SUDDILIVE || SORABA
ಶಿವಮೊಗ್ಗ: ಸೂರಣಗಿ ಗ್ರಾಮದಲ್ಲಿ ಭೀಕರ ಅಗ್ನಿ ದುರಂತ – 300ಕ್ಕೂ ಹೆಚ್ಚು ಕುರಿ, ಮರಿಗಳು ಸಜೀವ ದಹನ!Shivamogga: Terrible fire tragedy in Suranagi village – more than 300 sheep and lambs burnt alive!
ಸೊರಬ: ಕುರಿ ಶೆಡ್ಗೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ 300ಕ್ಕೂ ಹೆಚ್ಚು ಕುರಿ ಹಾಗೂ ಮರಿಗಳು ಸಜೀವವಾಗಿ ದಹನವಾಗಿರುವ ಹೃದಯವಿದ್ರಾವಕ ಘಟನೆ ಸೊರಬ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಸಂಭವಿಸಿದೆ.
ಸೂರಣಗಿ ಗ್ರಾಮದ ರಾಮಣ್ಣ ಎಂಬುವವರಿಗೆ ಸೇರಿದ ಕುರಿ ಶೆಡ್ನಲ್ಲಿ ಈ ದುರ್ಘಟನೆ ಸಂಭವಿಸಿದೆ. ತಡರಾತ್ರಿ ಶೆಡ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಇಡೀ ಶೆಡ್ಗೆ ವ್ಯಾಪಿಸಿದೆ ಎನ್ನಲಾಗಿದೆ. ಶೆಡ್ನಲ್ಲಿ ನೂರಾರು ಕುರಿಗಳು ಮತ್ತು ಕುರಿಮರಿಗಳನ್ನು ಇರಿಸಲಾಗಿತ್ತು. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಕುರಿಗಳು ಹೊರಬರಲಾಗದೆ ಸಜೀವವಾಗಿ ದಹನವಾಗಿವೆ.
ಈ ಅಗ್ನಿ ಅವಘಡದಲ್ಲಿ 300ಕ್ಕೂ ಹೆಚ್ಚು ಕುರಿ ಹಾಗೂ ಮರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಕುರಿಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಮಾಲೀಕ ರಾಮಣ್ಣ ಅವರಿಗೆ ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ. ಕುರಿ ಸಾಕಾಣಿಕೆಯನ್ನೇ ಜೀವನೋಪಾಯವನ್ನಾಗಿ ಮಾಡಿಕೊಂಡಿದ್ದ ಕುಟುಂಬಕ್ಕೆ ಈ ಘಟನೆ ದೊಡ್ಡ ಆಘಾತ ತಂದಿದೆ.
ಬೆಂಕಿ ಅವಘಡದ ಬಗ್ಗೆ ಅನುಮಾನ
ಕುರಿ ಶೆಡ್ಗೆ ಬೆಂಕಿ ಬಿದ್ದಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಬೆಂಕಿ ಆಕಸ್ಮಿಕವಾಗಿ ಕಾಣಿಸಿಕೊಂಡಿದೆಯೇ ಅಥವಾ ಬೇರೆ ಯಾವುದಾದರೂ ಕಾರಣದಿಂದ ಈ ಘಟನೆ ಸಂಭವಿಸಿದೆಯೇ ಎಂಬ ಅನುಮಾನವನ್ನು ಮಾಲೀಕರು ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕುರಿ ಮಾಲೀಕ ರಾಮಣ್ಣ ಅವರು ಆನವಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಬೇಕು. ತನಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದ್ದು, ಘಟನೆಯ ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ.
