ಮಂಗಳವಾರ, ಆಗಸ್ಟ್ 27, 2024

ಪ್ರತಿಭಟನೆ ಹಿನ್ನಲೆಯಲ್ಲಿಯೇ ಚುನಾವಣೆ-ಅಸಾದಿ ಅಧ್ಯಕ್ಷರಾಗಿ, ಗೀತಾ ರಮೇಶ್ ಉಪಾಧ್ಯಕ್ಷರಾಗಿ ಆಯ್ಕೆ



ಸುದ್ದಿಲೈವ್/ತೀರ್ಥಹಳ್ಳಿ


ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿದಿದೆ.  ಅಸಾದಿ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಗೀತಾ ರಮೇಶ್ ಆಯ್ಕೆಯಾಗಿದ್ದಾರೆ. 


ಪ್ರತಿಭಟನೆ ನಡೆದ ಹಿನ್ನಲೆಯಲ್ಲೇ ಚುನಾವಣೆ ನಡೆದಿದೆ. ಅಸಾದಿ ಕೈ ಹಿಡಿದ ಅದೃಷ್ಟ, ಎರಡನೇ ಭಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.‌ ಪಟ್ಟಣ ಪಂಚಾಯತ್ ನ ಅಧ್ಯಕ್ಷರಾಗಿ ರಹಮತುಲ್ಲ ಅಸಾದಿ ಆಯ್ಕೆ ಆಗಿದ್ದಾರೆ. ಈ ಹಿಂದೆ ಬಿಜೆಪಿ ಪಕ್ಷದಿಂದ ಅಧ್ಯಕ್ಷರಾಗಿದ್ದ ಅವರು ಕಳೆದ 20 ವರ್ಷಗಳಿಂದ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತ ಬಂದಿದ್ದಾರೆ. ಈಗ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷರಾಗಿ ಆಯ್ಕೆ ಆಗಿರುವುದರಿಂದ ತೀರ್ಥಹಳ್ಳಿ ಅಭಿವೃದ್ಧಿಯತ್ತ ಸಾಗುವ ನಿರೀಕ್ಷೆ ಹೆಚ್ಚಾಗಿದೆ.


ಅಧ್ಯಕ್ಷರು ಉಪಾಧ್ಯಕ್ಷರು ಬದಲಾವಣೆ 


ಈ ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಗೀತಾ ರಮೇಶ್ ಈ ಅವಧಿಯಲ್ಲಿ ಉಪಾಧ್ಯಕ್ಷರಾದರೆ ಉಪಾಧ್ಯಕ್ಷರಾಗಿದ್ದ ರಹಮತುಲ್ಲ ಅಸಾದಿ ಅಧ್ಯಕ್ಷರಾಗಿ ಬದಲಾವಣೆ ಆಗಿದ್ದಾರೆ.


ನಾಮಪತ್ರ ಸಲ್ಲಿಸಿದ್ದವರು ಯಾರು? 


ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸೊಪ್ಪುಗುಡ್ಡೆ ರಾಘವೇಂದ್ರ ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಗಣೇಶ್ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ರಹಮತುಲ್ಲ ಅಸಾದಿ, ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ರಮೇಶ್ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆಯಲ್ಲಿ ಬಹುಮತ ಇದ್ದ ಕಾಂಗ್ರೆಸ್ ಜಯಭೇರಿ ಭಾರಿಸಿದ್ದು ಅದೃಷ್ಟ ಅಸಾದಿ ಕೈ ಹಿಡಿದಿದೆ.


ಜೋಡೆತ್ತುಗಳ ದರ್ಬಾರ್!


ಆಪರೇಷನ್ ಕಮಲ ಆಗುವ ಸಾಧ್ಯತೆ ಇದೆ ಎಂದು ಸುದ್ದಿ ಮಾಡಿದ್ದ ಶಿವಮೊಗ್ಗ ಸುದ್ದಿ ನೋಡಿದ ಕಾಂಗ್ರೆಸ್ ಪಕ್ಷದ ಮುಖಂಡರಾದ ಕಿಮ್ಮನೆ ರತ್ನಾಕರ್ ಹಾಗೂ ಆರ್ ಎಂ ಮಂಜುನಾಥ್ ಗೌಡರು ಕೂಡಲೇ ಎಚ್ಚೆತ್ತು ಪಟ್ಟಣ ಪಂಚಾಯತ್ ಸದಸ್ಯರಿಗೆ ವಿಪ್ ಜಾರಿ ಮಾಡಿ ಚಿಕ್ಕಮಗಳೂರು ಜಿಲ್ಲೆಯ ಜಯಪುರ ಸಮೀಪದ ರೆಸಾರ್ಟ್ ಒಂದರಲ್ಲಿ ಎಲ್ಲರನ್ನು ಗೌಪ್ಯವಾಗಿ ಇಟ್ಟುಕೊಂಡು ಚುನಾವಣೆ ಗೆಲ್ಲುವ ಸಲುವಾಗಿ ರೆಸಾರ್ಟ್ ಗೆ ಕರೆದುಕೊಂಡು ಹೋಗಲಾಗಿತ್ತು. 


ಒಟ್ಟಿನಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಪಟ್ಟಣ ಪಂಚಾಯತ್ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆಯಲ್ಲಿ ಮತ್ತೊಮ್ಮೆ ಜೋಡೆತ್ತುಗಳ ದರ್ಬಾರ್ ಮುಂದುವರೆದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ