ತುಂಗ ಮಲೀನತೆ ಕುರಿತು ನಟ ಅನಿರುದ್ಧ ಸಿಎಂಗೆ ಮನವಿ

ಸುದ್ದಿಲೈವ್/ಬೆಂಗಳೂರು

ತುಂಗ ನದಿಯ ಮಲೀನತೆ ಕುರಿತು ಹಾಗೂ ಅದರ ಸ್ವಚ್ಛತೆಯ ಕುರಿತು ನಟ‌ ಅನಿರುದ್ಧ್ ಸಿಎಂ ಗಮನಕ್ಕೆ ತಂದಿದ್ದಾರೆ. ಬೆಂಗಳೂರಿನಲ್ಲಿ ಭೇಟಿ ಮಾಡಿ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ನೀಡಿದ್ದಾರೆ.

ಅವರ ಮನವಿ ಹೀಗಿದೆ.

ಶಿವಮೊಗ್ಗದಲ್ಲಿ ಆರಂಭವಾಗಿ, ಹರಿಹರ, ಹೊಸಪೇಟೆಯ ಮಾರ್ಗವಾಗಿ ಮಂತ್ರಾಲಯವನ್ನು ತಲುಪಿ ಮುಂದೆ ಕೃಷ್ಣಾ ನದಿಯನ್ನು ಸೇರುವ ನಮ್ಮ ನಾಡಿನ ಪವಿತ್ರವಾದ ತುಂಗೆಯ ಜಲವು ಸ್ವಚ್ಛತೆ, ಪಾವಿತ್ರ್ಯತೆಯ ಜೊತೆಗೆ ಆಮ್ಲಜನಕದ ಕೊರತೆಯಿಂದ ಇದೀಗ ಸಂಪೂರ್ಣವಾಗಿ ಕಲುಷಿತವಾಗಿದೆ ಹಾಗೂ ಅಶುದ್ಧತೆಯಿಂದಾಗಿ, ಬಳಸಲು ಯೋಗ್ಯವಲ್ಲದಂತಹ ದಯನೀಯ ಸ್ಥಿತಿಗೆ ತಲುಪಿದೆ. ಈ ನಿಟ್ಟಿನಲ್ಲಿ ಕೂಡಲೇ ಸೂಕ್ತ ಕ್ರಮ ವಹಿಸಬೇಕಾಗಿ ವಿನಂತಿ.

ನಾವು ತಾಯಿಯಂತೆ ಪೂಜಿಸುವ, ತನ್ನದೇ ಆದ ಭವ್ಯ ಇತಿಹಾಸವನ್ನು ಹೊಂದಿರುವಂತಹ ಪ್ರಕೃತಿ ಮಾತೆಯ ಕೊಡುಗೆಯಾದ ನಮ್ಮ ನಾಡಿನ ಪುಣ್ಯ ನದಿ ತುಂಗಭದ್ರೆಯು. ಈಗ ತನ್ನ ಶುಚಿತ್ವವನ್ನು ಕಳೆದುಕೊಂಡು, ಸಂಪೂರ್ಣ ಕಲುಷಿತವಾಗಿ ಇನ್ನು ಮುಂದೆ ಬಳಕೆಗೆ ಯೋಗ್ಯವಲ್ಲದಂತಹ ಶೋಚನೀಯ ಸ್ಥಿತಿ ತಲುಪಿರುವುದನ್ನು ನೋಡಿದಾಗ ಕನ್ನಡಿಗರಾದ ನಮಗೆ ನಿಜಕ್ಕೂ ದಿಗ್ಧಮೆಯಾಗುತ್ತೆ. ಮನಸ್ಸಿಗೆ ನೋವಾಗುತ್ತೆ.

ಶಿವಮೊಗ್ಗದಲ್ಲಿ ಆರಂಭವಾಗಿ, ಹರಿಹರ, ಹೊಸಪೇಟೆಯ ಮಾರ್ಗವಾಗಿ ಮಂತ್ರಾಲಯವನ್ನು ತಲುಪಿ ಮುಂದೆ ಕೃಷ್ಣಾ ನದಿಯನ್ನು ಸೇರುವ, ನಮ್ಮ ನಾಡಿನ ಪವಿತ್ರವಾದ ತುಂಗಭದ್ರಾ ನದಿಗೆ ಈಗ ಶಿವಮೊಗ್ಗ ನಗರದಲ್ಲಿ ಕಾಲುವೆಯ ಮೂಲಕ ಕೊಳಚೆ ನೀರು ಅವ್ಯಾಹತವಾಗಿ ಹರಿದು ಬರುತ್ತಿದ್ದು, ಇಡೀ ವಾತಾವರಣವೇ ಮಲಿನವಾಗಿದೆ. ದುರ್ವಾಸನೆ ಆವರಿಸಿದೆ. ಎಲ್ಲೆಲ್ಲೂ ದಟ್ಟವಾದ ಕಳೆ ವ್ಯಾಪಿಸಿಕೊಂಡು ಸ್ವಚ್ಛತೆ, ಪಾವಿತ್ರ್ಯತೆಯ ಜೊತೆಗೆ ಆಮ್ಲಜನಕದ ಕೊರತೆಯಿಂದ ತುಂಗೆಯ ಜಲವು ಇದೀಗ ಸಂಪೂರ್ಣವಾಗಿ ಕಲುಷಿತವಾಗಿದೆ ಹಾಗೂ ಅಶುದ್ಧತೆಯಿಂದಾಗಿ, ಬಳಸಲು ಯೋಗ್ಯವಲ್ಲದಂತಹ ದಯನೀಯ ಸ್ಥಿತಿಗೆ ತಲುಪುತ್ತಿದೆ.

ಇಲ್ಲಿ ಸಂಸ್ಕರಿಸದ ಕೊಳಚೆ ನೀರು ವಿಶೇಷವಾಗಿ ಅಮೋನಿಯಾ ಮತ್ತು ಫಾಸ್ಪೇಟ್ ಪೋಷಕಾಂಶಗಳ ಪ್ರಬಲ ಮೂಲವಾಗಿದೆ. ಸುಲಭವಾಗಿ ಕಳೆ ಬೆಳೆಯಲು ಇದು ಏಕೈಕ ಕಾರಣವಾಗಿದೆ. ಕಳೆಗಳಿಂದಾಗಿ ನದಿಯಲ್ಲಿನ ಆಮ್ಲಜನಕದ ಮಟ್ಟವು ಶೂನ್ಯವಾಗುತ್ತದೆ. ಜಲಚರಗಳು ಜೀವಿಸುವುದಕ್ಕೂ ಯಾವುದೇ ಸಾಧ್ಯತೆಯಿರುವುದಿಲ್ಲ.

ನಾವು ಕೆಲವು ಮೀನುಗಳನ್ನು ಮಾತ್ರ ನೋಡಬಹುದು. ಇದು ಖಂಡಿತವಾಗಿಯೂ ನದಿಯ ವಿಷಾದನೀಯ ಸ್ಥಿತಿ. ನಿಜಕ್ಕೂ ಇದೊಂದು ದುರಂತ ಮತ್ತು ದುರದೃಷ್ಟಕರ. ಈ ಬಗ್ಗೆ ನಾವು ಜಾಗೃತಿ ಮೂಡಿಸಲೇಬೇಕಿದೆ. ಈ ಮಾಲಿನ್ಯಯವನ್ನು ಈಗಲೇ ತಡೆಗಟ್ಟುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಲ್ಲಿ ಮಳೆಯಿಂದ ಸಂಗ್ರಹವಾಗುವ ನೀರು ನದಿಗೆ ಸೇರಲು ಅವಕಾಶವೇ ಇಲ್ಲದಂತಾಗಿದೆ. ಬದಲಾಗಿ, ಮಳೆ ಬಂದಾಗ ಈ ಕೊಳಚೆ ಮಿಶ್ರಿತ ನದಿಯ ನೀರು, ಹೊರಕ್ಕೆ ಹರಿದು ಬಂದು ಜನ ಜೀವನ ಅಸ್ತವ್ಯಸ್ತವಾಗುವಂತೆ ಮಾಡುವ ಮತ್ತಷ್ಟು ಸಮಸ್ಯೆಗಳು ಎದುರಾಗುವಂತಿದೆ.

ಇಲ್ಲಿ ಯಾರನ್ನೂ ಹೊಣೆ ಮಾಡುವ, ಆರೋಪ ಹೊರಿಸುವ ಉದ್ದೇಶವಿಲ್ಲ. ನಾವೆಲ್ಲರೂ ಸೇರಿ ನಾವು ಪೂಜಿಸುವ ತುಂಗೆಯನ್ನು ಕಾಪಾಡಬೇಕಿದೆ. ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಇದನ್ನು ಕಾರ್ಯರೂಪಕ್ಕೆ ತರಬೇಕಿದೆ. ಈ ಮೂಲಕ ನಿಜ ಜೀವನದಲ್ಲೂ ನಾವು ತಾಯಿಯಂತೆ ತುಂಗಾ ನದಿಯನ್ನು ಗೌರವಿಸೋಣ ಎನ್ನುವುದೇ ನನ್ನ ಮನೋಭಿಲಾಷೆ. ಈ ದೃಷ್ಟಿಯಿಂದ ನಾನು ಪವಿತ್ರವಾದ ತುಂಗಾ ನದಿಯ ಸ್ವಚ್ಛತೆಯ ಅಭಿಯಾನ’ವನ್ನು ಹಮ್ಮಿಕೊಂಡಿದ್ದೇನೆ ಮತ್ತು ಮಾಧ್ಯಮದಿಂದ ಈ ಅಭಿಯಾನಕ್ಕೆ ಉತ್ತಮ ಪ್ರೋತ್ಸಾಹ ದೊರೆತಿದೆ.

ಸಹೃದಯಿಗಳಾದ ತಾವು ಖಂಡಿತಾ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಿರೆಂದು ನಂಬಿದ್ದೇನೆ ಎಂದು ಮನವಿ ಸಲ್ಲಿಸಿದ್ದಾರೆ. ಒಬ್ಬ ನಟನಿಗೆ ಇರುವ ಕಾಳಜಿ ಶಿವಮೊಗ್ಗದ ನಾಗರೀಕರಿಗೆ ಇಲ್ಲದಿರುವುದು ಅಚ್ಚರಿ ಉಂಟುಮಾಡಿದೆ.

ಇದನ್ನೂ ಓದಿ-https://suddilive.in/archives/17845

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close