SUDDILIVE || SHIVAMOGGA
ಗೋಹತ್ಯೆ ತಡೆಗೆ ಕಠಿಣ ಕ್ರಮ ಜರುಗಿಸಿ ಎಂದ ಗೋವರ್ಧನ ಟ್ರಸ್ಟ್-Govardhan Trust says strict action should be taken to stop cow slaughter
ಮುಂಬರುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುವ ಅಕ್ರಮ ಗೋಸಾಗಾಣಿಕೆ ಹಾಗೂ ಗೋಹತ್ಯೆಯನ್ನು ಸಂಪೂರ್ಣವಾಗಿ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಾಜಿ ಡಿಸಿಎಂ ಈಶ್ವರಪ್ಪನವರ ನೇತೃತ್ವದಲ್ಲಿ ‘ಗೋವರ್ಧನ ಟ್ರಸ್ಟ್(ರಿ)’ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯಿದೆ ಜಾರಿಯಲ್ಲಿದ್ದರೂ ಸಹಾ, ಯಾವುದೇ ಅಡೆತಡೆ ಇಲ್ಲದೆ ಗೋವುಗಳ ಅಕ್ರಮ ಸಾಗಾಣಿಕೆ ಮತ್ತು ವಧೆ ನಡೆಯುತ್ತಿರುವುದನ್ನು ಟ್ರಸ್ಟ್ ತೀವ್ರವಾಗಿ ಖಂಡಿಸಿದೆ.
ಕಾನೂನು ಬಾಹಿರ ಕೃತ್ಯ:
ಬಹುಸಂಖ್ಯಾತ ಹಿಂದೂಗಳು ಪೂಜ್ಯನೀಯ ಭಾವನೆಯಿಂದ ಕಾಣುವ ಗೋಮಾತೆಯ ಹತ್ಯೆಯನ್ನು ತಡೆಯಲು ಜಿಲ್ಲಾಡಳಿತ ಹಾಗೂ ಜಿಲ್ಲಾ ರಕ್ಷಣಾ ಇಲಾಖೆ ಕಠಿಣ ಕ್ರಮ ಜರುಗಿಸಬೇಕು. ಬಕ್ರೀದ್ ಹಬ್ಬದ ಪ್ರಯುಕ್ತ ಪ್ರಾಣಿ ಬಲಿ ನೆಪದಲ್ಲಿ ಗೋವುಗಳ ವಧೆ ಮಾಡುವುದು "ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಬಂಧಕ ಅಧಿನಿಯಮ 1959" ರ ಅಡಿಯಲ್ಲಿ ಸಂಪೂರ್ಣವಾಗಿ ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಟ್ರಸ್ಟ್ ಪತ್ರದಲ್ಲಿ ನೆನಪಿಸಿದೆ.
ನಾಕಾಬಂದಿಗೆ ಆಗ್ರಹ
ಶಿವಮೊಗ್ಗ ನಗರದಲ್ಲಿ ಗೋಹತ್ಯೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು, ನಗರಕ್ಕೆ ಪ್ರವೇಶ ಕಲ್ಪಿಸುವ ಎಲ್ಲಾ ಪ್ರಮುಖ ರಸ್ತೆ ಮಾರ್ಗಗಳಲ್ಲಿ ತಕ್ಷಣವೇ ನಾಕಾಬಂದಿ ನಿರ್ಮಿಸಬೇಕು. ಆ ಮೂಲಕ ಅಕ್ರಮ ಗೋ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಲಾಗಿದೆ. ಈ ಮನವಿ ಪತ್ರಕ್ಕೆ ಗೋವರ್ಧನ ಟ್ರಸ್ಟ್‌ನ ಮಹಾಪೋಷಕರಾದ ಶ್ರೀ ಕೆ.ಎಸ್.ಈಶ್ವರಪ್ಪ ಹಾಗೂ ಪದಾಧಿಕಾರಿಗಳು ಸಹಿ ಹಾಕಿದ್ದಾರೆ.
Govardhan Trust says strict action should be taken to stop cow slaughter

