾರಿನಿಂದ ಚಾಲಕನನ್ನು ಹೊರತೆಗೆದು ರಕ್ಷಿಸಿ, ಅದೇ ಮಾರ್ಗವಾಗಿ ಬಂದ ಪಿಕಪ್ ಗೂಡ್ಸ್ ವಾಹನದಲ್ಲಿ ಬೆಳಿಗ್ಗೆ 10.15ರ ಸುಮಾರಿಗೆ ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತ ಕಾರು ಚಾಲಕನನ್ನು ಸೊರಬ ತಾಲ್ಲೂಕಿನ ಉದ್ರಿ ವಡ್ಡಗೆರೆ ಗ್ರಾಮದ ಓಂಕಾರಪ್ಪ ಅವರ ಪುತ್ರ ನಿಂಗರಾಜ್ (22) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಕ್ಯಾಂಟರ್ ಚಾಲಕ ಜಾವಗಟ್ಟಿ ಗ್ರಾಮದ ಸೋಮಶೇಖರ ಸಿ.ಟಿ. ಅವರ ಎಡಗಾಲಿಗೂ ಗಾಯವಾಗಿದೆ. ಕ್ಯಾಂಟರ್ನ ಚಾಲಕನ ಬದಿಯ ಮುಂಭಾಗದ ಬಂಪರ್ ಹಾಗೂ ಎರಡು ಮುಂದಿನ ಚಕ್ರಗಳು ಜಖಂಗೊಂಡಿವೆ.
ಈ ಸಂಬಂಧ ಕ್ಯಾಂಟರ್ ಮಾಲೀಕ ಹಾಗೂ ಜಾವಗಟ್ಟಿ ಗ್ರಾಮದ ಯೋಗಮೂರ್ತಿ (31) ಅವರು ಅ.30ರಂದು ಶಿರಾಳಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 299/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281, 125(ಎ) ಮತ್ತು 106(1)ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸ್ ಠಾಣಾಧಿಕಾರಿ ವಿರೇಶ್ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
Maruti 800 car and Canter collide – 22-year-old di*es
