SUDDILIVE || SHIVAMOGGA
ಯಶ್ ಅಭಿಮಾನಿಗಳ ಸಂಭ್ರಮಕ್ಕೆ ಶಿವಮೊಗ್ಗ ಸಜ್ಜು: ರಾವಣನ ವೇಷದಲ್ಲಿ ಯಶ್ ಕಟೌಟ್, ಪುತ್ಥಳಿ ಮೆರವಣಿಗೆ-Shivamogga gears up for Yash fans' celebrations: Yash cutout dressed as Ravana, effigy parade
ಶಿವಮೊಗ್ಗ: ಬಹುನಿರೀಕ್ಷಿತ ನಟ ಯಶ್ ಅಭಿನಯದ ‘ರಾಮಾಯಣ ಭಾಗ-1’ ಸಿನಿಮಾ ನವೆಂಬರ್ 5ರಂದು ಬಿಡುಗಡೆಯಾಗಲಿದ್ದು, ಶಿವಮೊಗ್ಗದಲ್ಲಿ ಯಶ್ ಅಭಿಮಾನಿಗಳು ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ. ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಯಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ನಂದೀಶ್ ನೇತೃತ್ವದಲ್ಲಿ ನಗರದಲ್ಲಿ ರಾವಣನ ಪುತ್ಥಳಿ ಮೆರವಣಿಗೆ ನಡೆಸಿ ಅಭಿಮಾನವನ್ನು ಮೆರೆದಿದ್ದಾರೆ.
ನಗರದ ಹೊಳೆ ಬಸ್ ನಿಲ್ದಾಣದಿಂದ ಆರಂಭವಾದ ಮೆರವಣಿಗೆಯಲ್ಲಿ ಯಶ್ ಮುಖವಾಡ ಹೊಂದಿರುವ ರಾವಣನ ಪುತ್ಥಳಿಯನ್ನು ಹೊತ್ತು ಅಭಿಮಾನಿಗಳು ಸಾಗಿದರು. ಯಶ್ ಅಭಿಮಾನಿಗಳ ಬಾವುಟಗಳನ್ನು ಹಿಡಿದು, ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆಗೆ ಸಂಭ್ರಮ ವ್ಯಕ್ತಪಡಿಸಿದರು.
ಶಿವಪ್ಪನಾಯಕ ಪ್ರತಿಮೆ ಬಳಿ ಪುತ್ಥಳಿಗೆ ಹಾರ
ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಶಿವಪ್ಪನಾಯಕನ ಪ್ರತಿಮೆ ಬಳಿ ಯಶ್ ಮುಖವಾಡ ಹೊಂದಿರುವ ರಾವಣನ ಪುತ್ಥಳಿಗೆ ಅಭಿಮಾನಿಗಳು ಹೂವಿನ ಹಾರ ಹಾಕಿ ಗೌರವ ಸಲ್ಲಿಸಿದರು. ಬಳಿಕ ಮೆರವಣಿಗೆ ನಾಳೆ ಸಿನಿಮಾ ಬಿಡುಗಡೆಯಾಗಲಿರುವ ವೀರಭದ್ರ ಚಿತ್ರಮಂದಿರದತ್ತ ಸಾಗಿತು.
ವೀರಭದ್ರ ಚಿತ್ರಮಂದಿರದಲ್ಲಿ ಯಶ್ ಕಟೌಟ್
ವೀರಭದ್ರ ಚಿತ್ರಮಂದಿರದಲ್ಲಿ ಯಶ್ ಅವರ ಪೌರಾಣಿಕ ಪಾತ್ರದ ವೇಷದಲ್ಲಿರುವ ಬೃಹತ್ ಕಟೌಟ್ ನಿರ್ಮಿಸಲಾಗಿದೆ. ಚಿತ್ರಮಂದಿರದ ಆವರಣವನ್ನು ಬಾಳೆಕಂದು ಹಾಗೂ ಬ್ಯಾನರ್‌ಗಳಿಂದ ಅಲಂಕರಿಸಲಾಗಿದ್ದು, ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಅಭಿಮಾನಿಗಳ ಸಂಭ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ರಾವಣನಾಗಿ ಯಶ್ ವಿಶೇಷ ಪಾತ್ರ
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ ಭಾಗ-1’ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಅಭಿನಯಿಸಿದ್ದು, ಲಾರಾ ದತ್ತಾ ಕೈಕೇಯಿ ಪಾತ್ರ ನಿರ್ವಹಿಸಿದ್ದಾರೆ.
ಚಿತ್ರದಲ್ಲಿ ಯಶ್ ರಾವಣನ ಪಾತ್ರದಲ್ಲಿ ಸುಮಾರು 65 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ರಾವಣನನ್ನು ಕೇವಲ ಖಳನಾಯಕನಾಗಿ ಮಾತ್ರವಲ್ಲದೆ, ವಿದ್ವಾಂಸ, ಸಂಗೀತಗಾರ ಹಾಗೂ ಶಕ್ತಿಶಾಲಿ ಯೋಧನಾಗಿ ಬಹುಆಯಾಮಗಳಲ್ಲಿ ಚಿತ್ರಿಸಲಾಗಿದೆ ಎಂಬ ನಿರೀಕ್ಷೆ ಇದೆ.
ನವೆಂಬರ್ 5ರಂದು ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಪೌರಾಣಿಕ ಪಾತ್ರವನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ.



