ಸೋಲಿಸಬೇಕೆಂದಿದ್ದರೆ ಜನ ಇವಿಎಂ ಆದರೂ ಸರಿ, ಬ್ಯಾಲೆಟ್ ಪೇಪರ್ ಆದರೂ ಸರಿನೇ ಸೋಲಿಸುತ್ತಾರೆ-ಸಿಟಿ ರವಿ-If people want to defeat them, they will defeat them using EVMs or ballot papers - C.T Ravi

SUDDILIVE || SHIVAMOGGA

ಸೋಲಿಸಬೇಕೆಂದಿದ್ದರೆ ಜನ ಇವಿಎಂ ಆದರೂ ಸರಿ, ಬ್ಯಾಲೆಟ್ ಪೇಪರ್ ಆದರೂ ಸರಿನೇ ಸೋಲಿಸುತ್ತಾರೆ-ಸಿಟಿ ರವಿ-If people want to defeat them, they will defeat them using EVMs or ballot papers - C.T Ravi    

Ravi, attack



ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಅಧಿಕಾರದ ಅಹಂಕಾರದಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಮುಂಬರುವ ಚುನಾವಣೆಗಳಲ್ಲಿ ಗ್ರಾಮೀಣ ಭಾಗದ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಸವಾಲು ಹಾಕಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ, ಚುನಾವಣಾ ಆಯೋಗ, ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ, ಬೆಲೆ ಏರಿಕೆ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಾಫ್ಟ್‌ವೇರ್ ಹ್ಯಾಕ್ ಮಾಡಿದ್ದಾರೆ ಎಂಬ ಆರೋಪ

ಚುನಾವಣಾ ವ್ಯವಸ್ಥೆ ಕುರಿತು ಮಾತನಾಡಿದ ಸಿ.ಟಿ. ರವಿ, ಅರ್ಬನ್ ನಕ್ಸಲರು ಸಾಫ್ಟ್‌ವೇರ್ ಹ್ಯಾಕ್ ಮಾಡಿದ್ದಾರೆ. ಜಿಹಾದಿ ಶಕ್ತಿಗಳು ಅದರ ಹಿಂದೆ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು. ಬ್ಯಾಲೆಟ್ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೆದ್ದ ಸರ್ಕಾರವನ್ನು ಅಸ್ಥಿರಗೊಳಿಸುವ ಸಂಚು ನಡೆಯುತ್ತಿದೆ. ಇಂತಹ ಸಂಚುಗಳಿಗೆ ಅವಕಾಶ ನೀಡುವುದಿಲ್ಲ. ಸಂವಿಧಾನಿಕ ಸಂಸ್ಥೆಗಳನ್ನು ಅವಮಾನಿಸುವುದನ್ನು ಸಹಿಸುವುದಿಲ್ಲ ಎಂದರು.

ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ತಡೆಯುವ ಉದ್ದೇಶದಿಂದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಮಹಾದೇವಿ ಪಾರ್ಕ್‌ವರೆಗೆ ಪಾದಯಾತ್ರೆ ನಡೆಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲವಾಗಿ ಹಾಗೂ ಸಂವಿಧಾನದ ರಕ್ಷಣೆಗಾಗಿ ಬೀದಿಗಿಳಿಯಲು ಸಿದ್ಧರಿದ್ದೇವೆ ಎಂದು ಹೇಳಿದರು.

ಬ್ಯಾಲೆಟ್ ಪೇಪರ್‌ನಲ್ಲೂ ಕಾಂಗ್ರೆಸ್ ಸೋತಿದೆ

ಚುನಾವಣೆಯಲ್ಲಿ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ಅವರು, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 12 ಜಿಲ್ಲಾ ಪಂಚಾಯಿತಿಗಳ ಪೈಕಿ 11ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಅಲ್ಲಿಯೂ ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ನಡೆದಿದೆ ಎಂದು ಹೇಳಿದರು.

ಕರ್ನಾಟಕದ ವಿಧಾನ ಪರಿಷತ್ ಚುನಾವಣೆಯೂ ಬ್ಯಾಲೆಟ್ ಪೇಪರ್ ಮೂಲಕವೇ ನಡೆದಿದ್ದು, ಕಾಂಗ್ರೆಸ್‌ನ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಜನರು ಸೋಲಿಸಬೇಕೆಂದು ನಿರ್ಧರಿಸಿದರೆ ಬ್ಯಾಲೆಟ್ ಆಗಲಿ, ಇವಿಎಂ ಆಗಲಿ ಸೋಲಿಸುತ್ತಾರೆ. ಇವಿಎಂನಲ್ಲಿ ಮತ ಎಣಿಕೆ ನಡೆದಿದ್ದರೆ ನಾಲ್ಕು ಗಂಟೆಗಳಲ್ಲಿ ಫಲಿತಾಂಶ ಬರುತ್ತಿತ್ತು. ಆದರೆ ಬ್ಯಾಲೆಟ್‌ನಲ್ಲಿ ಅಮಾನ್ಯ ಮತಗಳೂ ಇರುವುದರಿಂದ 16ರಿಂದ 17 ಗಂಟೆಗಳ ಕಾಲ ಎಣಿಕೆ ನಡೆಯುತ್ತದೆ. ಇದಷ್ಟೇ ವ್ಯತ್ಯಾಸ ಎಂದು ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್‌ಗೆ ತಿರುಗೇಟು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಸಿ.ಟಿ. ರವಿ, ತಮ್ಮ ವಿರುದ್ಧ ತಮ್ಮದೇ ಸರ್ಕಾರ ಷಡ್ಯಂತ್ರ ನಡೆಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾದರೆ ಆ ಷಡ್ಯಂತ್ರ ನಡೆಸಿದವರು ಕಾಂಗ್ರೆಸ್‌ನಲ್ಲೇ ಇದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಟೀಕಿಸಿದರು.

ಅಪರಾಧಿಗಳನ್ನು ಬಿಟ್ಟು ಅಪರಾಧಗಳ ಬಗ್ಗೆ ಮಾತನಾಡುವವರನ್ನು ಬಂಧಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕುವ ಇಂದಿರಾಗಾಂಧಿ ಕಾಲ ಈಗಿಲ್ಲ. ಇದು ಮೋದಿ ಯುಗ. ಇಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ತಾವು ಅಂದುಕೊಂಡಂತೆ ಎಲ್ಲವೂ ನಡೆಯುತ್ತದೆ ಎಂದು ಕಾಂಗ್ರೆಸ್ ನಾಯಕರು ಭಾವಿಸಬಾರದು ಎಂದರು.

ಚುನಾವಣೆ ಬಂದಾಗ ಹಳ್ಳಿ ಜನರ ಶಕ್ತಿ ಗೊತ್ತಾಗಲಿದೆ

ಕಾಂಗ್ರೆಸ್ ನಾಯಕರು ವಿರೋಧ ಪಕ್ಷದವರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ ಸಿ.ಟಿ. ರವಿ, ಚುನಾವಣೆಗೆ ಬನ್ನಿ, ಹಳ್ಳಿಯ ಜನರು ತಮ್ಮ ತಾಕತ್ತು ತೋರಿಸುತ್ತಾರೆ ಎಂದು ಸವಾಲು ಹಾಕಿದರು.

ಹಳ್ಳಿ ಜನರನ್ನು ಬಗ್ಗುಬಡಿಯುತ್ತೇವೆ ಎನ್ನುವ ಧೋರಣೆ ಸರಿಯಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಹಣದ ಮದ ಮತ್ತು ಅಧಿಕಾರದ ಮದ ತಲೆಗೇರಿದೆ. ಆ ಅಧಿಕಾರದ ಅಹಂಕಾರವನ್ನು ಚಿತ್ತಾಪುರದ ಜನರೇ ಇಳಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಗ್ಯಾರಂಟಿ ಹೆಸರಿನಲ್ಲಿ ಬೆಲೆ ಏರಿಕೆ ಆರೋಪ

ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪಿಸಿದ ಅವರು, ಎರಡು ಸಾವಿರ ರೂಪಾಯಿ ಗ್ಯಾರಂಟಿ ನೀಡಿ ಜನರ ಜೇಬಿನಿಂದ ಹತ್ತು ಸಾವಿರ ರೂಪಾಯಿ ಲೂಟಿ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಜನರ ತಾಳ್ಮೆಯ ಕಟ್ಟೆ ಒಡೆಯಲು ಹೆಚ್ಚು ಸಮಯ ಬೇಕಾಗಿಲ್ಲ. ಕಾಂಗ್ರೆಸ್ ನಾಯಕರನ್ನು ಜನರು ಬೀದಿಯಲ್ಲಿ ಪ್ರಶ್ನಿಸುವ ದಿನ ದೂರವಿಲ್ಲ ಎಂದರು.

ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಆಗ್ರಹ

ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿ ಎಂದು ಸಿ.ಟಿ. ರವಿ ಹೇಳಿದರು.

ರಾಜ್ಯ ಸರ್ಕಾರ ಸ್ಪಿರಿಟ್ ಸೇರಿದಂತೆ ವಿವಿಧ ಮೂಲಗಳಿಂದ ತೆರಿಗೆ ಸಂಗ್ರಹಿಸುತ್ತಿದೆ. ರಾಜ್ಯದ ಒಟ್ಟು ಆದಾಯದಲ್ಲಿ ಕಬ್ಬು ಮೂಲದಿಂದಲೂ ಗಣನೀಯ ಪ್ರಮಾಣದ ತೆರಿಗೆ ಬರುತ್ತಿದೆ. ಹೀಗಿರುವಾಗ ಕನಿಷ್ಠ ಐದು ಸಾವಿರ ಕೋಟಿ ರೂಪಾಯಿಗಳನ್ನು ಕಬ್ಬು ಬೆಳೆಗಾರರ ಅನುಕೂಲಕ್ಕಾಗಿ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಮೂರು ಸಾವಿರ ಕೋಟಿ ರೂಪಾಯಿ ಪರಿಹಾರದ ಭರವಸೆ ನೀಡಲಾಗಿದ್ದರೂ ಅದು ರೈತರ ಸಮಸ್ಯೆಗೆ ಪೂರ್ಣ ಪರಿಹಾರವಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಟ

ವಿಧಾನಸಭೆಯ ಚಳಿಗಾಲದ ಅಧಿವೇಶನ ನವೆಂಬರ್ 30ರಿಂದ ಆರಂಭವಾಗಲಿದೆ. ವಿರೋಧ ಪಕ್ಷವಾಗಿ ಹಲವು ಪ್ರಮುಖ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಲಿದ್ದೇವೆ ಎಂದು ತಿಳಿಸಿದರು.

ಬೆಲೆ ಏರಿಕೆ, ಕಬ್ಬು ಬೆಳೆಗಾರರ ಸಮಸ್ಯೆಗಳು, ಕೆಪಿಎಸ್‌ಸಿ ನೇಮಕಾತಿಯಲ್ಲಿನ ಭ್ರಷ್ಟಾಚಾರದ ಆರೋಪಗಳು ಸೇರಿದಂತೆ ಹಲವು ವಿಷಯಗಳನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಸಿ.ಟಿ. ರವಿ ತಿಳಿಸಿದರು.

If people want to defeat them, they will defeat them using EVMs or ballot papers - C.T Ravi  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close