SUDDILIVE || SAGARA
ತಾಳಗುಪ್ಪ ರೈಲ್ವೆ ಹಳಿಯಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದ ವ್ಯಕ್ತಿಯ ರಕ್ಷಣೆ: 112 ಪೊಲೀಸರ ಸಮಯಪ್ರಜ್ಞೆ- Man who attempted suicide on Talaguppa railway tracks rescued: 112 police's punctuality
ಸಾಗರ: ಕೌಟುಂಬಿಕ ಸಮಸ್ಯೆಗಳಿಂದ ಮನನೊಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಾಳಗುಪ್ಪದ ರೈಲ್ವೆ ನಿಲ್ದಾಣದತ್ತ ತೆರಳಿದ್ದ ವ್ಯಕ್ತಿಯೊಬ್ಬರನ್ನು ಇಆರ್‌ಎಸ್‌ಎಸ್–112 ತುರ್ತು ಸ್ಪಂದನಾ ವ್ಯವಸ್ಥೆಯ ಪೊಲೀಸರು ಸಮಯಪ್ರಜ್ಞೆಯಿಂದ ರಕ್ಷಿಸಿ, ಕುಟುಂಬದವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.
2026ರ ಅಕ್ಟೋಬರ್ 26ರ ಸಂಜೆ ವ್ಯಕ್ತಿಯೊಬ್ಬರು ಕೌಟುಂಬಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ತಾಳಗುಪ್ಪದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ತೆರಳಿರುವ ಬಗ್ಗೆ ಇಆರ್‌ಎಸ್‌ಎಸ್–112ಗೆ ಕರೆ ಬಂದಿತ್ತು.
ಕರೆ ಬಂದ ತಕ್ಷಣ ಕರ್ತವ್ಯದಲ್ಲಿದ್ದ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್‌ಐ ಸುರೇಂದ್ರ ಕುಮಾರ್ ಹಾಗೂ ವಾಹನ ಚಾಲಕರಾದ ಎ.ಎಚ್.ಸಿ. ಶಿವಾನಂದ್ ಅವರು ಕಾರ್ಯಪ್ರವೃತ್ತರಾದರು. ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ತಾಳಗುಪ್ಪ ರೈಲ್ವೆ ನಿಲ್ದಾಣದ ಬಳಿ ಪರಿಶೀಲನೆ ನಡೆಸಿದಾಗ, ವ್ಯಕ್ತಿಯೊಬ್ಬರು ರೈಲ್ವೆ ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿರುವುದು ಗಮನಕ್ಕೆ ಬಂದಿದೆ.
ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ವ್ಯಕ್ತಿಯನ್ನು ತಡೆದು, ಅವರಿಗೆ ಬುದ್ಧಿವಾದ ಹೇಳಿ ಸಮಾಧಾನಪಡಿಸಿದರು. ಬಳಿಕ ಅವರೊಂದಿಗೆ ಮಾತನಾಡಿ ಮನಸ್ಥಿತಿಯನ್ನು ತಿಳಿಗೊಳಿಸಿ, ಮನೆಯವರೊಂದಿಗೆ ಕಳುಹಿಸಿಕೊಡುವ ಮೂಲಕ ಸಂಭವಿಸಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.
ತುರ್ತು ಸಂದರ್ಭದಲ್ಲಿ 112ಗೆ ಬಂದ ಕರೆಯನ್ನು ಆಧರಿಸಿ ತ್ವರಿತವಾಗಿ ಸ್ಥಳಕ್ಕೆ ಧಾವಿಸಿ, ಗ್ರಾಮಸ್ಥರ ನೆರವಿನೊಂದಿಗೆ ವ್ಯಕ್ತಿಯನ್ನು ರಕ್ಷಿಸಿದ ಎಎಸ್‌ಐ ಸುರೇಂದ್ರ ಕುಮಾರ್ ಹಾಗೂ ಚಾಲಕ ಶಿವಾನಂದ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಕೌಟುಂಬಿಕ ಸಮಸ್ಯೆಗಳು ಸೇರಿದಂತೆ ವಿವಿಧ ಕಾರಣಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾದವರು ಆತುರದ ನಿರ್ಧಾರ ಕೈಗೊಳ್ಳದೆ, ಕುಟುಂಬದವರು ಹಾಗೂ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯುವುದು ಮುಖ್ಯವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಪೊಲೀಸ್ ಸಹಾಯಕ್ಕಾಗಿ 112 ಸಂಖ್ಯೆಯನ್ನು ಸಂಪರ್ಕಿಸಬಹುದು.
