ಮಗಳನ್ನ ನೀಡಿ ಮದುವೆ ಮಾಡುವುದಾಗಿ ಸುಲಿಗೆಯ ಆರೋಪ-ಯುವಕ ಆತ್ಮಹತ್ಯೆ- Bhadravati: A young man named four people in a video call before his death; accused of harassing him over money

SUDDILIVE || BHADRAVATHI

ಮಗಳನ್ನ ನೀಡಿ ಮದುವೆ ಮಾಡುವುದಾಗಿ ಸುಲಿಗೆಯ ಆರೋಪ-ಯುವಕ ಆತ್ಮಹತ್ಯೆ- Bhadravati: A young man named four people in a video call before his death; accused of harassing him over money   

Bhadravathi, yuvaka


ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನೊಬ್ಬ ವಿಷ ಸೇವಿಸಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ತನ್ನ ಸಾವಿಗೆ ನಾಲ್ವರು ಕಾರಣ ಎಂದು ಯುವಕ ಸಾವಿಗೂ ಮುನ್ನ ವಿಡಿಯೋ ಕಾಲ್‌ನಲ್ಲಿ ಹೇಳಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಯುವಕನ ತಾಯಿ ನೀಡಿದ ದೂರಿನ ಆಧಾರದ ಮೇಲೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಭದ್ರಾವತಿ ನಗರದ ಎನ್‌ಎಂಸಿ ಹೊಸಮನೆ 6ನೇ ಕ್ರಾಸ್ ನಿವಾಸಿ, 23 ವರ್ಷದ ಆರ್. ಪ್ರತಾಪ್ ಮೃತಪಟ್ಟ ಯುವಕ. ಗಾರೆ ಕೆಲಸ ಮಾಡಿಕೊಂಡಿದ್ದ ಪ್ರತಾಪ್ ಸಾವಿಗೆ ಶಿವಗಾಮಿ, ಪೊನ್ನಮ್ಮ, ನಿರ್ಮಲಾ ಮತ್ತು ಸಣ್ಣವಯಸ್ಸಿನ‌ಮಗಳು ಕಾರಣರಾಗಿದ್ದಾರೆ ಎಂದು ಆತನ ತಾಯಿ ಶಾಂತಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.

ಮದುವೆ ಮಾಡಿಸುವುದಾಗಿ ನಂಬಿಸಿ ಹಣ ಪಡೆದ ಆರೋಪ

ಪೊಲೀಸ್ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವಂತೆ, ಪ್ರತಾಪ್ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಪೊನ್ನಮ್ಮ ಎಂಬ ಮಹಿಳೆಯ ಪರಿಚಯವಾಗಿತ್ತು. ಕೆಲಸಕ್ಕೆ ಹೋಗುವಾಗ ಮತ್ತು ಬರುವಾಗ ಆಕೆಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ.

ಈ ವೇಳೆ ಪೊನ್ನಮ್ಮ ತನ್ನ ಅಪ್ರಾಪ್ತ ಮಗಳನ್ನ ಪ್ರತಾಪ್‌ಗೆ ಮದುವೆ ಮಾಡಿಕೊಡುವುದಾಗಿ ಆಸೆ ತೋರಿಸಿ, ಆತನಿಂದ ಸುಮಾರು 2 ಲಕ್ಷ ರೂಪಾಯಿ ಹಣ ಹಾಗೂ ಎರಡು ಮೊಬೈಲ್‌ಗಳನ್ನು ಪಡೆದುಕೊಂಡಿದ್ದಾರೆ ಎಂದು ತಾಯಿ ಶಾಂತಮ್ಮ ಆರೋಪಿಸಿದ್ದಾರೆ.

ನಂತರ ಪ್ರತಾಪ್‌ಗೆ ಎದುರು ಮನೆಯ ನಿರ್ಮಲಾ ಅವರ ಮೊಬೈಲ್ ನಂಬರ್ ನೀಡಲಾಗಿತ್ತು. ಅಪ್ರಾಪ್ತಳ ಕುರಿತು ಕೆಟ್ಟದಾಗಿ ಮಾತನಾಡುವಂತೆ ಮಾಡಿ, ಆತ ಮಾತನಾಡಿದ್ದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಣ, ಚಿನ್ನ ಮತ್ತು ಫೀಸ್ ನೀಡುವಂತೆ ಒತ್ತಡ

ಪ್ರತಾಪ್ ಹೊಸ ಮೊಬೈಲ್ ಖರೀದಿಸಿ ಬೇರೆ ಕಡೆ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿಯೂ ಆನಂದ ಎಂಬ ವ್ಯಕ್ತಿಯಿಂದ ಆತನ ಮೊಬೈಲ್ ನಂಬರ್ ಪಡೆದು ಮತ್ತೆ ಕರೆ ಮಾಡಲಾಗಿತ್ತು. ಕೆಲಸಕ್ಕೆ ಕರೆದುಕೊಂಡು ಹೋಗುವಂತೆ ಹೇಳಲಾಗಿತ್ತು ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಶಿವಗಾಮಿ ಅವರು ಅಪ್ರಾಪ್ತಳನ್ನ ಮುಂದೆ ಬಿಟ್ಟು ಪ್ರತಾಪ್‌ನಿಂದ ಚಿನ್ನದ ಸರ, ಉಂಗುರ ಬೇಕೆಂದು ಕೇಳುತ್ತಿದ್ದರು. ಇದಕ್ಕಾಗಿ ಪ್ರತಾಪ್ ಸಾಲ ಮಾಡಿ 5 ಸಾವಿರ, 10 ಸಾವಿರ ರೂಪಾಯಿಗಳನ್ನು ನೀಡುತ್ತಿದ್ದನು. ಅಲ್ಲದೆ, ಅಪ್ರಾಪ್ತಳ ಕಾಲೇಜು ಫೀಸ್ ಮತ್ತು ಕಂಪ್ಯೂಟರ್ ಕ್ಲಾಸ್ ಫೀಸ್ ಕೂಡ ಪ್ರತಾಪ್ ಕಟ್ಟಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹಣ ನೀಡದಿದ್ದರೆ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ರೌಡಿಗಳಿಗೆ ಹಣ ನೀಡಿ ಪ್ರತಾಪ್‌ಗೆ ಹೊಡೆಸಲಾಗಿತ್ತು. ಈ ರೀತಿಯಾಗಿ ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಶಾಂತಮ್ಮ ಆರೋಪಿಸಿದ್ದಾರೆ.

‘ಮೊದಲು ಸಾಯಿ’ ಎಂದು ಪ್ರಚೋದನೆ ಆರೋಪ

ಪ್ರತಾಪ್‌ಗೆ ಸುಮಾರು ಎರಡು ತಿಂಗಳಿಂದ ಇದೇ ರೀತಿಯ ತೊಂದರೆ ನೀಡಲಾಗುತ್ತಿತ್ತು. ಫೋನ್ ಮಾಡಿ ಹಿಂಸೆ ನೀಡುವುದು, ಹಣಕ್ಕಾಗಿ ಒತ್ತಡ ಹೇರುವುದು ಹಾಗೂ ಪೋಕ್ಸೋ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಪ್ರತಾಪ್‌ಗೆ ‘ನೀನು ಮೊದಲು ಸಾಯಿ’ ಎಂದು ಪ್ರಚೋದನೆ ನೀಡಲಾಗಿತ್ತು ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖವಾಗಿದೆ.

2026ರ ಸೆಪ್ಟೆಂಬರ್ 26ರಂದು ಭದ್ರಾವತಿ ನ್ಯೂಟೌನ್ ಬಳಿಯ ಪಾರ್ಕ್ ರಸ್ತೆಯಲ್ಲಿ ಪ್ರತಾಪ್ ವಿಷ ಸೇವಿಸಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಆತ ಸೆ.29 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ  ಅಸುನೀಗಿದ್ದಾನೆ. 

ಸಾವಿಗೂ ಮುನ್ನ ವಿಡಿಯೋ ಕಾಲ್‌ನಲ್ಲಿ ಆರೋಪಿಗಳ ಹೆಸರು

ಪ್ರತಾಪ್ ವಿಷ ಸೇವಿಸಿದ ಬಳಿಕ ಈ ವಿಚಾರವನ್ನು ಸಂಬಂಧಪಟ್ಟವರಿಗೆ ತಿಳಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಪ್ರತಾಪ್ ಮೃತಪಟ್ಟಿರುವುದಕ್ಕೆ ಶಿವಗಾಮಿ, ನಿರ್ಮಲಾ ಮತ್ತು ಪೊನ್ನಮ್ಮ ಅವರೇ ಕಾರಣ ಎಂದು ಸಾವಿಗೂ ಮುನ್ನ ವಿಡಿಯೋ ಕಾಲ್ ಮಾಡಿ ಹೇಳಿದ್ದಾನೆ ಎಂದು ತಾಯಿ ಶಾಂತಮ್ಮ ಆರೋಪಿಸಿದ್ದಾರೆ.

ಇದಲ್ಲದೆ, ತನ್ನ ಮಗನ ಸಾವಿಗೂ ಮುನ್ನ ಆತನಿಗೆ ಬೆದರಿಕೆ ಹಾಕಲಾಗುತ್ತಿತ್ತು ಮತ್ತು ಮಾನಸಿಕ ಹಿಂಸೆ ನೀಡಲಾಗುತ್ತಿತ್ತು ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರತಾಪ್ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ. ದೂರು ದಾಖಲಾಗಿ 6 ದಿನಗಳೆದರೂ ಆರೋಪಿಗಳನ್ನ ಬಂಧಿಸಿಲ್ಲ ಎಂದು ಮೃತರ ಕುಟುಂಬ ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ. 

ನಾಲ್ವರ ವಿರುದ್ಧ ಪ್ರಕರಣ ದಾಖಲು

ಶಾಂತಮ್ಮ ಅವರು 2026ರ ಅಕ್ಟೋಬರ್ 30ರಂದು ಮಧ್ಯಾಹ್ನ 12.30ಕ್ಕೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಶಿವಗಾಮಿ (ಎ1), ಪೊನ್ನಮ್ಮ (ಎ2), ನಿರ್ಮಲಾ (ಎ3) ಮತ್ತು ಅಪ್ರಾಪ್ತಳ ವಿರುದ್ಧ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 221/2026ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 352, 115(2), 351(2), 108 ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

Bhadravati: A young man named four people in a video call before his death; accused of harassing him over money   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close