ಮೀಸಲಾತಿ ಕಾಯ್ದೆ 9ನೇ ಅನುಸೂಚಿಗೆ ಸೇರಿಸಿ ಹೆಚ್ಚಿಸಿ; ಇಲ್ಲದಿದ್ದರೆ ಹೋರಾಟ ತೀವ್ರ: ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಎಚ್ಚರಿಕೆ-Add Reservation Act to 9th Schedule; otherwise, the struggle will intensify: Former MP V.S. Ugrappa warns

 SUDDILIVE || SHIVAMOGGA

ಮೀಸಲಾತಿ ಕಾಯ್ದೆ 9ನೇ ಅನುಸೂಚಿಗೆ ಸೇರಿಸಿ ಹೆಚ್ಚಿಸಿ; ಇಲ್ಲದಿದ್ದರೆ ಹೋರಾಟ ತೀವ್ರ: ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಎಚ್ಚರಿಕೆ-Add Reservation Act to 9th Schedule; otherwise, the struggle will intensify: Former MP V.S. Ugrappa warns
Vs, ugrappa


ಶಿವಮೊಗ್ಗ:
ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಗೆ ಸಂಬಂಧಿಸಿದ ಕರ್ನಾಟಕ ರಾಜ್ಯದ 2022ರ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಕರೆದೊಯ್ದು ಪ್ರಧಾನಮಂತ್ರಿಗಳ ಮೇಲೆ ಒತ್ತಡ ತರಬೇಕು ಎಂದು ಮಾಜಿ ಸಂಸದ ಹಾಗೂ ಮಾಜಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.

ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಕಾಯ್ದೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿರುವುದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ತೊಂದರೆಯಾಗುವ ಆತಂಕವಿದೆ ಎಂದು ಹೇಳಿದರು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡದೆ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ನ್ಯಾಯಕ್ಕೆ ಹಿನ್ನಡೆಯಾಗಿದೆ

ಸಾಮಾಜಿಕ ನ್ಯಾಯಕ್ಕೆ ಗ್ರಹಣ ಹಿಡಿದಂತಾಗಿದೆ. ಮೀಸಲಾತಿಗೆ ಸಂಬಂಧಿಸಿದ ಕಾಯ್ದೆಯನ್ನು ರದ್ದುಪಡಿಸಿರುವುದರಿಂದ ಹಲವು ವರ್ಷಗಳಿಂದ ಮೀಸಲಾತಿಯ ಪ್ರಯೋಜನ ಪಡೆಯುತ್ತಿದ್ದ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಬಗ್ಗೆ ಆತಂಕ ಉಂಟಾಗಿದೆ ಎಂದು ಉಗ್ರಪ್ಪ ಅಭಿಪ್ರಾಯಪಟ್ಟರು.

ವಕೀಲನಾಗಿ, ಮಾಜಿ ಸಂಸದನಾಗಿ ಹಾಗೂ ವಿಧಾನ ಪರಿಷತ್ತಿನ ಮಾಜಿ ವಿರೋಧ ಪಕ್ಷದ ನಾಯಕನಾಗಿ ನ್ಯಾಯಾಲಯಗಳ ಬಗ್ಗೆ ತಮಗೆ ಅಪಾರ ಗೌರವವಿದೆ ಎಂದು ಸ್ಪಷ್ಟಪಡಿಸಿದ ಅವರು, ಮೀಸಲಾತಿ ವಿಚಾರದಲ್ಲಿ ಸಂವಿಧಾನ ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಸಮಗ್ರವಾಗಿ ಪರಿಶೀಲಿಸಬೇಕಿದೆ ಎಂದರು.

ಸಂವಿಧಾನದ 340ನೇ ವಿಧಿ ಹಿಂದುಳಿದ ವರ್ಗಗಳ ಸ್ಥಿತಿಗತಿಯ ಅಧ್ಯಯನಕ್ಕೆ ಸಂಬಂಧಿಸಿದ್ದು, 341ನೇ ವಿಧಿ ಪರಿಶಿಷ್ಟ ಜಾತಿಗಳು ಹಾಗೂ 342ನೇ ವಿಧಿ ಪರಿಶಿಷ್ಟ ಪಂಗಡಗಳ ಅಧಿಸೂಚನೆಗೆ ಸಂಬಂಧಿಸಿದೆ ಎಂದು ವಿವರಿಸಿದರು.

ಮೀಸಲಾತಿಯ ಪ್ರಮಾಣ ಶೇ.50 ಮೀರಬಾರದು ಎಂಬ ತತ್ವವನ್ನು ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪ್ರತಿಪಾದಿಸಿದ್ದರೂ, ಅಸಾಧಾರಣ ಸಂದರ್ಭಗಳಲ್ಲಿ ಸೂಕ್ತ ದತ್ತಾಂಶ ಮತ್ತು ಪ್ರಾತಿನಿಧ್ಯದ ಕೊರತೆಯ ಆಧಾರದಲ್ಲಿ ಶೇ.50ರ ಮಿತಿಯನ್ನು ಮೀರಲು ಅವಕಾಶವಿರುವುದನ್ನು ತೀರ್ಪು ಗುರುತಿಸಿದೆ ಎಂದು ಅವರು ಹೇಳಿದರು.

ಶೇ.56 ಮೀಸಲಾತಿ ಕಾಯ್ದೆಗೆ ರಕ್ಷಣೆ ನೀಡಬೇಕು

ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಪರಿಶಿಷ್ಟ ಜಾತಿಗಳಲ್ಲಿ 101 ಜಾತಿಗಳಿದ್ದು, ಅವರ ಜನಸಂಖ್ಯೆ ಸುಮಾರು ಒಂದೂವರೆ ಕೋಟಿ ಹಾಗೂ ಪ್ರಮಾಣ ಶೇ.17.1ರಷ್ಟಿದೆ ಎಂದು ಉಗ್ರಪ್ಪ ಹೇಳಿದರು. ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಸುಮಾರು 50 ಲಕ್ಷದಷ್ಟಿದ್ದು, ಒಬಿಸಿ ವರ್ಗದಲ್ಲಿ ಸುಮಾರು 2,000 ಜಾತಿಗಳಿವೆ ಮತ್ತು ಅವರ ಪ್ರಮಾಣ ಶೇ.42ರಷ್ಟಿದೆ ಎಂದು ಅವರು ಅಂದಾಜುಗಳನ್ನು ಉಲ್ಲೇಖಿಸಿದರು.

ಒಟ್ಟಾರೆ ಈ ಮೂರು ವರ್ಗಗಳಿಗೆ ಸೇರಿದ ಸುಮಾರು ನಾಲ್ಕರಿಂದ ನಾಲ್ಕೂವರೆ ಕೋಟಿ ಜನರ ಹಿತಾಸಕ್ತಿಯನ್ನು ಮೀಸಲಾತಿ ಕಾಯ್ದೆಯ ವಿಚಾರದಲ್ಲಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

2022ರ ಕಾಯ್ದೆಯ ಆಧಾರದಲ್ಲಿ 2022ರಿಂದ 2025ರವರೆಗೆ ಹಲವು ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್, ಕಾನೂನು ಮತ್ತು ನರ್ಸಿಂಗ್ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ. ವಿವಿಧ ಇಲಾಖೆಗಳಲ್ಲಿಯೂ ಉದ್ಯೋಗಗಳನ್ನು ಪಡೆದಿದ್ದಾರೆ. ಇದೀಗ ಕಾಯ್ದೆ ರದ್ದಾದ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸುಮಾರು 72,000 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿಯೂ ಮೀಸಲಾತಿಯ ಪ್ರಮಾಣದ ಬದಲಾವಣೆಯಿಂದ ಸಮಸ್ಯೆಗಳು ಎದುರಾಗಬಹುದು ಎಂದು ಅವರು ಹೇಳಿದರು. ವಿವಿಧ ನೇಮಕಾತಿ ಅಧಿಸೂಚನೆಗಳಲ್ಲಿ ಶೇ.56ರ ಮೀಸಲಾತಿ ಆಧರಿಸಿ ಹುದ್ದೆಗಳನ್ನು ಪ್ರಕಟಿಸಲಾಗಿರುವುದರಿಂದ ಈ ವಿಚಾರವನ್ನು ತ್ವರಿತವಾಗಿ ಇತ್ಯರ್ಥಪಡಿಸುವುದು ಅಗತ್ಯವಾಗಿದೆ ಎಂದರು.

ಬಿಜೆಪಿಯೇ ಜಾರಿಗೆ ತಂದ ಕಾಯ್ದೆ: ಉಗ್ರಪ್ಪ

2022ರಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲ ಪಕ್ಷಗಳ ಸಹಕಾರದೊಂದಿಗೆ ಮೀಸಲಾತಿ ಕಾಯ್ದೆ ಜಾರಿಗೊಂಡಿತ್ತು ಎಂದು ಉಗ್ರಪ್ಪ ನೆನಪಿಸಿದರು. ಹೀಗಾಗಿ ಕಾಯ್ದೆಗೆ ಕಾನೂನು ರಕ್ಷಣೆ ಒದಗಿಸಲು ಬಿಜೆಪಿ ನಾಯಕರು ಮುಂದಾಗಬೇಕು ಎಂದು ಆಗ್ರಹಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ರಾಜ್ಯದ ಬಿಜೆಪಿ ನಾಯಕರು ಪ್ರಧಾನಮಂತ್ರಿಗಳ ಮೇಲೆ ಒತ್ತಡ ತರಬೇಕು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ದತ್ತಾತ್ರೇಯ ಹೊಸಬಳೆ ಅವರೂ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದರು.

ದತ್ತಾತ್ರೇಯ ಹೊಸಬಳೆ ತಮ್ಮ ಆತ್ಮೀಯ ಸ್ನೇಹಿತರಾಗಿದ್ದು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಬ್ಬರೂ ಒಂದೂವರೆ ವರ್ಷ ಜೈಲಿನಲ್ಲಿದ್ದುದನ್ನು ಉಗ್ರಪ್ಪ ಸ್ಮರಿಸಿದರು.

ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಿದ್ದ ಬಿಜೆಪಿ ಸರ್ಕಾರದ ನಾಯಕರೇ ಈಗ ಅದಕ್ಕೆ ರಕ್ಷಣೆ ಒದಗಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಮತಗಳನ್ನು ಪಡೆದಿರುವ ಬಿಜೆಪಿ ನಾಯಕರು ಈ ಸಮುದಾಯಗಳ ಹಿತಾಸಕ್ತಿಯನ್ನೂ ಕಾಪಾಡಬೇಕು ಎಂದು ಹೇಳಿದರು.

9ನೇ ಅನುಸೂಚಿಗೆ ಸೇರಿಸಲು ಹಲವು ಬಾರಿ ಮನವಿ

ಶೇ.56ರ ಮೀಸಲಾತಿಗೆ ಸಂಬಂಧಿಸಿದ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸುವಂತೆ ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಮನವಿ ಸಲ್ಲಿಸುತ್ತಾ ಬಂದಿವೆ ಎಂದು ಉಗ್ರಪ್ಪ ತಿಳಿಸಿದರು.

2023ರ ಮಾರ್ಚ್ 23ರಂದು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಈ ವಿಚಾರವಾಗಿ ಕೇಂದ್ರಕ್ಕೆ ಪತ್ರ ಬರೆದಿತ್ತು. ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಹಾಗೂ ನ್ಯಾಯಮೂರ್ತಿ ಹಾದಿ ಸಮಿತಿಯ ಶಿಫಾರಸುಗಳನ್ನು ಉಲ್ಲೇಖಿಸಿದ ಅವರು, ಶೇ.56ರ ಮೀಸಲಾತಿ ಜಾರಿಗೆ ತರುವುದರ ಜೊತೆಗೆ ಕಾಯ್ದೆಗೆ ಸಂವಿಧಾನಾತ್ಮಕ ರಕ್ಷಣೆ ಒದಗಿಸುವ ಅಗತ್ಯವಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026ರ ಏಪ್ರಿಲ್ 16ರಂದು ಮೀಸಲಾತಿ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಉಗ್ರಪ್ಪ ಹೇಳಿದರು.

ಕಳೆದ ಡಿಸೆಂಬರ್‌ನಲ್ಲಿ ವಿಧಾನಮಂಡಲದ ಉಭಯ ಸದನಗಳಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ಒಮ್ಮತದಿಂದ ಈ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸುವಂತೆ ನಿರ್ಣಯ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.

ತಮಿಳುನಾಡಿನ ಶೇ.69ರ ಮೀಸಲಾತಿ ವ್ಯವಸ್ಥೆಗೆ ಸಂಬಂಧಿಸಿದ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸಿರುವ ಮಾದರಿಯಲ್ಲಿ ಕರ್ನಾಟಕದ ಮೀಸಲಾತಿ ಕಾಯ್ದೆಗೂ ರಕ್ಷಣೆ ನೀಡಬೇಕು ಎಂಬುದು ರಾಜ್ಯದ ಒಮ್ಮತದ ನಿಲುವಾಗಿದೆ ಎಂದು ಹೇಳಿದರು.

ನವೆಂಬರ್ 15ರೊಳಗೆ ಕ್ರಮ ಕೈಗೊಳ್ಳಲು ಆಗ್ರಹ

ಪ್ರಧಾನಮಂತ್ರಿಗಳು ನವೆಂಬರ್ 15ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ಎಂಬ ವರದಿಗಳಿದ್ದು, ಅದಕ್ಕೂ ಮುನ್ನ ಕರ್ನಾಟಕದ ಮೀಸಲಾತಿ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.

ರಾಜ್ಯ ಸರ್ಕಾರ ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಕರೆದೊಯ್ದು ಪ್ರಧಾನಮಂತ್ರಿಗಳನ್ನು ಭೇಟಿಯಾಗಿ ಒತ್ತಡ ತರಬೇಕು. ರಾಜ್ಯದ ಬಿಜೆಪಿ ನಾಯಕರು ಕೂಡ ಪಕ್ಷಾತೀತವಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರದಿಂದ ಪರಿಹಾರ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಜನಜಾಗೃತಿ ಅಭಿಯಾನವನ್ನು ತೀವ್ರಗೊಳಿಸಲಾಗುವುದು. ಪ್ರಧಾನಮಂತ್ರಿಗಳ ಬೆಂಗಳೂರು ಭೇಟಿಯ ಸಂದರ್ಭದಲ್ಲಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಸಮುದಾಯಗಳ ನೋವನ್ನು ವ್ಯಕ್ತಪಡಿಸಲಾಗುವುದು ಎಂದು ಎಚ್ಚರಿಸಿದರು.

ರಾಜ್ಯಾದ್ಯಂತ ಜನಜಾಗೃತಿ ಅಭಿಯಾನ

ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಎರಡನೇ ಹಂತದ ರಾಜ್ಯವ್ಯಾಪಿ ಅಭಿಯಾನ ಆರಂಭಿಸಲಾಗಿದೆ. ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಅಭಿಯಾನ ನಡೆಸಲಾಗಿದ್ದು, ಇದೀಗ ಶಿವಮೊಗ್ಗದಲ್ಲಿಯೂ ಮುಂದುವರಿಸಲಾಗಿದೆ ಎಂದು ಉಗ್ರಪ್ಪ ತಿಳಿಸಿದರು.

1991ರಲ್ಲಿ ನಾಯಕ್ ಸಮಾಜದ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ವಿಚಾರದಲ್ಲಿ ತಾವು ಪ್ರಯತ್ನ ನಡೆಸಿದ್ದನ್ನು ಸ್ಮರಿಸಿದ ಅವರು, ಹಿಂದುಳಿದ ಹಾಗೂ ಶೋಷಿತ ಸಮುದಾಯಗಳ ಬದುಕಿನಲ್ಲಿ ಆಶಾಕಿರಣ ಮೂಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಹೇಳಿದರು.

ಸಾಮಾಜಿಕ ನ್ಯಾಯದ ರಕ್ಷಣೆ ಮತ್ತು ಮೀಸಲಾತಿ ಕಾಯ್ದೆಗೆ ಸಂವಿಧಾನಾತ್ಮಕ ರಕ್ಷಣೆ ದೊರಕಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಯಲಿದೆ ಎಂದು ಉಗ್ರಪ್ಪ ಸ್ಪಷ್ಟಪಡಿಸಿದರು.

ನಟ ಸುದೀಪ್ ವಿರುದ್ಧದ ನಮ್ಮ‌ಮಾತು ವೈಯುಕ್ತಿಕವಲ್ಲ

ಸಮಾವೇಶವೊಂದರಲ್ಲಿ ನಟ ಸುದೀಪ್ ವಿರುದ್ಧದ ಮಾತು ವೈಯುಕ್ತಿಕವಲ್ಲ. ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಹಾಗಾಗಿ ಹೋರಾಟಕ್ಕೆ ಬರುವಂತೆ ಅನೇಕರಿಗೆ ಕರೆದಿರುವೆ. ಅದರಲ್ಲಿ ಕೆಲವರು ಬಂದರು. ಹೋರಾಟಕ್ಕೆ ನಿಮ್ಮ‌ಬಲ ಅಗತ್ಯವಿತ್ತು ಎಂಬುದು ನಮ್ಮ ಮಾತಿನ ಒಳ ಅರ್ಥವಿತ್ತು ಎಂದರು.  

ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಎಂಜಿನಿಯರ್ ಹನುಮಂತ ರಾಯಪ್ಪ, ನಿವೃತ್ತಿ ಸೂಪರಿಂಟೆಂಡಿಂಗ್ ಎಂಜಿನಿಯರ್ ಹಾಗೂ ಉದ್ಯಮಿಯಾದ ಸಮಾನ ಮನಸ್ಕರ ವೇದಿಕೆಯ ಕಾರ್ಯಾಧ್ಯಕ್ಷ ನರಸಿಂಹಯ್ಯ, ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ಲಕ್ಷ್ಮಣಪ್ಪ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಹಾಗೂ ಹಿರಿಯರು ಉಪಸ್ಥಿತರಿದ್ದರು.

Add Reservation Act to 9th Schedule; otherwise, the struggle will intensify: Former MP V.S. Ugrappa warns

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close