ಸಿದ್ದರಾಮಯ್ಯ ಅವರನ್ನು ಬಳಸಿ ಬಿಸಾಡುವ ಪಿತೂರಿ ನಡೆದಿದೆಯೇ? ತನಿಖೆಗೆ ವಿಜಯೇಂದ್ರ ಆಗ್ರಹ-Was there a conspiracy to use and throw away Siddaramaiah? Vijayendra demands an investigation

 SUDDILIVE || SHIVAMOGGA

ಸಿದ್ದರಾಮಯ್ಯ ಅವರನ್ನು ಬಳಸಿ ಬಿಸಾಡುವ ಪಿತೂರಿ ನಡೆದಿದೆಯೇ? ತನಿಖೆಗೆ ವಿಜಯೇಂದ್ರ ಆಗ್ರಹ-Was there a conspiracy to use and throw away Siddaramaiah? Vijayendra demands an investigation
Vijendra, siddaramaiah

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಗೆ ಕಾಂಗ್ರೆಸ್ ಆಸಕ್ತಿ ತೋರುತ್ತಿಲ್ಲ; ಖರ್ಗೆ ಹೇಳಿಕೆ ದೇಶದ ಜನರ ಕ್ಷಮೆ ಕೇಳಬೇಕು



ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ನಡೆಸುವ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ಆಸಕ್ತಿ ತೋರುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಮುಖ ಪಾತ್ರ ವಹಿಸಿದ ಸಿದ್ದರಾಮಯ್ಯ ಅವರನ್ನು ಬಳಸಿ ಬಿಸಾಡುವ ಪಿತೂರಿ ನಡೆದಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಹಿಂದೆ ತಮ್ಮ ಪಕ್ಷದವರೇ ಪಿತೂರಿ ನಡೆಸಿದ್ದಾರೆ ಎಂದು ಸ್ವತಃ ಸಿದ್ದರಾಮಯ್ಯ ಅವರೇ ಬಹಿರಂಗವಾಗಿ ಹೇಳಿದ್ದಾರೆ. ಹೀಗಿರುವಾಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮೀನಾಮೇಷ ಎಣಿಸದೆ ಪ್ರಕರಣದ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ, ಸತ್ಯಾಸತ್ಯತೆ ಹೊರಬರುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನ ಸಿಡಿ ಫ್ಯಾಕ್ಟರಿ ವಿಧಾನಸೌಧಕ್ಕೆ ಸ್ಥಳಾಂತರ?

ಕಾಂಗ್ರೆಸ್ ಪಕ್ಷದ ಸಿಡಿ ಫ್ಯಾಕ್ಟರಿ ಈ ಹಿಂದೆ ಕೆಪಿಸಿಸಿ ಕಚೇರಿಯಲ್ಲಿತ್ತು. ಇದೀಗ ಅದು ವಿಧಾನಸೌಧಕ್ಕೆ ಸ್ಥಳಾಂತರಗೊಂಡಿದೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.

ಕರ್ನಾಟಕದಲ್ಲಿ ಸಿಡಿ ಫ್ಯಾಕ್ಟರಿ ಇಟ್ಟುಕೊಂಡು ಪೆನ್‌ಡ್ರೈವ್ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕುತಂತ್ರದ ಪಿತಾಮಹ ಯಾರು ಎಂಬುದರ ಬಗ್ಗೆ ಕಾಂಗ್ರೆಸ್ ಪಕ್ಷದ ಶಾಸಕರೇ ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಆಡಳಿತ ಪಕ್ಷದ ಶಾಸಕರು ಹಾಗೂ ಸರ್ಕಾರದಲ್ಲಿರುವ ಅನೇಕ ಹಿರಿಯ ಸಚಿವರು ಭಯಭೀತರಾಗಿದ್ದಾರೆ. ಎಲ್ಲಿ ತಮ್ಮ ಸಿಡಿ ಬಿಡುಗಡೆ ಮಾಡುತ್ತಾರೋ ಎಂಬ ಆತಂಕ ಅವರನ್ನು ಕಾಡುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು.

ಮೈಸೂರು ದಸರಾ ಸಂಪ್ರದಾಯ ಮುರಿದಿದ್ದಾರೆ: ವಿಜಯೇಂದ್ರ ಟೀಕೆ

ಈ ಬಾರಿಯ ಮೈಸೂರು ದಸರಾವನ್ನು ರಾಜಮನೆತನವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಆಯೋಜಿಸಲಾಗಿದ್ದು, ದಸರಾ ಅವ್ಯವಸ್ಥೆಯ ಗೂಡಾಗಿತ್ತು ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಚಾರದ ಚಟಕ್ಕೆ ಬಿದ್ದು ಸಂಪ್ರದಾಯಗಳನ್ನು ಮುರಿದಿದ್ದಾರೆ ಎಂದು ಆರೋಪಿಸಿದ ಅವರು, ತಮ್ಮ ಜನಪ್ರಿಯತೆಗೆ ಕಟ್ಟುಬಿದ್ದು ಮೈಸೂರಿನಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಭಾವಚಿತ್ರಗಳು ಇಲ್ಲದಂತೆ ನೋಡಿಕೊಂಡಿದ್ದಾರೆ ಎಂದು ದೂರಿದರು.

ಮುಖ್ಯಮಂತ್ರಿಯವರ ಪ್ರಚಾರದ ಹಪಾಹಪಿ ನಾಡಿನ ಸಂಸ್ಕೃತಿಯನ್ನೇ ಬಲಿ ತೆಗೆದುಕೊಂಡಿದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಮೋದಿ ವಿರುದ್ಧದ ಖರ್ಗೆ ಹೇಳಿಕೆಗೆ ವಿಜಯೇಂದ್ರ ಖಂಡನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅವರ ತಂದೆಯ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರವಾಗಿ ಖಂಡಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ನಾಲಿಗೆ ಹರಿಬಿಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಂದೆಯ ಬಗ್ಗೆ ಮಾತನಾಡುವ ಮೂಲಕ ತಮ್ಮ ಮನಸ್ಥಿತಿಯನ್ನು ತೋರಿಸಿದ್ದಾರೆ. ಅವರ ಹೇಳಿಕೆ ರಾಹುಲ್ ಗಾಂಧಿ ಅವರ ಮನಸ್ಥಿತಿಯನ್ನೂ ಬಯಲು ಮಾಡಿದೆ ಎಂದು ವಿಜಯೇಂದ್ರ ಟೀಕಿಸಿದರು.

ಬಿಜೆಪಿ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವುದನ್ನು ಉಲ್ಲೇಖಿಸಿದ ಅವರು, ಈ ಸಾಧನೆ ರಾಹುಲ್ ಗಾಂಧಿ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರ ಭಿಕ್ಷೆಯಿಂದ ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸರ್ಕಾರದ ಜನಪ್ರಿಯತೆಯನ್ನು ಸಹಿಸಿಕೊಳ್ಳಲಾಗದೆ ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಗಾಂಧಿ ಕುಟುಂಬವನ್ನು ಹೊರತುಪಡಿಸಿ ಬೇರೆ ಯಾರೂ ಪ್ರಧಾನಿಯಾಗಬಾರದು ಎಂಬ ಮನೋಭಾವ ಕಾಂಗ್ರೆಸ್ ನಾಯಕರಲ್ಲಿದೆ ಎಂದು ಟೀಕಿಸಿದ ವಿಜಯೇಂದ್ರ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನೀಡಿರುವ ಹೇಳಿಕೆಗಾಗಿ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಜನರ ಮುಂದೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

Was there a conspiracy to use and throw away Siddaramaiah? Vijayendra demands an investigation

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close