ಸುದ್ದಿಲೈವ್/ಶಿವಮೊಗ್ಗ
ಮನುಷ್ಯನ ದೇಹವೇ ಒಂದು ಅದ್ಭುತ ಸೃಷ್ಟಿ, ಇದರಲ್ಲಿ ಕೈಗಳು ಕೂಡ ಅತ್ಯಂತ ಪ್ರಮುಖ ಅಂಗವಾಗಿದ್ದು, ಕೈಗಳು ಕೆಲಸ, ಕಾರ್ಯಗಳನ್ನು ಮಾಡುವ ಜೊತೆಗೆ ಭಾಷಾ ಸಂಜ್ಞೆಯಾಗಿಯೂ ಕೆಲಸವನ್ನು ಮಾಡುತ್ತದೆ, ಕೈಗಳನ್ನು ರಕ್ಷಣೆ ಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ.ಚೇತನ್ ಕುಮಾರ್ ನವಿಲೇಹಾಳ್ ಅಭಿಪ್ರಾಯಿಸಿದರು.
ಇಲ್ಲಿನ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕೈ ಶಸ್ತ್ರ ಚಿಕಿತ್ಸಾ ದಿನದ ಕಾರ್ಯಕ್ರಮದಲ್ಲಿ ಅವರು ಮುಖ್ಯಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. “ಕೈ ಗಾಯದ ನಂತರ ಅಂಗ ವೈಕಲ್ಯ ತಡೆಗಟ್ಟುವಿಕೆ” ಯ ಥೀಮ್ ನೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದ್ದು, ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ, ಕೈ ಬೆರಳು ತುಂಡಾಗಿದ್ದರೆ ಇಲ್ಲವೇ ತೀವ್ರ ಗಾಯಗೊಂಡಿದ್ದರೆ ಬೆರಳಿನ ಉಂಗುರವನ್ನು ತೆಗೆಯಬೇಕು, ಕಟ್ ಆಗಿದ್ದರೆ ಸಂರಕ್ಷಣೆ ಮಾಡಿ ತಕ್ಷಣವೇ ತರಬೇಕು, ಇದು ಯಶಸ್ವಿ ಚಿಕಿತ್ಸೆಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.
ಅಪಘಾತ ಅಥವಾ ದುರಂತದಲ್ಲಿ ಕೈ- ಕಾಲು, ಬೆರಳು ಸೇರಿದಂತೆ ಯಾವುದೇ ಅಂಗಗಳು ಕತ್ತರಿಸಿದಾಗ ಚಿಂತಾಕ್ರಾಂತರಾಗುವುದಕ್ಕಿಂತ ಆ ಕ್ಷಣ ಸ್ವಲ್ಪ ಯೋಚಿಸಿ ಮುಂಜಾಗ್ರತಾ ಕ್ರಮಗಳನ್ನು ಕ್ರಮ ಕೈಗೊಂಡರೆ ಮತ್ತೆ ಹೊಸ ಬದಕನ್ನು ಕಂಡುಕೊಳ್ಳಬಹುದು. ಅವಘಡ ಸಂಭವಿಸಿ ಕೈ- ಕಾಲು, ಬೆರಳು ಸೇರಿದಂತೆ ಯಾವುದೇ ಅಂಗಗಳು ತುಂಡಾಗಿದ್ದರೆ ಭಯಪಡದೇ ಆತ್ಮಸ್ಥೈರ್ಯದೊಂದಿಗೆ ತುಂಡಾದ ಭಾಗವನ್ನು ಪ್ಲಾಸ್ಟಿಕ್ ಕವರ್ ನೊಂದಿಗೆ ಐಸ್ ಬಾಕ್ಸ್ ನಲ್ಲಿಟ್ಟು 6 ಗಂಟೆಯೊಳಗೆ ಆಸ್ಪತ್ರೆಗೆ ತಂದರೆ ಶಸ್ತ್ರ ಚಿಕಿತ್ಸೆ ಮಾಡಿ ಮರು ಜೋಡಿಸಲು ಸಾಧ್ಯವಿದೆ ಹೀಗೆ ಮಾಡಿದಾಗ ಜೀವಕೋಶಗಳು ಸಾಯುವುದಿಲ್ಲ ಎಂದರು.
ಆಸ್ಪತ್ರೆಯ ಅರಿವಳಿಕೆ ತಜ್ಞ ವೈದ್ಯರಾದ ಡಾ.ಅರ್ಜುನ್ ಭಾಗವತ್ ಮಾತನಾಡಿ ಶಸ್ತ್ರ ಚಕಿತ್ಸೆಗಳ ವೇಳೆ ಅರಿವಳಿಕೆ ನೀಡುವುದು ಅವಶ್ಯವಾಗಿರುತ್ತದೆ, ಈ ಬಗ್ಗೆ ರೋಗಿಗಳಾಗಲಿ ಅಥವಾ ಅವರ ಕುಟುಂಬದವರಾಗಲಿ ಭಯಪಡುವ ಅಗತ್ಯ ಇಲ್ಲ, ಇದರಿಂದ ಶೇ 99 ರಷ್ಟು ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ, ಆತ್ಮಸ್ಥೈರ್ಯದಿಂದ ಇರಬೇಕು ಶಸ್ತ್ರ ಚಿಕಿತ್ಸೆಯ ನಂತರ ರೋಗಿಗಳೊಂದಿಗೆ ವೈದ್ಯರು ಹಾಗೂ ಶುಶ್ರೂಷಕಿಯರು ನಿರಂತರ ಸಂಪರ್ಕ ಸಾಧಿಸಿ ಕಾಳಜಿ ವಹಿಸುತ್ತಾರೆ ಎಂದರು.
ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ವಾದಿರಾಜ ಕುಲಕರ್ಣಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮೂಳೆ ಚಿಕಿತ್ಸೆ ವಿಭಾಗದ , ಡಾ.ಸುಮನ್, ಡಾ.ನವೀನ್, ಡಾ.ಸಂತೋಷ್, ಫಲ್ಮನಾಜಿಸ್ಟ್ ಡಾ.ಅಮಿತಾಶ್, ಆಶಾ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ರೋಗಿಗಳು , ಸಾರ್ವಜನಿಕರು ಹಾಜರಿದ್ದರು. ಶ್ರೀಮತಿ ರಾಜೇಶ್ವರಿ ಪ್ರಾರ್ಥಿಸಿದರು, ಮಂಜಪ್ಪ ನಿರೂಪಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ