SUDDILIVE || SHIVAMOGGA
ಶಿವಮೊಗ್ಗ: ಅನ್ಸೇಫ್ ವರದಿ ಬಂದರೂ ತನು ಜ್ಯೂಸ್ ಸೆಂಟರ್ ಪುನರಾರಂಭ! ಲೈಸೆನ್ಸ್ ರದ್ದಾಗಿದೆ ಎಂದ ಎಸಿ ಡಾ. ಮೈತ್ರಿ- Shivamogga: Tanu Juice Center reopens despite unsafe report! AC Dr. Maitri says license has been cancelled
ಶಿವಮೊಗ್ಗ: ನಗರದ ದುರ್ಗಿಗುಡಿಯ ರಾಘವೇಂದ್ರ ಸ್ವಾಮಿ ಮಠದ ಎದುರಿನ ತನು ಜ್ಯೂಸ್ ಸೆಂಟರ್ ಅನ್ನು ಸುಮಾರು ಒಂದೂವರೆ ತಿಂಗಳ ಹಿಂದೆ ಬಂದ್ ಮಾಡಿಸಲಾಗಿತ್ತು. ಆದರೆ ಇದೀಗ ಮಳಿಗೆಯ ಶಟರ್ ಮತ್ತೆ ತೆರೆದು ವ್ಯಾಪಾರ ಆರಂಭಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ಸೆಪ್ಟೆಂಬರ್ 15ರಂದು ಎಸಿ ಡಾ. ಮೈತ್ರಿ ಅವರ ನೇತೃತ್ವದಲ್ಲಿ ದುರ್ಗಿಗುಡಿಯ ರಾಘವೇಂದ್ರ ಸ್ವಾಮಿ ಮಠದ ಎದುರಿನ ತನು ಜ್ಯೂಸ್ ಸೆಂಟರ್ ಹಾಗೂ ತಿಲಕ್ ನಗರದ ಮತ್ತೊಂದು ಜ್ಯೂಸ್ ಸೆಂಟರ್ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ ಮಳಿಗೆಗಳಲ್ಲಿ ಕೊಳೆತ ಹಣ್ಣುಗಳು ಪತ್ತೆಯಾಗಿದ್ದವು. ಬಳಿಕ ಆಹಾರ ಸುರಕ್ಷತೆ ಪರೀಕ್ಷೆಗಾಗಿ ಹಣ್ಣುಗಳ ಮಾದರಿಗಳನ್ನು ಬೆಂಗಳೂರಿನ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಪ್ರಯೋಗಾಲಯದ ವರದಿಯಲ್ಲಿ ಅಸುರಕ್ಷಿತ ಎಂದು ಉಲ್ಲೇಖ
ಜ್ಯೂಸ್ ಸೆಂಟರ್ಗಳಲ್ಲಿ ಸಂಗ್ರಹಿಸಿದ್ದ ಹಣ್ಣುಗಳ ಮಾದರಿಗಳ ಪರೀಕ್ಷೆಯ ಬಳಿಕ ಬಂದ ವರದಿಯಲ್ಲಿ ಆಹಾರವು ಅಸುರಕ್ಷಿತ (Unsafe) ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಮಳಿಗೆ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.
ಆದರೆ, ರಾಘವೇಂದ್ರ ಸ್ವಾಮಿ ಮಠದ ಎದುರಿನ ತನು ಜ್ಯೂಸ್ ಸೆಂಟರ್ ಪುನಃ ಆರಂಭವಾಗಿರುವುದು ಸಾರ್ವಜನಿಕರ ಗಮನ ಸೆಳೆದಿದೆ. ಆಹಾರ ಅಸುರಕ್ಷಿತ ಎಂಬ ವರದಿ ಬಂದಿರುವಾಗ ಮಳಿಗೆ ಮತ್ತೆ ಕಾರ್ಯಾರಂಭ ಮಾಡಿರುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.
ಲೈಸೆನ್ಸ್ ರದ್ದಾಗಿದೆ: ಎಸಿ ಡಾ. ಮೈತ್ರಿ ಸ್ಪಷ್ಟನೆ
ಈ ಕುರಿತು ಸುದ್ದಿಲೈವ್ ಎಸಿ ಡಾ. ಮೈತ್ರಿ ಅವರನ್ನು ಸಂಪರ್ಕಿಸಿ ಮಾಹಿತಿ ಕೇಳಿದಾಗ, ಪ್ರಯೋಗಾಲಯದ ವರದಿ ಬಂದಿದ್ದು, ಅದರಲ್ಲಿ ಆಹಾರ ಅಸುರಕ್ಷಿತ ಎಂದು ತಿಳಿಸಲಾಗಿದೆ. ಈ ಸಂಬಂಧ ಪ್ರಾಸಿಕ್ಯೂಷನ್ಗಾಗಿ ಪತ್ರ ಬರೆಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಮಳಿಗೆ ಮತ್ತೆ ಆರಂಭವಾಗಿರುವ ಬಗ್ಗೆ ಕೇಳಿದಾಗ, ಅದನ್ನು ಯಾರು ಹೇಗೆ ಆರಂಭಿಸಿದ್ದಾರೆ ಎಂಬ ಮಾಹಿತಿ ತಮಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಸಂಬಂಧಪಟ್ಟ ಜ್ಯೂಸ್ ಸೆಂಟರ್ನ ಲೈಸೆನ್ಸ್ ರದ್ದಾಗಿದೆ. ತಮ್ಮ ಕಡೆಯಿಂದ ಯಾವುದೇ ಹೊಸ ಲೈಸೆನ್ಸ್ ನೀಡಿಲ್ಲ ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ಕ್ರಮದ ನಡುವೆಯೇ ಮಳಿಗೆ ಪುನರಾರಂಭ
ಆಹಾರ ಸುರಕ್ಷತೆ ಪರಿಶೀಲನೆ ವೇಳೆ ಕೊಳೆತ ಹಣ್ಣುಗಳು ಪತ್ತೆಯಾಗಿದ್ದು, ಪ್ರಯೋಗಾಲಯದ ವರದಿಯಲ್ಲೂ ಆಹಾರ ಅಸುರಕ್ಷಿತ ಎಂದು ಉಲ್ಲೇಖಿಸಲಾಗಿದೆ. ಮಳಿಗೆಯ ಲೈಸೆನ್ಸ್ ರದ್ದಾಗಿದೆ ಎಂದು ಎಸಿ ಸ್ಪಷ್ಟಪಡಿಸಿರುವ ನಡುವೆಯೇ ಅದು ಪುನರಾರಂಭಗೊಂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಲೈಸೆನ್ಸ್ ರದ್ದಾದ ಬಳಿಕ ಮಳಿಗೆ ಯಾವ ಆಧಾರದಲ್ಲಿ ಪುನರಾರಂಭಗೊಂಡಿದೆ? ಆಹಾರ ಸುರಕ್ಷತೆ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಮುಂದಿನ ಕ್ರಮ ಏನು? ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ.
Shivamogga: Tanu Juice Center reopens despite unsafe report! AC Dr. Maitri says license has been cancelled
