ಸುದ್ದಿಲೈವ್/ಸೊರಬ
ಲೋಕಸಭಾ ಚುನಾವಣೆಯ ಫಲಿತಾಂಶ ಇನ್ನೇನು ಕೆಲವೇ ದಿನ ಬಾಕಿ ಇರುವಂತೆ, ರಾಜ್ಯದಲ್ಲಿ ಗಮನ ಸೆಳೆದಿದ್ದ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಗಳ ಪರ ತಾಲೂಕಿನಲ್ಲಿ ಬೆಟ್ಟಿಂಗ್ ಸಹ ಜೋರಾಗಿದೆ.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಹಾಗೂ ಮಾಜಿ ಸಿಎಂ ಎಸ್. ಬಂಗಾರಪ್ಪ ಅವರ ಪುತ್ರಿ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅಖಾಡದಲ್ಲಿ ಮುಂಚೂಣಿಯಲ್ಲಿದ್ದು, ಜನ ಸೇರಿದಲ್ಲೆಡೆ ಫಲಿತಾಂಶದ ಕುರಿತು ತೀರ್ವ ಚರ್ಚೆ ಹಾಗೂ ಬೆಟ್ಟಿಂಗ್ ಸಹ ನಡೆಯುತ್ತಿದೆ.
ಗೆಲ್ಲುವ ಅಭ್ಯರ್ಥಿಯ ಕುರಿತು ಈಗಾಗಲೇ ಟೀ ಸ್ಟಾಲ್ ಗಳು, ಹೇರ್ ಸೆಲ್ಯೂನ್ ಗಳು, ಬಾರ್&ರೆಸ್ಟೋರೆಂಟ್, ಹೋಟೆಲ್, ಕ್ಯಾಂಟೀನ್, ಗ್ರಾಮೀಣ ಪ್ರದೇಶದ ಅರಳೀಕಟ್ಟೆ, ಮೋರಿಕಟ್ಟೆಗಳಲ್ಲೂ ಚರ್ಚೆ ನಡೆಯುತ್ತಿದೆ. ಮತದಾನ ಪ್ರಕ್ರಿಯೆ ನಡೆದ ಮೇಲೆ ಕೇವಲ ಚರ್ಚೆಯಲ್ಲಾ, ಬೆಟ್ಟಿಂಗ್ ಸಹ ನಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಮಾಜಿ ಸಿಎಂ ಪುತ್ರಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸಹೋದರಿ, ಚಿತ್ರರಂಗದ ದೊಡ್ಮನೆ ಸೊಸೆ ಎನ್ನುವ ಕೃಪೆ ಇದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೈ ಹಿಡಿಯಲಿದೆ. ಮಹಿಳಾ ಮತದಾರರು ಕೈ ಹಿಡಿಯಲಿದ್ದಾರೆ. ಜೊತೆಗೆ ಕ್ಷೇತ್ರದ ಈಡಿಗ ಸಮುದಾಯ, ಅಲ್ಪ ಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗದ ಮತದಾರರು ಪಕ್ಕಾ ಕೈ ಹಿಡಿಯಲಿದ್ದಾರೆ ಎನ್ನುವ ವಿಶ್ವಾಸ ಹೊಂದಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ನಾಲ್ಕನೇ ಬಾರಿಗೆ ಗೆಲುವಿನ ವಿಶ್ವಾಸ ಹೊಂದಿದ್ದು, ಅಭಿವೃದ್ಧಿ ಕಾರ್ಯಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹವಾವನ್ನು ನೆಚ್ಚಿಕೊಂಡಿದ್ದಾರೆ. ಪ್ರಜ್ಞಾವಂತರು ಬಿಜೆಪಿ ಬೆಂಬಲಿಸಲಿದ್ದಾರೆ ಎನ್ನುವ ವಿಶ್ವಾಸ ಹೊಂದಿದ್ದಾರೆ. ಈ ಎಲ್ಲಾ ವಿಚಾರಗಳು ಜನ ಸೇರಿದಲ್ಲಿ ಹೆಚ್ಚಾಗಿ ಚರ್ಚೆಯಾಗುತ್ತಿದೆ.
ತಾಲೂಕಿನ ಗ್ರಾಮೀಣ ಭಾಗದಲ್ಲಿ ಬೇರೆ ಬೇರೆ ಪಕ್ಷದ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು ಸಹ ಸಂಜೆ ವೇಳೆ ಒಟ್ಟಿಗೆ ಕುಳಿತು ಚರ್ಚಿಸುವವರೇ ಜಾಸ್ತಿ. ಇವರೆಲ್ಲಾ ತಾವು ಬೆಂಬಲಿಸಿದ ಅಭ್ಯರ್ಥಿಗಳ ಪರವಾಗಿ ಮಾತನಾಡುವುದು ಸಹಜವಾಗಿದೆ. ಶಿಕಾರಿಪುರದಲ್ಲಿ ಟ್ರ್ಯಾಕ್ಟರ್ ಬೆಟ್ಟಿಂಗ್ ಮಾಡಿ ಸವಾಲು ಎಸಗಿದ್ದು ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿತ್ತು. ಇದೀಗ ಕ್ಷೇತ್ರದಲ್ಲಿಯೂ ಸಹ ಜಮೀನು, ವಾಹನ, ಹಣದ ಬಗ್ಗೆ ಆಪ್ತರಲ್ಲಿ ಬೆಟ್ಟಿಂಗ್ ನಡೆಯುತ್ತಿದೆ ಎನ್ನಲಾಗುತ್ತಿದೆ. ಸ್ನೇಹಿತರಲ್ಲೇ ಈ ಒಪ್ಪಂದಗಳು ನಡೆಯುತ್ತಿದ್ದು ಬಹಿರಂಗವಾಗುವುದು ತುಸು ಕಡಿಮೆಯೇ, ಬಿಜೆಪಿ ಪರ ಬೆಟ್ಟಿಂಗ್ 1:3, ಹಾಗೂ ಕಾಂಗ್ರೆಸ್ ಪರ 1:2 ಬೆಟ್ಟಿಂಗ್ ನಡೆಯುತ್ತಿದೆ. ಈ ನಡುವೆ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರು ಗಳಿಸುವ ಮತಗಳಿಕೆ ಮೇಲೆ ಬಿಜೆಪಿ ಅಭ್ಯರ್ಥಿ ಮೇಲೆ ಪರಿಣಾಮ ಬೀರಲಿದೆ ಎನ್ನುವ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆಯೂ ಕೆಲವರು ಚಾಲೇಂಜ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಏನೇ ಇರಲಿ… ಮತದಾರ ಪ್ರಭು ಯಾರ ಕೈ ಹಿಡಿದ್ದಾರೆ ಎನ್ನುವುದನ್ನು ಫಲಿತಾಂಶದ ನಂತರವೇ ಕಾದು ನೋಡಬೇಕಿದೆ.
ಇದನ್ನೂ ಓದಿ-https://suddilive.in/archives/15788