ಶುಕ್ರವಾರ, ಆಗಸ್ಟ್ 16, 2024

ಆಶ್ರಯ ಮನೆಗಳ ಮೂಲಭೂತ ಸೌಕರ್ಯ ಸಮಸ್ಯೆ ಬಗೆಹರಿಸಲು ಕ್ರಮ-ಮಧು ಬಂಗಾರಪ್ಪ

 


ಸುದ್ದಿಲೈವ್/ಶಿವಮೊಗ್ಗ


ಗೋವಿಂದಾಪುರ ಆಶ್ರಯ ಮನೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಂಬಂಧ ನ್ಯೂನ್ಯತೆಗಳ ಪಟ್ಟಿಯನ್ನು ತಮಗೆ ನೀಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ . ಮಧು ಬಂಗಾರಪ್ಪ ಆಯುಕ್ತರಿಗೆ ತಿಳಿಸಿದರು.


ಶುಕ್ರವಾರ ಮಹಾನಗರ ಪಾಲಿಕೆಯಲ್ಲಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ ಮಾತನಾಡಿ, ಗೋವಿಂದಾಪುರ ಆಶ್ರಯ ಯೋಜನೆಯಡಿ 40 ಎಕರೆಯಲ್ಲಿ ಒಟ್ಟು 3000 ಮನೆಗಳು ಮಂಜೂರಾಗಿದ್ದು 624 ಮನೆಗಳನ್ನು ಈಗಾಗಲೇ ಸಂಪೂರ್ಣಗೊಳಿಸಿದ್ದು 225 ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಲಾಗಿದೆ. ಉಳಿದ 399 ಮನೆಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಸಾಲ ಪ್ರಕ್ರಿಯೆ ನಡೆಯುತ್ತಿದೆ. 


ಫಲಾನುಭವಿಗಳಿಗೆ ಬ್ಯಾಂಕ್‌ನಿಂದ ಸಾಲ ಮಂಜೂರಾದ ತಕ್ಷಣ ಹಸ್ತಾಂತರಿಸಲಾಗುವುದು. 648 ಮನೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, 1728 ಮನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.


ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ಮನೆಗಳನ್ನು ಹಸ್ತಾಂತರಿಸಿದ್ದರೂ ಅಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್, ಇತರೆ ಸೌಲಭ್ಯಗಳೇ ಇಲ್ಲ. ಇದನ್ನೆಲ್ಲ ಶೀಘ್ರವಾಗಿ ಒದಗಿಸುವಂತೆ ತಿಳಿಸಿದರು.


ಶಾಸಕರಾದ ಚನ್ನಬಸಪ್ಪ ಮಾತನಾಡಿ ಪಾಲಿಕೆ ವತಿಯಿಂದ ಈ ವಸತಿ ಯೋಜನೆಗೆ ರೂ.25 ಕೋಟಿ ನೀಡಬೇಕಿದ್ದು ಈವರೆಗೆ ರೂ.9 ಕೋಟಿ ನೀಡಲಾಗಿದೆ. ಹಿಂದಿನ ಸಭೆಯಲ್ಲಿ ಆಯುಕ್ತರು ಇತರೆ ಹೆಡ್‌ನಲ್ಲಿ ಉಳಿಕೆ ಹಣವನ್ನು ನೀಡುವುದಾಗಿ ತಿಳಿಸಿದ್ದರು. ಉಳಿದ ಹಣವನ್ನು ನೀಡುವಂತೆ ತಿಳಿಸಿದರು.


ಆಯುಕ್ತರು ಮಾತನಾಡಿ, ಪಾಲಿಕೆಯಿಂದ ಈಗಾಗಲೇ ರಸ್ತೆ ಹಾಗೂ ತುರ್ತಾಗಿ ನೀರಿನ ಅಗತ್ಯ ನೀಗಿಸಲು 3 ಬೋರ್‌ವೆಲ್ ಕೊರೆಸಲಾಗಿದೆ, 288 ಮನೆಗಳಿಗೆ ಯುಜಿಡಿ, ಕುಡಿಯುವ ನೀರು ನೀಡಲಾಗಿದೆ. 336 ಮನೆಗಳಿಗೆ ಬೋರ್ ವೆಲ್ ವ್ಯವಸ್ಥೆ ಮಾಡಲಾಗುತ್ತಿದೆ. ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ರೂ.10.5 ಕೋಟಿ ಅವಶ್ಯಕತೆ ಇದೆ ಎಂದರು.


ಶಾಸಕರ ಮಾತು


ಶಾಸಕರಾದ ಚನ್ನಬಸಪ್ಪ ಪ್ರತಿಕ್ರಿಯಿಸಿ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಗೋವಿಂದಾಪುರ ಗೋಪಿಶೆಟ್ಟಿಕೊಪ್ಪ ಒಂದೆಡೆಯಾದರೆ, ಸ್ಲಂ ಬೋರ್ಡ್ ಗೆ ಸಂಬಂಧಿಸಿದಂತೆ 1500 ಮನೆಗಳ ಸಮಸ್ಯೆಯೂ ಇದೆ. ಗೋವಿಂದಾಪುರದಲ್ಲಿ ಈಗ ಕೇವಲ 60-70 ಜನ ಮಾತ್ರ ವಾಸ ಮಾಡುತ್ತಿದ್ದಾರೆ. ಅಲ್ಲಿ ಮೂಲಭೂತ ಸೌಕರ್ಯಗಳಿಗೆ ಶಾಶ್ವತವಾದ ಪರಿಹಾರಗಳನ್ನು ಒದಗಿಸಬೇಕೆಂದರು.


ಮೂಲ ಸೌಕರ್ಯಕ್ಕೆ ಹಣ ತರುವುದಾಗಿ ಭರವಸೆ


ಸಚಿವರು, ನೀರು, ಯುಜಿಡಿ, ವಿದ್ಯುತ್ ಇತರೆ ಮೂಲಭೂತ ಸೌಕರ್ಯಗಳ ಕುರಿತು ಯೋಜನೆಯಲ್ಲಿ ಮೊದಲೇ ವ್ಯವಸ್ಥೆ ಮಾಡಬೇಕಿತ್ತು. ಫಲಾನುಭವಿಗಳ ವಂತಿಗೆಯೂ ಹೆಚ್ಚಾಗಿದ್ದು ಅವರಿಗೆ ಹೊರೆಯಾಗಿದೆ. ರೂ.260 ಕೋಟಿ ಮೊತ್ತದಷ್ಟು ದೊಡ್ಡ ಯೋಜನೆಯನ್ನು ಸಮರ್ಪಕವಾಗಿ ಯೋಜಿಸಬೇಕಿತ್ತು. ಅದು ಆಗಿಲ್ಲ. ಇದೀಗ ನ್ಯೂನ್ಯತೆಗಳ ಸಂಪೂರ್ಣ ವರದಿ ತಕ್ಷಣ ನೀಡಿ. ತುರ್ತಾಗಿ ಅವಶ್ಯಕವಾಗಿ ಆಗಬೇಕಿರುವ ಕೆಲಸಗಳ ಕುರಿತು ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳ ಮೂಲಕ ತಮಗೆ ಒಂದು ಸೋಮವಾರದ ಒಳಗೆ ವರದಿ ನೀಡಿ. ಸರ್ಕಾರದಿಂದ ರೂ.10 ರಿಂದ 15 ಕೋಟಿ ಅನುದಾನ ತರುವ ಪ್ರಯತ್ನ ಮಾಡುತ್ತೇನೆ ಎಂದರು.


ಪಾಲಿಕೆ ಆಯುಕ್ತರು, 2024-5 ನೇ ಸಾಲಿನ ಜುಲೈವರೆಗೆ ಒಟ್ಟು 4626.31 ಲಕ್ಷ, ರೂ.2872.13 ವೆಚ್ಚವಾಗಿದ್ದು ರೂ.1754.18 ಲಕ್ಷ ಉಳಿಕೆಯಾಗಿದೆ ಎಂದು ತಿಳಿಸಿದರು.


ವಿಧಾನ ಪರಿಷತ್ ಶಾಸಕರಾದ ಡಿ.ಎಸ್. ಅರುಣ್ ಮಾತನಾಡಿ, ಪಾಲಿಕೆಯಲ್ಲಿ ಖಾತೆ ಎಕ್ಸಟ್ರಾಕ್ಟ್ ತೆಗೆದುಕೊಳ್ಳಲು ಹೋದಾಗ ಕಳೆದ 8 ರಿಂದ 10 ವರ್ಷ ನಿರಂತರವಾಗಿ ತೆರಿಗೆ ಕಟ್ಟಿದ್ದರೂ ಸಹ ಅದರ ಹಿಂದಿನ 8 ರಿಂದ 10 ವರ್ಷಗಳ ತೆರಿಗೆಯನ್ನು ಪಾವತಿಸಿಕೊಳ್ಳುತ್ತಾರೆ. ಇದರಿಂದ ಸಾರ್ವಜನಿಕರಿಗೆ ಕಿರುಕುಳ ಆದಂತೆ ಆಗುತ್ತಿದೆ ಎಂದು ದೂರಿದರು.


ಸಚಿವರು, ಪಾಲಿಕೆಯವರು ತಮ್ಮ ಸಾಫ್ಟ್ವೇರ್‌ನಲ್ಲಿ ಅಗತ್ಯವಾದ ಬದಲಾವಣೆ ತಂದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು. ಹಾಗೂ ನಗರದಲ್ಲಿ ಮೂಲಭೂತ ಸೌಕರ್ಯಗಳ ಕುರಿತು ಹಲವಾರು ದೂರುಗಳಿದ್ದು ಆಯುಕ್ತರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನೀರು, ವಿದ್ಯುತ್, ಯುಜಿಡಿ ಇತರೆ ಕುರಿತು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಕ್ರಮ ಕೈಗೊಳ್ಳಬೇಕೆಂದರು. 


ಸ್ಮಾರ್ಟ್ ಸಿಟಿ ಯೋಜನೆಯಡಿ 24×7 ಕುಡಿಯುವ ನೀರಿನ ಯೋಜನೆಯಡಿ 59 ಝೋನ್‌ಗಳ ಪೈಕಿ 18 ಝೋನ್‌ಗಳಲ್ಲಿ ಸಂಪರ್ಕ ನೀಡಲಾಗಿದ್ದು ಎಲ್ಲ ಝೋನ್‌ಗಳಲ್ಲಿ ಸಂಪರ್ಕ ನೀಡಿದ ನಂತರ ಬಿಲ್ ನೀಡಲಾಗುವುದು ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದರು.


ತುಂಗಾನದಿ ಮಾಲಿನ್ಯ ತಡೆಯಿರಿ : 


ಕಾಡಾ ಅಧ್ಯಕ್ಷರಾದ ಡಾ.ಅಂಶುಮನ್ ಮಾತನಾಡಿ, ತುಂಗಾ ಎಡ ಮತ್ತು ಬಡದಂಡೆ ಕಾಲುವೆಗಳಿಗೆ ನಗರ ಮತ್ತು ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ನೇರವಾಗಿ ಕಲುಷಿತ ನೀರನ್ನು ಬಿಡಲಾಗುತ್ತಿದೆ. ಇದರಿಂದ ನೀರು ಕಲುಷಿತವಾಗಿ ಕೃಷಿಗೆ ಕೂಡ ಯೋಗ್ಯವಾಗಿಲ್ಲ, ಜನ-ಜಾನುವಾರುಗಳ ಆರೋಗ್ಯಕ್ಕೂ ಈ ನೀರು ಮಾರಕವಾಗಿದೆ. ಈ ಮಾಲಿನ್ಯ ತಡೆಗಟ್ಟಬೇಕೆಂದು ಮನವಿ ಮಾಡಿದರು.


ಕರ್ನಾಟಕ ನೀರು ಮಂಡಳಿ ಎಇಇ ಮಿಥುನ್ ಕುಮಾರ್ ಮಾತನಾಡಿ, ಒಳಚರಂಡಿ ನೀರನ್ನು ಸಂಸ್ಕರಣಾ ಘಟಕದಿಂದ ಶುದ್ದೀಕರಿಸಿ ನದಿಗೆ ಬಿಡಲಾಗುತ್ತಿದೆ, ಬಚ್ಚಲು, ಶೌಚಾಲಯದ ಗ್ರೇವಾಟರ್‌ನ್ನು ಒಳಚರಂಡಿ ನೀರಿಗೆ ಸಂಪರ್ಕ ಒದಗಿಸಿದರೆ ಅದನ್ನು ಸಂಸ್ಕರಿಸಿ ಬಿಡಲಾಗುವುದು. 80 ಸಾವಿರ ಮನೆಗಳ ಪೈಕಿ 42 ಸಾವಿರ ಮನೆಗಳ ತ್ಯಾಜ್ಯ ನೀರು ಶುದ್ದೀಕರಣಕ್ಕೆ ಒಳಗಾಗುತ್ತಿದೆ. ಗ್ರೇವಾಟರ್‌ನ್ನೂ ಕೂಡ ಸಂಸ್ಕರಿಸಿದಲ್ಲಿ ಮಾಲಿನ್ಯ ತಡೆಗಟ್ಟಬಹುದು ಎಂದರು.


ಸಚಿವರು, ಅನಧಿಕೃತ ಗ್ರೇ ಮತ್ತು ಬ್ಲಾಕ್ ವಾಟರ್ ನದಿ ಸೇರದಂತೆ ತಡೆಯಬೇಕು. ಪ್ರತಿ ಮನೆಗಳ ಒಳಚರಂಡಿ, ಗ್ರೇವಾಟರ್ ಶುದ್ದೀಕರಣಕ್ಕೆ ಒಳಗಾಗುವಂತೆ ಕ್ರಮ ವಹಿಸಬೇಕು ಎಂದರು ಹೇಳಿದರು. ಹಾಗೂ ಶಾಸಕರು ಸಭೆಯಲ್ಲಿ ತಿಳಿಸಿದಂತೆ ಕಾವೇರಿ ನದಿ ಮಾಲಿನ್ಯ ತಡೆ ಸಮಿತಿ ರಚನೆಯಂತೆ ತುಂಗ-ಭದ್ರಾ ನದಿ ಮಾಲಿನ್ಯ ತಡೆಯಲು ಸಮಿತಿ ರಚನೆಗೆ ಪ್ರಸ್ತಾವನೆ ಸಿದ್ದಪಡಿಸುವಂತೆ ತಿಳಿಸಿದರು.


ರಾಷ್ಟ್ರೀಯ ಹಬ್ಬಗಳನ್ನ ನೆಹರೂ ಕ್ರೀಡಾಂಗಣದಲ್ಲಿ ನಡೆಸಲು ಒತ್ತಾಯ


ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಬ್ಬಗಳನ್ನು ನೆಹರೂ ಕ್ರೀಡಾಂಗಣದಲ್ಲಿ ನೆರವೇರಿಸುವಂತೆ ಶಾಸಕರು ಕೋರಿದರು. ಈ ಕುರಿತು ಚಿಂತಿಸುವುದಾಗಿ ಹೇಳಿದ ಸಚಿವರು, ನಗರದ ಅಲ್ಲಮಪ್ರಭು ಮೈದಾನದಲ್ಲಿ ಜಿಲ್ಲಾ, ರಾಜ್ಯ ಮಟ್ಟದ ಕಾರ್ಯಕ್ರಮಗಳು ಜರುಗುವಂತೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲು ಕ್ರಿಯಾಯೋಜನೆ ಸಿದ್ದಪಡಿಸಲಾಗುವುದು ಎಂದರು.


ಮಹಾನಗರಪಾಲಿಕೆ ವ್ಯಾಪ್ತಿಯ ಕೆರೆ ಮತ್ತು ಉದ್ಯಾನಗಳ ನಿರ್ವಹಣೆ ಸಂಬಂಧಿಸಿದಂತೆ ಮಾಹಿತಿಯನ್ನು ತಮಗೆ ನೀಡುವಂತೆ ತಿಳಿಸಿದ ಅವರು ಪಾಲಿಕೆ ವ್ಯಾಪ್ತಿಗೆ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಸ್ಥಳೀಯ ಪ್ರದೇಶ ಅಭಿವೃದ್ದಿ ವ್ಯಾಪ್ತಿಯಲ್ಲಿ ಹೊಸದಾಗಿ 23 ಗ್ರಾಮಗಳನ್ನು ಸೇರ್ಪಡೆಗೊಳಿಸುವ ವಿಷಯ ಪರಿಶೀಲನಾ ಹಂತದಲ್ಲಿದೆ ಎಂದರು ತಿಳಿಸಿದರು.


ಪಾಲಿಕೆ ಆಯುಕ್ತರು ಬೈಪಾಸ್ ರಸ್ತೆಗೆ ಪೂರಕವಾಗಿ ಹೊರ ವರ್ತುಲ ರಸ್ತೆ ಅಭಿವೃದ್ದಿ, ಸುಸಜ್ಜಿತ ಮೀನು ಮಾರುಕಟ್ಟೆ ಅಭಿವೃದ್ದಿಗೆ ಅಗತ್ಯವಾದ ಅನುದಾನ ಒದಗಿಸುವಂತೆ ಸಚಿವರಿಗೆ ಕೋರಿದರು.


ಶಾಸಕರಾದ ಶಾರದಾ ಪರ‍್ಯಾನಾಯ್ಕ ಮಾತನಾಡಿ, ಅನುಪಿನಕಟ್ಟೆ ಪೋದಾರ್ ಶಾಲೆ ಬಳಿ ಪಾಲಿಕೆಯವರು ರಾತ್ರಿ ಹೊತ್ತು ಕಸ ಹಾಕುತ್ತಿದ್ದಾರೆ, ಕಟ್ಟಡದ ತ್ಯಾಜ್ಯಗಳನ್ನು ಹಾಕುತ್ತಿದ್ದು ಇದನ್ನು ನಿಲ್ಲಿಸಬೇಕು. ಪಾಲಿಕೆ ಆಯುಕ್ತರು ಖುದ್ದು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.


ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ