Girl in a jacket

ರಾಜ್ಯದಲ್ಲಿ ಬಿಜೆಪಿಗೆ ಮತಕೇಳುವ ನೈತಿಕತೆ ಇಲ್ಲ-ಚಲುವರಾಯ ಸ್ವಾಮಿ

ಸುದ್ದಿಲೈವ್/ಶಿವಮೊಗ್ಗ

ಚುನಾವಣೆಗೆ ಇನ್ನು ಎರಡು ದಿನ ಅಷ್ಟೇ ಬಾಕಿ‌ ಇದೆ. ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಚೆನ್ನಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಜನ ಕಾಂಗ್ರೆಸ್ ನ ಕೈ ಹಿಡಿಯುತ್ತಾರೆ ಎಂದು ಕೃಷಿ ಸಚಿವ ಚಲುರಾಯ ಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿ ಕಳೆದ ಬಾರಿ ಬಿಜೆಪಿಯ 25 ಜನ ಸಂಸದರು ರಾಜ್ಯದಿಂದ ಗೆದ್ದಿದ್ದರು. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5300 ಕೋಟಿ ನೆರವು ಘೋಷಣೆ ಮಾಡಿದ್ದರೂ ನಯಾ ಪೈಸೆ ಈ ತನಕ ನೀಡಿಲ್ಲ. ಹಾಗೆಯೇ ರಾಜ್ಯದಲ್ಲಿ ಬರಗಾಲ ಬಂದಾಗ ಕೇಂದ್ರದ ನೆರವು‌ ಸಿಗಲಿಲ್ಲ ಎಂದರು.

ಕೇಂದ್ರ ಸಚಿವರು ರಾಜ್ಯಕ್ಕೆ ಕನಿಷ್ಠ ಪಕ್ಷ ಭೇಟಿಯನ್ನೂ ನೀಡಲಿಲ್ಲ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಸುಳ್ಳನ್ನೇ ಹೇಳಿದರು. ನಾವು ಮನವಿ ಕೊಟ್ಟು ಏಳು‌ ತಿಂಗಳಾದರೂ ಹೈ ಪವರ್ ಕಮಿಟಿ ಮೀಟಿಂಗ್ ಕರೆಯಲೇ ಇಲ್ಲ ಎಂದರು.

ಕೊನೆಗೆ ಸುಪ್ರೀಂ ಕೋರ್ಟ್ ಮೊರೆ ಹೋದ ಮೇಲೆ 18 ಸಾವಿರ ಕೋಟಿ ಪೈಕಿ 3450 ಕೋಟಿ ಬಿಡುಗಡೆ ಮಾಡಿದ್ದಾರೆ. ಹಾಗೆಯೇ ರಾಜ್ಯಕ್ಕೆ ಜಿಎಸ್ಟಿ ಹಂಚಿಕೆಯಲ್ಲೂ ಅನ್ಯಾಯವಾಗಿದೆ. ಈ ಬಗ್ಗೆ ಜೋಷಿ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ನ ಯಾರೊಬ್ಬರೂ ದನಿ ಎತ್ತಲಿಲ್ಲ ಎಂದರು.

ಇದಕ್ಕೆ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಸೂಕ್ತ ಉತ್ತರ ನೀಡಲಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ‌ಗೀತಾ ಶಿವರಾಜ್ ಕುಮಾರ್ ಪರವಾದ ಅಲೆ ಇದೆ. ಅವರು ಬಂಗಾರಪ್ಪ ಪುತ್ರಿ ಹಾಗೂ ರಾಜ್ ಕುಮಾರ್ ಸೊಸೆಯಾಗಿದ್ದಾರೆ ಎಂದರು.

ಶಿವಮೊಗ್ಗದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆಗೆ ಕಾಂಗ್ರೆಸ್ ಪ್ರಮುಖ ಕಾರಣವಾಗಿದೆ. ಬಿಜೆಪಿ ಅವಧಿಯಲ್ಲಿ ಘೋಷಣೆಯಾಗಿದ್ದರೂ ಅದಕ್ಕೆ ಅಗತ್ಯ ನೆರವು ನೀಡಿ ಉದ್ಘಾಟನೆ ಮಾಡಿದ್ದು ಕಾಂಗ್ರೆಸ್ ಎಂದರು.

ಕಳೆದ 10 ವರ್ಷದಲ್ಲಿ ಬಿಜೆಪಿ ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಅಗಿಲ್ಲ. ಬರೀ ಮೋದಿ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕೇಂದ್ರದ ವೈಫಲ್ಯ ಬಹಿರಂಗವಾಗಿದೆ. ರಾಜ್ಯದ ಪ್ರತಿ ಮನೆ ಮನೆಗೂ ಗ್ಯಾರಂಟಿ ತಲುಪಿದೆ ಎಂದರು.

ಮೋದಿ ಸರ್ಕಾರ ಉದ್ಯಮಿಗಳ 18 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ ರೈತರ ಸಾಲ ಮನ್ನಾ ಮಾಡಿಲ್ಲ. ನಮ್ಮ ಪಕ್ಷದಿಂದ ದೇಶದ ಮಟ್ಟದಲ್ಲಿ ಅನ್ವಯವಾಗುವಂತಹ ಗ್ಯಾರಂಟಿಯನ್ನು ಘೋಷಣೆ ಮಾಡಲಾಗಿದೆ ಎಂದರು.

ನಮ್ಮ ಗ್ಯಾರಂಟಿಯನ್ನು ಜೆಡಿಎಸ್-ಬಿಜೆಪಿ ನಾಯಕರು ಸಾಕಷ್ಟು ಟೀಕೆ ಮಾಡಿದ್ದಾರೆ. ಮಹಿಳೆಯರ ಬಗ್ಗೆ ‌ಮಾಜಿ‌ ಸಿಎಂ ಕುಮಾರಸ್ವಾಮಿ ಮತ್ತಿತರರು ಲಘುವಾಗಿ ಮಾತನಾಡಿದ್ದಾರೆ. ಮಧು ಬಂಗಾರಪ್ಪ ಜಿಲ್ಲೆಯಲ್ಲಿ ಸಾಕಷ್ಟು ‌ಕೆಲಸ ಮಾಡಿದ್ದಾರೆ. ಅವರ ಜೊತೆಗೆ ಒಬ್ಬ ಸಂಸದರು ಇದ್ದರೆ ಇನ್ನೂ ಹೆಚ್ಚು ಶಕ್ತಿ ಬರುತ್ತದೆ ಎಂದರು.

ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಮಾತನಾಡಿದ ಚಲುರಾಯ ಸ್ವಾಮಿ, ಈ ವಿಷಯ ಬಿಜೆಪಿಗೆ ಸಿಕ್ಕಿದ್ದರೆ ಬಿಡುತ್ತಿದ್ದರಾ? ಆದರೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡ‌ ಕಾರಣಕ್ಕೆ ಸುಮ್ಮನಿದ್ದಾರೆ. ಪ್ರಜ್ವಲ್ ವಿಷಯ ಬಿಜೆಪಿ ನಾಯಕರಿಗೆ ಮೊದಲೇ ಗೊತ್ತಿತ್ತು ಎಂದರು.

ಹಾಗಾಗಿ ಪ್ರಜ್ವಲ್ ಗೆ ಟಿಕೇಟ್ ನೀಡಲು ಬಿಜೆಪಿ ನಾಯಕರು ಒಪ್ಪಿರಲಿಲ್ಲ. ಆದರೆ ಜೆಡಿಎಸ್ ನಾಯಕರ ಒತ್ತಡಕ್ಕೆ ಮಣಿದು ಟಿಕೇಟ್ ನೀಡಿದರು. ನಂತರ ಮೈಸೂರಿನಲ್ಲಿ ಪ್ರಜ್ವಲ್ ಪರ ಸ್ವತಃ ಮೋದಿಯೇ ಮತ ಯಾಚಿಸಿದರು.

ರಾಜ್ಯ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ರಚಿಸಿದೆ. ಹೀಗಿದ್ದೂ ಕುಮಾರಸ್ವಾಮಿ ಡಿ.ಕೆ.ಶಿವಕುಮಾರ್ ಮತ್ತಿತರ ಬಗ್ಗೆ ಮಾತನಾಡುತ್ತಿದ್ದಾರೆ. ಅವರೊಬ್ಬ ಮಾಜಿ ಪ್ರಧಾನಿ ಮಗ, ಎರಡು ಬಾರಿ ಸಿಎಂ ಆಗಿದ್ದವರು. ಅವರ ಸರ್ಕಾರ ಇದ್ದಾಗ ನಮ್ಮ ಪೊಲೀಸರು ಒಳ್ಳೆಯವರು. ಬೇರೆ ಸರ್ಕಾರ ಇದ್ದಾಗ ನಂಬಿಕೆ ಇರಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.ಮುಚ್ಚಿ ಹಾಕಿದರೆ ಜನ ಬಿಡುತ್ತಾರೆಯೇ? ಅಷ್ಟಕ್ಕೂ ಇದೊಂದು ಸಾಮಾನ್ಯ ಪ್ರಕರಣವೇ? ಇಡೀ ದೇಶದಲ್ಲೇ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿರುವ ಪ್ರಕರಣ ಇದು ಎಂದರು.

ಒಬ್ಬ ಸಾಮಾನ್ಯ ವ್ಯಕ್ತಿ ಮಾಡುವಂತಹ ಕೆಲಸ ಇದಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕಲ್ಲವೇ? ಎಸ್ಐಟಿ ತನಿಖೆಯಿಂದ ಸತ್ಯಾಂಶ ಹೊರಬರಲಿ ಎಂದ‌ ಕುಮಾರಸ್ವಾಮಿಗೆ ಈಗ ಏಕೆ ಅನುಮಾನ ಬಂತೋ ಗೊತ್ತಿಲ್ಲ. ಅವರು ಆಡುವ ಪ್ರತಿಯೊಂದು ಮಾತು ದೇವೇಗೌಡರ ಮೇಲೆ ಪರಿಣಾಮ ಬೀರುತ್ತದೆ ಎಂದರು

ಕುಮಾರಸ್ವಾಮಿ ನನ್ನ ಸ್ನೇಹಿತರಾಗಿದ್ದವರು. ಅವರಿಂದ ಇಂತಹದನ್ನು ನಿರೀಕ್ಷೆ ಮಾಡಿರಲಿಲ್ಲ. ದೇವೇಗೌಡರ ಮಗ ಎಂಬ ಕಾರಣಕ್ಕೆ ಅವರಿಗೆ ಬೆಲೆ ಇದೆ ಅಷ್ಟೇ. ಮೊದಲಿನಿಂದಲೂ ಅವರು ಹೆದರಿಸುವ, ಬೆದರಿಸುವ ಕೆಲಸವನ್ನೇ ಮಾಡಿಕೊಂಡು ಬಂದಿದ್ದಾರೆ. ಮಂಡ್ಯ, ಬೆಂಗಳೂರು ಗ್ರಾಮಾಂತರ ಮತ್ತು ಹಾಸನದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದರು.

ಇದನ್ನೂ ಓದಿ-https://suddilive.in/archives/14084

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು