SUDDILIVE || SHIVAMOGGA
ಶಿವಮೊಗ್ಗದಲ್ಲಿ ಸಂಭ್ರಮದ 71ನೇ ಕನ್ನಡ ರಾಜ್ಯೋತ್ಸವ ಆಚರಣೆ; ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ-71st Kannada Rajyotsava celebrated in Shivamogga; Deputy Commissioner Prabhulinga Kavalikatti hoisted the flag
ಶಿವಮೊಗ್ಗ: ನಗರದ ನೆಹರೂ ಕ್ರೀಡಾಂಗಣದಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಷ್ಟ್ರಗೀತೆ ಹಾಗೂ ನಾಡಗೀತೆಯನ್ನು ಹಾಡಲಾಯಿತು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನದ ಆಚರಣೆಯಲ್ಲ. ಇದು ನೂರಾರು ವರ್ಷಗಳ ಹೋರಾಟ, ತ್ಯಾಗ, ಕನಸು ಹಾಗೂ ಕನ್ನಡಿಗರ ಒಗ್ಗಟ್ಟಿನ ಸಂಕೇತವಾಗಿದೆ. ಜಾತಿ, ಮತ, ಭಾಷೆ, ಬಣ್ಣಗಳ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಆಚರಿಸುವ ಹಬ್ಬ ಇದಾಗಿದ್ದು, ಕನ್ನಡ ನಾಡಿನ ಉಳಿವು ಮತ್ತು ಬೆಳವಣಿಗೆಗಾಗಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
1956ರ ನವೆಂಬರ್ 1ರಂದು ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯ ಉದಯವಾಯಿತು. ನಂತರ 1973ರ ನವೆಂಬರ್ 1ರಂದು ಕರ್ನಾಟಕ ಎಂದು ಮರುನಾಮಕರಣಗೊಂಡಿತು. ಈ ಐತಿಹಾಸಿಕ ದಿನವು ಭಾಷಾ ಏಕತೆ, ನಾಡಿನ ಅಸ್ಮಿತೆ ಹಾಗೂ ಸಾಂಸ್ಕೃತಿಕ ಸ್ವಾಭಿಮಾನದ ಪ್ರತೀಕವಾಗಿದೆ. ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಕುವೆಂಪು, ಆಲೂರು ವೆಂಕಟರಾವ್, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬಿ.ಎಂ. ಶ್ರೀಕಂಠಯ್ಯ ಸೇರಿದಂತೆ ಅನೇಕ ಮಹನೀಯರನ್ನು ಸ್ಮರಿಸಬೇಕು ಎಂದರು.
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಶಾಸನಗಳು, ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಕಾವ್ಯ ಪರಂಪರೆಯ ಮೂಲಕ ಕನ್ನಡ ತನ್ನದೇ ಆದ ವಿಶಿಷ್ಟತೆಯನ್ನು ಜಗತ್ತಿಗೆ ಪರಿಚಯಿಸಿದೆ. ಪಂಪ, ರನ್ನ, ಪೊನ್ನರಿಂದ ಹಿಡಿದು ಬಸವಣ್ಣ, ಅಕ್ಕಮಹಾದೇವಿ, ಕನಕದಾಸ ಮತ್ತು ಪುರಂದರದಾಸರವರೆಗಿನ ಸಾಹಿತ್ಯ ಪರಂಪರೆ ಮಾನವೀಯತೆ, ಸಮಾನತೆ, ಭಕ್ತಿ ಹಾಗೂ ವೈಚಾರಿಕತೆಯ ಸಂದೇಶ ಸಾರಿದೆ ಎಂದು ಹೇಳಿದರು.
ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕನ್ನಡ ಸಾಹಿತ್ಯದ ಸಾಧನೆ ನಮ್ಮೆಲ್ಲರ ಹೆಮ್ಮೆಯಾಗಿದೆ. ಕನ್ನಡವೆಂದರೆ ಕೇವಲ ಸಂವಹನದ ಭಾಷೆಯಲ್ಲ; ಅದು ನಮ್ಮ ಭಾವನೆ, ಬದುಕಿನ ಕ್ರಮ, ಸಂಸ್ಕೃತಿ ಮತ್ತು ಸ್ವಾಭಿಮಾನದ ಪ್ರತಿಬಿಂಬ. ಕನ್ನಡದ ಮೇಲಿನ ಅಭಿಮಾನ ಮನೆ, ಶಾಲೆ, ಕಚೇರಿ ಹಾಗೂ ಸಾರ್ವಜನಿಕ ಜೀವನದಲ್ಲಿ ಕನ್ನಡ ಬಳಕೆಯನ್ನು ಹೆಚ್ಚಿಸುವ ಮೂಲಕ ವ್ಯಕ್ತವಾಗಬೇಕು. ಕನ್ನಡವನ್ನು ಪ್ರೀತಿಸುವುದರ ಜೊತೆಗೆ ಇತರ ಭಾಷೆಗಳನ್ನೂ ಗೌರವಿಸುವ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆ ಮೂವರು ಮುಖ್ಯಮಂತ್ರಿಗಳನ್ನು ನಾಡಿಗೆ ನೀಡಿದ ಹೆಮ್ಮೆಯ ಜಿಲ್ಲೆಯಾಗಿದೆ. ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶ ಇಡೀ ಮಾನವಕುಲಕ್ಕೆ ದಾರಿದೀಪವಾಗಿದೆ. ಜಾತಿ, ಧರ್ಮ, ಭಾಷೆ ಮತ್ತು ಪ್ರದೇಶಗಳ ಎಲ್ಲೆಗಳನ್ನು ಮೀರಿ ಮನುಷ್ಯತ್ವವೇ ಶ್ರೇಷ್ಠ ಎಂಬ ಅವರ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ ಎಂದು ಸ್ಮರಿಸಿದರು.
ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಸಾಹಿತ್ಯದ ಮೂಲಕ ಪ್ರಕೃತಿ, ಪರಿಸರ, ಜೀವವೈವಿಧ್ಯ ಹಾಗೂ ವೈಜ್ಞಾನಿಕ ಮನೋಭಾವದ ಮಹತ್ವವನ್ನು ಸಾರಿದ್ದಾರೆ. ಯು.ಆರ್. ಅನಂತಮೂರ್ತಿ ಅವರ ಸಾಹಿತ್ಯ ಸಾಮಾಜಿಕ ಮತ್ತು ವೈಚಾರಿಕ ಚಿಂತನೆಗಳಿಗೆ ಹೊಸ ಆಯಾಮ ನೀಡಿದೆ. ಅಕ್ಕಮಹಾದೇವಿಯವರ ವಚನಗಳು ಆತ್ಮಗೌರವ, ಸಮಾನತೆ ಮತ್ತು ಆಧ್ಯಾತ್ಮಿಕ ಸ್ವಾತಂತ್ರ್ಯದ ಸಂದೇಶ ಸಾರಿವೆ ಎಂದರು.
ಗೋಪಾಲಕೃಷ್ಣ ಅಡಿಗ, ಜಿ.ಎಸ್. ಶಿವರುದ್ರಪ್ಪ, ಎಂ.ಕೆ. ಇಂದಿರಾ, ನಾ. ಡಿಸೋಜ, ಎಸ್.ವಿ. ಪರಮೇಶ್ವರ ಭಟ್, ಕೆ.ವಿ. ಸುಬ್ಬಣ್ಣ ಸೇರಿದಂತೆ ಅನೇಕ ಸಾಹಿತಿಗಳು ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಗೆ ಕೊಡುಗೆ ನೀಡಿದ್ದಾರೆ. ಸಾಗರ ತಾಲೂಕಿನ ಹೆಗ್ಗೋಡಿನ ನೀನಾಸಂ ಸಂಸ್ಥೆ ಕನ್ನಡ ರಂಗಭೂಮಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಶಿಷ್ಟ ಕೊಡುಗೆ ನೀಡಿದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯ ಯಕ್ಷಗಾನ, ಡೊಳ್ಳು ಕುಣಿತ, ಕೋಲಾಟ, ಜನಪದ ಹಾಡುಗಳು, ಸುಗ್ಗಿ ಸಂಭ್ರಮ ಹಾಗೂ ಚಿತ್ತಾರ ಕಲೆಯಂತಹ ಸಾಂಪ್ರದಾಯಿಕ ಕಲೆಗಳು ನಮ್ಮ ಜೀವನದ ಸೊಗಡನ್ನು ಪ್ರತಿಬಿಂಬಿಸುತ್ತವೆ. ಕೆಳದಿ, ಇಕ್ಕೇರಿ, ಬಳ್ಳಿಗಾವಿ ಮತ್ತು ತಾಳಗುಂದದ ಐತಿಹಾಸಿಕ ಪರಂಪರೆ ನಮ್ಮ ಪೂರ್ವಜರ ವಾಸ್ತುಶಿಲ್ಪ ಹಾಗೂ ಕಲಾತ್ಮಕತೆಗೆ ಸಾಕ್ಷಿಯಾಗಿದೆ. ಜೋಗ ಜಲಪಾತ, ಕೊಡಚಾದ್ರಿ, ಅಂಬೆಯ ಮಲೆಕಾಡುಗಳು, ತುಂಗಾ ಮತ್ತು ಶರಾವತಿ ನದಿಗಳು ಜಿಲ್ಲೆಯ ಪ್ರಕೃತಿ ಸಂಪತ್ತಿಗೆ ವಿಶಿಷ್ಟ ಗುರುತನ್ನು ನೀಡಿವೆ ಎಂದರು.
ಈ ಪ್ರಕೃತಿ ಹಾಗೂ ಸಾಂಸ್ಕೃತಿಕ ಸಂಪತ್ತನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಶಿಕ್ಷಣದ ಮೂಲಕ ಮಕ್ಕಳಲ್ಲಿ ಮಾತೃಭಾಷೆಯ ಮೇಲಿನ ಪ್ರೀತಿ, ವೈಜ್ಞಾನಿಕ ಮನೋಭಾವ, ಸಂವಿಧಾನದ ಅರಿವು, ಸಾಮಾಜಿಕ ಸಾಮರಸ್ಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಕನ್ನಡದ ಬೇರುಗಳನ್ನು ಗಟ್ಟಿಗೊಳಿಸುತ್ತಲೇ ವಿಜ್ಞಾನ, ತಂತ್ರಜ್ಞಾನ ಹಾಗೂ ಜಾಗತಿಕ ಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಂದೇ ಮಾತರಂ ವಿಚಾರದಲ್ಲಿ ಪ್ರತಿರೋಧವಿಲ್ಲ
ಇತ್ತೀಚೆಗೆ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಬೇಕೆಂದು ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ಒತ್ತಾಯಿಸಿದ್ದ ವಿಚಾರವೂ ರಾಜ್ಯೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯ ಎರಡು ಸಾಲುಗಳನ್ನು ಹಾಡಿದ ಸಂದರ್ಭದಲ್ಲಿ ಶಾಸಕರಿಂದ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ.
ಧ್ವಜಾರೋಹಣ ಹಾಗೂ ಭಾಷಣದ ಬಳಿಕ ಪೊಲೀಸ್ ತುಕಡಿಗಳಿಂದ ಆಕರ್ಷಕ ಕವಾಯತು ನಡೆಯಿತು. ನಂತರ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕನ್ನಡದ ಕಂಪು, ನಾಡಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಕಾರ್ಯಕ್ರಮಗಳು ರಾಜ್ಯೋತ್ಸವದ ಸಂಭ್ರಮಕ್ಕೆ ಮೆರುಗು ನೀಡಿದವು.



